ಭಾನುವಾರ, 19–1–1969

7

ಭಾನುವಾರ, 19–1–1969

Published:
Updated:

ವಿಶ್ವವಿದ್ಯಾನಿಲಯಗಳಲ್ಲಿ ಪ್ರದೇಶ ಭಾಷಾ ಮಾಧ್ಯಮದ ಬಗ್ಗೆ ಆತುರ ಸಲ್ಲದು: ಕುಂಜ್ರು ಎಚ್ಚರಿಕೆ

ಮೈಸೂರು, ಜ. 18– ಪರಿಸ್ಥಿತಿ ಹದವಾಗುವ ಮೊದಲೇ ಆತುರಾತುರವಾಗಿ ಪ್ರಾಂತೀಯ ಭಾಷೆಗಳನ್ನು ವಿಶ್ವವಿದ್ಯಾನಿಲಯಗಳಲ್ಲಿ ಶಿಕ್ಷಣ ಮಾಧ್ಯಮವನ್ನಾಗಿ ಜಾರಿಗೆ ತರುವುದು ಸಲ್ಲದೆಂದು ಪಂಡಿತ್ ಹೃದಯನಾಥ್ ಕುಂಜ್ರು ಇಂದು ಇಲ್ಲಿ ಆಡಳಿತ ವರ್ಗವನ್ನು ಎಚ್ಚರಿಸಿದರು.

ಪಂಡಿತ್ ಕುಂಜ್ರು ಅವರು ಮಾನಸ ಗಂಗೋತ್ರಿಯ ಬಯಲು ರಂಗಮಂಟಪದಲ್ಲಿ ನಡೆದ ಮೈಸೂರು ವಿಶ್ವವಿದ್ಯಾನಿಲಯದ 49ನೇ ಪದವೀದಾನ ಸಮಾರಂಭದಲ್ಲಿ ಭಾಷಣ ಮಾಡುತ್ತಾ, ಇದರಿಂದ ವಾಸ್ತವವಾಗಿ ವಿದ್ಯಾರ್ಥಿಗಳಲ್ಲಿ ಪ‍್ರಾಂತೀಯ ಭಾವನೆಗಳನ್ನು ಕೆರಳಿಸಿದಂತಾಗುವುದಲ್ಲದೆ ಅವರು ಎಲ್ಲಕ್ಕಿಂತ ಮೊದಲು ತಮ್ಮ ರಾಜ್ಯಗಳ ಬಗ್ಗೆ ಚಿಂತನ ಮಾಡುವಂತಾಗುವುದೆಂದು ತಿಳಿಸಿದರು.

ಕನ್ನಡಕ್ಕೆ ಅಗ್ರಪೂಜೆ

ಮೈಸೂರು, ಜ. 18– ಮೈಸೂರು ವಿಶ್ವವಿದ್ಯಾನಿಲಯದ 50 ವರ್ಷಗಳ ಇತಿಹಾಸದಲ್ಲಿ ಇಂದು ಮೊದಲ ಬಾರಿಗೆ 49ನೇ ಪದವೀದಾನ ಸಮಾರಂಭದ ಕಲಾಪ ಕನ್ನಡದಲ್ಲಿ ನಡೆಯಿತು. ಇಂಗ್ಲಿಷನ್ನು ಬಳಸಿದುದೆಂದರೆ ದೀಕ್ಷಾಂತ ಭಾಷಣ ಓದಿದಾಗ ಮಾತ್ರ.

ಕನ್ನಡಿಗರಲ್ಲದ ಉಪಕುಲಪತಿ ಡಾ. ಕೆ.ಎಲ್. ಶ್ರೀಮಾಲಿ ಅವರು ಕನ್ನಡಿಗರಲ್ಲದ ಕುಲಪತಿ ಶ್ರೀ ಜಿ.ಎಸ್. ಪಾಠಕ್ ಅವರನ್ನು ‘ಮುದ್ದು ಕನ್ನಡ’ದಲ್ಲಿ ಸಮಾರಂಭವನ್ನು ಪ್ರಾರಂಭಿಸುವಂತೆ ಕೋರಿದಾಗ ವೇದಿಕೆಯ ಮೇಲೆ ಕುಳಿತಿದ್ದ ಮುಖ್ಯ ಅತಿಥಿ, ಸೆನೆಟ್ ಸದಸ್ಯರು ಮತ್ತಿತರರೂ ವಿದ್ಯಾರ್ಥಿಗಳೂ ಹರ್ಷೋದ್ಗಾರ ಮಾಡಿದರು.

‘ಈಗ ಅಭ್ಯರ್ಥಿಗಳು ಎದ್ದು ನಿಲ್ಲಲಿ’, ‘ಅಭ್ಯರ್ಥಿಗಳನ್ನು ಒಪ್ಪಿಸಿಕೊಳ್ಳಲು ಅಪ್ಪಣೆ ಬೇಡುತ್ತೇನೆ’ ಎಂಬ ಕೆಲವು ವಾಕ್ಯಗಳನ್ನು ಕೇಳಿ ಸಭಿಕರು ನಲಿದರು.

ಹೈದ್ರಾಬಾದಿನಲ್ಲಿ ವಿದ್ಯಾರ್ಥಿಗಳ ಮೇಲೆ ಅಶ್ರುವಾಯು ಪ್ರಯೋಗ: ಕೆಲವರಿಗೆ ಗಾಯ

ಹೈದರಾಬಾದ್, ಜ. 18– ತೆಲಂಗಾಣ ಚಳವಳಿಯ ಎರಡು ವಿರೋಧಿ ವಿದ್ಯಾರ್ಥಿ ಪ್ರದರ್ಶನಕಾರರನ್ನು ಚದುರಿಸಲು ಪೊಲೀಸರು ಇಂದು 100 ಅಶ್ರುವಾಯು ಷೆಲ್‌ಗಳನ್ನು ಪ್ರಯೋಗಿಸಿದರು ಹಾಗೂ ಲಾಠಿ ಪ್ರಹಾರ ನಡೆಸಿದರು.

ಕಳೆದ ಮೂರು ದಿನಗಳಿಂದ ತೆಲಂಗಾಣಾ ಹಿತರಕ್ಷಣೆ ಪ್ರತಿಪಾದಕರು ಹಾಗೂ ಪ್ರತ್ಯೇಕ ತೆಲಂಗಾಣಾವಾದಿಗಳು ರಸ್ತೆಗಳಲ್ಲಿ ಪರಸ್ಪರ ಎದುರಿಸಿ ನಿಲ್ಲದಿದ್ದರೂ ಇಂದು ಮೆರವಣಿಗೆಗಳು ಅಬೀದ್ ಚೌಕ ಮುಟ್ಟಿದಾಗ ಒಬ್ಬರ ವಿರುದ್ಧ ಒಬ್ಬರು ಘೋಷಿಸಲು ಮತ್ತು ದೊಣ್ಣೆಗಳನ್ನು ಬೀಸಲು ಪ್ರಾರಂಭಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !