ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿದ್ದಲಿಂಗ ಸ್ವಾಮೀಜಿ ಭೇಟಿ ಮಾಡಿದ ಸಚಿವ ಎಂ.ಬಿ.ಪಾಟೀಲ, ಜಾಮದಾರ

Last Updated 28 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ತುಮಕೂರು: ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ ಹಾಗೂ ನಿವೃತ್ತ ಐಎಎಸ್ ಅಧಿಕಾರಿ ಎಸ್.ಎಂ. ಜಾಮದಾರ ಇಲ್ಲಿನ ಸಿದ್ಧಗಂಗಾ ಮಠಕ್ಕೆ ಬುಧವಾರ ಭೇಟಿ ನೀಡಿ ಕಿರಿಯ ಶ್ರೀ ಸಿದ್ದಲಿಂಗ ಸ್ವಾಮೀಜಿ ಅವರೊಂದಿಗೆ 20 ನಿಮಿಷಕ್ಕೂ ಹೆಚ್ಚು ಹೊತ್ತು ಗೌಪ್ಯ ಮಾತುಕತೆ ನಡೆಸಿದರು.

ಕಿರಿಯ ಶ್ರೀಗಳ ಭೇಟಿ ಮಾಡುವ ವೇಳೆ ಕೊಠಡಿಯ ಬಾಗಿಲು ಹಾಕಲಾಯಿತು. ಟಿ.ವಿ ಕ್ಯಾಮರಾಮನ್ ಮತ್ತು ಛಾಯಾಗ್ರಾಹಕರಿಗೆ, ಪತ್ರಕರ್ತರಿಗೆ ಪ್ರವೇಶ ನೀಡಲಿಲ್ಲ.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಎಂ.ಬಿ ಪಾಟೀಲ ಅವರು, ‘ಲಿಂಗಾಯತ ವೀರಶೈವ ಪ್ರತ್ಯೇಕ ಧರ್ಮ ರಚನೆ ಕುರಿತು ರಾಜ್ಯ ಸರ್ಕಾರವು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿರುವುದಕ್ಕೆ ಕಿರಿಯ ಶ್ರೀಗಳು ಈಗಾಗಲೇ ಸ್ವಾಗತಿಸಿ ಪ್ರತಿಕ್ರಿಯೆ ನೀಡಿದ್ದಾರೆ. ಈ ವಿಷಯದಲ್ಲಿ ಸ್ವಾಮೀಜಿಯವರ ಮಾರ್ಗದರ್ಶನ ನಮಗೆ ಅವಶ್ಯ. ನಮ್ಮ ಮುಂದಿನ ಪ್ರತಿ ಹೆಜ್ಜೆಯಲ್ಲೂ ಅವರ ಮಾರ್ಗದರ್ಶನ ಬೇಕಾಗಿದೆ. ಈ ವಿಷಯ ಕುರಿತಂತೆಯೇ ಚರ್ಚಿಸಿದೆವು’ ಎಂದು ವಿವರಿಸಿದರು.

ಶಾ ಹೇಳಿಕೆಗೆ ಆಕ್ಷೇಪ: ’ಬಿಜೆಪಿ ರಾಷ್ಟ್ರೀಯ ಘಟಕದ ಅಧ್ಯಕ್ಷ ಅಮಿತ್ ಶಾ ಅವರು ಜೈನ್ ಸಮಾಜಕ್ಕೆ ಸೇರಿದವರು. 2007ರಲ್ಲಿ ರಾಜ್ಯ ಸರ್ಕಾರ ಜೈನ ಧರ್ಮವನ್ನು ಪ್ರತ್ಯೇಕ ಧರ್ಮವನ್ನಾಗಿ ಮಾಡಲು ಕೇಂದ್ರಕ್ಕೆ ಶಿಫಾರಸು ಮಾಡಿತು. 2014ರಲ್ಲಿ ಕೇಂದ್ರ ಸರ್ಕಾರ ಪ್ರತ್ಯೇಕ ಧರ್ಮದ ಮಾನ್ಯತೆ ನೀಡಿ ಘೋಷಣೆ ಮಾಡಿದೆ. ಅಮಿತ್ ಶಾ ಅವರು ತಮ್ಮ ಸಮಾಜಕ್ಕೆ ಮಾನ್ಯತೆ ಪಡೆದು ಲಿಂಗಾಯತರಿಗೆ ವಿರೋಧ ಮಾಡಿದರೆ ಹೇಗೆ’ ಎಂದು ಪ್ರಶ್ನಿಸಿದರು.

’ಸಿಖ್, ಬೌದ್ಧ, ಜೈನ ಮೂರು ಧರ್ಮಗಳು ಲಿಂಗಾಯತರ ತರಹ ವಿಭಿನ್ನವಾಗಿದ್ದವೇ. ಅವುಗಳಿಗೆ ಪ್ರತ್ಯೇಕ ಧರ್ಮ ಮಾನ್ಯತೆ ಸಿಕ್ಕಾಗ ಧರ್ಮ ಒಡೆದಿಲ್ಲ. ಹಿಂದು ಧರ್ಮಕ್ಕೂ ಧಕ್ಕೆಯಾಗಿಲ್ಲ. ಆಗ ಆಗದೇ ಇರುವ ಧಕ್ಕೆ ಲಿಂಗಾಯತರಿಗೆ ಪ್ರತ್ಯೇಕ ಧರ್ಮ ಮಾನ್ಯತೆ ನೀಡಿದರೆ ಆಗುತ್ತದೆಯೇ? ಸಾಧ್ಯವೇ ಇಲ್ಲ’ ಎಂದು ಹೇಳಿದರು.

ಸಿದ್ದರಾಮಯ್ಯ ಹಿಂದು: ’ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಿಂದು ಧರ್ಮಕ್ಕೆ ಸೇರಿದವರು. ಹಿಂದು ಧರ್ಮದ ಹಾಲುಮತ ಸಮಾಜಕ್ಕೆ ಸೇರಿದವರಾಗಿದ್ದಾರೆ. ಶಾ ಅವರು ಸಿದ್ದರಾಮಯ್ಯ ಅವರನ್ನು ಅ–ಹಿಂದೂ ಎಂದು ಹೇಳಿರುವುದಕ್ಕೆ ಅರ್ಥವಿಲ್ಲ’ ಎಂದು ಹೇಳಿದರು.

ನಿರ್ವಹಣಾ ಮಂಡಳಿ ರಚನೆ: ’ಕಾವೇರಿ ನಿರ್ವಹಣಾ ಮಂಡಳಿ ರಚನೆಗೆ ತಮಿಳುನಾಡು ಸರ್ಕಾರವು ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿತ್ತು. ಆದರೆ, ಕೋರ್ಟ್ ಗಣನೆಗೆ ತೆಗೆದುಕೊಂಡಿಲ್ಲ. ಬದಲಾಗಿಸಂಕಷ್ಟ ಸ್ಥಿತಿಯಲ್ಲಿ ಪರಿಹಾರ ಕಂಡುಕೊಳ್ಳಲು ಎರಡೂ ರಾಜ್ಯದವರು ಸಂಕಷ್ಟ ಪರಿಹಾರ ವೇದಿಕೆ ( ರಿಡ್ರೆಸಲ್ ಫೋರಂ) ರೂಪಿಸಲು ಸೂಚಿಸಿದೆ’ ಎಂದು ತಿಳಿಸಿದರು.

ಹಿರಿಯ ಶ್ರೀ ಅಶೀರ್ವಾದ: ಇದಕ್ಕೂ ಮೊದಲು  ಹಿರಿಯ ಶ್ರೀಗಳಾದ ಶಿವಕುಮಾರ ಸ್ವಾಮೀಜಿ ಅವರ ಆಶೀರ್ವಾದ ಪಡೆದರು. ಆದರೆ ಹಿರಿಯ ಶ್ರೀಗಳ ಬಳಿ ಪ್ರತ್ಯೇಕ ಧರ್ಮದ ವಿಚಾರವನ್ನು ಪ್ರಸ್ತಾಪ ಮಾಡಲಿಲ್ಲ. ಬೆಂಗಳೂರಿನ ಡಾ.ಜಯಣ್ಣ, ಮಾತಾಮೈನ್ಸ್ ಪುಟ್ಟಸ್ವಾಮಿ ಇದ್ದರು.

ಕೇಂದ್ರಕ್ಕೆ ಶಿಫಾರಸು
ಬೆಂಗಳೂರು: ಲಿಂಗಾಯತ, ವೀರಶೈವ ಲಿಂಗಾಯತರಿಗೆ (ಬಸವ ತತ್ವ ಒಪ್ಪುವವರು) ಧಾರ್ಮಿಕ ಅಲ್ಪಸಂಖ್ಯಾತರ ಮಾನ್ಯತೆ ನೀಡುವ ಶಿಫಾರಸನ್ನು ರಾಜ್ಯ ಸರ್ಕಾರ ಕೇಂದ್ರ ಸಚಿವಾಲಯದ ಕಾರ್ಯದರ್ಶಿಗೆ ಇದೇ 23ರಂದು ಕಳುಹಿಸಿದೆ.

ಈ ಕುರಿತ ದಾಖಲೆಗಳನ್ನು ರಾಜ್ಯ ಅಲ್ಪಸಂಖ್ಯಾತರ ಇಲಾಖೆ ಕಾರ್ಯದರ್ಶಿಗಳು ಕೇಂದ್ರ ಸಚಿವಾಲಯಕ್ಕೆ ರವಾನಿಸಿದ್ದಾರೆ.

ಧಾರ್ಮಿಕ ಅಲ್ಪಸಂಖ್ಯಾತ ಸ್ಥಾನಮಾನ ನೀಡುವಂತೆ ಕೇಳಿರುವ ಲಿಂಗಾಯತ ಹಾಗೂ ವೀರಶೈವ ಸಮುದಾಯದ ಬೇಡಿಕೆಯನ್ನು ಪರಿಗಣಿಸಿ ಈ ಕುರಿತಂತೆ ಅಧಿಸೂಚನೆ ಹೊರಡಿಸುವಂತೆ ಪತ್ರದಲ್ಲಿ ಕೋರಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT