ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಂಸ್ಕೃತಿಯ ಹೃದಯ ಸ್ಪಂದನ ಕಾವ್ಯ: ಎಚ್.ಎಸ್. ವೆಂಕಟೇಶಮೂರ್ತಿ

Published 11 ಫೆಬ್ರುವರಿ 2024, 15:47 IST
Last Updated 11 ಫೆಬ್ರುವರಿ 2024, 15:47 IST
ಅಕ್ಷರ ಗಾತ್ರ

ಬೆಂಗಳೂರು: ‘ಭಾರತೀಯ ಸಂಸ್ಕೃತಿಯ ಹೃದಯ ಸ್ಪಂದನ ಕಾವ್ಯವಾಗಿದೆ. ಆದ್ದರಿಂದಲೇ ಕವಿತೆಯನ್ನು ಓದದವರೂ ಕಾವ್ಯವನ್ನು ಕೇಳಿ ಸಂತೋಷಪಡುತ್ತಾರೆ’ ಎಂದು ಕವಿ ಎಚ್.ಎಸ್. ವೆಂಕಟೇಶಮೂರ್ತಿ ತಿಳಿಸಿದರು. 

ಚಾರುಮತಿ ಪ್ರಕಾಶನ ನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸತೀಶ್ ಹುಳಿಯಾರ್ ಅವರ ‘ಯಾರೋ ಇರುವ ಭಾವನೆ...’ ಕವನ ಸಂಕಲನ ಬಿಡುಗಡೆಮಾಡಿ, ಮಾತನಾಡಿದರು. 

‘ನಮ್ಮ ಭಾಷೆಯಲ್ಲಿ ಮಾತನಾಡಿದಾಗ ಮಾತ್ರ ನಮ್ಮಲ್ಲಿನ ನಿಜ ಶಕ್ತಿ ವ್ಯಕ್ತವಾಗುತ್ತದೆ. ಆದ್ದರಿಂದ ಕವಿಯಾದವನು ತನ್ನ ಭಾಷೆಯಲ್ಲಿಯೇ ಕವಿತೆಗಳನ್ನು ರಚಿಸಬೇಕು. ಭಾಷೆ ಶಬ್ದಕೋಶದ ವಿಷಯವಾದರೆ, ಮಾತು ಹೃದಯ ಮತ್ತು ನಾಲಿಗೆಗೆ ಸಂಬಂಧಿಸಿದ ವಿಷಯವಾಗಿದೆ. ಮಾತಿನ ಬಗ್ಗೆ ಸಂಕೋಚ, ಗೌರವ ಇರುವವರು ಕವಿಯಾಗುತ್ತಾರೆ. ರೂಪಕ, ಪ್ರತಿಮೆ ಹಾಗೂ ಪ್ರತೀಕವೇ ಕವಿಯ ಬಂಡವಾಳ. ಕಾದಂಬರಿಗೆ ನೂರು ವರ್ಷಗಳ ಪರಂಪರೆ ಇದ್ದರೆ, ಕಾವ್ಯಕ್ಕೆ ಒಂದೂವರೆ ಸಾವಿರ ವರ್ಷಗಳ ಇತಿಹಾಸವಿದೆ. ನಾವು ಕಾವ್ಯದ ವಾರಸುದಾರರಾಗಬೇಕು’ ಎಂದು ಹೇಳಿದರು. 

ಕವಿ ಮಮತಾ ಸಾಗರ್, ‘ಪ್ರತಿ ಕಾಲವೂ ಒಂದೊಂದು ಪಾಠವನ್ನು ಕಲಿಸುತ್ತದೆ. ಬದಲಾದ ಕಾಲಘಟ್ಟದಲ್ಲಿ ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ಆದ್ದರಿಂದ ಕುಟುಂಬ, ಊರನ್ನು ಈ ಮೊದಲಿನಂತೆ ಸಾಂಪ್ರದಾಯಿಕ ದೃಷ್ಟಿಕೋನದಲ್ಲಿ ನೋಡುವುದನ್ನು ನಿಲ್ಲಿಸಬೇಕು. ಹೆಣ್ಣು ಮತ್ತು ಗಂಡಿನ ನಡುವಿನ ಕಂದಕವನ್ನು ದೂರ ಮಾಡಬೇಕು. ಕವನ ಬರೆಯುವ ಪುರುಷರನ್ನು ಕವಿಯೆಂದು ಗುರುತಿಸಿದರೆ, ಮಹಿಳೆಯರನ್ನು ಕವಯಿತ್ರಿ ಎಂದು ಕರೆಯಲಾಗುತ್ತಿದೆ. ಇದು ಸರಿಯಲ್ಲ. ಮಹಿಳೆಯರನ್ನೂ ಕವಿಯೆಂದೇ ಗುರುತಿಸಬೇಕು. ಇವತ್ತಿನ ಕಾಲಘಟ್ಟದಲ್ಲಿ ಬರವಣಿಗೆ ಪ್ರೀತಿ ಹಂಚುವ ಸಾಧನ ಆಗಬೇಕು’ ಎಂದು ತಿಳಿಸಿದರು. 

ಕವಿ ಡುಂಡಿರಾಜ್, ‘ವಿಶ್ವವಿದ್ಯಾಲಯದ ಪ್ರಾಧ್ಯಾಪಕರು ಹಾಗೂ ಶಾಲಾ–ಕಾಲೇಜುಗಳ ಅಧ್ಯಾಪಕರು ಮಾತ್ರ ಕವಿತೆಯನ್ನು ಬರೆಯುತ್ತಾರೆ ಎಂಬ ಮನೋಭಾವ ಒಂದು ಕಾಲದಲ್ಲಿತ್ತು. ಈಗ ಸಾಫ್ಟ್‌ವೇರ್‌ ಕಂಪನಿಗಳು, ಬ್ಯಾಂಕ್‌ಗಳಲ್ಲಿ ಇರುವವರೂ ಕವಿತೆ ಬರೆಯುತ್ತಿದ್ದಾರೆ. ಕ್ಯಾವದ ಬಗ್ಗೆ ಪ್ರೀತಿ ಇದ್ದರೆ ಮಾತ್ರ ಕವಿತೆ ಬರೆಯಲು ಸಾಧ್ಯ. ಬೇಂದ್ರೆ ಸೇರಿ ವಿವಿಧ ಸಾಹಿತಿಗಳ ಕವಿತೆಗಳನ್ನು ಓದಿಕೊಂಡು ನಮ್ಮ ವೈಶಿಷ್ಟ್ಯತೋರಿಸಬೇಕು. ಮೊದಲು ನಾವು ಎಲ್ಲರು ತೆರಳಿದ ಹೆದ್ದಾರಿಯಲ್ಲಿ ಸಲೀಸಾಗಿ ಸಾಗಿ, ಒಳದಾರಿ ಕಂಡುಕೊಳ್ಳಬೇಕು. ಆಗ ಭಿನ್ನವಾಗಿ ಬರೆಯಲು ಸಾಧ್ಯವಾಗುತ್ತದೆ. ಹಳೆಯ ವಿಷಯವನ್ನು ಹೊಸ ರೀತಿ ಹೇಳಿದರೆ ಜನರಿಗೆ ಇಷ್ಟ ಆಗುತ್ತದೆ’ ಎಂದು ಹೇಳಿದರು. 

ಪುಸ್ತಕ ಪರಿಚಯ

ಪುಸ್ತಕ: ‘ಯಾರೋ ಇರುವ ಭಾವನೆ...’

ಕವಿ: ಸತೀಶ್ ಹುಳಿಯಾರ್

ಪುಟಗಳು: 88

ಬೆಲೆ: ₹ 100

ಪ್ರಕಾಶನ: ಚಾರುಮತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT