ಒಂದೇ ಪಠ್ಯಕ್ರಮವಾದರೆ ವಿಶ್ವವಿದ್ಯಾಲಯ ಏಕೆ?

7

ಒಂದೇ ಪಠ್ಯಕ್ರಮವಾದರೆ ವಿಶ್ವವಿದ್ಯಾಲಯ ಏಕೆ?

Published:
Updated:
Prajavani

ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ನಿವೃತ್ತ ಕುಲಪತಿಗಳ ವೇದಿಕೆ ಅಧ್ಯಕ್ಷ ಎಸ್‌.ಎನ್‌.ಹೆಗ್ಡೆ ಅವರೊಂದಿಗೆ ಮಾತುಕತೆ.

**

* ವಿಶ್ವವಿದ್ಯಾಲಯಗಳಲ್ಲಿ ಏಕರೂಪದ ಪ್ರವೇಶ ವ್ಯವಸ್ಥೆ, ಶುಲ್ಕ, ಪಠ್ಯಕ್ರಮ ಸಾಧ್ಯವೇ?

ಒಂದೇ ಪಠ್ಯಕ್ರಮ ರೂಪಿಸುವುದಾದರೆ ಪ್ರತ್ಯೇಕ ವಿಶ್ವವಿದ್ಯಾಲಯಗಳನ್ನೇಕೆ ಸ್ಥಾಪಿಸಬೇಕು? ಪ್ರತಿ ವಿ.ವಿಯೂ ತನ್ನದೇ ಆದ ಪಠ್ಯ ವಿಶೇಷ, ಗುಣಮಟ್ಟ ಹೊಂದಿದೆ. ಹೀಗಾಗಿಯೇ ಆಯಾ ವಿ.ವಿ ಗುಣಮಟ್ಟ, ಸೌಲಭ್ಯಗಳಿಗೆ ತಕ್ಕಂತೆ ಶುಲ್ಕ ನಿಗದಿಪಡಿಸಲಾಗುತ್ತದೆ. ವಿ.ವಿಗಳಲ್ಲಿ ದಾಖಲಾತಿ, ಪರೀಕ್ಷೆ ಫಲಿತಾಂಶ ಇತ್ಯಾದಿಗೆ ಏಕರೂಪದ ಅವಧಿ ನಿಗದಿಪಡಿಸಬಹುದು. ‘ಏಕರೂಪ’ ಎನ್ನುವುದು ಯಾರೋ ಎಲ್ಲೋ ಕುಳಿತು ಹೇಳಿದಷ್ಟು ಸುಲಭ ಅಲ್ಲ. ಪರಿಣತರು ಚರ್ಚಿಸಿ ಅಭಿಪ್ರಾಯಕ್ಕೆ ಬರಬೇಕು. ಈ ಪರಿಕಲ್ಪನೆ ಸಾಧುವಲ್ಲ ಎಂದು ನಾನು ಈ ಹಿಂದೆಯೇ ಸಾಕಷ್ಟು ಬಾರಿ ಸಲಹೆ ನೀಡಿದ್ದೆ. ಅದು ಸಲಹೆಯಾಗಿಯೇ ಉಳಿಯಿತು.

* ವಿ.ವಿಗಳು 5 ಗ್ರಾಮ ದತ್ತು ಪಡೆಯಬೇಕು ಎಂಬ ಮಾತು ಕೇಳಿಬಂದಿದೆಯಲ್ಲಾ? 

ಇದೊಂದು ಒಳ್ಳೆಯ ಯೋಚನೆ. ವಿ.ವಿಗಳು ಜನಸಾಮಾನ್ಯರ ಕಡೆಗೆ ಹೋಗಬೇಕು. ಮೈಸೂರು ವಿ.ವಿ ಕುಲಪತಿಯಾಗಿದ್ದಾಗ ನಾನು ಈ ಪ್ರಯೋಗ ಮಾಡಿದ್ದೆ. ಮಾಕನಹಳ್ಳಿ ಎಂಬ ಗ್ರಾಮವನ್ನು ದತ್ತು ಪಡೆದು ಎನ್‌ಎಸ್‌ಎಸ್‌ ಸಹಯೋಗದಲ್ಲಿ ಅಭಿವೃದ್ಧಿ ಮಾಡಲಾಗಿತ್ತು.

* ಸಹಪ್ರಾಧ್ಯಾಪಕರ ಬಡ್ತಿ ನನೆಗುದಿಗೆ ಬಿದ್ದಿದೆಯಲ್ಲಾ?

ವಿಶ್ವವಿದ್ಯಾಲಯಗಳ ಪ್ರಾಧ್ಯಾಪಕರ ನೇಮಕಾತಿ ಎಂದರೆ ಕೆಪಿಎಸ್‌ಸಿ ನೇಮಕಾತಿಯಂತಲ್ಲ. ಅದಕ್ಕೊಂದು ಶಿಸ್ತು ಇದೆ. ಬೇರೆ ಬೇರೆ ಕ್ಷೇತ್ರದ ಪರಿಣತರ ಸಮಿತಿ ಸೇರಿ ನಿರ್ಧರಿಸಬೇಕು. ಬಡ್ತಿ ವಿಚಾರದಲ್ಲೂ ಕುಲಪತಿ ನೇತೃತ್ವದ ಸಮಿತಿ ಈ ಪ್ರಕ್ರಿಯೆ ನಡೆಸಬೇಕು.

* ಜಾಗತಿಕ ಮಟ್ಟದ ಸ್ಪರ್ಧೆಗೆ ವಿ.ವಿಗಳಲ್ಲಿ ಆಗಬೇಕಾದ ಸುಧಾರಣೆ ಏನು? 

‘ಜಾಗತಿಕ ಗುಣಮಟ್ಟದ ಸ್ಪರ್ಧೆ’ ಅದೊಂದು ಕನಸು ಅಷ್ಟೆ. ಈಡೇರುವ ಲಕ್ಷಣಗಳು ಸದ್ಯಕ್ಕಿಲ್ಲ. ವಿ.ವಿಗಳ ವ್ಯವಸ್ಥೆಯಲ್ಲೇ ಒಂದು ಕ್ರಮಬದ್ಧತೆ ಇಲ್ಲ. ಇನ್ನು ಗುಣಮಟ್ಟ ಏನು ನಿರೀಕ್ಷಿಸುತ್ತೀರಿ?

* ಕುಲಪತಿ ಹುದ್ದೆ ಮಾರಾಟವಾಗುವ ಮಟ್ಟಕ್ಕಿದೆಯೇ?

ಅದನ್ನೇನು ಕೇಳುತ್ತೀರಿ. ಮೂರು–ನಾಲ್ಕು ತಿಂಗಳು ಕುಲಪತಿಯಾಗಿದ್ದವರು ತಕ್ಷಣ ಕುಲಪತಿ ಆಯ್ಕೆ ಸಮಿತಿಯ ಮುಖ್ಯಸ್ಥರಾಗುತ್ತಾರೆ. ಹಲವರ ಪದವಿ– ಪ್ರಮಾಣ ಪತ್ರಗಳೆಲ್ಲಾ ಊಟಕ್ಕಿಲ್ಲದ ಉಪ್ಪಿನಕಾಯಿ. ವಿಧಾನಸೌಧ ಸುತ್ತುವವರು, ಏನೇನೋ ಮಾಡುವವರೆಲ್ಲಾ ಈ ಹುದ್ದೆಗೆ ಬಂದುಬಿಟ್ಟಿದ್ದಾರೆ. ಒಟ್ಟಿನಲ್ಲಿ ಇಚ್ಛಾಶಕ್ತಿ ಇದ್ದರೆ ಇದನ್ನೆಲ್ಲಾ ಸುಧಾರಿಸಬಹುದು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !