ಶನಿವಾರ, ಜನವರಿ 18, 2020
21 °C

50 ವರ್ಷಗಳ ಹಿಂದೆ ; ಮಂಗಳವಾರ, 9–12–1969

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜಗಜೀವನರಾಂ ಸಂಬಂಧದ ಸಂಸ್ಥೆಗಳ ಆದಾಯ ತೆರಿಗೆ; ಲೋಕಸಭೆಯಲ್ಲಿ ಬಿಸಿಬಿಸಿ ಚರ್ಚೆ

ನವದೆಹಲಿ, ಡಿ. 8– ಕೇಂದ್ರ ಆಹಾರ ಸಚಿವ ಜಗಜೀವನರಾಂ ಅವರು ಸಂಬಂಧ ಹೊಂದಿರುವ ವಿವಿಧ ಸಂಸ್ಥೆಗಳು ಕಳೆದ ಮೂರು ವರ್ಷಗಳಲ್ಲಿ ಎಷ್ಟು ಆದಾಯ ಗಳಿಸಿವೆ ಮತ್ತು ಎಷ್ಟು ಆದಾಯ ತೆರಿಗೆ ಸಲ್ಲಿಸಿವೆ ಎಂಬ ವಿಷಯದ ಮೇಲೆ ಇಂದು ಲೋಕಸಭೆಯಲ್ಲಿ ಅರ್ಧಗಂಟೆ ಬಿಸಿ ಚರ್ಚೆ ನಡೆಯಿತು.

ಜಗಜೀವನರಾಂ ಅವರು, 42 ಸಂಸ್ಥೆಗಳ ಪೈಕಿ 18 ಸಂಸ್ಥೆಗಳಿಗೆ ಕೇವಲ ಪೋಷಕ, ಸ್ಥಾಪಕ ಪೋಷಕ, ಪ್ರಮುಖ ಪೋಷಕ ಮುಂತಾದ ರೂಪದಲ್ಲಿ, ಅವುಗಳೊಂದಿಗೆ ಔಪಚಾರಿಕವಾಗಿ, ನಾಮಮಾತ್ರಕ್ಕೆ ಸಂಬಂಧ ಹೊಂದಿದ್ದಾರೆಂದು ಹಣಕಾಸು ಸ್ಟೇಟ್ ಸಚಿವ ಪಿ.ಸಿ. ಸೇಥಿಯವರು ಸ್ಪಷ್ಟಪಡಿಸಿದರು.

ಆದರೆ ಸ್ವತಂತ್ರ ಪಕ್ಷದ  ಸದಸ್ಯ ಪಿಲೂ ಮೋದಿಯವರು ‘ಇದು, ರಾಂ ಅವರ ಸಂಬಂಧ ಇರುವ ಸಂಸ್ಥೆಗಳ ವಿಚಾರವಾಯಿತೇ ಹೊರತು ಆ ಸಂಸ್ಥೆಗಳು ಆದಾಯ ಮತ್ತು ತೆರಿಗೆ ಸಲ್ಲಿಸಿರುವ ಬಗ್ಗೆ ವಿವರಣೆ ಅಲ್ಲ’ ಎಂದು ನುಡಿದು, ಈ ಪ್ರಶ್ನೆ ಕುರಿತು ಸಭೆಗೆ ಸರ್ಕಾರ ಸೂಕ್ತ ವಿವರಣೆ ನೀಡದೆ ತಪ್ಪು ದಾರಿಗೆಳೆಯುತ್ತಿದೆ ಎಂದು ಆರೋಪಿಸಿದರು.

91 ವರ್ಷ ತುಂಬಿದ ರಾಜಾಜಿ

ಮದರಾಸ್, ಡಿ. 8– ಸ್ವತಂತ್ರ ಪಕ್ಷದ ನಾಯಕ ಶ್ರೀ ಸಿ. ರಾಜಗೋಪಾಲಾಚಾರಿ ಅವರಿಗೆ ಇಂದಿಗೆ 91 ವರ್ಷ ತುಂಬಿತು.

ಅಸಂಖ್ಯಾತ ಅಭಿಮಾನಿಗಳು ಹಾಗೂ ಸ್ವತಂತ್ರ ಪಕ್ಷದ ಸದಸ್ಯರು ರಾಜಾಜಿ ಅವರ ಮನೆಗೆ ತೆರಳಿ ಹಾರ ತುರಾಯಿಗಳನ್ನರ್ಪಿಸಿ ಅವರಿಗೆ ಶುಭ ಕೋರಿದರು. ಅವರನ್ನು ಭೇಟಿ ಮಾಡಿದ ಮೊದಲಿಗರು ತಮಿಳುನಾಡು ರಾಜ್ಯಪಾಲ ಶ್ರೀ ಉಜ್ಜಲ್ ಸಿಂಗ್ ಮತ್ತು ಮುಖ್ಯಮಂತ್ರಿ ಶ್ರೀ ಎಂ. ಕರುಣಾನಿಧಿ, ರಾಜ್ಯ ಸಚಿವರು, ಶಾಸಕರು ಸಹ ರಾಜಾಜಿ ಅವರನ್ನು ಭೇಟಿಯಾಗಿದ್ದರು.

ಮಾವೋಗೆ ದೇವರ ಶಿಕ್ಷೆ!

ನ್ಯೂಯಾರ್ಕ್, ಡಿ. 8– ‘ನನ್ನ ಇಬ್ಬರು ಮಕ್ಕಳಲ್ಲಿ ಒಬ್ಬ ಸಮರದಲ್ಲಿ ಸಾವನ್ನಪ್ಪಿದ ಮತ್ತೊಬ್ಬ ಮತಿವಿಕಲನಾಗಿ ಮರಣ ಹೊಂದಿದ.

‘ಇದೆಲ್ಲಾ ದೇವರು ಕೊಟ್ಟ ಕಠಿಣ ಶಿಕ್ಷೆ, ಇಹದಲ್ಲೇ ನರಕದ ಅನುಭವ’.

‘ಮಹಾ ಮುನ್ನೆಗೆತ’ದಲ್ಲಿ ಕುಸಿದುಬಿದ್ದ ಕಾರಣ ದೇವರಿತ್ತ ಶಾಪದ ಬಿಸಿ ತಟ್ಟಿರುವ ಚೀನಾದ ಮಾವೋ–ತ್ಸೆ–ತುಂಗ್ ಅವರಿಗೆ ಇಂದು ಆಗುಹೋಗುಗಳ ಪ್ರತ್ಯಕ್ಷ ದರ್ಶನ.

ಇಲ್ಲಿನ ‘ಟೈಂ’ ವಾರಪತ್ರಿಕೆಯು ಚೀನಾದಿಂದ ಕದ್ದು ತಂದ ಕೆಲವು ದಾಖಲೆ ಪತ್ರಗಳ ಮೇಲೆ ಬೆಳಕು ಚೆಲ್ಲಿರುವುದಲ್ಲದೆ ಮಾವೋ ಅವರು ಅನುಭವಿಸುತ್ತಿರುವ ಅನುತಾಪವನ್ನು ವಿಶ್ಲೇಷಿಸಿದೆ.

ಪ್ರತಿಕ್ರಿಯಿಸಿ (+)