ಭಾನುವಾರ, ಆಗಸ್ಟ್ 1, 2021
27 °C

50 ವರ್ಷಗಳ ಹಿಂದೆ | ಬುಧವಾರ, 10–6–1970

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಈ ಮಾಸಾಂತ್ಯ ಕೊಸಿಗಿನ್‌ ಅಧಿಕಾರ ತ್ಯಾಗ

ಲಂಡನ್‌, ಜೂನ್‌ 9– ರಷ್ಯಾದ ಪ್ರಧಾನಿ ಅಲೆಕ್ಸಿ ಕೊಸಿಗಿನ್‌ ಅವರು ಈ ತಿಂಗಳ ಕೊನೆಯ ವೇಳೆಗೆ ತಮ್ಮ ಅಧಿಕಾರ ಸ್ಥಾನವನ್ನು ತ್ಯಜಿಸುವರೆಂದು ಇಲ್ಲಿನ ‘ಡೈಲಿ ಮೇಲ್‌’ ಪತ್ರಿಕೆ ಇಂದು ವರದಿ ಮಾಡಿದೆ.

‘ಭಾನುವಾರ ನಡೆಯುವ ಚುನಾವಣೆಯ ನಂತರ ಅವರ ನಿವೃತ್ತಿಯನ್ನು ಪ್ರಕಟಿಸಲಾಗುವುದೆಂದು ವಿಶ್ವಸನೀಯ ವರದಿಗಳು ಲಂಡನ್ನಿಗೆ ಬಂದಿವೆ’ ಎಂದು ಪತ್ರಿಕೆಯ ರಾಜತಾಂತ್ರಿಕ ವರದಿಗಾರ ಜಾನ್‌ ಡಿಕಿ ವರದಿ ಮಾಡಿದ್ದಾರೆ.

ಪೆರು ಭೂಕಂಪಕ್ಕೆ ಸಿಕ್ಕಿ ಸತ್ತವರು ಐವತ್ತು ಸಾವಿರ

ಲಿಮಾ, ಜೂನ್‌ 9– ಪೆರುವಿನಲ್ಲಿ ಭೂಕಂಪ ಜರ್ಝರಿತ ಪ್ರದೇಶಗಳಲ್ಲಿ ಕ್ರಮೇಣ ಉತ್ತಮಗೊಳ್ಳುತ್ತಿರುವ ಸಂಪರ್ಕದಿಂದ ಬರುತ್ತಿರುವ ಅಗಾಧ ಪ್ರಾಣಹಾನಿಯ ವರದಿಗಳು ಸತ್ತವರ ಸಂಖ್ಯೆಯನ್ನು ಐವತ್ತು ಸಾವಿರಕ್ಕೇರಿಸಿವೆ.

ಉಗ್ರ ವಿನಾಶಕ್ಕೊಳಗಾಗಿರುವ ಪ್ರದೇಶಗಳ ಪುನರ್‌ ನಿರ್ಮಾಣಕ್ಕೆ 23 ಕೋಟಿ ಡಾಲರ್‌ (170 ಕೋಟಿ ರೂ.) ಬೇಕಾಗುತ್ತದೆಂದು ಅಂದಾಜು ಮಾಡಲಾಗಿದೆ. ಯುಂಗೈ ಪ್ರದೇಶವೊಂದರಲ್ಲೇ 30 ಸಾವಿರ ಮಂದಿ ಕೆಸರಿನಲ್ಲಿ ಹೂತುಹೋಗಿ ಪ್ರಾಣಬಿಟ್ಟಿದ್ದಾರೆ. ಹತ್ತಿರದ ಗುಡ್ಡದಿಂದ ಮಣ್ಣು ಕುಸಿದು, 37,000 ಜನ ವಾಸಿಸುತ್ತಿದ್ದ ಈ ಪಟ್ಟಣವನ್ನು ಪೂರ್ಣವಾಗಿ ಮಣ್ಣಿನಲ್ಲಿ ಮುಳುಗಿಸಿತು.

ಮೇ 21ರಂದು ಉಗ್ರ ಭೂಕಂಪಕ್ಕೆ ಗುರಿಯಾದ, 128 ಕಿಲೊಮೀಟರ್‌ ಉದ್ದದ ಜಾಯಲಾಸ್‌ ಕಣಿವೆಯ ಯುಂಗೈನಲ್ಲಿ 30 ಸಾವಿರ, ಹಾರಾಸ್‌ನಲ್ಲಿ 10 ಸಾವಿರ ಮತ್ತು ಕಣಿವೆ ಮುಖದಲ್ಲಿರುವ ರೇವು ಪಟ್ಟಣ ಚಿಂಬೋಟೆಯಲ್ಲಿ 2,700 ಮಂದಿ ಸತ್ತಿರುವರೆಂದು ಅಂದಾಜು ಮಾಡಲಾಗಿದೆಯೆಂದು ಪೆರು ಅಧ್ಯಕ್ಷರ ಅಧಿಕೃತ ವಕ್ತಾರರು ನಿನ್ನೆ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು