ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂದರ್ಶನ: ‘ಆಫ್‌ಸ್ಪದಿಂದ ಏನೂ ಒಳಿತಾಗಿಲ್ಲ’- ರಾಜ್ಯಸಭೆ ಸದಸ್ಯ ಕೆ.ಜೆ.ಕೆನ್‌ಯೆ

Last Updated 8 ಡಿಸೆಂಬರ್ 2021, 1:53 IST
ಅಕ್ಷರ ಗಾತ್ರ

ನಾಗಾಲ್ಯಾಂಡ್‌ನಲ್ಲಿ ನಾಗರಿಕರು ಸೈನಿಕರ ಗುಂಡೇಟಿಗೆ ಬಲಿಯಾಗಿದ್ದು ಇಡೀ ದೇಶಕ್ಕೆ ಆಘಾತ ನೀಡಿದೆ. ‘ಇದು ತಪ್ಪು ಗ್ರಹಿಕೆಯಿಂದ ಆದ ಅವಘಡ’ ಎಂದು ಸೇನೆ ಮತ್ತು ಸರ್ಕಾರವು ಹೇಳಿವೆ. ನಾಗರಿಕರ ಹತ್ಯೆಯಾಗಿರುವ ಕಾರಣ ವಿಶೇಷ ತನಿಖಾ ತಂಡ ತನಿಖೆ ನಡೆಸುತ್ತಿದೆ. ಜತೆಯಲ್ಲಿಯೇ ಪ್ರತಿಭಟನೆಗಳೂ ನಡೆಯುತ್ತಿವೆ. ಸೇನೆಗೆ ವಿಶೇಷಾಧಿಕಾರ ನೀಡುವ ‘ಸಶಸ್ತ್ರ ಪಡೆಗಳ (ವಿಶೇಷ ಅಧಿಕಾರ) ಕಾಯ್ದೆ–1958 (ಆಫ್‌ಸ್ಪ)’ ರದ್ದುಪಡಿಸಿ ಎಂಬ ಕೂಗು ಬಲವಾಗುತ್ತಿದೆ. ನಾಗಾಲ್ಯಾಂಡ್‌ನಿಂದ ರಾಜ್ಯಸಭೆ ಸದಸ್ಯರಾಗಿರುವ ಕೆ.ಜೆ.ಕೆನ್‌ಯೆ ಅವರು, ಈ ಬಗ್ಗೆ ‘ಪ್ರಜಾವಾಣಿ’ ಜತೆಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.

- ಶನಿವಾರದ್ದು ಅತ್ಯಂತ ದುರದೃಷ್ಟಕರ ಘಟನೆ. ಈ ಘಟನೆ ಬಗ್ಗೆ ನೀವೇನು ಹೇಳುತ್ತೀರಿ?

ಇದನ್ನು ನಾವು ಎಂದೂ ನಿರೀಕ್ಷಿಸಿರಲಿಲ್ಲ. ಇದು ಆಘಾತದಂತೆ ಎರಗಿತು. ಈ ಬಗ್ಗೆ ನಾವು ನಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದೇವೆ.

- ಕೇಂದ್ರ ಗೃಹ ಸಚಿವ ಅಮಿತ್ ಶಾ ಸಂಸತ್ತಿನಲ್ಲಿ ಈ ಘಟನೆ ಬಗ್ಗೆ ಹೇಳಿಕೆ ನೀಡಿದ್ದಾರೆ. ಅವರ ಹೇಳಿಕೆಯಿಂದ ನಿಮಗೆ ಸಮಾಧಾನವಾಯಿತೇ?

ಘಟನೆಗೆ ಕಾರಣಗಳೇನು ಎಂದು ಗೃಹ ಸಚಿವರು ಮುಂದಿಟ್ಟ ಅಂಶಗಳನ್ನು ಇನ್ನಷ್ಟೇ ಖಚಿತಪಡಿಸಿಕೊಳ್ಳಬೇಕಿದೆ. ನಾಗಾಲ್ಯಾಂಡ್ ಸರ್ಕಾರವು ವಿಶೇಷ ತನಿಖಾ ತಂಡವನ್ನು ರಚಿಸಿದೆ. ತನಿಖೆ ಮುಗಿದು ವರದಿ ದೊರೆತ ನಂತರ, ಗೃಹ ಸಚಿವರ ಹೇಳಿಕೆಯನ್ನು ಪರಾಮರ್ಶಿಸಬಹುದು. ಆದರೆ ಅವರು ಪ್ರಾಮಾಣಿಕವಾಗಿ
ಪಶ್ಚಾತ್ತಾಪ ವ್ಯಕ್ತಪಡಿಸುವ ಮೂಲಕ ಹಿಂದಿನ ಸರ್ಕಾರಗಳಿಗಿಂತ
ಭಿನ್ನವಾದ ಪ್ರತಿಕ್ರಿಯೆ ನೀಡಿದರು. ಅದನ್ನು ನಾವು ಪ್ರಶಂಸಿಸಬೇಕು. ಇದು ಮಹತ್ವದ ಬದಲಾವಣೆ.

– ಆಫ್‌ಸ್ಪವನ್ನು ರದ್ದುಪಡಿಸಬೇಕು ಎಂಬ ಬೇಡಿಕೆ ಇದೆ. ಈಶಾನ್ಯ ಭಾರತದ ಎರಡು ರಾಜ್ಯಗಳ ಮುಖ್ಯಮಂತ್ರಿಗಳು ಮತ್ತೆ ಇದೇ ಬೇಡಿಕೆ ಇಟ್ಟಿದ್ದಾರೆ. ನಿಮ್ಮ ಬೇಡಿಕೆ ಏನು?

ಇಲ್ಲಿ ಆಫ್‌ಸ್ಪ ಕಾಯ್ದೆಯೇ ನಿಜವಾದ ಅಪರಾಧಿ. ವೈರತ್ವ ಬೆಳೆಯಲು ಈ ಕಾಯ್ದೆಯೇ ಪ್ರಮುಖ ಕಾರಣ. ಇದರಿಂದ ಏನೂ ಒಳಿತಾಗಿಲ್ಲ. ಇದು ರಾಷ್ಟ್ರೀಯ ಹಿತಾಸಕ್ತಿಗೆ ಮಾರಕ. ಇಂತಹ ಕಾಯ್ದೆಗಳು ಇದ್ದರೆ,
ಇಂತಹ ಘಟನೆಗಳು ಮರುಕಳಿಸುತ್ತಲೇ ಇರುತ್ತವೆ. ತಮ್ಮದೇ ಜನರ ಮೇಲೆ ಇಷ್ಟೆಲ್ಲಾ ದೌರ್ಜನ್ಯ ನಡೆಸುವ ಅಧಿಕಾರವನ್ನು ಸೇನೆಗೆ ಇದೊಂದೇ ಕಾಯ್ದೆ ನೀಡಿದೆ. ಈ ಕಾಯ್ದೆಯ ಬಗ್ಗೆ 60 ವರ್ಷಗಳ ಹಿಂದೆ ಆರಂಭವಾದ ಚರ್ಚೆ, ಈಗಲೂ ನಡೆಯುತ್ತಿದೆ. ಇಂತಹ ಘಟನೆಗಳು ಮರುಕಳಿಸಬಾರದು ಎಂದರೆ, ಈ ಕಾಯ್ದೆ ರದ್ದಾಗಲೇಬೇಕು.

– ಆಫ್‌ಸ್ಪ ಕಾಯ್ದೆಯನ್ನು ರದ್ದುಪಡಿಸುವ ಈ ಬೇಡಿಕೆಯನ್ನು ಸರ್ಕಾರ ಒಪ್ಪುತ್ತದೆ ಎಂದು ನೀವು ಭಾವಿಸಿದ್ದೀರಾ?

ಸ್ವಾತಂತ್ರ್ಯಾನಂತರದಿಂದ ಇರುವ ದೊಡ್ಡ ಸಮಸ್ಯೆಗಳ ಬಗ್ಗೆ ಸರ್ಕಾರ ಆತ್ಮಾವಲೋಕನ ಮಾಡಿಕೊಳ್ಳುತ್ತಿರುವ ರೀತಿಯನ್ನು ಗಮನಿಸಿದರೆ, ಸರ್ಕಾರ ಒಪ್ಪುತ್ತದೆ ಎಂಬ ಆತ್ಮವಿಶ್ವಾಸವಿದೆ. ಇದು ವಸಾಹತುಶಾಹಿ ಕಾಲದಿಂದಲೂ ಉಳಿದುಕೊಂಡು ಬಂದಿದೆ.
ಇದನ್ನು ನಾವ್ಯಾಕೆ ಮರುಪರಿಶೀಲಿಸಬಾರದು? ಇದು ದೇಶದ ಏಕತೆ ಮತ್ತು ಸಮಗ್ರತೆಗೆ ದೊಡ್ಡ ತಡೆ. ಇದರಿಂದ ಏನೂ ಒಳಿತಾಗಿಲ್ಲ. ಸರಿಯಾಗಿ ಯೋಚಿಸುವ ನಾಗರಿಕರು ಈ ಕಾಯ್ದೆ
ರದ್ದತಿಯ ಬೇಡಿಕೆಯನ್ನು ಬೆಂಬಲಿಸುತ್ತಾರೆ ಎಂಬ ವಿಶ್ವಾಸ ನನಗಿದೆ.

– ನಾಗಾ ಶಾಂತಿ ಪ್ರಕ್ರಿಯೆಯೆ ಮೇಲೆ ಈ ಘಟನೆ ಪರಿಣಾಮ ಬೀರುತ್ತದೆಯೇ?

ಈ ಘಟನೆಯು, ನಾಗಾ ಶಾಂತಿ ಪ್ರಕ್ರಿಯೆಯ ಹಳಿತಪ್ಪಿಸುವ ಅಪಾಯವಿದೆ. ಇದು ಗಂಭೀರವಾದ ಸವಾಲು. ಇಡೀ ಪ್ರಕ್ರಿಯೆಯೇ ಸ್ಥಗಿತವಾಗಬಹುದು. ಹೀಗಾಗಿ ಇದನ್ನು ಬಹು ಎಚ್ಚರಿಕೆಯಿಂದ ನಿಭಾಯಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT