ಶುಕ್ರವಾರ, ಮಾರ್ಚ್ 31, 2023
23 °C

ಸಂದರ್ಶನ: ಭದ್ರತೆಯ ವಿಷಯದಲ್ಲಿ ಜೊತೆಗೂಡಲು ಸಿದ್ಧ -ಅಲೆಕ್ಸಾಂಡರ್ ಎಲಿಸ್

ವಿಜಯ್ ಜೋಷಿ Updated:

ಅಕ್ಷರ ಗಾತ್ರ : | |

Prajavani

ಬ್ರೆಕ್ಸಿಟ್‌ ನಂತರದಲ್ಲಿ ಭಾರತಕ್ಕೆ ಬ್ರಿಟನ್ನಿನಲ್ಲಿ ಅವಕಾಶಗಳು ಹೆಚ್ಚಲಿವೆ ಎಂದು ಹೇಳುತ್ತಾರೆ ಭಾರತದಲ್ಲಿ ಬ್ರಿಟನ್ನಿನ ಹೈಕಮಿಷನರ್‌ ಆಗಿರುವ ಅಲೆಕ್ಸಾಂಡರ್ ಎಲಿಸ್. ಈಚೆಗೆ ಬೆಂಗಳೂರಿಗೆ ಬಂದಿದ್ದ ಅವರು ‘ಪ್ರಜಾವಾಣಿ’ಗೆ ನೀಡಿದ ಸಂದರ್ಶನದಲ್ಲಿ, ಚೀನಾದ ಜೊತೆಗಿನ ಸಂಬಂಧಗಳ ಬಗ್ಗೆಯೂ ಮಾತನಾಡಿದರು. ಅವರ ಜೊತೆಗಿನ ಮಾತುಕತೆಯ ಆಯ್ದ ಭಾಗ ಇಲ್ಲಿದೆ.

ಪ್ರಶ್ನೆ: ಬ್ರೆಕ್ಸಿಟ್ ನಂತರದಲ್ಲಿ ಭಾರತ–ಬ್ರಿಟನ್ ಸಂಬಂಧ ಹೇಗಿರುತ್ತದೆ?

ಬ್ರೆಕ್ಸಿಟ್‌ನಿಂದಾಗಿ ಭಾರತ ಮತ್ತು ಬ್ರಿಟನ್‌ಗೆ ವಾಣಿಜ್ಯಿಕವಾಗಿ ಸಹಾಯ ಆಗಲಿದೆ. ನಾವು ಭಾರತವನ್ನು ಒಂದು ಅವಕಾಶ ಎಂದು ನೋಡುತ್ತೇವೆ. ಬ್ರೆಕ್ಸಿಟ್‌ನಿಂದಾಗಿ ಎರಡು ಸ್ಪಷ್ಟ ಪರಿಣಾಮಗಳು ಉಂಟಾಗಿವೆ. ಒಂದನೆಯದು, ಪ್ರತ್ಯೇಕ ವಲಸೆ ನೀತಿ; ಇನ್ನೊಂದು, ವಾಣಿಜ್ಯ ವಹಿವಾಟು ಹೆಚ್ಚಳ. ನಮ್ಮ ವಲಸೆ ನೀತಿಯು ಈಗ ಭಾರತದ ಪಾಲಿಗೆ ಹೆಚ್ಚು ಉತ್ತಮವಾಗಿದೆ. ಏಕೆಂದರೆ, ನಾವು ಈಗ ಬ್ರಿಟನ್ನಿಗೆ ವಲಸೆ ಬರಲು ಬಯಸುವವರನ್ನು ಅವರು ಯಾವ ದೇಶದಿಂದ ಬರುತ್ತಾರೆ ಎಂಬ ನೆಲೆಯಲ್ಲಿ ನೋಡುವುದಿಲ್ಲ. ಈಗ ನಾವು ವಲಸೆ ಬರಲು ಬಯಸುವವರ ಕೌಶಲ ಹಾಗೂ ಶೈಕ್ಷಣಿಕ ಅರ್ಹತೆಯನ್ನು ಮಾತ್ರ ಗಮನಿಸುತ್ತೇವೆ. ಇದು ಭಾರತದ ಪಾಲಿಗೆ ದೊಡ್ಡ ಪ್ರಯೋಜನ ತಂದುಕೊಡಲಿದೆ.

ಪ್ರಶ್ನೆ: 2030ರ ಸುಮಾರಿಗೆ ಭಾರತ–ಬ್ರಿಟನ್ ನಡುವೆ ಯಾವ ಬಗೆಯ ವಾಣಿಜ್ಯ ಸಂಬಂಧ ಇರಬೇಕು ಎಂದು ಬಯಸುತ್ತೀರಿ?

ದೀರ್ಘಕಾಲ ಬಾಳುವ, ಎಲ್ಲ ಆಯಾಮಗಳನ್ನು ಒಳಗೊಳ್ಳುವ ಸಂಬಂಧದಲ್ಲಿ ಕೆಲವು ಅಂಶಗಳು ಮುಖ್ಯವಾಗುತ್ತವೆ. ರಕ್ಷಣೆ, ಆರೋಗ್ಯ, ಸುಸ್ಥಿರ ಬೆಳವಣಿಗೆ ಮತ್ತು ಹವಾಮಾನ ಬದಲಾವಣೆ... ಇವು ಅಂತಹ ಕೆಲವು ಅಂಶಗಳು. ಜನ ಅತ್ತಿಂದಿತ್ತ ಹೋಗಿಬರುವುದು, ವಾಣಿಜ್ಯ ವಹಿವಾಟು, ಹೂಡಿಕೆ ಕೂಡ ಜಾಸ್ತಿ ಇರಬೇಕಾಗುತ್ತದೆ. ವಿದ್ಯುತ್‌ ಚಾಲಿತ ವಾಹನಗಳ ಕ್ಷೇತ್ರದಲ್ಲಿ ಬ್ರಿಟನ್‌ ಕಡೆಯಿಂದ ಭಾರತದಲ್ಲಿ ದೊಡ್ಡ ಪ್ರಮಾಣದಲ್ಲಿ ಹೂಡಿಕೆ ಆಗಲಿದೆ. 2030ರೊಳಗೆ ನಮ್ಮ ವಾಣಿಜ್ಯ ವಹಿವಾಟು, ಹೂಡಿಕೆಯನ್ನು ಎರಡು ಪಟ್ಟು ಹೆಚ್ಚಿಸುವ ಗುರಿ ಹೊಂದಿದ್ದೇವೆ.

ಪ್ರಶ್ನೆ: ಚೀನಾವನ್ನು ಎದುರಿಸುವ ಭಾಗವಾಗಿ ಬ್ರಿಟನ್‌, ಭಾರತದ ಜೊತೆ ಹೆಚ್ಚಿನ ಸಂಬಂಧ ಹೊಂದುತ್ತಿದೆಯೇ?

ಬ್ರೆಕ್ಸಿಟ್‌ಗೆ ಮೂರನೆಯ ಆಯಾಮವೊಂದು ಇದೆ. ಬ್ರಿಟನ್‌ ವಿಶ್ವದ ಕಡೆ ಹೆಚ್ಚೆಚ್ಚು ಗಮನ ನೀಡುತ್ತಿದೆ. ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್‌ ಅವರ ನಡುವಿನ ಮಾತುಕತೆಯಲ್ಲಿ, ಮುಕ್ತ ವ್ಯಾಪಾರ ಒಪ್ಪಂದವೊಂದಕ್ಕೆ ಚಾಲನೆ ನೀಡುವ ಅಂಶವೂ ಇತ್ತು. ಅದನ್ನು ನಾವು ಶುರು ಮಾಡುತ್ತಿದ್ದೇವೆ. ಚೀನಾದ ಜೊತೆ ಕೆಲಸ ಮಾಡುವುದು ಹೇಗೆ ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ಎಲ್ಲ ದೇಶಗಳೂ ಹರಸಾಹಸ ಪಡುತ್ತಿವೆ ಎಂಬುದು ನನ್ನ ಭಾವನೆ.

ಪ್ರಶ್ನೆ: ಕಮ್ಯುನಿಸ್ಟ್‌ ಚೀನಾವನ್ನು ‘ಬೆದರಿಕೆ’ಯಾಗಿ ನೀವು ಪರಿಗಣಿಸುವಿರಾ?

ಚೀನಾದ ವಿಚಾರದಲ್ಲಿ ಉತ್ತರ ಸರಳವಾಗಿಲ್ಲ. ಚೀನಾ ಜೊತೆ ಸ್ಪರ್ಧೆಯಲ್ಲಿ, ಸಹಕಾರದಲ್ಲಿ ಇರಬೇಕಾದ ಸ್ಥಿತಿಯಿದೆ. ವಿರೋಧಿಸಬೇಕಾದ ವಿಷಯಗಳೂ ಇವೆ. ಶೀತಲ ಸಮರದ ಸಂದರ್ಭದ ಪರಿಸ್ಥಿತಿಗಿಂತ ಬಹಳ ಭಿನ್ನ ಸ್ಥಿತಿ ಇದು. ಈ ಮೂರು ಅಂಶಗಳ ನಡುವೆ ಸಮತೋಲನ ಕಾಯ್ದುಕೊಳ್ಳುವುದು ಹೇಗೆ ಎಂಬ ಬಗ್ಗೆ ಪ್ರತಿ ದೇಶವೂ ಗಮನಿಸಬೇಕು. ಚೀನಾದ ವರ್ತನೆ ಕೂಡ ಇಲ್ಲಿ ಪ್ರಭಾವ ಬೀರುತ್ತದೆ.

ಪ್ರಶ್ನೆ: ಬ್ರಿಟನ್ನಿನ ಸಿಎಸ್‌ಜಿ (ಕ್ಯಾರಿಯರ್ ಸ್ಟ್ರೈಕ್ ಗ್ರೂಪ್) ಭಾರತದ ನೌಕಾಪಡೆ ಜೊತೆ ಸಮರಾಭ್ಯಾಸ ನಡೆಸಿದೆ. ಇದು ಶಕ್ತಿಪ್ರದರ್ಶನದ ಭಾಗವೇ?

ಭಾರತ ಮತ್ತು ಬ್ರಿಟನ್ನಿನ ಪ್ರಧಾನ ಮಂತ್ರಿಗಳು ಸಹಿ ಮಾಡಿದ ಒಪ್ಪಂದವೊಂದರ ಪ್ರಮುಖ ಅಂಶ ಸಾಗರ ವ್ಯವಹಾರಗಳಲ್ಲಿ ಸಹಕಾರ. ಅದರಲ್ಲೂ, ಹಿಂದೂ ಮಹಾಸಾಗರದ ಪಶ್ಚಿಮ ಭಾಗದಲ್ಲಿ ಸಹಕಾರ ಬಹಳ ಮುಖ್ಯ. ಸಿಎಸ್‌ಜಿಯನ್ನು ಅಲ್ಲಿಗೆ ಕಳುಹಿಸಿರುವುದು ಶೀತಲ ಸಮರದ ನಂತರದಲ್ಲಿ ನಾವು ಇರಿಸಿರುವ ಬಹುದೊಡ್ಡ ಹೆಜ್ಜೆ. ನಾವು ಭದ್ರತೆಯ ವಿಚಾರದಲ್ಲಿ ಭಾರತದ ಜೊತೆಗೂಡಿ ಕೆಲಸ ಮಾಡಲು ಸಿದ್ಧರಿದ್ದೇವೆ ಎಂಬುದನ್ನು ಹೇಳುವ ಬಗೆ ಇದು.

ಪ್ರಶ್ನೆ: ಕೋವಿಡ್ ಎರಡನೆಯ ಅಲೆಯ ಸಂದರ್ಭದಲ್ಲಿ ಬ್ರಿಟನ್‌ ಭಾರತಕ್ಕೆ ವೆಂಟಿಲೇಟರ್‌ಗಳನ್ನು ದೊಡ್ಡ ಪ್ರಮಾಣದಲ್ಲಿ ರವಾನಿಸಿತು. ಏಕೆ?

ನಿಜವಾಗಿ ಹೇಳಬೇಕೆಂದರೆ, ಹಿಂದಿನ ವರ್ಷ ಭಾರತವು ನಮಗೆ ಪಿಪಿಇ ಕಿಟ್‌ಗಳನ್ನು, ಇತರ ಉಪಕರಣಗಳನ್ನು ಕಳುಹಿಸಿಕೊಟ್ಟಿತ್ತು. ಆ ನೆರವಿಗೆ ಪ್ರತಿಯಾಗಿ ನಾವೂ ನೆರವು ನೀಡಿದೆವು.

ಸಂದರ್ಶನ: ವಿಜಯ್ ಜೋಷಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು