ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಾಮಾಜಿಕ ಉದ್ಯಮದಲ್ಲಿದೆ ಜಗತ್ತಿನ ಭವಿಷ್ಯ’

Last Updated 30 ಜೂನ್ 2018, 19:34 IST
ಅಕ್ಷರ ಗಾತ್ರ

ಬಾಂಗ್ಲಾದೇಶದ ಸಾಮಾಜಿಕ ಉದ್ಯಮಿ, ನೊಬೆಲ್‌ ಶಾಂತಿ ಪ್ರಶಸ್ತಿ ಪುರಸ್ಕೃತ ಮಹಮ್ಮದ್‌ ಯೂನಸ್‌ ಅವರು, ಭಾರತದಲ್ಲೂ ಸಾಮಾಜಿಕ ಉದ್ಯಮದ ಕನಸನ್ನು ಬಿತ್ತುತ್ತಿದ್ದಾರೆ. ಬಡತನಮುಕ್ತ ಜಗತ್ತಿನ ಕಲ್ಪನೆಗೆ ಜೀವ ತುಂಬುತ್ತಾ ಬೆಂಗಳೂರಿಗೆ ಬಂದಿರುವ ಅವರೊಂದಿಗೆ ‘ಪ್ರಜಾವಾಣಿ’ ನಡೆಸಿದ ಮಾತುಕತೆ ಇಲ್ಲಿದೆ:

* ಭಾರತೀಯ ಉಪಖಂಡವೂ ಸೇರಿದಂತೆ ಜಗತ್ತಿನ ಬಹುತೇಕ ದೇಶಗಳನ್ನು ಕಾಡುತ್ತಿರುವ ಬಡತನದ ಸಮಸ್ಯೆಗೆ ಏನು ಕಾರಣ?

ಸಂಪತ್ತಿನ ಕ್ರೋಡೀಕರಣ, ಶಾಪವಾಗಿ ಪರಿಣಮಿಸಿದ ತಂತ್ರಜ್ಞಾನ ಹಾಗೂ ತಾಂಡವ ಆಡುತ್ತಿರುವ ನಿರುದ್ಯೋಗ – ಈ ಮೂರೇ ಅಂಶಗಳು ಎಲ್ಲ ಸಮಸ್ಯೆಗಳಿಗೂ ಮೂಲ. ಜಗತ್ತಿನ ಬಹುತೇಕ ಸಂಪತ್ತು ಕೆಲವೇ ದೇಶಗಳ, ಕೆಲವೇ ವ್ಯಕ್ತಿಗಳ ಕೈವಶವಾಗಿದೆ. ಇದರಿಂದ ಸಾಮಾನ್ಯರಲ್ಲಿ ಆಕ್ರೋಶ ಮಡುವುಗಟ್ಟಿದ್ದು, ಎಲ್ಲೆಡೆ ಸಾಮಾಜಿಕ ಹಾಗೂ ರಾಜಕೀಯ ಅಸ್ಥಿರತೆ ಹೆಚ್ಚಿದೆ. ಭಾರತದ ಉದಾಹರಣೆಯನ್ನೇ ತೆಗೆದುಕೊಂಡರೆ ಜನಸಂಖ್ಯೆಯ ಶೇ ಒಂದರಷ್ಟು ಜನರ ಬಳಿ ದೇಶದ ಒಟ್ಟು ಸಂಪತ್ತಿನ ಶೇ 73ರಷ್ಟು ಪ್ರಮಾಣ ಕೇಂದ್ರೀಕೃತಗೊಂಡಿದೆ. ಬೇರೆ ದೇಶಗಳ ಸ್ಥಿತಿ ಇದಕ್ಕಿಂತ ಭಿನ್ನವೇನೂ ಇಲ್ಲ. ಹೀಗಾಗಿ ಜಗತ್ತಿನ ಬಹುಪಾಲು ಜನ ಬಡತನವನ್ನೇ ಹಾಸು–ಹೊದ್ದು ಮಲಗುವಂತಾಗಿದೆ.

* ರಾಷ್ಟ್ರಗಳ ಪ್ರಗತಿಯು ತಂತ್ರಜ್ಞಾನದ ಮೇಲೆಯೇ ನಿಂತಿದೆ ಎಂದು ಎಲ್ಲರೂ ಹೇಳುವಾಗ ನೀವು ಅದನ್ನು ಶಾಪ ಎಂದು ಕರೆಯುತ್ತಿದ್ದೀರಲ್ಲ?

ಯಂತ್ರಗಳು ಹಾಗೂ ಕೃತಕ ಬುದ್ಧಿಮತ್ತೆ – ಎರಡೂ ತಂತ್ರಜ್ಞಾನದ ದೈತ್ಯ ಕೊಡುಗೆಗಳು. ಇದರಿಂದ ಪ್ರಪಂಚದ ಅರ್ಧದಷ್ಟು ಉದ್ಯೋಗಿಗಳು ಬಹುಬೇಗ ಉದ್ಯೋಗ ಕಳೆದುಕೊಳ್ಳಲಿದ್ದಾರೆ. ಕೃತಕ ಬುದ್ಧಿಮತ್ತೆಗೆ ಸ್ವಾವಲಂಬಿಗಳನ್ನೆಲ್ಲ ಭಿಕ್ಷುಕರನ್ನಾಗಿ ಪರಿವರ್ತಿಸುವ ತಾಕತ್ತಿದೆ. ತಂತ್ರಜ್ಞಾನದಿಂದ ಕೆಲಸ ಕಳೆದುಕೊಳ್ಳುವವರಿಗೆ ಕನಿಷ್ಠ ಆದಾಯ ಸಿಗುವಂತಹ ವ್ಯವಸ್ಥೆ ಆಗಬೇಕು ಎನ್ನುವ ಆಶಯ ವ್ಯಕ್ತಪಡಿಸುತ್ತಾರೆ ಈ ದೈತ್ಯಶಕ್ತಿಯ ಸೃಷ್ಟಿಕರ್ತರು. ಅಂದಮೇಲೆ ಕೆಲಸ ಕಳೆದುಕೊಂಡವರೆಲ್ಲ ಇನ್ನುಮುಂದೆ ಭಿಕ್ಷುಕರಾಗಿ ನಿಂತುಕೊಳ್ಳಬೇಕಲ್ಲವೇ?

ಭೂಮಿಯ ಮೇಲಿನ ಅತೀ ಹೆಚ್ಚಿನ ಬುದ್ಧಿವಂತಿಕೆಗೆ ಮಾದರಿ ಎನಿಸಿದ ಮಾನವನನ್ನು ಇದೀಗ ಕೃತಕ ಬುದ್ಧಿಮತ್ತೆ ಹಿಂದೆ ಹಾಕುತ್ತಿದೆ. ಮಾನವನಿಗೆ ಜೈವಿಕ ಮಿತಿಗಳಿವೆ. ತಂತ್ರಜ್ಞಾನಕ್ಕೆ ಅಂತಹ ಮಿತಿ ಎಲ್ಲಿದೆ? ಹೀಗಾಗಿ ಅದೇ ಈಗ ನಂಬರ್‌ ಒನ್‌ ಆಗುತ್ತಿದೆ. ಕೃತಕ ಬುದ್ಧಿಮತ್ತೆಯ ದೃಷ್ಟಿಯಲ್ಲಿ ಮಾನವ ಒಂದು ಜಿರಲೆಯಂತೆ ಕಾಣಬಹುದು. ಯಂತ್ರಗಳು ದಿನದಿಂದ ದಿನಕ್ಕೆ ಜಾಣವಾಗುತ್ತಿರುವ ಪರಿಯನ್ನು ನೋಡಿದಾಗ, ಮುಂದೊಂದು ದಿನ, ಏನೂ ಕೆಲಸ ಮಾಡದಿದ್ದ ಮೇಲೆ ಈ ಮನುಕುಲ ಅಸ್ತಿತ್ವದಲ್ಲಿ ಏಕಿರಬೇಕು ಎನ್ನುವ ಪ್ರಶ್ನೆ ಕೃತಕ ಬುದ್ಧಿಮತ್ತೆಯಲ್ಲಿ ಮೂಡಬಹುದು. ನಾವು ಹಿಡಿದಿರುವುದು ವಿನಾಶದ ಹಾದಿಯನ್ನು. ಆದ್ದರಿಂದಲೇ ವರವಾಗಬೇಕಿದ್ದ ತಂತ್ರಜ್ಞಾನ ಶಾಪವಾಗಿದೆ ಎಂದು ನಾನು ಹೇಳುತ್ತಿರುವುದು.

ಸುದೈವವಶಾತ್‌ ಇದು ಮಾನವನಿರ್ಮಿತ ಸಮಸ್ಯೆ. ಇದಕ್ಕೆ ನಮ್ಮಿಂದ ಪರಿಹಾರ ಕಂಡುಕೊಳ್ಳುವುದು ಕೂಡ ಸಾಧ್ಯವಿದೆ. ಆ ನಿಟ್ಟಿನಲ್ಲಿ ಮನುಕುಲದ ದೃಷ್ಟಿ ತಿರುಗಬೇಕಿದೆ.

* ನಿರುದ್ಯೋಗ ಈಗ ಜಾಗತಿಕ ಸಮಸ್ಯೆ. ಕೆಲಸವಿಲ್ಲದೆ ವಲಸೆ ಹೋಗುತ್ತಿರುವ ಪ್ರವೃತ್ತಿ ಎಲ್ಲೆಡೆ ಕಂಡು ಬರುತ್ತಿರುವ ವಿದ್ಯಮಾನ. ಈ ಪಿಡುಗಿಗೆ ಏನು ಪರಿಹಾರ?

ನಮ್ಮ ಶಿಕ್ಷಣ ವ್ಯವಸ್ಥೆ ಹೇಗಿದೆಯೆಂದರೆ ಅದು ಉದ್ಯೋಗ ಕೇಂದ್ರಿತವಾಗಿದೆ. ನಿಯಮ, ನಿರ್ಬಂಧ, ಇತಿ–ಮಿತಿಗಳ ಅಂಕೆಯೊಳಗೆ ಸಿಕ್ಕು ನಾವೆಲ್ಲ ಸೃಜನಶೀಲತೆಯನ್ನೇ ಕಳೆದುಕೊಳ್ಳಬೇಕಾಗಿದೆ. ಕೆಲವೇ ಕೆಲವರು ದುಡ್ಡು ಮಾಡಲು ಎಲ್ಲರೂ ದುಡಿಯುತ್ತಾರೆ! ಡಾಲರ್‌ ಎಂಬ ಸಿಂಗಲ್‌ ಲೆನ್ಸ್‌ (ಏಕಮಸೂರ) ಮೂಲಕವೇ ಎಲ್ಲವನ್ನೂ ನೋಡುವ ಪರಿಪಾಟ ಬೆಳೆದಿದೆ. ಆದರೆ, ನಮಗೆ ಬೇಕಿರುವುದು ಬೈಫೋಕಲ್‌ (ದ್ವಿಮಸೂರ). ಏಕೆಂದರೆ, ಉದ್ಯೋಗ ಹಿಡಿಯುವಂತಹ ಗುರಿಯಾಚೆಗೂ ನೋಡುವಂತಹ ಮಸೂರ ಇದು. ಸದ್ಯ ನಾವು ರೂಪಿಸಿಕೊಂಡ ವ್ಯವಸ್ಥೆಯ ಮೂಲ ವಿನ್ಯಾಸದಲ್ಲೇ ದೋಷವಿದ್ದು, ನಾವೀಗ ಹಿಮ್ಮುಖವಾಗಿ ಚಲಿಸಬೇಕಿದೆ. ನೈಸರ್ಗಿಕವಾಗಿ ಮಾನವರು ಉದ್ಯಮಶೀಲ ಸ್ವಭಾವದವರು. ಚರಿತ್ರೆಯೂ ಅದನ್ನೇ ಹೇಳುತ್ತದೆ. ಅದಕ್ಕೆ ತಕ್ಕಂತಹ ಶಿಕ್ಷಣ ವ್ಯವಸ್ಥೆ ನಮಗೀಗ ಬೇಕಿದೆ.

ಸದ್ಯ ನಾವು ಕಾಣುತ್ತಿರುವ ಬ್ಯಾಂಕಿಂಗ್‌ ವ್ಯವಸ್ಥೆ ಕೂಡ ಶ್ರೀಮಂತರಿಗಾಗಿಯೇ ಇದೆ. ಅದರ ಮೂಲ ಸ್ವರೂಪದಲ್ಲೇ ಬದಲಾವಣೆ ತಂದು, ಬ್ಯಾಂಕ್‌ ಇರುವುದು ಬಡವರಿಗಾಗಿ ಎಂಬುದನ್ನು ದೃಢಗೊಳಿಸಬೇಕು. ಇದನ್ನು ಇನ್ನಷ್ಟು ವಿಸ್ತರಿಸಿ ಹೇಳುವುದಾದರೆ ಸಾಮಾಜಿಕ ಸಮಸ್ಯೆಗಳಿಗೆ ಪರಿಹಾರ ಒದಗಿಸುವಂತಹ ಉದ್ಯಮ ವ್ಯವಸ್ಥೆ ನಮಗೀಗ ಬೇಕು. ಅಂತಹ ಉದ್ಯಮಗಳನ್ನು ಉತ್ತೇಜಿಸುವಂತಹ ಬ್ಯಾಂಕ್‌ಗಳೂ ಬೇಕು. ಬಾಂಗ್ಲಾದೇಶದಲ್ಲಿ ನಿರಕ್ಷರಿಗಳಾದ ಮಹಿಳೆಯರಿಗೆ ₹ 2,000, ₹ 5,000ದಷ್ಟು ಕಿರುಸಾಲ ನೀಡಿದಾಗ ಅವರ ಬದುಕೇ ಬದಲಾಗಿದ್ದನ್ನು ಕಂಡಿದ್ದೇನೆ. ಇಂತಹ ಸಾಲ ಸೌಲಭ್ಯ ಎಲ್ಲೆಡೆ ಸಿಗುವಂತಾದರೆ ಯುವಕರು ಉದ್ಯಮದಲ್ಲಿ ಸಾಹಸೀ ಪ್ರವೃತ್ತಿ ಮೆರೆಯಬಹುದಲ್ಲವೇ? ಕಿರುಸಾಲ ಸೌಲಭ್ಯಕ್ಕಾಗಿ ಭಾರತದಲ್ಲಿ ಈಗ ಹತ್ತು ಬ್ಯಾಂಕ್‌ಗಳ ಸ್ಥಾಪನೆಗೆ ಲೈಸೆನ್ಸ್‌ ನೀಡಲಾಗಿದೆ. ಆದರೆ, ದೊಡ್ಡ ದೇಶಕ್ಕೆ ಈ ಸಂಖ್ಯೆ ಏನೇನೂ ಸಾಲದು.

* ಎಂತಹ ಶಿಕ್ಷಣ ವ್ಯವಸ್ಥೆ ಬರಬೇಕೆಂದು ನೀವು ಬಯಸುತ್ತೀರಿ?

ಸಾಮಾಜಿಕ ಉದ್ಯಮದಲ್ಲಿ ಎದುರಾಗುವ ಸಮಸ್ಯೆಗಳನ್ನೆಲ್ಲ ಪರಿಹರಿಸಲು ಕಲಿಸುವ, ಸಾಂಪ್ರದಾಯಿಕ ಹಾಗೂ ಸಾಮಾಜಿಕ ಉದ್ಯಮದಲ್ಲಿ ಸಮನ್ವಯ ಸಾಧಿಸುವಂತಹ ಕೌಶಲ ಹೇಳಿಕೊಡುವ ಸಾಮಾಜಿಕ ಎಂಬಿಎ (social M.B.A.) ವಿಭಾಗಗಳನ್ನು ವಿಶ್ವವಿದ್ಯಾಲಯಗಳು ಆರಂಭಿಸಬೇಕು.

* ಜಗತ್ತಿನಲ್ಲಿ ಬದಲಾವಣೆ ತರಲು ಹೊರಟ ಯುವ ಪೀಳಿಗೆಗೆ ನಿಮ್ಮ ಸಲಹೆ ಏನು?

ಯುವಕರೇ, ನಿಮ್ಮಲ್ಲಿ ಸೃಜನಶೀಲ ಶಕ್ತಿ ಇದೆ. ಏಕಾಂಗಿಯಾಗಿ ಒಬ್ಬೊಬ್ಬರೂ ಜಗತ್ತಿನಲ್ಲಿ ಸಾಕಷ್ಟು ಬದಲಾವಣೆ ತರಬಲ್ಲ ಶಕ್ತಿಯದು. ಈ ವಿಷಯದ ಮೇಲೆ ನೀವೆಲ್ಲ ನಂಬಿಕೆ ಇಡಬೇಕು. ನಿಮ್ಮಲ್ಲಿ ಈ ನಂಬಿಕೆ ಬೇರೂರಿದರೆ ಕನಸು ನನಸಾಗಿಸುವತ್ತ ದೃಢವಾದ ಹೆಜ್ಜೆ ಇಡುತ್ತೀರಿ. ಯಾವುದೇ ಕೆಲಸವನ್ನು ಪುಟ್ಟ ಹೆಜ್ಜೆಯಿಂದಲೇ ಆರಂಭಿಸಿ. ರಾತ್ರಿ ಬೆಳಗಾಗುವುದರಲ್ಲಿ ಎಲ್ಲವನ್ನೂ ಬದಲಾಯಿಸುವುದು ಅಸಾಧ್ಯ. ಆದರೆ, ಹೆಜ್ಜೆಯನ್ನಂತೂ ಇಡಬೇಕು. ಜಾಗತಿಕ ಸಮಸ್ಯೆಗಳಿಗೆ ಪರಿಹಾರ ಹುಡುಕಬೇಕಾದರೆ ಮೊದಲು ವೈಯಕ್ತಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT