ಶನಿವಾರ, ಮಾರ್ಚ್ 25, 2023
22 °C
'ನಮ್ಮದು ಆತ್ಮಾಭಿಮಾನದ ಹೋರಾಟ'

ನಾವು ನಕ್ಸಲರೂ ಅಲ್ಲ, ಖಲಿಸ್ತಾನಿಗಳೂ ಅಲ್ಲ: ಬಿಕೆಯು ಮುಖಂಡ ಹರನೇಕ್‌ ಸಿಂಗ್‌

ಸಚ್ಚಿದಾನಂದ ಕುರಗುಂದ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಆತ್ಮಾಭಿಮಾನದ ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ನಮ್ಮ ಬದುಕಿಗೆ ಕುತ್ತು ಬಂದಿದೆ. ಆದರೆ, ನಮಗೆ ನಕ್ಸಲರು, ಖಲಿಸ್ತಾನಿಗಳು ಎನ್ನುವ ಹಣೆಪಟ್ಟೆ ಅಂಟಿಸಲಾಗುತ್ತಿದೆ. ನಾವು ನಕ್ಸಲರೂ ಅಲ್ಲ, ಖಲಿಸ್ತಾನಿಗಳೂ ಅಲ್ಲ, ನಾವು ಈ ದೇಶದ ಸರಳ ಮತ್ತು ಸಾಮಾನ್ಯ ರೈತರು...’

ಕೇಂದ್ರ ಸರ್ಕಾರ ರೂಪಿಸಿರುವ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿಯ ಗಡಿಯಲ್ಲಿ ನಡೆಯುತ್ತಿರುವ ಹೋರಾಟದ ವಿವಿಧ ಆಯಾಮಗಳನ್ನು ಭಾರತೀಯ ಕಿಸಾನ್ ಯೂನಿಯನ್‌ (ಬಿಕೆಯು) ಮುಖಂಡ ಹರನೇಕ್‌ ಸಿಂಗ್‌ ವಿಶ್ಲೇಷಿಸಿದ್ದು ಹೀಗೆ.

ಅನ್ನದಾತರ ಸಂಕಟಗಳು, ಕೃಷಿ ಕಾಯ್ದೆಯಿಂದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಿಗೆ (ಎಪಿಎಂಸಿ) ಒದಗುವ ಆಪತ್ತುಗಳು, ಕೇಂದ್ರ ಸರ್ಕಾರದ ಹಟಮಾರಿತನ, ರಾಜಕೀಯ ಪಕ್ಷಗಳ ಇಬ್ಬಂದಿತನವನ್ನು ಅವರು ‘ಪ್ರಜಾವಾಣಿ’ಗೆ ಜತೆ ಹಂಚಿಕೊಂಡರು.

ಓದಿ: 

‘ಕೃಷಿ ಕಾಯ್ದೆಗಳಿಗೆ ಜನ್ಮ ನೀಡಿದ್ದು ಕಾಂಗ್ರೆಸ್‌. ಕಾಂಗ್ರೆಸ್‌ನ ಈ ಕೂಸನ್ನು ಬಿಜೆಪಿ, ಪೋಷಿಸಿ ಬೆಳೆಸಿದೆ. ಕಾಂಗ್ರೆಸ್‌ ಈಗ ತನ್ನ ಚಹರೆ ಬದಲಿಸಿಕೊಂಡು ನಮ್ಮ ಹೋರಾಟಕ್ಕೆ ಬೆಂಬಲ ನೀಡಿರಬಹುದು. ನಾವು ಮಾತ್ರ ಎಲ್ಲ ರಾಜಕೀಯ ಪಕ್ಷಗಳಿಂದ ಅಂತರ ಕಾಯ್ದು ಕೊಂಡಿದ್ದೇವೆ. ಶತ್ರುವಿನ ಶತ್ರು ನಮ್ಮ ಸ್ನೇಹಿತ ಅಲ್ಲ. ಯಾವ ಪಕ್ಷದ ಮೇಲೆಯೂ ನಮಗೆ ವಿಶ್ವಾಸ ಇಲ್ಲ. ಆದರೆ, ಅಧಿಕಾರದಲ್ಲಿರುವ ಬಿಜೆಪಿಗೆ ತಕ್ಕ ಪಾಠ ಕಲಿಸಬೇಕಾಗಿದೆ. ಬಿಜೆಪಿಗೆ ಮತ ಚಲಾಯಿಸದಂತೆ ಬಹಿರಂಗವಾಗಿಯೇ ಹೇಳಿದ್ದೇವೆ. ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಹೇಳಿದ್ದೇವೆ. ಮುಂಬರುವ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ಸಂದರ್ಭದಲ್ಲೂ ಹೇಳುತ್ತೇವೆ’ ಎಂದರು.

‘ಹೋರಾಟವನ್ನು ಇನ್ನೂ ಒಂದು ವರ್ಷ ಮುಂದುವರಿಸಲು ಈಗಾಗಲೇ ಕಾರ್ಯತಂತ್ರ ರೂಪಿಸಿದ್ದೇವೆ. ಯುದ್ಧದ ರೀತಿಯಲ್ಲಿ ಹೋರಾಟ ಮಾಡುತ್ತಿದ್ದೇವೆ. ಯುದ್ಧವನ್ನು ಏಕಾಏಕಿ ನಿಲ್ಲಿಸಲಾಗುವುದಿಲ್ಲ. ಸುಪ್ರೀಂ ಕೋರ್ಟ್‌ ಈ ಕಾಯ್ದೆಗಳಿಗೆ ತಡೆ ನೀಡಿ, ಹೋರಾಟ ನಿಲ್ಲಿಸಿ ಎಂದು ಸಲಹೆ ನೀಡಿರಬಹುದು. ಆದರೆ, ಕೃಷಿ ವಿಷಯ ರಾಜ್ಯಗಳ ಸಹವರ್ತಿ ಪಟ್ಟಿಯಲ್ಲಿರುವಾಗ ಈ ರೀತಿಯ ಕಾನೂನುಗಳನ್ನು ರೂಪಿಸಿದ್ದೇ ತಪ್ಪು ಎನ್ನುವುದು ನಮ್ಮ ನಿಲುವು. ರಾಜ್ಯಗಳ ಅಧಿಕಾರವನ್ನು ಕಿತ್ತುಕೊಳ್ಳುವ ಪ್ರಯತ್ನವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ’ ಎಂದು ಟೀಕಿಸಿದರು.

ಓದಿ: 

‘ನಮ್ಮ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನವನ್ನು ಬೇರೆ ಬೇರೆ ರೀತಿಯಲ್ಲಿ ಮಾಡಲಾಗಿದೆ. ಖಲಿಸ್ತಾನಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಆರೋಪಿಸಲಾಯಿತು. ಆದರೆ, ನಾವು ಖಲಿಸ್ತಾನಕ್ಕೆ ಮಾನ್ಯತೆಯನ್ನೂ ನೀಡಿಲ್ಲ, ಬೆಂಬಲವನ್ನೂ ಕೊಟ್ಟಿಲ್ಲ’ ಎಂದು ಸ್ಪಷ್ಟಪಡಿಸಿದರು.

‘ಕೃಷಿ ಕಾಯ್ದೆಗಳ ಜಾರಿಯಿಂದ ಎಪಿಎಂಸಿಗಳನ್ನು ಕಾರ್ಪೋರೇಟ್‌ ಕಂಪನಿಗಳು ನಿಯಂತ್ರಣಕ್ಕೆ ತೆಗೆದುಕೊಳ್ಳುತ್ತವೆ. ಆಗ ಕೃಷಿ ಉತ್ಪನ್ನಗಳ ದರಗಳನ್ನು ಕಂಪನಿಗಳೇ ನಿರ್ಧರಿಸುತ್ತವೆ. ಇದರಿಂದ, ಕೃಷಿಕರಿಗೂ ಮತ್ತು ಗ್ರಾಹಕರಿಗೂ ಹೊರೆಯಾಗುತ್ತದೆ. ನಗರ ಪ್ರದೇಶದ ಜನತೆಯಲ್ಲಿ ಈ ಬಗ್ಗೆ ಅರಿವು ಮೂಡಿಸುವ ಪ್ರಯತ್ನಗಳಾಗಬೇಕಾಗಿವೆ’ ಎಂದು ಅಭಿಪ್ರಾಯಪಟ್ಟರು.

‘ಅಹಂ ಇಲ್ಲ, ಮಾತುಕತೆಗೆ ಸದಾ ಸಿದ್ಧ’:

‘ನಮಗೆ ಅಹಂ ಇಲ್ಲ. ಕೇಂದ್ರ ಸರ್ಕಾರದ ಜತೆ ಮಾತುಕತೆಗೆ ಸದಾ ಸಿದ್ಧರಿದ್ದೇವೆ. ಕೃಷಿ ಕಾಯ್ದೆಗಳಿಂದಾಗುವ ದೀರ್ಘಾವಧಿಯಲ್ಲಿ ಉಂಟಾಗುವ ಮಾರಕ ಪರಿಣಾಮಗಳನ್ನು ನಾವೇ ಕೃಷಿ ಸಚಿವರಿಗೆ ಇದುವರೆಗೆ ನಡೆದ ಹಲವು ಸಭೆಗಳಲ್ಲಿ ವಿವರಿಸಿದ್ದೇವೆ. ಆದರೆ, ಕೇಂದ್ರ ಸರ್ಕಾರ ಕಾರ್ಪೋರೇಟ್‌ ಕಂಪನಿಗಳ ಮಾತು ಆಲಿಸುತ್ತಿದೆಯೇ ವಿನಾ ರೈತರದ್ದಲ್ಲ’ ಎಂದು ಹರನೇಕ್‌ ಸಿಂಗ್‌ ಕಿಡಿಕಾರಿದರು.

‘ಈ ಕೃಷಿ ಕಾಯ್ದೆಗಳಿಗೆ ಮತ್ತೆ ತಿದ್ದುಪಡಿ ಮಾಡುವ ತಂತ್ರಗಳು ನಮಗೆ ಬೇಕಾಗಿಲ್ಲ. ರದ್ದುಪಡಿಸುವ ಏಕೈಕ ಬೇಡಿಕೆ ನಮ್ಮದು’ ಎಂದು ಹೇಳಿದರು.

 ‘ಮೂರು ರಾಜ್ಯಗಳಿಗೆ ಸೀಮಿತವಲ್ಲ ಹೋರಾಟ’:

‘ನಮ್ಮ ಹೋರಾಟಕ್ಕೆ ದೇಶದಾದ್ಯಂತ ಬೆಂಬಲ ವ್ಯಕ್ತವಾಗಿದೆ. ಕೇವಲ ಮೂರು ರಾಜ್ಯಗಳಿಗೆ ಸೀಮಿತವಾಗಿದೆ ಎನ್ನುವುದು ಅಪಪ್ರಚಾರ. ಕರ್ನಾಟಕದಲ್ಲೂ ಎಲ್ಲ ರೈತ ಸಂಘಟನೆಗಳು ಅಪಾರ ಬೆಂಬಲ ವ್ಯಕ್ತಪಡಿಸಿವೆ. ರೈತರ ಹೋರಾಟದ ಬಗ್ಗೆ ತಪ್ಪು ತಿಳಿವಳಿಕೆ ಮೂಡಿಸುವ ಪ್ರಯತ್ನವನ್ನು ಮಾಡಲಾಗುತ್ತಿದೆ. ಮುಖ್ಯವಾಗಿ ಈ ಕಾಯ್ದೆಗಳು ಕೃಷಿಕರ ಮೇಲೆ ಮಾತ್ರ ಪರಿಣಾಮ ಬೀರುತ್ತವೆ ಎಂದು ಬಿಂಬಿಸಲಾಗಿದೆ. ವಾಸ್ತವದಲ್ಲಿ ಈ ಕಾಯ್ದೆಗಳು ಸಮಾಜದ ಎಲ್ಲ ವರ್ಗಗಳ ಮೇಲೆಯೂ ಪರಿಣಾಮ ಬೀರುತ್ತವೆ ಎನ್ನುವುದನ್ನು ಯಾರೂ ಅರ್ಥ ಮಾಡಿಕೊಳ್ಳುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ಪಂಜಾಬ್‌ನಲ್ಲಿ ಈ ಹೋರಾಟದ ತೀವ್ರತೆ ಹೆಚ್ಚಾಗಿರುವುದು ನಿಜ. ಪಂಜಾಬ್‌ ರೈತರು ಭೂಮಿ ಜತೆ ಅಪಾರ ಆತ್ಮೀಯ ಸಂಬಂಧ ಹೊಂದಿದ್ದಾರೆ. ಆದ್ದರಿಂದ, ಸಹಜವಾಗಿಯೇ ಅವರು ರೊಚ್ಚಿಗೆದ್ದಿದ್ದಾರೆ’ ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು