ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಕೀಯ ಒತ್ತಡ ಒಂದೇ ಅಲ್ಲ: ಕೆ. ಸತ್ಯನಾರಾಯಣ

ಆದಾಯ ತೆರಿಗೆ ಇಲಾಖೆಯ ನಿವೃತ್ತ ಪ್ರಧಾನ ಮುಖ್ಯ ಆಯುಕ್ತರು
Last Updated 22 ಸೆಪ್ಟೆಂಬರ್ 2018, 19:30 IST
ಅಕ್ಷರ ಗಾತ್ರ

ಆದಾಯ ತೆರಿಗೆ ಇಲಾಖೆಯ ಪ್ರಧಾನ ಮುಖ್ಯ ಆಯುಕ್ತರಾಗಿ ನಿವೃತ್ತರಾಗಿರುವ ಕೆ. ಸತ್ಯನಾರಾಯಣ ಕನ್ನಡದ ಪ್ರಮುಖ ಕಥೆಗಾರರಲ್ಲಿ ಒಬ್ಬರು. ಅವರ ವೃತ್ತಿಯ ಅನುಭವ ಹಾಗೂ ಬರಹದ ಕೌಶಲದ ಮೂಸೆಯಲ್ಲಿ ಅರಳಿದ ‘ವೃತ್ತಿ ವಿಲಾಸ’ (ಪ್ರಕಾಶನ: ಅಭಿನವ) ಆದಾಯ ತೆರಿಗೆ ಇಲಾಖೆಯು ಹೇಗೆ ಕಾರ್ಯ ನಿರ್ವಹಿಸುತ್ತಿದೆ ಎಂಬುದರಒಳನೋಟ ಕಟ್ಟಿಕೊಡುತ್ತದೆ. ತೆರಿಗೆ ದಾಳಿಗಳ ಕುರಿತು ರಾಜ್ಯದಲ್ಲಿ ಚರ್ಚೆಗಳು ನಡೆದಿರುವ ಈ ಹೊತ್ತಿನಲ್ಲಿ ‘ಪ್ರಜಾವಾಣಿ’ ಅವರನ್ನು ಮಾತನಾಡಿಸಿತು. ಮಾತುಕತೆಯ ಆಯ್ದಭಾಗ ಇಲ್ಲಿದೆ:

ತೆರಿಗೆ ದಾಳಿಗಳು ಜನಸಾಮಾನ್ಯರಿಗೆ ಅಷ್ಟೊಂದು ರೋಮಾಂಚಕಾರಿಯಾಗಿ ಗೋಚರಿಸುವುದೇಕೆ?

ತೆರಿಗೆ ದಾಳಿಗಳ ವಿಷಯದಲ್ಲಿ ಎಲ್ಲರೂ ಒಂದು ತೆರನಾದ ಮಿಸ್ಟ್ರಿಯನ್ನು ಕಾಣುತ್ತಾರೆ. ಹೌದು, ಮನಸ್ಸಿನ ಸುಖಕ್ಕೆ ಇಂತಹ ಉತ್ಪ್ರೇಕ್ಷಿತ ಮಾಹಿತಿಗಳೂ ಹುಸಿ ಕಲ್ಪನೆಗಳೂ ಬೇಕು. ಇಲ್ಲದಿದ್ದರೆ ನಮ್ಮ ದಿನಚರಿಯೇ ಬರಡಾಗಿ ಹೋಗುತ್ತದೆ. ವಾಸ್ತವವಾಗಿ ತೆರಿಗೆ ದಾಳಿಗಳಲ್ಲಿ ಯಾವ ರೋಚಕ ಅಂಶಗಳೂ ಇರುವುದಿಲ್ಲ. ಅಧಿಕಾರಿಗಳು ಯಾವುದಾದರೂ ಮನೆಯ ಮೇಲೆ ದಾಳಿ ನಡೆಸಲು ಹೋದಾಗ ಅವರನ್ನು ಮನೆಯ ಮಾಲೀಕರು ತೀರಾ ಅನಿರೀಕ್ಷಿತ ಆಗಂತುಕರೆಂದೇನೂ ಭಾವಿಸುವುದಿಲ್ಲ. ಏಕೆಂದರೆ, ತಾವು ನಡೆಸುವ ವ್ಯವಹಾರ, ಒಳ ವ್ಯವಹಾರಗಳ ಗುಟ್ಟು ಎಂದಾದರೂ ರಟ್ಟಾಗಿ ದಾಳಿ ನಡೆದೀತು ಎನ್ನುವುದು ಅವರಿಗೆ ಚೆನ್ನಾಗಿ ಗೊತ್ತಿರುತ್ತದೆ.

ಸುಮಾರು 30 ವರ್ಷಗಳ ಹಿಂದೆ ರಾಜಕೀಯ ವರ್ಗ ಮತ್ತು ಉದ್ಯಮ ವರ್ಗ ಬೇರೆ ಬೇರೆಯಾಗಿತ್ತು. ಜಾಗತಿಕರಣೋತ್ತರ ಅವಧಿಯಲ್ಲಿ ಉದ್ಯಮಿಗಳು, ಸಿನಿಮಾ ಕುಳಗಳು, ಗುತ್ತಿಗೆದಾರರು ಎಲ್ಲರೂ ರಾಜಕೀಯಕ್ಕೆ ಬಂದರು. ದುರಾಸೆಯಿಂದ ಅಕ್ರಮ ಸಂಪಾದನೆಗೆ ಇಳಿದವರ ಮೇಲೆ ಆದಾಯ ತೆರಿಗೆ ದಾಳಿಗಳು ನಡೆದವು. ಕಾನೂನು ಕ್ರಮದಲ್ಲಿ ಉತ್ತರಿಸಬೇಕಾದ ಅವರೆಲ್ಲ ತಮ್ಮ ಮೇಲಿದ್ದ ಮಾಧ್ಯಮಗಳ ಗಮನವನ್ನೇ ದುರುಪಯೋಗ ಮಾಡಿಕೊಂಡು ಅವುಗಳ ಮೂಲಕವೇ ಹೋರಾಟಕ್ಕೆ ಇಳಿದರು. ಇಂತಹ ವ್ಯಕ್ತಿಗಳಿಗೆ ಸಂಬಂಧಿಸಿದ ದಾಳಿ ಪ್ರಕರಣಗಳನ್ನು ಈಗಲೂ ಮಾಧ್ಯಮಗಳು ಅತಿರಂಜಿತವಾಗಿ ವರದಿ ಮಾಡುತ್ತಿವೆಯಷ್ಟೆ.

ಕಪ್ಪು ಹಣದ ಸ್ವರೂಪ ಎಂತಹದ್ದು?

ಕಪ್ಪು ಹಣವೆಲ್ಲ ನೋಟುಗಳ ರೂಪದಲ್ಲಿ ಒಂದೇ ಕಡೆ ಕೇಂದ್ರೀಕೃತ ಆಗಿರುತ್ತದೆ ಎನ್ನುವುದು ಜನರ ತಪ್ಪು ಕಲ್ಪನೆ. ಅದಕ್ಕೆ ಅನುಗುಣವಾಗಿ ಸಿನಿಮಾಗಳಲ್ಲಿ, ಟಿ.ವಿ.ಗಳಲ್ಲಿ ಕಟ್ಟು ಕಟ್ಟು ನೋಟುಗಳನ್ನು ತೋರಿಸುತ್ತಲೇ ಇರುತ್ತಾರೆ. ಕಪ್ಪು ಹಣದ ಒಂದು ಸಣ್ಣ ಭಾಗ ಮಾತ್ರ ನೋಟುಗಳ ರೂಪದಲ್ಲಿ ಇರುತ್ತದೆ. ಮಿಕ್ಕಿರುವುದು ರಿಯಲ್‌ ಎಸ್ಟೇಟ್‌, ಷೇರು, ಬುಲಿಯನ್‌ (ಚಿನ್ನ ಅಥವಾ ಬೆಳ್ಳಿಯ ಗಟ್ಟಿ), ಚುನಾವಣಾ ಬಂಡವಾಳ, ವಿದೇಶಿ ಹೂಡಿಕೆ– ಹೀಗೆ ಲಕ್ಷ್ಮಿಯ ವಿವಿಧ ಅವತಾರಗಳಂತೆ ನಾನಾ ರೂಪದಲ್ಲಿರುತ್ತದೆ.

ದೇಶದ ಜನಸಂಖ್ಯೆಯೀಗ 130 ಕೋಟಿಯಂತೆ. ಇಷ್ಟೊಂದು ಕಿಕ್ಕಿರಿದ ಸಂತೆಯಲ್ಲಿ ಎಲ್ಲಿಯೋ ಅಡಗಿರುವ ತೆರಿಗೆ ವಂಚಕರನ್ನು ಅದು ಹೇಗೆ ನಿಖರವಾಗಿ ಪತ್ತೆ ಹಚ್ಚಲಾಗುತ್ತದೆ?

ದೇಶದಲ್ಲಿ ನಡೆಯುವ ಆರ್ಥಿಕ ಚಟುವಟಿಕೆಗಳ ಮೇಲೆ ತೆರಿಗೆ ಇಲಾಖೆ ಸದಾ ನಿಗಾ ಇಟ್ಟಿರುತ್ತದೆ. ಆರ್ಥಿಕ ಅಪರಾಧದ ಸಣ್ಣ ವಾಸನೆ ಬಡಿದರೂ ಸಾಕು, ಅಂತಹ ವಹಿವಾಟುಗಳನ್ನು ಸಂಪೂರ್ಣ ಜಾಲಾಡುತ್ತದೆ. ಇಲಾಖೆಯಿಂದ ಇಂತಹ ಅಧ್ಯಯನ ನಿರಂತರ ನಡೆಯುತ್ತಿರುತ್ತದೆ. ಬೇರೆ ಇಲಾಖೆಗಳಿಂದಲೂ ತನಿಖೆಗಾಗಿ ಪ್ರಕರಣಗಳು ಬರುತ್ತವೆ. ಇದಲ್ಲದೆ ಅಪರಾಧ ಎಸಗಿದವರ ದಾಯಾದಿಗಳು, ವಿರೋಧಿಗಳು ನೀಡುವಂತಹ ದೂರುಗಳು ಸಹ ತೆರಿಗೆ ವಂಚಕರನ್ನು ಪತ್ತೆ ಹಚ್ಚಲು ನೆರವಾಗುತ್ತವೆ.

ನೀವು ಯಾವುದೇ ರಾಜ್ಯದಲ್ಲಿ ತೆರಿಗೆ ದಾಳಿಗೆ ಒಳಗಾದವರ ಪಟ್ಟಿಯ ಮೇಲೆ ಒಮ್ಮೆ ಕಣ್ಣಾಡಿಸಿ ನೋಡಿ, ಪ್ರತಿ ನಾಲ್ಕಾರು ವರ್ಷಗಳಿಗೊಮ್ಮೆ ಅದೇ ವ್ಯಕ್ತಿಗಳ ಮನೆಗಳ ಮೇಲೆ ದಾಳಿಗಳು ನಡೆದಿರುತ್ತವೆ. ಹಲವು ಉದ್ಯಮಿಗಳು, ರಾಜಕಾರಣಿಗಳು, ವ್ಯಾಪಾರಿಗಳು ತಮ್ಮಲ್ಲಿ ಕೊಳೆಯುತ್ತಿರುವ ಹಣವನ್ನು ಕಾನೂನುಬಾಹಿರವಾಗಿ ದ್ವಿಗುಣ, ತ್ರಿಗುಣಗೊಳಿಸುವ ಕಾರಣ ಅವರ ಹೆಸರುಗಳು ಈ ಪಟ್ಟಿಯಿಂದ ಬೇರ್ಪಡೆ ಆಗುವುದೇ ಇಲ್ಲ. ಹೊಸ ಹೆಸರುಗಳು ಮಾತ್ರ ಸೇರ್ಪಡೆ ಆಗುತ್ತಲೇ ಹೋಗುತ್ತವೆ.

ದಾಳಿ ನಡೆಸುವ ಮುಂಚಿನ ಸಿದ್ಧತೆ ಹೇಗಿರುತ್ತದೆ?

ಯಾವುದೇ ದಾಳಿಗೂ ಮುನ್ನ ಆ ಪ್ರಕರಣಕ್ಕೆ ಸಂಬಂಧಪಟ್ಟ ಎಲ್ಲ ದಾಖಲೆಗಳ ಪರಿಶೀಲನೆ ನಡೆಯುತ್ತದೆ. ಡೇಟಾ ಮೈನಿಂಗ್‌ (ದತ್ತಾಂಶ ಹುಡುಕಾಟ) ಮೂಲಕ ವ್ಯವಹಾರದ ಸಂಪೂರ್ಣ ಮಾಹಿತಿಯನ್ನೂ ಸಂಗ್ರಹಿಸಲಾಗುತ್ತದೆ. ಇಲಾಖೆಯ ವಿವಿಧ ಹಂತಗಳಲ್ಲಿ ಈ ಪರಿಶೀಲನೆ ನಡೆದು ಸಿದ್ಧವಾಗುವ ವರದಿಯ ಆಧಾರದ ಮೇಲೆ ವಾರಂಟ್‌ ಹೊರಡಿಸಲಾಗುತ್ತದೆ. ದಾಳಿ ಏಕೆ ಅನಿವಾರ್ಯ ಎಂಬುದನ್ನು ಇಲಾಖಾ ಮುಖ್ಯಸ್ಥರು ಹಸ್ತಾಕ್ಷರದಲ್ಲಿಯೇ ಟಿಪ್ಪಣಿಯನ್ನು ಬರೆದು ಸಹಿ ಹಾಕುತ್ತಾರೆ. ಮುಂದೆ ದಾಳಿಯಲ್ಲಿ ಸಿಗುವ ದಾಖಲೆಗಳನ್ನು ಟಿಪ್ಪಣಿಯಲ್ಲಿರುವ ವಿವರಗಳ ಜತೆ ಹೋಲಿಕೆ ಮಾಡಿ ನೋಡುವ ಕಾರಣ, ಈ ಟಿಪ್ಪಣಿಗಳು ವಸ್ತುನಿಷ್ಠತೆಗೆ ಹತ್ತಿರವಾಗಿರುತ್ತವೆ.

ವೈಯಕ್ತಿಕ ಸೇಡಿಗಾಗಿಯೂ ದಾಳಿಗಳು ನಡೆಯುತ್ತವೆ, ಅಲ್ಲವೇ?

ವೈಯಕ್ತಿಕ ಸೇಡಿಗಾಗಿ ದಾಳಿ ನಡೆಸದಂತೆ ನೀತಿ, ನಿಯಮ, ನಿಯಂತ್ರಣಗಳು ಇವೆ ಎಂದುಮಾತ್ರ ಹೇಳಬಲ್ಲೆ. ನಮ್ಮ ಇಲಾಖೆಯ ಮುಖ್ಯಸ್ಥರೊಬ್ಬರು ದ್ವೇಷ ಸಾಧಿಸಲು ವ್ಯಕ್ತಿಯೊಬ್ಬರ ಮನೆಯ ಮೇಲೆ ದಾಳಿ ನಡೆಸಿದರು. ಆ ವ್ಯಕ್ತಿ ಪಂಜಾಬ್‌ನ ಅಡ್ವೋಕೇಟ್‌ ಜನರಲ್‌ ಆಗಿದ್ದವರು. ದಾಳಿ ನಡೆಸಿದ ಅಧಿಕಾರಿಯನ್ನು ನಾಲ್ಕುವರ್ಷ ಕೋರ್ಟ್‌ಗೆ ಎಡತಾಕುವಂತೆ ಮಾಡಿ, ಕೊನೆಗೆ ಅವರ ಪಿಂಚಣಿ ಸೌಲಭ್ಯವೂ ರದ್ದಾಗುವಂತೆ ನೋಡಿಕೊಂಡರು ಆ ಅಡ್ವೋಕೇಟ್‌ ಜನರಲ್‌ ಮಹಾಶಯರು.

ದಾಳಿಗಳು ರಾಜಕೀಯ ಒತ್ತಡದಿಂದ ಮುಕ್ತವಾಗಿರುತ್ತವೆ ಎನ್ನುವುದು ಸುಳ್ಳಲ್ಲವೇ?

ರಾಜಕೀಯ ವ್ಯಕ್ತಿಗಳು ಮಾತ್ರವಲ್ಲ; ನ್ಯಾಯಮೂರ್ತಿಗಳು, ಅಧಿಕಾರಿಗಳು, ಉದ್ಯಮಿಗಳು, ಧಾರ್ಮಿಕ ಮುಖಂಡರು – ಹೀಗೆ ಹಲವು ಕಡೆಗಳಿಂದ ಒತ್ತಡ ಬರುತ್ತದೆ. ಒಬ್ಬೊಬ್ಬರ ಒತ್ತಡವೂ ಒಂದೊಂದು ರೀತಿ. ಕೆಲವರು ಅಧಿಕಾರದ ದರ್ಪ ತೋರಿದರೆ, ಹಲವರು ಹಣದ ಆಮಿಷವನ್ನೂ ಒಡ್ಡುತ್ತಾರೆ. ಆದರೆ, ಮಂತ್ರಿ ಹೇಳಿದರೆಂದು ಯಾರೂ ಕುರುಡಾಗಿ ದಾಳಿ ಮಾಡಲು ಹೋಗುವುದಿಲ್ಲ. ಪ್ರಕರಣದಲ್ಲಿ ನಿಜಾಂಶವಿದೆ ಎನ್ನುವುದು ಅವರಿಗೆ ಖಾತ್ರಿಯಾಗಬೇಕು. ಇವತ್ತು ಇವರೇನೋ ಅಧಿಕಾರದಲ್ಲಿದ್ದಾರೆ. ನಾಳೆ ಸರ್ಕಾರ ಬಿದ್ದಮೇಲೆ ನಮ್ಮ ಗತಿ ಏನು ಎಂಬುದನ್ನು ಅವರೂ ಯೋಚಿಸುವುದಿಲ್ಲವೇ? ದಾಳಿ ನಡೆಸುವ ಅಧಿಕಾರಿ, ಮೇಲಧಿಕಾರಿಗಳಿಗೆ, ಕೋರ್ಟ್‌ಗಳಿಗೆ, ಸಂಸತ್ತಿನ ಸ್ಥಾಯಿ ಸಮಿತಿ ಸದಸ್ಯರಿಗೆ ಉತ್ತರ ನೀಡಬೇಕಾಗುತ್ತದೆ.
ಮಂತ್ರಿ ಹೇಳಿದರೆಂದು ಕೋರ್ಟ್‌ ಸುಮ್ಮನಿರುತ್ತದೆಯೇ? ತಪ್ಪು ಮಾಡಿರುವುದು ಸಾಬೀತಾದರೆ ಪಿಂಚಣಿ ಸೌಲಭ್ಯವನ್ನೂ ಕಳೆದುಕೊಳ್ಳಬೇಕಾಗುತ್ತದೆ. ಅಷ್ಟೇ ಅಲ್ಲ, ಜೈಲಿಗೆ ಸಹ ಹೋಗಬೇಕಾಗುತ್ತದೆ.

ನಿಮ್ಮ ವೃತ್ತಿ ಜೀವನದಲ್ಲಿ ರಾಜಕೀಯ ಕಾರಣದಿಂದ ದಾಳಿ ಮಾಡಿದ ಪ್ರಸಂಗಗಳು ಘಟಿಸಿದ್ದವೇ?

ಕೇಂದ್ರದ ಸಚಿವರಾಗಿದ್ದ ರಾಜ್ಯದ ಮುಖಂಡರೊಬ್ಬರು ವೈಯಕ್ತಿಕ ಕಾರಣದಿಂದ ಮದ್ದೂರಿನ ಮಾರ್ವಾಡಿಯೊಬ್ಬರ ಮೇಲೆ ದಾಳಿ ನಡೆಸುವಂತೆ ನಮ್ಮ ಮೇಲಧಿಕಾರಿಗಳಿಗೆ ಸೂಚಿಸಿದ್ದರು. ಜಿಲ್ಲಾಮಟ್ಟದ ಸಣ್ಣ ಅಧಿಕಾರಿ ದಾಳಿ ಮಾಡಲು ಯೋಗ್ಯವಾಗಿದ್ದ ಆ ಪ್ರಕರಣದಲ್ಲಿ ಬೆಂಗಳೂರು–ಮೈಸೂರಿನಿಂದ ದೊಡ್ಡ ತಂಡವನ್ನೇ ಕಳುಹಿಸಲಾಗಿತ್ತು. ಆ ದಾಳಿ ನಿಷ್ಪ್ರಯೋಜಕವಾಗಿತ್ತು ಎನ್ನುವುದನ್ನು ತನಿಖೆಯಲ್ಲಿ ಸಿಕ್ಕ ದಾಖಲೆಗಳೇ ಹೇಳುತ್ತಿದ್ದವು.

ರಾಜ್ಯದ ರಾಜಕೀಯ ಬೆಳವಣಿಗೆಗಳಿಗೂ ಸಚಿವ ಡಿ.ಕೆ. ಶಿವಕುಮಾರ್‌ ಅವರ ಮನೆಯ ಮೇಲೆ ನಡೆದಿರುವ ದಾಳಿಗಳಿಗೂ ಸಂಬಂಧವಿದೆ ಎಂಬ ಆರೋಪಗಳು ನಿಜವಲ್ಲವೇ?

ಈ ವಿಷಯದಲ್ಲಿ ನನಗೇನೂ ಗೊತ್ತಿಲ್ಲ. ಹೀಗಾಗಿ ಏನನ್ನೂ ಮಾತನಾಡಲು ಇಷ್ಟಪಡುವುದಿಲ್ಲ.

ಆದಾಯ ತೆರಿಗೆ ಇಲಾಖೆಗೂ ಜಾರಿ ನಿರ್ದೇಶನಾಲಯಕ್ಕೂ ಏನು ವ್ಯತ್ಯಾಸ?

ಎರಡೂ ಸಂಸ್ಥೆಗಳಿಗೆ ತೆರಿಗೆ ವಂಚಕರನ್ನು ಪತ್ತೆ ಹಚ್ಚುವುದೇ ಕೆಲಸ. ಜಾರಿ ನಿರ್ದೇಶನಾಲಯ ವಿದೇಶಿ ಹೂಡಿಕೆಗಳ ಮೇಲೆ ನಿಗಾ ಇಟ್ಟಿರುತ್ತದೆ. ವಿದೇಶಗಳಲ್ಲಿರುವ ಕಪ್ಪು ಹಣದ ಕುರಿತು ತನಿಖೆ ನಡೆಸುವ ಈ ಸಂಸ್ಥೆಗೆ ಹೆಚ್ಚಿನ ಅಧಿಕಾರ ಇದೆ. ಹಣದ ಮೂಲದ ಕುರಿತು ಸಮರ್ಪಕ ಉತ್ತರ ಸಿಗದಿದ್ದರೆ ಸಮನ್ಸ್‌ ಜಾರಿಗೊಳಿಸಿ ಬಂಧಿಸುವ ಅವಕಾಶವೂ ಅದಕ್ಕಿದೆ.

ಚಿತ್ರಗಳು: ರಂಜು ಪಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT