ಭಾನುವಾರ, ಜನವರಿ 19, 2020
28 °C

ಭಾನುವಾರ: 4–1–1970

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚುನಾವಣೆ ಸಮಯದಲ್ಲಿ ಮೋಸ ಹೋಗಬೇಡಿ: ಖಾನ್
ಮದುರೈ, ಜ. 3– ನಿಷ್ಠೆಯಿಲ್ಲದ ರಾಜಕಾರಣಿಗಳಿಂದ ಚುನಾವಣೆಗಳ ಸಂದರ್ಭದಲ್ಲಿ ಮೋಸಹೋಗದಂತೆ ಖಾನ್ ಅಬ್ದುಲ್ ಗಫಾರ್ ಖಾನ್‌ ಅವರು ಜನತೆಗೆ ಅದರಲ್ಲಿಯೂ ಮುಖ್ಯವಾಗಿ ಬಡವರಿಗೆ ಇಂದು ಕರೆ ಇತ್ತರು.

‘ಕಾಂಗ್ರೆಸ್, ಕಮ್ಯುನಿಸ್ಟ್, ಜನಸಂಘ ಅಥವಾ ಸ್ವತಂತ್ರ, ಯಾವುದೇ ಪಕ್ಷಕ್ಕೆ ಅಭ್ಯರ್ಥಿಯು ಸೇರಿರಲಿ ರಾಷ್ಟ್ರದಿಂದ ಬಡತನ ಮತ್ತು ಮತೀಯ ಭಾವನೆಯನ್ನು ನಿರ್ಮೂಲಗೊಳಿಸುವ ಹಾಗೂ ಜನತೆಯ ಸೇವೆ ಮಾಡಲು ಮಾತು ಕೊಡುವವರೆಗೂ ಅವರನ್ನು ಚುನಾಯಿಸಬೇಡಿ’ ಎಂದರು.

ಇಂದಿರಾಗೆ ಸಿ.ಬಿ. ಗುಪ್ತರ ಹೊಸ ವರ್ಷದ ಉಡುಗೊರೆ
ವದೆಹಲಿ, ಜ. 3– ಪ್ರಧಾನ ಮಂತ್ರಿ ಶ್ರೀಮತಿ ಇಂದಿರಾ ಗಾಂಧಿಯವರು ಉತ್ತರ ಪ್ರದೇಶದ ಮುಖ್ಯಮಂತ್ರಿ ಸಿ.ಬಿ. ಗುಪ್ತ ಅವರಿಂದ ಹೊಸ ವರ್ಷದ ಅಪೂರ್ವ ಉಡುಗೊರೆ ಪಡೆದಿದ್ದಾರೆ. ಅದು ಮೂವತ್ತೇಳು ಲಕ್ಷ ರೂ.ಗಳ ಬಿಲ್.

ಕಳೆದ ವರ್ಷ ಶ್ರೀಮತಿ ಇಂದಿರಾ ಗಾಂಧಿಯವರು ಉತ್ತರ ಪ್ರದೇಶದಲ್ಲಿ ಪ್ರವಾಸ ಕೈಗೊಂಡಾಗಲೆಲ್ಲ ರಾಜ್ಯ ಸರ್ಕಾರ ನಿರ್ವಹಿಸಿದ ಖರ್ಚು ವೆಚ್ಚದ ಬಾಬ್ತೇ ಈ ಬಿಲ್. ಈ ಹಣವನ್ನು ಸಾಧ್ಯವಾದಷ್ಟು ಬೇಗ ಪಾವತಿ ಮಾಡುವಂತೆ ಸಿ.ಬಿ. ಗುಪ್ತ ಅವರು ಪ್ರಧಾನಿಯನ್ನು ಕೇಳಿದ್ದಾರೆ.

ಇಂದಿರಾ ಗಾಂಧಿಯವರನ್ನು ಪೇಚಿನಲ್ಲಿ ಸಿಕ್ಕಿಸುವ ಉದ್ದೇಶದಿಂದಲೇ ಕಳುಹಿಸಿರುವ ಈ ಬಿಲ್‌ನ ಸಾಧಕ–ಬಾಧಕದ ಪರಿಣಾಮಗಳನ್ನು ಪ್ರಧಾನಿಯವರ ಕಚೇರಿ ಈಗ ಪರಿಶೀಲಿಸುತ್ತಿದೆ. ಶೀಘ್ರದಲ್ಲೇ ಗುಪ್ತ ಅವರಿಗೆ ಸೂಕ್ತ ಉತ್ತರ ಕಳುಹಿಸುವ ನಿರೀಕ್ಷೆ ಇದೆ.

ಪ್ರತಿಕ್ರಿಯಿಸಿ (+)