ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Interview | ಮೋದಿ, ಶಾ ಪ್ರಚಾರದಿಂದ ಹೆಚ್ಚಿದ ಪಕ್ಷದ ವರ್ಚಸ್ಸು: ಯಡಿಯೂರಪ್ಪ

Published 3 ಮೇ 2023, 19:36 IST
Last Updated 3 ಮೇ 2023, 19:36 IST
ಅಕ್ಷರ ಗಾತ್ರ

ಕೆ. ನರಸಿಂಹಮೂರ್ತಿ

ಮೈಸೂರು: ‍‍‘ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರ ಪ್ರಚಾರದಿಂದಾಗಿ ಪಕ್ಷದ ವರ್ಚಸ್ಸು ಹೆಚ್ಚಾಗಿದೆ. ವಿಶ್ವವೇ ಕೊಂಡಾಡುತ್ತಿರುವ ನಾಯಕ ಮೋದಿ. ರೋಡ್‌ ಶೋಗಳಲ್ಲಿ ಅವರಿಗೆ ಎಂಥ ಸ್ವಾಗತ ಸಿಗುತ್ತಿದೆ ಎಂದು ನೀವೇ ನೋಡುತ್ತಿದ್ದೀರಿ ಎಂದು ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ ಹೇಳಿದರು.

‘ಕಾಂಗ್ರೆಸ್‌ಗೆ ಅಂಥ ನಾಯಕರು ಯಾರಿದ್ದಾರೆ? ಮೋದಿ ಮತ್ತು ಅಮಿತ್ ಶಾ ಅವರಿಗೆ ರಾಹುಲ್‌ಗಾಂಧಿ, ಪ್ರಿಯಾಂಕಾ ಗಾಂಧಿ ಸಮನಾಗಲು ಸಾಧ್ಯವೇ? ಇದನ್ನು ನಾಡಿನ ಜನ ಅರ್ಥ ಮಾಡಿಕೊಂಡಿದ್ದಾರೆ. ಇದು ಪಕ್ಷವನ್ನು ಭಾರಿ ಗೆಲುವಿನತ್ತ ಮುನ್ನಡೆಸಲಿದೆ’ ಎಂದು ಅವರು ಹೇಳಿದರು.  

ಚುನಾವಣೆಯ ಹೊತ್ತಿನಲ್ಲಿ ‘ಪ್ರಜಾವಾಣಿ’ಗೆ ನೀಡಿರುವ ಸಂದರ್ಶನದ ಪೂರ್ಣಪಾಠ ಇಲ್ಲಿದೆ.

ಪ್ರ

ಮರಳಿ ಅಧಿಕಾರ ಹಿಡಿಯುತ್ತೇವೆ ಎಂದು ಯಾವ ವಿಶ್ವಾಸದ ಮೇಲೆ ಹೇಳುತ್ತಿದ್ದೀರಿ?

ನರೇಂದ್ರ ಮೋದಿ ಮತ್ತು ಅಮಿತ್‌ ಶಾ ಅವರ ನೇತೃತ್ವ, ನಾನು ಮತ್ತು ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿ
ಗಳಾಗಿ ಮಾಡಿರುವ ಅಭಿವೃದ್ಧಿ ಕಾರ್ಯಗಳೇ ನಮಗೆ ಶ್ರೀರಕ್ಷೆ. ಇದರ ಆಧಾರದಲ್ಲಿ ಹೇಳುತ್ತಿದ್ದೇನೆ. ಬೇರೆ ಯಾವ ಪಕ್ಷದ ಭರವಸೆಗಳನ್ನೂ ಜನ ನಂಬುವುದಿಲ್ಲ. ನಾವು ಭರವಸೆಗಳನ್ನು ಈಡೇರಿಸುತ್ತೇವೆಂಬ ನಿರೀಕ್ಷೆ ಜನರಲ್ಲಿದೆ.

ಪ್ರ

‘ಡಬಲ್‌ ಎಂಜಿನ್‌’ ಸರ್ಕಾರದಿಂದ ರಾಜ್ಯಕ್ಕೆ ಆಗಿರುವ ಅನುಕೂಲಗಳೇನು?

ರಾಜ್ಯಕ್ಕೆ ಕೊಟ್ಟಿರುವಷ್ಟು ಹಣಕಾಸಿನ ನೆರವು ಹಿಂದೆಂದೂ ಕೊಟ್ಟಿರಲಿಲ್ಲ. ಸಂಘಟನೆ ಬಲಪಡಿಸಲು, ಜನರಲ್ಲಿ ವಿಶ್ವಾಸ ಮೂಡಿಸಲು ಇದು ಸಹಕಾರಿಯಾಗಿದೆ. ಮೈಸೂರು–ಬೆಂಗಳೂರು ಎಕ್ಸ್‌ಪ್ರೆಸ್‌ ಹೈವೇ ನಿರ್ಮಾಣಕ್ಕೆ ₹ 8 ಸಾವಿರ ಕೋಟಿ, ಮೈಸೂರಲ್ಲಿ ಕಿದ್ವಾಯಿ ಕ್ಯಾನ್ಸರ್‌ ಚಿಕಿತ್ಸಾ ಕೇಂದ್ರ, ದೇಶದ ಮೊದಲ ಸೆಮಿಕಂಡಕ್ಟರ್‌ ಘಟಕ ಸ್ಥಾಪಿಸಲು ಒಪ್ಪಂದದಂಥ ಹಲವು ಅನುಕೂಲಗಳಾಗಿವೆ.

ಪ್ರ

2013ರಲ್ಲಿ ನೀವು ಮತ್ತು ಬಿ.ಶ್ರೀರಾಮುಲು ಪಕ್ಷ ಬಿಟ್ಟಿದ್ದರಿಂದ ಬಿಜೆಪಿಗೆ ಹೊಡೆತ ಬಿದ್ದಿತ್ತು. ಈಗ ಶೆಟ್ಟರ್‌, ಲಕ್ಷ್ಮಣ, ಆಯನೂರು ಬಿಟ್ಟಿದ್ದಾರೆ. ಅದರ ಪರಿಣಾಮವೇನು?

ಯಾವುದೇ ದುಷ್ಪರಿಣಾಮ ಆಗುವುದಿಲ್ಲ.

ಪ್ರ

ಲಿಂಗಾಯತರಿಗೆ ಮುಖ್ಯಮಂತ್ರಿ ಪಟ್ಟ ಕೊಡುವುದಿಲ್ಲವಂತೆ?

ನಾನು ಮುಖ್ಯಮಂತ್ರಿ ಸ್ಥಾನ ಬಿಟ್ಟಿದ್ದರಿಂದ ಲಿಂಗಾಯತರಿಗೆ ಅನ್ಯಾಯವಾಯಿತು ಎಂಬ ಕಾಂಗ್ರೆಸ್‌ನವರ ಮಾತಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ. ಅದು ನನ್ನ ಸ್ವಂತ ತೀರ್ಮಾನ. ಆ ಬಗ್ಗೆ ಸಮುದಾಯದ ಬಂಧುಗಳಿಗೆ ವಿವರಿಸಿದ್ದೇನೆ.

ಪ್ರ

‘ಕೆಜೆಪಿ ಕಟ್ಟಿದ್ದಾಗ ನೀವು ಆಡಿದ್ದ ಮಾತುಗಳನ್ನೇ ಜಗದೀಶ್‌ ಶೆಟ್ಟರ್‌ ಆಡುತ್ತಿದ್ದಾರೆ. ಈಗ ಅವರನ್ನು ನಿಂದಿಸುವುದು ಸರಿಯೇ?’

ನಾನು ಕೆಜೆಪಿ ಕಟ್ಟಿ ಅಕ್ಷಮ್ಯ ಅಪರಾಧ ಮಾಡಿ, ರಾಜ್ಯದ ಜನರ ಕ್ಷಮೆ ಕೇಳಿದ್ದೆ. ಜಗದೀಶ್‌ ಶೆಟ್ಟರ್‌ರಂತೆ ನಾನು ಕಾಂಗ್ರೆಸ್‌ಗೆ ಹೋಗಲಿಲ್ಲ. ನನಗೂ ಅವರಿಗೂ ಅಜಗಜಾಂತರವಿದೆ. ನನ್ನಂತೆ ಶೆಟ್ಟರ್ ಅವರೂ ಪಕ್ಷ ಕಟ್ಟಬೇಕಿತ್ತು ಎಂದಲ್ಲ. ಆದರೆ ಪಕ್ಷ ಬಿಡಲು ಕಾರಣ ಹೇಳಬೇಕು. ಅವರ ಪತ್ನಿಗೆ ಟಿಕೆಟ್‌ ಕೊಡುವುದಾಗಿ ಹೇಳಿದ್ದೆವು. ರಾಜ್ಯಸಭೆಗೆ ಕಳಿಸಿ, ಕೇಂದ್ರ ಸಚಿವರನ್ನಾಗಿಸುವುದಾಗಿ ಹೇಳಿದ್ದೆವು. ಇಷ್ಟಾದರೂ ದ್ರೋಹ ಮಾಡಿ ಕಾಂಗ್ರೆಸ್‌ಗೆ ಹೋಗಿದ್ದಾರೆ. ದಯನೀಯ ಸೋಲು ಕಾಣಲಿದ್ದಾರೆ. ಸವದಿಗೆ ಪಕ್ಷ ಎಲ್ಲವನ್ನೂ ಕೊಟ್ಟಿತ್ತು. ಅವರು ಪಕ್ಷ ಬಿಟ್ಟ ತೀರ್ಮಾನದ ಬಗ್ಗೆ ಜನ ಛೀಮಾರಿ ಹಾಕುತ್ತಿದ್ದಾರೆ.

ಪ್ರ

ಮುಖ್ಯಮಂತ್ರಿ ಬದಲಾವಣೆ ಪ್ರತಿಕೂಲ ಪರಿಣಾಮ ಬೀರುವುದಿಲ್ಲವೇ?

ಪರಿಣಾಮ ಬೀರದು. ಆಯಾ ಕಾಲಕ್ಕೆ ತಕ್ಕಂತೆ ಅನಿವಾರ್ಯವಾಗಿ ಕೆಲವು ತೀರ್ಮಾನಗಳನ್ನು ಮಾಡಬೇಕಾಗುತ್ತದೆ.

‘ಜನರ ನಾಡಿ ಮಿಡಿತ ಗೊತ್ತು’

ಪ್ರ

ಸಮೀಕ್ಷೆಗಳ ಪ್ರಕಾರ, ಬಿಜೆಪಿಗೆ ಅನುಕೂಲಕರವಾದ ಪರಿಸ್ಥಿತಿ ಇಲ್ಲವೆಂಬ ಮಾಹಿತಿ ಇದೆಯಲ್ಲ?

50 ವರ್ಷದಲ್ಲಿ ರಾಜ್ಯದ ಉದ್ದಗಲಕ್ಕೂ ಸಂಚರಿಸಿದ್ದೇನೆ. ಇತ್ತೀಚೆಗೆ ಸುಮಾರು 85 ಕ್ಷೇತ್ರದಲ್ಲಿ ಪ್ರವಾಸ ಮಾಡಿದ್ದೇನೆ. ರಾಜ್ಯದ ಜನರ ಮಿಡಿತ ಚೆನ್ನಾಗಿ ಗೊತ್ತಿದೆ. ನಾವು ಈ ಬಾರಿ 130–135 ಸೀಟುಗಳನ್ನು ಗೆಲ್ಲುತ್ತೇವೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT