ಬುಧವಾರ, ಜನವರಿ 22, 2020
22 °C

ಫಟಾಫಟ್| ಸರ್ಕಾರಿ ಶಾಲೆಗೆ ಹಸಿರು ಕಿರೀಟ

ರವಿ ಬೆಂಚಳ್ಳಿ, ಮುಖ್ಯ ಶಿಕ್ಷಕ, ಗೊಜನೂರು ಸರ್ಕಾರಿ ಪ್ರೌಢಶಾಲೆ, ಲಕ್ಷ್ಮೇಶ್ವರ Updated:

ಅಕ್ಷರ ಗಾತ್ರ : | |

Prajavani

ಇಕೊ ಕ್ಲಬ್‌ ಪ್ರಶಸ್ತಿ ಯಾಕೆ ಲಭಿಸಿದೆ?

ಶಾಲೆಯಲ್ಲಿ 30 ಸದಸ್ಯರನ್ನೊಳಗೊಂಡ ‘ಜಗದೀಶಚಂದ್ರ ಬೋಸ್‌ ಇಕೊ ಕ್ಲಬ್‌’ ಸ್ಥಾಪಿಸಲಾಗಿದೆ. ಈ ಕ್ಲಬ್‌ ನೇತೃತ್ವದಲ್ಲಿ ಶಿಕ್ಷಕರು, ವಿದ್ಯಾರ್ಥಿಗಳು, ಗ್ರಾಮಸ್ಥರು ಸೇರಿ ಪರಿಸರ ಸಂರಕ್ಷಣೆ, ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತೇವೆ. ಶಾಲೆಯಲ್ಲಿ ಮಳೆ ನೀರು ಸಂಗ್ರಹ, ಎರೆಹುಳು ಗೊಬ್ಬರ, ಜೀವಸಾರ ಘಟಕ ಇವೆ. ಬತ್ತಿದ್ದ ಕೊಳವೆಬಾವಿಯು ಇಂಗುಗುಂಡಿಯಿಂದ ಪುನಶ್ಚೇತನಗೊಂಡಿದೆ. ಈ ಎಲ್ಲ ಪರಿಸರಸ್ನೇಹಿ ಕ್ರಮಗಳ ಪರಿಣಾಮಕಾರಿ ಅನುಷ್ಠಾನದಿಂದ, ಅರಣ್ಯ ಇಲಾಖೆಯಡಿ ಕಾರ್ಯನಿರ್ವಹಿಸುವ ಪರಿಸರ ನಿರ್ವಹಣಾ ನೀತಿ ಮತ್ತು ಸಂಶೋಧನಾ ಸಂಸ್ಥೆಯು (ಇಎಂಪಿಆರ್‌ಐ ) ಶಾಲೆಯ ಹೆಸರನ್ನು ರಾಷ್ಟ್ರಮಟ್ಟದ ಇಕೊ ಕ್ಲಬ್‌ ಪ್ರಶಸ್ತಿಗೆ ಶಿಫಾರಸು ಮಾಡಿದೆ. ರಾಜ್ಯದಿಂದ ಈ ಪ್ರಶಸ್ತಿಗೆ ಆಯ್ಕೆಯಾದ ಏಕೈಕ ಶಾಲೆ ನಮ್ಮದು ಎನ್ನುವುದು ಹೆಗ್ಗಳಿಕೆ.

ಬರದ ನೆಲದಲ್ಲಿ ಮಲೆನಾಡು ಮೈದಳೆದಿದೆ, ಹೇಗೆ ಸಾಧ್ಯವಾಯಿತು?

ನೀರಿನ ಸದ್ಬಳಕೆಯಿಂದ ಸಾಧ್ಯವಾಗಿದೆ. ಮಳೆ ನೀರು ಘಟಕದಿಂದ ನೀರಿನ ಬವಣೆ ನೀಗಿದೆ. ಗ್ರಾಮಸ್ಥರ ಸಹಕಾರದಿಂದ ಶಾಲಾ ಆವರಣದಲ್ಲಿ 3 ಎಕರೆ ವಿಶಾಲವಾದ ಹಸಿರು ಉದ್ಯಾನ ನಿರ್ಮಾಣಗೊಂಡಿದೆ. ಪತ್ರಿ, ಬೇವು, ಬನ್ನಿ, ಅತ್ತಿ, ಅರಳಿ ವೃಕ್ಷಗಳನ್ನು ಒಳಗೊಂಡ ಪಂಚವಟಿ ಇದೆ.

ಶಾಲೆ ಯಾಕೆ ‘ಪರಿಸರಸ್ನೇಹಿ’ ಆಗಬೇಕು?

ಪರಿಸರ ಸಂರಕ್ಷಣೆ ಕುರಿತು ಪಠ್ಯ ಬೋಧಿಸುವ ಬದಲು, ಮಕ್ಕಳೇ ಇದರಲ್ಲಿ ತೊಡಗುವಂತೆ ಮಾಡುವುದು ಪರಿಣಾಮಕಾರಿ.

ಸರ್ಕಾರಿ ಶಾಲೆಗಳ ಅಭಿವೃದ್ಧಿ ಹೇಗೆ ಸಾಧ್ಯ?

ಸಮುದಾಯದ ಸಹಭಾಗಿತ್ವದಿಂದ ಸಾಧ್ಯ. ನಮ್ಮ ಶಾಲೆಯ ಬಡ, ಅಂಗವಿಕಲ ಮತ್ತು ಪ್ರತಿಭಾ
ವಂತ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗಾಗಿ ಜನಪ್ರತಿನಿಧಿಗಳು, ಸಂಘ ಸಂಸ್ಥೆಗಳು, ಯುವಕ ಮಂಡಳಿಗಳ ಸಹಾಯದೊಂದಿಗೆ ಅಂದಾಜು ₹ 1.30 ಕೋಟಿ ದೇಣಿಗೆ ಸಂಗ್ರಹಿಸಿದ್ದೇವೆ. ಶಾಲೆಯ ವತಿಯಿಂದ ಗ್ರಾಮದ ಕೆರೆಯೊಂದನ್ನು ಅಭಿವೃದ್ಧಿಪಡಿಸಿದ್ದೇವೆ.

ನಿಮ್ಮ ಶಾಲೆಯಲ್ಲಿ ಎಸ್‌ಡಿಎಂಸಿ ಯಾಕಿಲ್ಲ?

ಕಳೆದೊಂದು ದಶಕದಿಂದಲೂ ನಮ್ಮ ಶಾಲೆಯಲ್ಲಿ ಎಸ್‌ಡಿಎಂಸಿ ಇಲ್ಲ. ಇಡೀ ಗ್ರಾಮಸ್ಥರು ಶಾಲೆಯ ಅಭಿವೃದ್ಧಿಯಲ್ಲಿ ಕೈಜೋಡಿಸಿದ್ದಾರೆ. ಗ್ರಾಮ ಪಂಚಾಯಿತಿ ಸಹಕಾರ ಇದೆ. ಹೀಗಾಗಿ ಪ್ರತ್ಯೇಕ ಎಸ್‌ಡಿಎಂಸಿ ಬೇಕಿಲ್ಲ ಎನ್ನುವುದು ಗ್ರಾಮಸ್ಥರ ಅಭಿಮತ. ಹಸಿರು ಉದ್ಯಾನದಿಂದ ಶಾಲೆಯು ಪ್ರವಾಸಿ ತಾಣವಾಗಿಯೂ ಬದಲಾಗಿದೆ. ಮನೆಗೆ ಬಂದ ನೆಂಟರನ್ನು ಗ್ರಾಮಸ್ಥರು, ಶಾಲೆ ತೋರಿಸಲು ಅಭಿಮಾನದಿಂದ ಕರೆತರುತ್ತಾರೆ.

-ಜೋಮನ್‌ ವರ್ಗೀಸ್‌

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು