ಪರಮಹಂಸ ಯೋಗಾನಂದ (1893–1952) ಅವರು ಆಧುನಿಕ ಭಾರತದ ಪ್ರಮುಖ ಆಧ್ಯಾತ್ಮಿಕ ಗುರುಗಳಲ್ಲಿ ಒಬ್ಬರು. ಅವರ ಕೃತಿ ‘ಅಟೋಬಯಾಗ್ರಫಿ ಆಫ್ ಎ ಯೋಗಿ’ (‘ಯೋಗಿಯ ಆತ್ಮಕಥೆ’) ಇಂದು ಜಗತ್ತಿನಾದ್ಯಂತ ತುಂಬ ಜನಪ್ರಿಯವಾಗಿದೆ; ಅಧ್ಯಾತ್ಮಸಾಧಕರ ಕೈಪಿಡಿಯಂತೆ ಮನ್ನಣೆಯನ್ನು ಪಡೆದಿದೆ. ಯೋಗಾನಂದರು ಸ್ಥಾಪಿಸಿದ ’ಯೋಗದಾ ಸತ್ಸಂಗ ಸೊಸೈಟಿ’ ಜಗತ್ತಿನಾದ್ಯಂತ ಕೇಂದ್ರಗಳನ್ನು ಹೊಂದಿದ್ದು, ಶ್ರದ್ಧಾಳುಗಳಿಗೆ ಆಧ್ಯಾತ್ಮಿಕತೆಯ ಅರಿವನ್ನು ಮೂಡಿಸುತ್ತಾ ಬಂದಿದೆ. ‘ಯೋಗದಾ’ ಸಂಸ್ಥೆಯ ಸ್ವಾಮಿ ಈಶ್ವರಾನಂದ ಗಿರಿ ಅವರು ಇತ್ತೀಚೆಗಷ್ಟೆ ಬೆಂಗಳೂರಿಗೆ ಬಂದಿದ್ದರು. ‘ಪ್ರಜಾವಾಣಿ’ಯೊಂದಿಗೆ ಮಾತುಕತೆಯನ್ನು ನಡೆಸಿದ ಅವರು, ಪರಮಹಂಸ ಯೋಗಾನಂದ ಪ್ರಚುರ ಪಡಿಸಿರುವ ‘ಕ್ರಿಯಾಯೋಗ’ ಮತ್ತು ಧ್ಯಾನದ ಮಹತ್ವದ ಬಗ್ಗೆ ವಿವರವಾಗಿ ಮಾತನಾಡಿದ್ದಾರೆ. ವೈದ್ಯಕೀಯ ಸ್ನಾತಕೋತ್ತರ ಪದವಿಯನ್ನು ಪಡೆದಿರುವ ಸ್ವಾಮಿ ಈಶ್ವರಾನಂದ ಗಿರಿ ಸುಮಾರು ಮೂವತ್ತು ವರ್ಷಗಳಿಂದ ‘ಯೋಗದಾ’ದಲ್ಲಿದ್ದಾರೆ. ಸದ್ಯ ಅವರು ರಾಂಚಿ ಆಶ್ರಮದಲ್ಲಿರುತ್ತಾರೆ.
ನಿಮಗೆ ಅಧ್ಯಾತ್ಮದಲ್ಲಿ ಆಸಕ್ತಿ ಹೇಗೆ ಉಂಟಾಯಿತು?
ಇದೊಂದು ಅನಿರೀಕ್ಷಿತ ಘಟನೆ. ನಾನಾಗ ಹತ್ತನೇ ತರಗತಿಯಲ್ಲಿ ಓದುತ್ತಿದ್ದೆ. ಶಾಲೆಯ ರಜಾ ದಿನಗಳಲ್ಲಿ ನನ್ನ ಬಂಧುಗಳ ಮನೆಗೆ ಹೋಗಿದ್ದೆ. ಅವರ ಮನೆಯಲ್ಲಿ ಪುಸ್ತಕಗಳ ಸಂಗ್ರಹ ಇತ್ತು. ಅವುಗಳಲ್ಲಿ ಒಂದು ನಮ್ಮ ಗುರುಗಳು ಪರಮಹಂಸ ಯೋಗಾನಂದರ ವಿಶ್ವ ಪ್ರಸಿದ್ಧ ಪುಸ್ತಕ ’ಅಟೋಬಯಾಗ್ರಫಿ ಆಫ್ ಎ ಯೋಗಿ.’ ಇದನ್ನು ಓದಿದೆ. ಇದಕ್ಕೂ ಮೊದಲು ರಾಮಕೃಷ್ಣ ಪರಮಹಂಸರು ಮುಂತಾದ ಕೆಲವರು ಸಂತರ ಬಗ್ಗೆ ಚೂರುಪಾರು ಓದಿದ್ದೆ, ಅಷ್ಟೆ. ಆದರೆ ಈ ಪುಸ್ತಕವನ್ನು ಓದಿದಮೇಲೆ ನನಗೆ ನಿಜವಾದ ಭಾರತದ ಪರಿಚಯವೇ ಇಲ್ಲ ಎಂಬುದು ಮನದಟ್ಟಾಯಿತು. ಈ ಪುಸ್ತಕದ ಮೂಲಕ ಭಾರತೀಯ ಸಂತಪರಂಪರೆಯ ಪರಿಚಯವೂ ಆಯಿತು. ಇದು ನನ್ನಲ್ಲಿ ಅಧ್ಯಾತ್ಮದ ಬಗ್ಗೆ ಆಸಕ್ತಿಯನ್ನು ಹುಟ್ಟಿಸಿತು. ‘ಹೀಗೂ ಉಂಟೆ’ ಎಂಬಂಥ ಅನುಭವವನ್ನು ಇದು ನನ್ನಲ್ಲಿ ಉಂಟುಮಾಡಿತು. ಆ ಬಳಿಕ ಹಲವಾರು ಸಂತರ, ಅಧ್ಯಾತ್ಮಪುರುಷರ ಜೀವನವನ್ನು ಓದಲು ತೊಡಗಿದೆ. ರಾಮಕೃಷ್ಣ ಪರಮಹಂಸರು, ಸ್ವಾಮಿ ವಿವೇಕಾನಂದ, ಹೀಗೆ ಹಲವರನ್ನು ಓದಿದೆ. ರಾಮಕೃಷ್ಣರಿಗೆ ಕಾಳಿಮಾತೆಯು ಪ್ರತ್ಯಕ್ಷವಾಗಬಹುದಾದರೆ ನನಗೂ ಆಗಬಹುದಲ್ಲವೆ – ಎಂದೆನಿಸಿತು. ನಮಗೆಲ್ಲ ಗೊತ್ತಿದೆ, ಭಾರತೀಯ ಪರಂಪರೆಯಲ್ಲಿ ಅಧ್ಯಾತ್ಮದ ಸಾಧನೆಗೆ ಗುರು ಬೇಕೇ ಬೇಕು. ನಾನೂ ಗುರುವಿನ ಹುಡುಕಾಟದಲ್ಲಿ ತೊಡಗಿದೆ. ನನ್ನ ಪರಮಾಪ್ತ ಮಿತ್ರನೊಬ್ಬ ಒಮ್ಮೆ ನಮ್ಮ ಸಂಸ್ಥೆ ‘ಯೋಗದಾ ಸತ್ಸಂಗ ಸೊಸೈಟಿ’ಯ ಅಪ್ಲಿಕೇಷನ್ ಒಂದನ್ನು ನನ್ನಲ್ಲಿಗೆ ತಂದ. ಅದು ಅಧ್ಯಾತ್ಮದ ತರಗತಿಗಳ ಅಪ್ಲಿಕೇಷನ್. ಗುರುಗಳ ಫೋಟೊವನ್ನು ನೋಡಿದ ಕೂಡಲೇ ‘ಇವರು ನನಗೆ ಗೊತ್ತಲ್ಲವೆ‘ ಎಂದು ಗೊತ್ತಾಯಿತು. ಅವರ ‘ಆಟೋಬಯಾಗ್ರಫಿ’ಯನ್ನು ಆಗಲೇ ಓದಿದ್ದೆ. ಇವರು ಪರಮಹಂಸ ಯೋಗಾನಂದ ಅವರಲ್ಲವೆ – ಎಂಬುದು ತಿಳಿಯಿತು. ಆ ಕ್ಷಣ ನನಗೆ ಸ್ಪಷ್ಟವಾದದ್ದು ಏನೆಂದರೆ: ಇದು ನನ್ನ ಆತ್ಮದ ಕರೆಗೆ ಸಿಕ್ಕ ಉತ್ತರ. ಇವರೇ ನನ್ನ ಗುರುಗಳು ಎಂದು ಅಂತರ್ಬೋಧೆಯಾಯಿತು. ಮುಂದಿನದು ಈಗ ಇತಿಹಾಸ. ಇದೊಂದು ರೀತಿಯಲ್ಲಿ ಪವಾಡದಂತೆ ನಡೆಯಿತೆನ್ನಿ!
ಅಧ್ಯಾತ್ಮಕ್ಕೂ ಪವಾಡಗಳಿಗೂ ಏನಾದರೂ ಸಂಬಂಧ ಇದೆಯೆ?
ನೇರವಾಗಿ ಇಲ್ಲ ಎಂದೇ ಹೇಳಬೇಕು. 'ಆಟೋಬಯೋಗ್ರಾಫಿ’ಯ ಆರಂಭದಲ್ಲಿಯೇ ನಮ್ಮ ಗುರುಗಳು ಬೈಬಲ್‌ನ ಒಂದು ವಾಕ್ಯವನ್ನು ಉದಾಹರಿಸುತ್ತಾರೆ: ’ಪವಾಡಗಳನ್ನು ನೋಡುವ ತನಕ ನೀನು ಪವಾಡಗಳನ್ನು ನಂಬುವುದಿಲ್ಲ.’ ದೇವರು ತನ್ನತ್ತ ನಮ್ಮನ್ನು ಸೆಳೆಯಲು ಕೆಲವೊಮ್ಮೆ ಸಾಮಾನ್ಯ ವಿದ್ಯಮಾನಗಳಿಗಿಂತಲೂ ಭಿನ್ನವಾದ ರೀತಿಯಲ್ಲಿ ತನ್ನನ್ನು ತಾನು ಪ್ರಕಟಗೊಳಿಸಿಕೊಳ್ಳುತ್ತಾನೆ.
ಈಗಿನ ಧಾವಂತದ ಜೀವನಕ್ಕೆ ಧ್ಯಾನದಿಂದ ನಿಜವಾಗಿಯೂ ಪ್ರಯೋಜನವಿದೆಯೆ? ಅಥವಾ ಧ್ಯಾನವು ಇಂದಿನ ಜೀವನವಿಧಾನದ ಮೇಲೆ ಪ್ರಭಾವವನ್ನು ಬೀರಬಲ್ಲದೆ?
ಈಗಿನ ಜನರೇಷನ್ ಮಾತ್ರವಲ್ಲ, ನಮ್ಮ ಇಂದಿನ ಹಿಂದಿನ ಜನರೇಷನ್ ಕೂಡ, ಎಂದರೆ ಎರಡು ಜನರೇಷನ್‌ಗಳಿಂದ ಜನರು ಧಾವಂತದ ಜೀವನವಿಧಾನದಲ್ಲಿ ಸಿಕ್ಕಿಬಿದ್ದಿದ್ದಾರೆ. ಎಲ್ಲವೂ ಈ ಕೂಡಲೇ ಸಿಗಬೇಕು, ಈ ಕ್ಷಣವೇ ಎಲ್ಲ ಬಯಕೆಗಳೂ ನೆರವೇರಿಬಿಡಬೇಕು ಎಂಬುದು ಈ ಜನರೇಷನ್‌ನ ಮನೋಧರ್ಮ. ಆದರೆ ಆಧ್ಯಾತ್ಮಿಕ ಸಾಧನೆ, ಅಂತರಂಗದ ಪರಿವರ್ತನೆ ಹೀಗೆ ಗಡಿಬಿಡಿಯಲ್ಲಿ ನಡೆಯುವಂಥವಲ್ಲ; ಅದಕ್ಕೆ ತನ್ನದೇ ಆದ ವೇಗವಿದೆ. ಹೂವೊಂದನ್ನು ನೀವು ಬಲವಂತದಿಂದ ಅರಳಿಸಲು ಸಾಧ್ಯವಿಲ್ಲವಷ್ಟೆ. ಅಧ್ಯಾತ್ಮಸಾಧನೆಯೂ ಹೀಗೆಯೇ. ಸೂರ್ಯನ ಬೆಳಕು, ಫಲವತ್ತಾದ ಮಣ್ಣು, ಸಮಯಕ್ಕೆ ಸರಿಯಾಗಿ ನೀರು, ಗೊಬ್ಬರ, ಪ್ರಾಣಿಗಳಿಂದ ರಕ್ಷಣೆ – ಹೀಗೆ ಎಲ್ಲವೂ ಸಿಕ್ಕಾಗ ಹೂವು ಸಹಜವಾಗಿ ನಿರ್ದಿಷ್ಟ ಸಮಯದಲ್ಲಿ ಅರಳುತ್ತದೆ. ಆಧ್ಯಾತ್ಮಿಕತೆಯೂ ಹೀಗೆ ನಿಮಗೆ ಸರಿಯಾದ ವಾತಾವರಣವನ್ನು, ಸರಿಯಾದ ಸಲಕರಣೆಗಳನ್ನು ನೀಡುತ್ತದೆ. ನಮ್ಮ ಗುರುಗಳು ತಿಳಿಸಿರುವ ಕ್ರಿಯಾಯೋಗದ ದಾರಿ ಇಂಥದ್ದು. ನಮ್ಮಲ್ಲಿ ಜ್ಞಾನ, ಭಕ್ತಿ, ಕರ್ಮ ಮತ್ತು ರಾಜಯೋಗ ಎಂಬ ಅಧ್ಯಾತ್ಮಮಾರ್ಗಗಳಿವೆ. ಕ್ರಿಯಾಯೋಗವು ಪತಂಜಲಿಯ ಯೋಗಮಾರ್ಗದಲ್ಲಿ ರಾಜಯೋಗದ ವ್ಯಾಪ್ತಿಗೆ ಸೇರಿರುವಂಥದ್ದು. ಯೋಗದ ಬೇರೆ ಮಾರ್ಗಗಳು ಪರೋಕ್ಷವಾಗಿ ನಮ್ಮ ಮನಸ್ಸಿನ ಮೇಲೆ ಪ್ರಭಾವವನ್ನು ಬೀರಿ, ಮನಸ್ಸಿನ ನಿಗ್ರಹಕ್ಕೆ ಸಹಕರಿಸಿದರೆ, ಕ್ರಿಯಾಯೋಗ ಮಾತ್ರ ನೇರವಾಗಿಯೇ ಪ್ರಭಾವವನ್ನು ಬೀರುತ್ತದೆ. ಪ್ರಾಣವನ್ನು ಪ್ರತ್ಯಕ್ಷವಾಗಿ ಪ್ರಭಾವಿಸುವುದರಿಂದ ಮನಸ್ಸಿನ ಏಕಾಗ್ರತೆ ಸಿದ್ಧಿಸುತ್ತದೆ. ಕ್ರಿಯಾಯೋಗವನ್ನು ಸ್ವಲ್ಪ ಹೊತ್ತು, ಆದರೆ ಸರಿಯಾದ ಕ್ರಮದಲ್ಲಿ ಮಾಡಿದರೆ, ಅದರಿಂದ ಹೆಚ್ಚಿನ ಫಲ ಸಿಗುತ್ತದೆ. ಹೀಗಾಗಿಯೇ ಗುರುಗಳು ಇದನ್ನು ‘ಏರೋಪ್ಲೇನ್ ಮಾರ್ಗ’ ಎಂದು ಕರೆದದ್ದು. ಹೀಗಾಗಿ ಇಂದಿನ ಜನರೇಷನ್ನಿನವರಿಗೆ ಕ್ರಿಯಾಯೋಗ ಅತ್ಯಂತ ಸೂಕ್ತ ಮತ್ತು ಪ್ರಯೋಜನಕಾರಿ. ಆದರೆ ತಾಳ್ಮೆ ಎಂಬುದು ತುಂಬಾ ಮುಖ್ಯವಾಗುತ್ತದೆ; ಜೊತೆಗೆ ಕ್ರಮಬದ್ಧತೆಯೂ ಮುಖ್ಯ. ಸ್ವಲ್ಪ ಹೊತ್ತಾದರೂ ಸರಿಯಾದ ಕ್ರಮದಲ್ಲಿ, ಕಾಲಬದ್ಧವಾಗಿ ಮಾಡಿದ ಕ್ರಿಯಾಯೋಗ ನಿಮ್ಮಲ್ಲಿ ಮಹತ್ತರವಾದ ಬದಲಾವಣೆಗಳನ್ನು ಉಂಟುಮಾಡುವುದು ಖಂಡಿತ. ಕೆಲವೇ ವಾರ–ತಿಂಗಳುಗಳಲ್ಲಿಯೇ ನೀವು ಈ ಬದಲಾವಣೆಯನ್ನು ಗಮನಿಸಬಹುದು.
ಕ್ರಿಯಾಯೋಗದ ಕಲಿಕೆಗೆ ನಿಮ್ಮಲ್ಲಿ ಏನಾದರೂ ನಿರ್ದಿಷ್ಟ ಪಠ್ಯಕ್ರಮ ಅಥವಾ ಕೋರ್ಸ್‌ಗಳು ಇವೆಯೆ?
ಸುಮಾರು ನೂರು ವರ್ಷಗಳ ಹಿಂದೆಯೇ ನಮ್ಮ ಗುರುಗಳು ಇಂದಿನ ಸಮಾಜವನ್ನು ಕಂಡಿದ್ದರು ಎನಿಸುತ್ತದೆ. ಮುಂದಿನ ದಿನಗಳಲ್ಲಿ ಆಶ್ರಮಕ್ಕೆ ಬರುವುದಕ್ಕಾಗಲೀ, ದೈವಸಾಕ್ಷಾತ್ಕಾರವನ್ನು ಪಡೆದಿರುವ ಗುರುವಿನ ಹತ್ತಿರ ಕುಳಿತು ವಿದ್ಯೆಯನ್ನು ಪಡೆಯುವುದಕ್ಕಾಗಲೀ ಜನರಲ್ಲಿ ಸಮಯ ಇರದು ಎಂದು ಅವರು ಅಂದೇ ಕಂಡಿದ್ದರು. ಗುರುವಿನ ಹತ್ತಿರ ಶಿಷ್ಯರು ಬರದಿದ್ದಾಗ, ಗುರುವೇ ಶಿಷ್ಯರ ಹತ್ತಿರಕ್ಕೆ ಹೋಗಬೇಕೆಂಬುದು ಅವರ ನಿಲುವಾಗಿತ್ತು. 1930ರಲ್ಲಿಯೇ ಅವರು ‘ಕರೆಸ್ಪಾಂಡೆನ್ಸ್ ಕೋರ್ಸ್’ – ದೂರ ಶಿಕ್ಷಣವನ್ನು – ವ್ಯವಸ್ಥೆ ಮಾಡಿದರು; ಹೀಗೆ ಶಿಕ್ಷಣಕ್ರಮವನ್ನು ರೂಪಿಸಿದ ಮೊದಲಿಗರು ಅವರು. ತಾವು ಕೊಡುವ ಉಪನ್ಯಾಸಗಳ ಟಿಪ್ಪಣಿಗಳನ್ನು ಬರೆದುಕೊಳ್ಳುವಂತೆ ಅವರು ತಮ್ಮ ಹತ್ತಿರದ ಶಿಷ್ಯರಿಗೆ ಹೇಳಿದರು. ಇವುಗಳನ್ನು ಬಳಸಿಕೊಂಡು ಪಾಠಗಳ ಸರಣಿಯನ್ನು ಸಿದ್ಧಪಡಿಸುವಂತೆಯೂ ಸೂಚಿಸಿದರು. ಅನಂತರದಲ್ಲಿ ಅವನ್ನು ತಾವೇ ಪರಿಶೀಲಿಸಿ, ಅಗತ್ಯ ತಿದ್ದುಪಡಿಗಳನ್ನು ಮಾಡಿದರು. ಇದನ್ನು ಅವರು ’ದಿ ಲೆಸೆನ್ಸ್ ಇನ್ ಸೆಲ್ಫ್‌ರಿಯಲೈಜೇಷನ್’ – ‘ಆತ್ಮಸಾಕ್ಷಾತ್ಕಾರದ ಪಾಠಗಳು’ – ಎಂದು ಕರೆದರು. ಇವನ್ನು ಅವರು ಯಾವುದೇ ಅಸಕ್ತ ವ್ಯಕ್ತಿಗೂ ತಲಪುವಂತೆ ವ್ಯವಸ್ಥೆ ಮಾಡಿದರು. ಅವರು ಹಾಕಿದ ಒಂದೇ ಒಂದು ನಿರ್ಬಂಧ ಎಂದರೆ, ‘ಇದು ಗೋಪ್ಯವಾಗಿರತಕ್ಕದ್ದು’. ಏಕೆಂದರೆ ಗುರು–ಶಿಷ್ಯ ಸಂಬಂಧದಲ್ಲಿ ಈ ಗೋಪ್ಯತೆ–ಪಾವಿತ್ರ್ಯಗಳು ಮುಖ್ಯವಾದಂಥವು. ಗುರುಗಳಿಂದ ಪಡೆದಿರುವ ರಹಸ್ಯಶಕ್ತಿಯನ್ನು ಇಂಥ ಪವಿತ್ರಸಂಬಂಧದ ವಿನಾ ಶಿಷ್ಯರಿಗೆ ನೀಡುವುದು ಸಾಧ್ಯವಾಗದು. ಯಾವುದೇ ಜಾತಿ, ಧರ್ಮ, ದೇಶ, ಭಾಷೆ – ಯಾರೇ ಆಗಲಿ, ಆಧ್ಯಾತ್ಮಿಕ ಸಾಧನೆಯಲ್ಲಿ ಆಸಕ್ತಿ ಇರುವವರೆಲ್ಲರಿಗೂ ಈ ಪಾಠಗಳು ಲಭ್ಯ. ಈ ಜ್ಞಾನವು ವಿಜ್ಞಾನದಂತೆ, ಇದಕ್ಕೆ ಯಾವುದೇ ಗಡಿಗಳು ಇಲ್ಲ; ಯಾವುದೋ ಒಂದು ದೇಶ, ಒಂದು ಧರ್ಮಕ್ಕೆ ಸೇರಿದ್ದಲ್ಲ; ಒಟ್ಟು ಮನುಕುಲಕ್ಕೆ ಸೇರಿದ್ದು. ಇದು ಅವರ ಸಂದೇಶ. ಈ ಕೋರ್ಸ್‌ಗಳಲ್ಲಿ ನಮ್ಮ ಗುರುಗಳ ಸಮಗ್ರ ಉಪದೇಶವೂ ಅಡಕವಾಗಿದೆ.
ಇದು ಬೆಂಗಳೂರು ಕೇಂದ್ರದಲ್ಲಿಯೂ ಲಭ್ಯ. ಅಂಚೆಮೂಲಕ ನಿಮ್ಮನ್ನು ಈ ಪಾಠಗಳು ತಲಪುತ್ತವೆ. ಆನ್‌ಲೈನ್ ಮೂಲಕ ಆಸಕ್ತರು ಅರ್ಜಿಯನ್ನು ಸಲ್ಲಿಸಬಹುದು; ಒಂದು ಸಣ್ಣ ಮೊತ್ತದ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಬಳಿಕ ಕೊರಿಯರ್ ಮೂಲಕ, ಎರಡು ವಾರಗಳಿಗೊಮ್ಮೆ, ಪಾಠಗಳು ನಿಮ್ಮ ಕೈ ಸೇರುತ್ತವೆ. ಧ್ಯಾನದ ವಿವರಗಳು, ಅಧ್ಯಾತ್ಮಸಾಧನೆಗೆ ಮಾರ್ಗದರ್ಶನ, ಕ್ರಿಯಾಯೋಗದ ವಿಧಿ–ವಿಧಾನಗಳು, ನಿತ್ಯ ಜೀವನದಲ್ಲಿ ಅಧ್ಯಾತ್ಮದ ಅಳವಡಿಕೆ, ಕೌಟುಂಬಿಕ ಸಾಮರಸ್ಯಕ್ಕೆ ಸೂತ್ರಗಳು, ವ್ಯಾಪಾರ–ವಹಿವಾಟುಗಳಲ್ಲಿ ಅಧ್ಯಾತ್ಮಸೂತ್ರಗಳ ಜೋಡಣೆ, ವ್ಯಕ್ತಿನಿರ್ಮಾಣ, ಕೆಟ್ಟ ಚಟಗಳಿಂದ ಬಿಡಿಸಿಕೊಳ್ಳುವುದು ಹೇಗೆ – ಹೀಗೆ ಹಲವು ಸಂಗತಿಗಳನ್ನು ಈ ಪಾಠಗಳು ಒಳಗೊಂಡಿವೆ.
ಧ್ಯಾನ ಎಂದರೇನು?
ಧ್ಯಾನವನ್ನು ಒಬ್ಬೊಬ್ಬರು ಒಂದೊಂದು ವಿಧದಲ್ಲಿ ವಿವರಿಸುತ್ತಾರೆ. ನಮ್ಮ ಗುರುಗಳು ಯೋಗಾನಂದ ಅವರು ಮೊದಲಿಗೆ ಏಕಾಗ್ರತೆ ಬಗ್ಗೆ ವಿವರಿಸುತ್ತಾರೆ. ಏಕಾಗ್ರತೆ ಎಂದರೇನು? ಒಂದು ವಿಷಯದ ಬಗ್ಗೆ ಏಕಕಾಲದಲ್ಲಿ ಹೊಂದುವ ತಾದಾತ್ಮ್ಯವೇ ಏಕಾಗ್ರತೆ. ಮನಸ್ಸನ್ನು ಆ ಕಡೆ ಈ ಕಡೆ ಹೋಗಲು ಬಿಡದಿರುವುದು. ಇದು ಯಾವುದರ ಬಗ್ಗೆಯಾದರೂ ಆಗಬಹುದು; ವಿಜ್ಞಾನ, ವ್ಯಾಪಾರ, ಹೀಗೆ ಯಾವುದೂ ಆಗಬಹುದು. ಆದರೆ ಈ ಏಕಾಗ್ರತೆಯನ್ನು ಒಂದು ನಿರ್ದಿಷ್ಟ ವಿಧಿ–ವಿಧಾನಗಳಿಗೆ ಅನುಗುಣವಾಗಿ ಸಿದ್ಧಿಸಿಕೊಂಡು, ಅದನ್ನು ದೇವರ ಕಡೆಗೋ ಅಥವಾ ದೈವದ ಯಾವುದಾದರೊಂದು ತತ್ತ್ವದ ಕಡೆಗೋ ಕೇಂದ್ರೀಕರಿಸುವುದು ಧ್ಯಾನ ಎನಿಸಿಕೊಳ್ಳುತ್ತದೆ. ಹೀಗಾಗಿ ಇಲ್ಲಿ ನಾವು ಎರಡು ಸಂಗತಿಗಳನ್ನು ಗಮನಿಸಬೇಕು: ಏಕಾಗ್ರವಾದ ಮನಸ್ಸು, ಒಂದು; ಮತ್ತೊಂದು, ಹೀಗೆ ಏಕಾಗ್ರವಾದ ಮನಸ್ಸನ್ನು ದೇವರ ಯಾವುದಾದರೊಂದು ತತ್ತ್ವದಲ್ಲಿ ಕೇಂದ್ರೀಕರಿಸುವುದು.
ಹಾಗಾದರೆ ಯಾವುದು ನಾವು ಏಕಾಗ್ರವಾಗಿರಲು ತೊಂದರೆಯನ್ನು ಕೊಡುತ್ತಿದೆ? ಈ ತಿಳಿವಳಿಕೆ ಬಹಳ ಮುಖ್ಯವಾದುದು. ಮನಸ್ಸು ಚಂಚಲವಾಗಿ ಅಲ್ಲಿ ಇಲ್ಲಿ ಓಡುತ್ತಿರುತ್ತದೆ. ಈ ತಳಮಳಗೊಂಡಿರುವ, ನೆಮ್ಮದಿಯನ್ನು ಕಳೆದುಕೊಂಡಿರುವ ಮನಸ್ಸಿನ ಕಡೆಗೆ ಕ್ರಿಯಾಯೋಗ ಗಮನವನ್ನು ಕೊಡುತ್ತದೆ. ನಮ್ಮ ಋಷಿಗಳು ಏನನ್ನು ಹೇಳಿದ್ದಾರೆ? ದೇವರು ಸರ್ವಾಂತರ್ಯಾಮಿ; ಅವನು ಎಲ್ಲೆಲ್ಲೂ ಇದ್ದಾನೆ. ಇದೊಂದು ಕ್ರಾಂತಿಕಾರಕವಾದ ಅರಿವು. ದೇವರು ಎಲ್ಲೆಲ್ಲೂ ಇದ್ದಾನೆ ಎಂದರೆ, ಇಲ್ಲಿಯೂ ಇದ್ದಾನೆ ಎಂದು ಅರ್ಥ ತಾನೆ? ಹಾಗಾದರೆ ನಾವು ಯಾಕೆ ಅವನನ್ನು ನೋಡಲಾಗುತ್ತಿಲ್ಲ? ಇಷ್ಟಕ್ಕೂ ದೇವರು ಎಂದರೇನು? ಈ ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ. ಅವನು ನಮ್ಮ ಹೃದಯಲ್ಲೂ ಇದ್ದಾನೆ. ಆದರೆ ಅವನ ಅನುಭವ ನಮಗೆ ಆಗುತ್ತಿಲ್ಲವಲ್ಲ! ದೇವರನ್ನು ನೋಡಲು, ಅನುಭವಿಸಲು ನಮ್ಮನ್ನು ತಡೆಯುತ್ತಿರುವ ಏಕಮಾತ್ರ ಅಡ್ಡಿ ಎಂದರೆ ನಿಶ್ಚಲತೆಯನ್ನು ಕಳೆದುಕೊಂಡು ಚಂಚಲವಾಗಿರುವ ನಮ್ಮ ಮನಸ್ಸು. ಒಮ್ಮೆ ನಾವು ಈ ಮನಸ್ಸನ್ನು ಶಾಂತಗೊಳಿಸಲು ಸಾಧ್ಯವಾದರೆ, ನಮ್ಮ ಆಲೋಚನೆಗಳ ಅಲೆಗಳನ್ನು ನಿಲ್ಲಿಸಲು ಸಾಧ್ಯವಾದರೆ, ಬಯಕೆಗಳ ತರಂಗಗಳನ್ನು ನಿಲ್ಲಿಸಲು ಸಾಧ್ಯವಾದರೆ, ಆ ಕ್ಷಣವೇ ನಾವು ದೇವರನ್ನು ಸಾಕ್ಷಾತ್ಕರಿಸಿಕೊಳ್ಳಲು ಸಾಧ್ಯ. ಹೀಗಾಗಿಯೇ ಮನಸ್ಸನ್ನು ಮಾನಸಸರೋವರಕ್ಕೆ ಹೋಲಿಸಿರುವುದು. ಸರೋವರದ ಮೇಲ್ಭಾಗದಲ್ಲಿ ಸದಾ ಬಯಕೆಗಳು, ಭಾವನೆಗಳು, ಭಯ, ಆತಂಕಗಳ ಅಲೆಗಳು ಚಲಿಸುತ್ತಿರುವೆ. ಈ ಸರೋವರದ ಮೇಲ್ಭಾಗದಲ್ಲಿ ದೇವರು ಪೂರ್ಣಚಂದ್ರನಂತೆ ಪ್ರಕಾಶಿಸುತ್ತಿರುತ್ತಾನೆ. ತರಂಗಗಳಿಂದ ಕೂಡಿದ ಸರೋವರದಲ್ಲಿ ಚಂದ್ರನ ಬಿಂಬ ಕಾಣದು. ಆದರೆ ಒಮ್ಮೆ ಸರೋವರ ಶಾಂತವಾದರೆ ಆಗ ಚಂದ್ರನು ಆ ಸರೋವರದಲ್ಲಿ ಪ್ರತಿಫಲಿಸುತ್ತಾನೆ. ಕ್ರಿಯಾಯೋಗ ನಮ್ಮನ್ನು ಹೀಗೆ ದೈವಸಾಕ್ಷಾತ್ಕರಕ್ಕೆ ಸಿದ್ಧಗೊಳಿಸುತ್ತದೆ. ಒಮ್ಮೆ ಮನಸ್ಸು ಶಾಂತಸ್ಥಿತಿಯನ್ನು ಪಡೆದಾಗ, ಆಗ ಬೇರೆ ಯಾರೋ ನಿಮಗೆ ದೈವಸಾಕ್ಷಾತ್ಕಾರ ಆಗಿದೆ ಎಂದು ಹೇಳುವ ಆವಶ್ಯಕತೆಯೇ ಬರುವುದಿಲ್ಲ, ಅದು ನಿಮ್ಮ ವೈಯಕ್ತಿಕ ಅನುಭವವೇ ಆಗಿರುತ್ತದೆ.
ಭಾರತೀಯ ಆಧ್ಯಾತ್ಮಿಕ ಪರಂಪರೆಯಲ್ಲಿ ದೇವರನ್ನು ನಿರ್ಗುಣರೂಪದಲ್ಲೂ ಕಾಣಿಸಲಾಗಿದೆ, ಸಾಕಾರರೂಪದಲ್ಲೂ ಕಾಣಿಸಲಾಗಿದೆ. ಸಾಕಾರರೂಪವೇ ಭಕ್ತಿಮಾರ್ಗಕ್ಕೆ ಮೂಲ. ರಾಜಯೋಗದಲ್ಲಿ ನಾವು ನಿರ್ಗುಣತತ್ತ್ವವನ್ನು ಅನುಸಂಧಾನಿಸುತ್ತೇವೆ, ಆದರೆ ಸಗುಣರೂಪದಲ್ಲಿ. ಎಂದರೆ ಈ ಸ್ಥಿತಿಯಲ್ಲಿ ನೀವು ದೇವರ ಯಾವುದಾದರೊಂದು ಗುಣವನ್ನು ಅನುಭವಿಸುತ್ತೀರಿ. ಅವನ ಗುಣಗಳು ಯಾವುವು? ಘನವಾದ ಶಾಂತಿ. ನಾವೆಲ್ಲರೂ ಆತ್ಮಸ್ವರೂಪಿಗಳು. ಆದರೆ ನಾವು ದೇಹ–ಮನಸ್ಸಿನ ಕಡೆಗಷ್ಟೆ ಗಮನವನ್ನು ಕೊಡುವುದರಿಂದ, ಈ ಆತ್ಮಸಾಕ್ಷಾತ್ಕಾರ ಎಂಬುದು ನಮಗೆ ದೂರವಾಗಿರುತ್ತದೆ. ನೀವು ಗಾಢವಾದ ನಿದ್ರೆಯಿಂದ ಎದ್ದಾಗ, ಕೆಲವೊಂದು ಕ್ಷಣಗಳಾದರೂ ನೀವು ಶಾಂತವಾಗಿದ್ದುದರ ಅನುಭವ ನಿಮಗೆ ಸಿಕ್ಕಿರುತ್ತದೆ. ಆದರೆ ಇದು ನಿಮ್ಮ ಅರಿವಿಗೆ ಬಾರದೆ, ಅಪ್ರಜ್ಞಾಪೂರ್ವಕವಾಗಿ ನಡೆದಿರುತ್ತದೆ. ಆದರೆ ಧ್ಯಾನದಲ್ಲಿ ಇಂಥ ಸ್ಥಿತಿ ಪ್ರಜ್ಞಾಪೂರ್ವಕವಾಗಿ ದೊರೆಯುತ್ತದೆ. ಈ ಮಹಾಶಾಂತಿ ದೇವರ ಒಂದು ಗುಣ. ನಮ್ಮ ಗುರುಗಳು ಹೇಳುತ್ತಾರೆ: ಶಾಂತಿಯೇ ದೇವರ ಅಸ್ತಿತ್ವದ ಮೊದಲ ಕುರುಹು. ಇದರ ಮುಂದಿನ ಹಂತವೇ ಆನಂದ. ಈ ಆನಂದ ನಮ್ಮ ಸಂತೋಷದ ಅನುಭವಕ್ಕಿಂತಲೂ ಭಿನ್ನವಾದುದು. ಸಂತೋಷ ಕ್ಷಣಿಕವಾದದ್ದು. ಪರೀಕ್ಷೆಯಲ್ಲಿ ಉತ್ತೀರ್ಣರಾದಾಗ ಸಂತೋಷ ಆಗುತ್ತದೆ. ಈ ಸಂತೋಷಕ್ಕೆ ಒಂದು ಕಾರಣ ಇದೆ. ಈ ಕಾರಣ ಮರೆಯಾದರೆ ಸಂತೋಷವೂ ಮರೆಯಾಗುತ್ತದೆ. ಆದರೆ ಧ್ಯಾನದಿಂದ ಸಿಗುವ ಆನಂದ ಇಂಥದ್ದು ಅಲ್ಲ. ಅಲ್ಲಿ ಯಾವುದೇ ಕಾರಣವೂ ಕೆಲಸ ಮಾಡುವುದಿಲ್ಲ. ಹೀಗೆ ಸಿಗುವ ಆನಂದವೇ ನಮ್ಮ ನಿಜವಾದ ಸ್ವಭಾವ. ಇದೇ ದೈವಸಾಕ್ಷಾತ್ಕಾರ. ಈ ಸ್ಥಿತಿಯಲ್ಲಿ ನಾವು ಪ್ರೀತಿಯ ಪರಮೋತ್ಕರ್ಷ ಸ್ಥಿತಿಯನ್ನು ಅನುಭವಿಸುತ್ತಿರುತ್ತೇವೆ. ದೇವರು ಎಂದರೆ ಇಂಥ ಪ್ರೀತಿಯೇ. ಧ್ಯಾನವನ್ನಾಗಲೀ, ರಾಜಯೋಗವನ್ನಾಗಲೀ ಅಭ್ಯಸಿಸುವಾಗ ನಿಷ್ಕಾಮಕರ್ಮವನ್ನೂ ಅಭ್ಯಸಿಸಬೇಕಾಗುತ್ತದೆ. ಭಕ್ತಿಯೋಗ, ಕರ್ಮಯೋಗ, ಜ್ಞಾನಯೋಗ ಮತ್ತು ರಾಜಯೋಗ – ಇವು ಒಂದು ಇನ್ನೊಂದಕ್ಕೆ ಪೂರಕವಾಗಿರುತ್ತವೆ. ಆದರೆ ಬಯಕೆಗಳೊಂದಿಗೆ ಅಭ್ಯಾಸಮಾಡುವ ಧ್ಯಾನಕ್ಕೆ ಮಿತಿಗಳಿವೆ. ಮೋಕ್ಷದ ಅಭಿಲಾಷೆಯೂ ಒಂದು ಬಯಕೆಯೇ.
ಧ್ಯಾನಕ್ಕೆ ಯಾವ ಸಮಯ ಸೂಕ್ತ?
ಬೆಳಗ್ಗೆ ಐದರಿಂದ ಆರು ಗಂಟೆಯ ಒಳಗೆ, ಮಧ್ಯಾಹ್ನ 11ರಿಂದ 12, ಸಂಜೆ ಐದರಿಂದ ಏಳು, ರಾತ್ರಿ 10ರಿಂದ 12 – ಇದು ಧ್ಯಾನಕ್ಕೆ ಅತ್ಯಂತ ಪ್ರಶಸ್ತ ಸಮಯ ಎಂದು ನಮ್ಮ ಗುರುಗಳು ಹೇಳುತ್ತಿದ್ದರು. ಆದರೆ ಅವಕಾಶ ಸಿಕ್ಕಾಗಲೆಲ್ಲ ಧ್ಯಾನಕ್ಕೆ ತೊಡಗುವುದು ಒಳ್ಳೆಯದು. ಏಕೆಂದರೆ ಧ್ಯಾನಕ್ಕೆ ಯಾವುದೂ ಕೆಟ್ಟ ಸಮಯ ಎಂಬುದು ಇಲ್ಲ; ನೀವು ಯಾವಾಗ ಬೇಕಾದರೂ ಧ್ಯಾನವನ್ನು ಮಾಡಬಹುದು. ಆದರೆ ಧ್ಯಾನಕ್ಕೆ ಒಳ್ಳೆಯ ಸಮಯ ಎಂಬುದಿದೆ. ಬೆಳಗ್ಗೆ ಎದ್ದಕೂಡಲೇ ಧ್ಯಾನವನ್ನು ಮಾಡುವುದು ಒಳ್ಳೆಯದು. ನಿಮ್ಮ ದಿನಚರಿ ಇನ್ನೂ ಆರಂಭವಾಗಿರುವುದಿಲ್ಲ. ಹೀಗೆಯೇ ರಾತ್ರಿ ಮಲಗುವ ಮುನ್ನ ಧ್ಯಾನ ಮಾಡುವ ಕ್ರಮ ಒಳ್ಳೆಯದು.
ಧ್ಯಾನದ ನಿಜವಾದ ಫಲಗಳೇನು?
ದೈವಸಾಕ್ಷಾತ್ಕಾರವೇ ಧ್ಯಾನ ಕೊನೆಯ ಹಂತ. ನಾನು ಯಾರು? ನನ್ನ ನಿಜವಾದ ಸ್ವರೂಪ ಏನು? ನಾನು ಇಲ್ಲಿಗೆ ಏಕಾದರೂ ಬಂದಿರುವೆ? ನಾನು ಎಲ್ಲಿಗೆ ತಲಪುವೆ? – ಇಂಥ ಪ್ರಶ್ನೆಗಳು ನಮ್ಮನ್ನು ಕಾಡುತ್ತಿರುತ್ತವೆ. ಈ ಪ್ರಶ್ನೆಗಳಿಗೆ ನಾವು ಧ್ಯಾನದ ಮೂಲಕ ಉತ್ತರಗಳನ್ನು ಪಡೆಯಬಹುದು. ಎಂದರೆ ಧ್ಯಾನವು ನಮ್ಮ ಜೀವನದ ಸಾರ್ಥಕತೆಗೆ ಕಾರಣವಾಗುತ್ತದೆ. ಧ್ಯಾನಮಾರ್ಗದಲ್ಲಿ ತೊಡಗಿದ ಕೂಡಲೇ ದೈವತ್ವದ ಇರುವಿಕೆ ನಿಮ್ಮ ಅನುಭವಕ್ಕೆ ಬರಲು ಆರಂಭವಾಗುತ್ತದೆ. ಆಧ್ಯಾತ್ಮಿಕ ಜೀವನವೂ ನಿಮ್ಮದಾಗುತ್ತದೆ. ನಿಮ್ಮಲ್ಲಿಯೇ ಇರುವ ದೈವತ್ವದ ಅನುಭವ ನಿಮಗೇ ಆಗುತ್ತದೆ. ನೀವು ಧ್ಯಾನದಲ್ಲಿ ಮುಂದುವರೆದಂತೆಲ್ಲ, ಬೇರೆಯವರಲ್ಲಿರುವ ದೈವತ್ವವೂ ನಿಮ್ಮ ಅನುಭವಕ್ಕೆ ಬರುತ್ತದೆ. ನಿಮ್ಮ ವೈರಿಗಳಲ್ಲಿರುವ ದೈವಾಂಶವೂ ನಿಮಗೆ ಕಾಣುತ್ತದೆ. ಇಂಥ ಸ್ಥಿತಿಯಲ್ಲಿ ನಿಮ್ಮ ಮನಸ್ಸು ಶಾಂತವಾಗಿರುತ್ತದೆ; ವಿಸ್ತಾರವಾಗಿರುತ್ತದೆ. ಆಗ ನಿಮ್ಮಲ್ಲಿ ಯಾವುದೇ ಪೂರ್ವಗ್ರಹಗಳಿರುವುದಿಲ್ಲ. ನಾನು ಮತ್ತು ನನ್ನ ಕುಟುಂಬ ಎಂಬ ಸಂಕುಚಿತ ಯೋಚನೆಗಳಿಂದ ಮನಸ್ಸು ದೂರವಾಗಿ, ಎಲ್ಲರೂ ನನ್ನವರು ಎಂಬ ಭಾವ ನಿಮ್ಮಲ್ಲಿ ಬರುತ್ತದೆ; ವಸುಧೈವ ಕುಟುಂಬಕಂ – ಎಂಬ ಹಂತಕ್ಕೆ ನೀವು ಏರುತ್ತೀರಿ. ಒತ್ತಡಗಳಿಂದ ಪಾರಾಗಲು ಧ್ಯಾನ, ಜೀವನದ ಯಶಸ್ಸಿಗಾಗಿ ಧ್ಯಾನ – ಹೀಗೆಲ್ಲ ಬೇರೆ ಬೇರೆ ರೀತಿಗಳಲ್ಲಿ ಧ್ಯಾನದ ಸಾಧನೆ ನಡೆಯುತ್ತಿರುತ್ತದೆ. ಇದೆಲ್ಲ ಒಳ್ಳೆಯದೇ. ಆದರೆ ಧ್ಯಾನದ ಅಂತಿಮ ಫಲ ಎಂದರೆ ನಿಮ್ಮಲ್ಲಿರುವ ದೈವತ್ವದ ಸಾಕ್ಷಾತ್ಕಾರ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.