ಶುಕ್ರವಾರ, 19 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಾವ್ಯವೆಂಬ ಜೀವನದಿ.. ಸಾಹಿತಿ ಎಚ್.ಎಸ್. ವೆಂಕಟೇಶಮೂರ್ತಿ ಅವರ ಜೊತೆ ಮಾತುಕತೆ

‘HSV’ ಎಂದೇ ಖ್ಯಾತರಾದ ಎಚ್.ಎಸ್.ವೆಂಕಟೇಶಮೂರ್ತಿ ಸುಮಾರು ಆರು ದಶಕಗಳಿಂದ ನಿರಂತರವಾಗಿ ಸಾಹಿತ್ಯ ಕೃಷಿಯಲ್ಲಿ ಹಾಗೂ ಅಧ್ಯಯನ, ಅಧ್ಯಾಪನಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
Published 22 ಜೂನ್ 2024, 23:05 IST
Last Updated 22 ಜೂನ್ 2024, 23:05 IST
ಅಕ್ಷರ ಗಾತ್ರ

‘ಎಚ್ಚೆಸ್ವಿ’ ಎಂದೇ ಖ್ಯಾತರಾದ ಎಚ್.ಎಸ್.ವೆಂಕಟೇಶಮೂರ್ತಿ ಸುಮಾರು ಆರು ದಶಕಗಳಿಂದ ನಿರಂತರವಾಗಿ ಸಾಹಿತ್ಯ ಕೃಷಿಯಲ್ಲಿ ಹಾಗೂ ಅಧ್ಯಯನ, ಅಧ್ಯಾಪನಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. 'ಬುದ್ಧ ಚರಣ'ವೆಂಬ ಮಹಾಕಾವ್ಯವನ್ನೂ ಒಳಗೊಂಡಂತೆ, ಸಾಹಿತ್ಯದ ಬಹುತೇಕ ಎಲ್ಲ ಪ್ರಕಾರಗಳಲ್ಲೂ ಹಲವು ಮೌಲಿಕ ಹಾಗೂ ಚಿರಕಾಲ ಬಾಳುವಂತಹ ಕೃತಿಗಳಿಂದ ಕನ್ನಡ ಸಾಹಿತ್ಯ ಭಂಡಾರವನ್ನು ಶ್ರೀಮಂತಗೊಳಿಸಿದ್ದಾರೆ. ಸುಗಮ ಸಂಗೀತ, ಕಿರುತೆರೆ ಹಾಗೂ ಚಲನಚಿತ್ರ ಕ್ಷೇತ್ರಗಳಲ್ಲೂ ಗಮನಾರ್ಹ ಸಾಧನೆ ಮಾಡಿದ್ದಾರೆ. ಹೀಗೆ ಪಂಡಿತರಿಗೂ ಪಾಮರರಿಗೂ ಪ್ರಿಯರಾದ ‘ಎಚ್ಚೆಸ್ವಿ’ ಅವರೊಂದಿಗೆ ನಡೆಸಿದ ಮಾತುಕತೆ...


* ಇಳಿವಯಸ್ಸಿನಲ್ಲೂ ನಿಮ್ಮ ಸೃಜನಶೀಲತೆ ಸೆಲೆ ಬತ್ತದೆ ಎಂದಿನ ಹುಮ್ಮಸ್ಸಿನಲ್ಲೇ ಜೀವನದಿಯಂತೆ ಹರಿಯುತ್ತಿದೆಯಲ್ಲ, ಇದರ ಗುಟ್ಟೇನು?

ಸೃಜನಶೀಲತೆಯು ಹೆಚ್ಚಾಗಿ ಮನಸ್ಸಿನ ಶಕ್ತಿ ಮತ್ತು ಜೀವಂತಿಕೆಯನ್ನು ಅವಲಂಬಿಸಿದೆ. ಇಂಥ ಮನಸ್ಸಿಗೆ ಸದೃಢವಾದ ಸ್ಮರಣೆಯು ಸಹಕಾರಿಯಾಗಿ ನಿಂತಲ್ಲಿ ಕ್ರಿಯಾಶಕ್ತಿ ಕುಂಠಿತವಾಗುವುದಿಲ್ಲ. ಸುತ್ತಲ ಜಗತ್ತು ಮತ್ತು ಕವಿ ವ್ಯಕ್ತಿತ್ವದ ನಡುವೆ ಗಾಢವಾದ ಸಂಬಂಧ ಇರುವುದು ಅತ್ಯಗತ್ಯ. ಲೋಕವಿಮುಖಿಯಾದ ಮನಸ್ಸು ಸೃಜನಶೀಲತೆಯ ಲೀಲೆಯಲ್ಲಿ ಆಸಕ್ತಿಯನ್ನು ಕಳೆದುಕೊಳ್ಳುತ್ತದೆ. ಸಾಕಪ್ಪಾ ಈ ಜೀವನ ಅನಿಸಿದಾಗ ಬರೆಯುವ ಹುಮ್ಮಸ್ಸು ಎಲ್ಲಿಂದ ಬಂದೀತು?

ದುಃಖದ ಸಂಗತಿಗಳು ಕವಿಯ ಪಾಲಿಗೆ ತಲ್ಲಣಗೊಳಿಸುವ ತೀವ್ರ ಅನುಭವಗಳಾಗಿ ಪರಿಣಮಿಸುವುದರಿಂದ, ಬೇಂದ್ರೆ ಭಾವಿಸುವಂತೆ, ಹಾಡಿಗೆ ಅಸ್ತಿವಾರವಾಗುವ ಪಾಡಾಗಿ ಪರಿಣಮಿಸುತ್ತವೆ. ಈ ಸೃಜನಶೀಲತೆ ಬಹು ವಿಲಕ್ಷಣವಾದ ಪ್ರತಿಭಾ ಪ್ರವೃತ್ತಿ. ಇನ್ನು ನನ್ನಿಂದ ಬರೆಯಲಾಗದು ಎಂಬ ನೋವೇ ಅಡಿಗರ 'ಕೂಪ ಮಂಡೂಕ'ದಂಥ ಘನವಾದ ಕವಿತೆಯ ರಚನೆಗೆ ಕಾರಣವಾಯಿತು. ಸೃಜನಶೀಲತೆ ಅನ್ನುವುದು ಚಿತೆಯ ಭಸ್ಮದಿಂದಲೇ ಪ್ರತಿರೂಪ ಪಡೆಯುವ ಮನೋಜ ಶಕ್ತಿ. ಹುಟ್ಟುವ ಮತ್ತು ಬೆಳೆಯುವ ಅದಮ್ಯವಾದ ಮನಸ್ಸಿನ ತುಡಿತವೇ ಸೃಜನಶೀಲತೆಯ ಮೂಲ ದ್ರವ್ಯ, ನಿರಾಸಕ್ತಿ ಮೂಡುವ ತನಕ ಕ್ರಿಯಾಶೀಲತೆಗೆ ಭಗ್ನತೆಯ ಭಯವಿಲ್ಲ.


* ಹಿನ್ನೋಟದಲ್ಲಿ ನಿಮ್ಮ ಸುದೀರ್ಘ ಸಾಹಿತ್ಯ ಯಾನವನ್ನು ಅವಲೋಕಿಸಿದಾಗ ನಿಮ್ಮಲ್ಲಿ ಮೂಡುವ ಭಾವನೆಗಳೇನು?

ಹಿಂದಿನ ಯಾನ ನಾವೇ ಕಂಡರಿಸಿದ ಹಾದಿ. ಮುಂದಿನ ಹಾದಿ ಕಂಡುಕೊಳ್ಳಬೇಕಾದ ಹಾದಿ. ಹಿಂದಿನ ಹಾದಿಯನ್ನು ಅವಲೋಕಿಸಿದಾಗ ಮುಂದಿನ ಕಾಣದಿರುವ ಮಂಜು ಮುಸುಕಿನ ಹಾದಿಯನ್ನು ಭೇದಿಸುವ ಆಸೆ ಮೂಡುತ್ತದೆ. ನಮ್ಮ ಆಸಕ್ತಿ ನಡೆಯಬೇಕಾದ ಹಾದಿಯೇ ವಿನಾ ನಡೆದ ಹಾದಿಯಲ್ಲ ಅಲ್ಲವೇ? ದೈವವು ಭವಿಷ್ಯವನ್ನು ನಿಗೂಢವಾಗಿ ಇರಿಸಿರುವುದು ಜೀವನಾಸಕ್ತಿಯನ್ನು ನಾವು ಕಳೆದುಕೊಳ್ಳದಿರಲು ಮುಖ್ಯ ಕಾರಣ.

* ನೀವು ನವ್ಯ ಚಳವಳಿಯ ಸಂದರ್ಭದಲ್ಲಿ ಬೆಳಕಿಗೆ ಬಂದ ಕವಿಯಾದರೂ ನಿಮ್ಮ ಒಲವು, ನಿಲುವುಗಳು ನವೋದಯಕ್ಕೇ ಹೆಚ್ಚು ಹತ್ತಿರವೆಂದು ನನಗನ್ನಿಸುತ್ತೆ. ನೀವೇನಂತೀರಿ?

ನವೋದಯ ನವ್ಯ ಮತ್ತು ಮಾರ್ಗ ಪರಂಪರೆಗೆ ಋಣಿಯಾಗಿದ್ದೇನೆ. ಆಶಯ ಮತ್ತು ಆದರ್ಶಗಳ ನೆಲೆಯಲ್ಲಿ ನಾನು ನವೋದಯಕ್ಕೆ ಆಭಾರಿಯಾಗಿದ್ದೇನೆ. ಕವಿತೆಯನ್ನು ಕಟ್ಟುವ ಕಸುಬುಗಾರಿಕೆಯನ್ನು ವಿಶೇಷವಾಗಿ ನವ್ಯರಿಂದ ಕಲಿತಿದ್ದೇನೆ. ಇಷ್ಟಾಗಿಯೂ ಮಾರ್ಗಕಾವ್ಯದ ಬಗ್ಗೆ ನನ್ನ ಆಸಕ್ತಿ ಬತ್ತದ ತೊರೆ, ಅದು ಕೇವಲ ಅಭ್ಯಾಸದ ಆಸಕ್ತಿಯಲ್ಲ; ಅನುಸಂಧಾನದ ಆಸಕ್ತಿ. ಇಲ್ಲವಾಗಿದ್ದರೆ ನಾನು 'ಬುದ್ಧಚರಣ'ದಂಥ ಮಹಾಕಾವ್ಯದ ರಚನೆಯ ಗೊಡವೆಗೇ ಹೋಗುತ್ತಿರಲಿಲ್ಲ.

* ಇಂದು ನಿಮ್ಮ ಸಮಗ್ರ ಗೀತೆಗಳ ಸಂಕಲನ 'ಪ್ರೀತಿಯು ನೀಡಿದ ಕಣ್ಣು' ಲೋಕಾರ್ಪಣೆಗೊಳ್ಳುತ್ತಿದೆ. ನೀವು ಗೀತೆಗಳನ್ನು ರಚಿಸಲು ಒದಗಿದ ಪ್ರೇರಣೆ, ಎದುರಿಸಬೇಕಾಗಿ ಬಂದ ಟೀಕೆಗಳು, ಒಟ್ಟಾರೆ, ಹಾಡಿನ ಬಗ್ಗೆ ನಿಮ್ಮ ನಿಲುವು...

ಕವಿತೆಯ ಜೊತೆ ಜೊತೆಗೇ ಗೀತೆಗಳನ್ನೂ ರಚಿಸಿದ್ದೇನೆ. ಅದೂ ಪರಂಪರೆಯ ಅನುಸಂಧಾನವೇ. ಹಾಡುಗಬ್ಬದ ನೇಗಿಲನ್ನೂ ಮುಂದೆ ಎಳೆಯುವ ಕೃಷಿಕಾರರು ಭವಿಷ್ಯತ್ತಿಗೆ ಬೇಡವೇ? ಆ ಕೆಲಸವನ್ನೇ ನಾನು, ನೀವು, ನಮ್ಮಂಥ ಅನೇಕ ಗೀತಾಸಕ್ತ ಮಿತ್ರರು ಮಾಡಿಕೊಂಡು ಬಂದಿದ್ದೇವೆ. ಗೀತೆಯ ಬಗ್ಗೆ ಆಸಕ್ತಿ ಇಲ್ಲದವರು ಟೀಕೆ ಮಾಡುವುದು ಸಹಜ. ಆಸಕ್ತಿ ಉಳ್ಳವರ ಪ್ರಶಂಸೆಯೇನು ಸಾಮಾನ್ಯವೇ? ಗೀತೆ ಕವಿಯ ಅನುಭವ ನಿವೇದನೆ ಹೌದೇ ಅಲ್ಲವೇ ಎಂಬುದು ಮುಖ್ಯ ಪ್ರಶ್ನೆ. ಗೀತೆಯ ಮೂಲಕವೂ ನಮ್ಮ ಅನುಭವ ನಿಭಾವಣೆ ಆಗಿದೆ ಎಂಬುದು ನನ್ನ ದೃಢ ವಿಶ್ವಾಸ.

* ನವ್ಯದ ಕಾಲದಲ್ಲಿ ಕಣ್ಮರೆಯಾಗಿದ್ದ ಸಾನೆಟ್ ಹಾಗೂ ಶಿಶುಗೀತೆಗಳ ಕಾವ್ಯ ಪ್ರಭೇದಗಳಲ್ಲೂ ನೀವು ಉತ್ಕೃಷ್ಟ ಕೃತಿಗಳನ್ನು ರಚಿಸಿದ್ದೀರಿ. ಈ ಬಗ್ಗೆ..

ಸಾನೆಟ್, ಶಿಶುಗೀತೆ ಮೊದಲಾದವು ಕೂಡ ನಾವು ಸಾಧಿಸಬೇಕಾದ ಮುಖ್ಯ ಕಾವ್ಯ ಪ್ರಭೇದಗಳು. ಅದನ್ನು ವಿನಯಪೂರ್ವಕ ಶ್ರದ್ಧೆಯಿಂದ ನಿರ್ವಹಿಸಿದ್ದೇನೆ. ಮಕ್ಕಳಿಗಾಗಿ ಬರೆಯುವುದು ಕೂಡ ನಮ್ಮ ಕರ್ತವ್ಯ. ಈ ನೆಲೆಯಲ್ಲಿ ಕುವೆಂಪು, ಕಾರಂತ ನಮಗೆ ಆದರ್ಶವಾಗಿದ್ದಾರೆ. ಮಕ್ಕಳಿಗಾಗಿ ನಾನು ಬರೆಯುವ ಧೈರ್ಯ ಮಾಡದೆ ಹೋಗಿದ್ದರೆ 'ಹಕ್ಕಿಸಾಲು', 'ಅಳಿಲು ರಾಮಾಯಣ', 'ಚಿನ್ನಾರಿ ಮುತ್ತ'ದಂಥ ಕೃತಿಗಳು ಬರುತ್ತಲೇ ಇರಲಿಲ್ಲ.


* ನಿಮ್ಮ ಹಲವಾರು ನಾಟಕಗಳು ಜನಪ್ರಿಯವಾಗಿವೆ. ಬಿ.ವಿ.ಕಾರಂತ, ಬಿ.ಜಯಶ್ರೀ, ಸುರೇಂದ್ರನಾಥ್ ಮುಂತಾದ ಪ್ರಸಿದ್ಧ ನಿರ್ದೇಶಕರು ಅವುಗಳನ್ನು ರಂಗಕ್ಕೆ ತಂದಿದ್ದಾರೆ. ಆದರೂ ನಾಟಕ ಕ್ಷೇತ್ರದಲ್ಲಿ ನಿಮಗೆ ನ್ಯಾಯೋಚಿತವಾಗಿ ದೊರೆಯಬೇಕಿದ್ದ ಮನ್ನಣೆ ದೊರೆತಿಲ್ಲವೆಂದು ನನಗನ್ನಿಸುತ್ತೆ. ಇದಕ್ಕೆ ಕವಿಯಾಗಿ ನೀವು ಗಳಿಸಿದ ಖ್ಯಾತಿ ಕಾರಣವಿರಬಹುದೆ? ಅಥವಾ..

ನನ್ನ ನಾಟಕಗಳಿಗೆ ಮನ್ನಣೆ ದೊರೆತಿಲ್ಲ ಎಂದು ನನಗನ್ನಿಸಿಲ್ಲ. ಪ್ರೇಕ್ಷಕರ ಪ್ರೀತಿ ದೊರೆಯಿತು.. ವಿಮರ್ಶಕರ ಮೆಚ್ಚುಗೆ ಕೂಡ. ನನಗೆ ಅಷ್ಟು ಸಾಕು.

* ಸಾಮಾಜಿಕ ಜಾಲತಾಣಗಳ ನಿರಂಕುಶ ಅಬ್ಬರದ ಪ್ರಸ್ತುತ ಸಂದರ್ಭದಲ್ಲಿ ಕಾವ್ಯವು ದಿಕ್ಕೆಟ್ಟ ಹಾಗೆ ನಿಮಗೆ ತೋರುತ್ತಿದೆಯೆ? ಹೊಸ ಪ್ರತಿಭೆಗಳಿಗೆ ನೀವು ನೀಡಲು ಬಯಸುವ ಸಲಹೆ ಸೂಚನೆಗಳೇನು?

ಸೋಷಿಯಲ್ ಮೀಡಿಯಾದಲ್ಲಿ ಪ್ರಕಟವಾಗುತ್ತಿರುವ ಹೊಸ ಕವಿಗಳ ಕವಿತೆಗಳನ್ನು ಕುತೂಹಲದಿಂದ ಗಮನಿಸುತ್ತಿದ್ದೇನೆ. ಕಾವ್ಯದ ಕಸುಬುಗಾರಿಕೆಯ ಕಡೆ ಹೊಸ ಕವಿಗಳು ಗಮನ ಹರಿಸಬೇಕೆಂದು ನನಗೆ ಮತ್ತೆ ಮತ್ತೆ ಅನಿಸಿದೆ. ಪ್ರತಿಭೆಯಿಂದ ಪ್ರಕಟವಾಗುವ ಹೊಳುಹುಗಳು ಅಲ್ಲಲ್ಲಿ ಖಂಡಿತ ಕಾಣುತ್ತವೆ. ಆದರೆ ಹೊಳಹುಗಳು ಅಭಿವ್ಯಕ್ತಿಯಾಗಿ ದಾಟಿಕೊಳ್ಳುವಲ್ಲಿ ಸಮಸ್ಯೆಗಳು ಕಾಣುತ್ತಿವೆ. ಹೊಸ ಪ್ರತಿಭೆಗಳು ಈ ಅಗ್ನಿದಿವ್ಯ ಅಥವಾ ಕೊಂಡ ಹಾಯುವ ನೆಲೆಯಲ್ಲಿ ಸಫಲರಾಗಲಿ ಎಂಬುದು ನನ್ನ ಆಶಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT