ಮಂಗಳವಾರ, ಮಾರ್ಚ್ 28, 2023
25 °C

ಡಾ.ಎಂ.ಪ್ರಭಾಕರ ಜೋಶಿ ಸಂದರ್ಶನ | ‘ಕಲಾಸರಸ್ವತಿಯ ಮುಂದೆ ನಾನೊಬ್ಬ ಜ್ಞಾನದಾಹಿ’

ಕೋಡಿಬೆಟ್ಟು ರಾಜಲಕ್ಷ್ಮಿ Updated:

ಅಕ್ಷರ ಗಾತ್ರ : | |

Prajavani

ವಿದ್ವಾಂಸ, ಯಕ್ಷಗಾನ ಕಲಾವಿದ ಡಾ.ಎಂ.ಪ್ರಭಾಕರ ಜೋಶಿ ಅವರು ಇದೇ 11 ಮತ್ತು 12ರಂದು ಉಡುಪಿಯಲ್ಲಿ ನಡೆಯುವ ಪ್ರಥಮ ಯಕ್ಷಗಾನ ಸಮ್ಮೇಳನದ ಸರ್ವಾಧ್ಯಕ್ಷರು. ಎಪ್ಪತ್ತೇಳರ ಹರೆಯದ ಡಾ.ಜೋಶಿಯವರ ಬದುಕು, ಅಧ್ಯಯನ ಸಾಗಿ ಬಂದ ಬಗೆ ಬಹುವಿಸ್ತಾರವಾದುದು. ಅವರೊಡನೆ ನಡೆಸಿದ ಮಾತುಕತೆಯ ಆಯ್ದಭಾಗ ಇಲ್ಲಿದೆ.

***

ತತ್ತ್ವಶಾಸ್ತ್ರದ ಆಸಕ್ತಿ, ಯಕ್ಷಗಾನದ ಪ್ರೀತಿಯ ಕಡೆಗೆ ನೀವು ನಡೆದು ಬಂದ ದಾರಿಯ ಬಗ್ಗೆ ಕೇಳುವ ಕುತೂಹಲ..

ಕಾರ್ಕಳದ ಮಾಳ ಎಂಬ ಒಂದು ದಟ್ಟ ಹಸಿರಿನ ಸುಗ್ರಾಮದಲ್ಲಿ ನಾನು ಹುಟ್ಟಿದ್ದು. ಅಪ್ಪ ನಾರಾಯಣ ಜೋಶಿ ವಾಗ್ಮಿಗಳು. ಹಾಗಾಗಿ ಮನೆಯಲ್ಲಿಯೇ ಓದು, ಸಂವಾದ, ಕಲಿಕೆಯ ವಾತಾವರಣವಿದ್ದುದರಿಂದ ಈ ಹಾದಿಗೆ ಬರುವುದು ಸುಲಭವಾಯಿತೇನೋ. ಶಾಲಾಶಿಕ್ಷಣದಲ್ಲಿ ನಾನು ಮುಂದುವರೆದು ಉದ್ಯೋಗಸ್ಥನಾದೆ. ವೈದಿಕ ಆಚರಣೆಗಳಲ್ಲಿ ಬರುವ ಮಂತ್ರಗಳ ಬಗ್ಗೆ ಕುತೂಹಲ ತಾಳಿ ಅವುಗಳ ಅರ್ಥ ತಿಳಿದುಕೊಳ್ಳುವ ಪ್ರಯತ್ನವನ್ನು ಬಾಲ್ಯದಲ್ಲಿ ಮಾಡಿದೆ. ಜೊತೆಗೆ ಸಂಸ್ಕೃತ ಭಾಷೆಯ ಕಲಿಕೆ ಸಹಕಾರಿಯಾಯಿತು. ಕಾರ್ಕಳದಲ್ಲಿರುವಾಗ ಒಮ್ಮೆ ಗ್ರಂಥಾಲಯದಲ್ಲಿ ವಾಣಿಜ್ಯ ಪಠ್ಯವೊಂದನ್ನು ಹುಡುಕುವಾಗ ತತ್ತ್ವಶಾಸ್ತ್ರದ ಪುಸ್ತಕವೊಂದು ಕೈಗೆ ಸಿಕ್ಕಿತು. ಲಕ್ಷ್ಮೀಪುರಂ ಶ್ರೀನಿವಾಸಾಚಾರ್ಯರು ಬರೆದ ಪುಸ್ತಕವನ್ನು ಮನೆಗೆ ಕೊಂಡುಹೋಗಿ ಓದಲುಶುರು ಮಾಡಿದೆ. ಮೊದಲ ಓದಿಗೆ ಹೆಚ್ಚೇನೂ ದಕ್ಕಲಿಲ್ಲವಾದರೂ, ಕುತೂಹಲವು ಮತ್ತಷ್ಟು ಅರಳಿ, ಇದೇ ದಿಸೆಯಲ್ಲಿ ಓದು ಮುಂದುವರೆಯಿತು. ಹೀಗೆ ನಮ್ಮ ದೇಶದ ತತ್ತ್ವಶಾಸ್ತ್ರ ಕೃತಿಗಳು, ವಿದೇಶದಲ್ಲಿರುವ ಪರಿಕಲ್ಪನೆಗಳು, ಮಾರ್ಕ್ಸ್‌ವಾದ, ಗ್ರೀಕ್ ಪುರಾಣ... ಓದಿನ ಯಾತ್ರೆ ದಶಕಗಳ ಕಾಲ ನಿರಂತರವಾಗಿ ಸಾಗಿತು. ಈ ದೀರ್ಘ ಬೆಂಬತ್ತುವಿಕೆಯ ಫಲವಾಗಿ ನಾನು ಪ್ರೊ.ಎಂ.ಎ. ಹೆಗಡೆ ಅವರ ಜೊತೆಯಾಗಿ ‘ಭಾರತೀಯ ತತ್ತ್ವಶಾಸ್ತ್ರ ಪ್ರವೇಶ’ ಎಂಬ ಪುಸ್ತಕ ಬರೆಯುವುದು ಸಾಧ್ಯವಾಯಿತು.

ತತ್ತ್ವಶಾಸ್ತ್ರ ಎಂಬುದು ಒಂದು ವಿಷಯವಲ್ಲ. ಅದು ಜೀವನವನ್ನು ನೋಡುವ ಒಂದು ವಿಧಾನ. ಪ್ರತಿಯೊಬ್ಬನೂ ತತ್ತ್ವಜ್ಞಾನಿಯೇ ಆಗಿರುತ್ತಾನೆ. ಯಕ್ಷಗಾನವೆನ್ನುವುದು ಜನಪ್ರಿಯ ವೇದಾಂತದ ಒಂದು ಸ್ವರೂಪ. ಅರ್ಥಗಾರಿಕೆಯಲ್ಲಿ ಹಾಸ್ಯಗಾರ ದೇವರನ್ನು ತಮಾಷೆ ಮಾಡುತ್ತಾನೆ. ಬಹುಭಾಷೆ, ಗಾದೆ, ಕತೆಗಳು ಸೇರಿಕೊಂಡು ಅದೊಂದು ತತ್ತ್ವಜ್ಞಾನವನ್ನು ಹೇಳಬಲ್ಲಂಥದ್ದು. ‌ತತ್ತ್ವಶಾಸ್ತ್ರವನ್ನು ಸಾಮಾನ್ಯವಾಗಿ ಕಷ್ಟಕರ ವಿಷಯ ಎಂದೋ, ಮುಪ್ಪಿನ ಕಾಲದಲ್ಲಿ ಓದಬೇಕಾದ ಪುಸ್ತಕವೆಂದೋ ದೂರ ಇಡುವುದುಂಟು. ಆದರೆ ತತ್ವಜ್ಞಾನ ಬದುಕಿಗೆ ತೀರ ಹತ್ತಿರವಾದ ವಿಚಾರ. ಅದರ ಕುರಿತ ಆಸಕ್ತಿ ಯೌವ್ವನದಲ್ಲೇ ಮೂಡಿದರೆ, ಅರಿತ ವಿಚಾರವನ್ನು ಅನ್ವಯಿಸಿಕೊಳ್ಳಲು, ಪರೀಕ್ಷಿಸಿಕೊಳ್ಳಲು ಜೀವನದಲ್ಲಿ ಬಹಳಷ್ಟು ದೀರ್ಘ ಸಮಯವು ಲಭಿಸುತ್ತದೆ. ಭಾರತೀಯರು ಹೊಂದಿರುವ ತತ್ತ್ವಜ್ಞಾನದ ಅರಿವು ವಿಸ್ತಾರವಾದುದು. ಅದನ್ನು ಜನಪ್ರಿಯ ರೂಪದಲ್ಲಿ ಯಕ್ಷಗಾನವು ಜನರಿಗೆ ಕೊಡುತ್ತದೆ.

ಭಾರತೀಯ ಇತರ ಕಲಾಪ್ರಕಾರಗಳ ಕಡೆಗೂ ನಿಮ್ಮ ಆಸಕ್ತಿ ವ್ಯಾಪಿಸಿದ್ದು ಹೇಗೆ?
ಭಾರತೀಯ ರಂಗಭೂಮಿಯ ಅಗಾಧತೆಯನ್ನು ಅರ್ಥಮಾಡಿಕೊಳ್ಳುವುದು ಸರಳವಲ್ಲ. ಯಕ್ಷಗಾನ ಸರ್ವಶ್ರೇಷ್ಠ ಕಲೆ ಎಂದು ನಾವು ಹೇಳುವಾಗ, ಅಸ್ಸಾಂನಿಂದ ಹಿಡಿದು ದಕ್ಷಿಣ ಭಾರತದ ತುದಿಯವರೆಗೆ ಹರಡಿಕೊಂಡಿರುವ ಕಲಾಪ್ರಕಾರಗಳನ್ನು ಒಮ್ಮೆ ಗ್ರಹಿಸಲು ಪ್ರಯತ್ನಿಸಬೇಕು. ಆಂಧ್ರದಲ್ಲಿ ಯಕ್ಷಗಾನದ್ದೇ ರೀತಿಯ ಹತ್ತು ಪ್ರಕಾರಗಳಿವೆ. ಕೂಚಿಪುಡಿ, ಅಂಕಿಯಾ ನಾಟ್ಯಂ, ತಿರುಕೂತ್ತು, ನೀತಿನಾಟಕ, ಕಥಕ್ಕಳಿ, ಮರಾಠಿ ದಶಾವತಾರಿ, ಪ್ರಹ್ಲಾದ ನಾಟಂ, ಭಾಗವತಮೇಳ, ದೊಡ್ಡಾಟ... ಇನ್ನೂ ನೂರಾರು ಬಗೆಗಳು. ಭಾರತವು ಎಷ್ಟು ವೈವಿಧ್ಯಪೂರ್ಣವೋ, ಅಷ್ಟೇ ಪ್ರಮಾಣದಲ್ಲಿ ಒಂದಾಗಿಯೂ ಇದೆ. ಉತ್ತರದಿಂದ ದಕ್ಷಿಣದ ವರೆಗಿನ ಕಲಾಪ್ರಕಾರಗಳ ಸಮಗ್ರ ಅಧ್ಯಯನ ನಡೆಯಬೇಕು. ಕಲೆಯೆಂದರೆ ಜನಜೀವನದ ಉತ್ಪನ್ನ. ಆ ದೃಷ್ಟಿಯಿಂದ ನೋಡಿದ್ರೆ ದಕ್ಕುವ ಜ್ಞಾನವು ಅಪಾರವಾದುದು.

ಯಕ್ಷಗಾನ ಕ್ಷೇತ್ರದಲ್ಲಿ ಇತ್ತೀಚೆಗೆ ಅಗಾಧವಾದ ಬದಲಾವಣೆಗಳು ಕಾಣಿಸಿವೆ. ನಿಮ್ಮ ಅನಿಸಿಕೆಗಳೇನು?
ತಾಳಮದ್ದಳೆಯಾಗಲೀ, ಯಕ್ಷಗಾನವಾಗಲೀ, ಕಾಲದ ದೆಸೆಯಿಂದ ಅನೇಕ ಮಾರ್ಪಾಟುಗಳಿಗೆ ಸಹಜವಾಗಿ ಒಡ್ಡಿಕೊಂಡಿದೆ. ಪ್ರಸಂಗಗಳ ಬಳಕೆ ಜಾಸ್ತಿಯಾಗಿದ್ದು, ಜನರ ಅಪೇಕ್ಷೆಗಳು ಹೆಚ್ಚಾಗಿವೆ. ದೀರ್ಘವಾದ ಪ್ರಸಂಗಗಳನ್ನು ಸಮಯಮಿತಿಯಲ್ಲಿ ನಿರ್ವಹಿಸುವ ಸವಾಲನ್ನು ಬಗೆಹರಿಸುವುದು ಸುಲಭವಲ್ಲ. ಹೀಗೆ ನಿರ್ವಹಿಸುವಾಗ ಮಾಡಿಕೊಳ್ಳಬೇಕಾದ ‘ಎಡಿಟಿಂಗ್’ ಏನೇನು ಎಂಬ ಪೂರ್ವತಯಾರಿಯೊಂದು ಬೇಕಾಗುತ್ತದೆ. ಇದು ರಂಗತಂತ್ರ, ವೇಷಗಾರಿಕೆ, ಬಣ್ಣಗಾರಿಕೆ ಎಲ್ಲದಕ್ಕೂ ಅನ್ವಯಿಸುವಂತಹ ಮಾತು. ಹಾಗೆ ನೋಡಿದರೆ ಇಡೀ ಯಕ್ಷಗಾನ ರಂಗಭೂಮಿಯ ಸಮಸ್ಯೆಯನ್ನು ಅಸಮತೋಲನ ಸಮಸ್ಯೆ ಎನ್ನಬಹುದು.

ಭಾರತೀಯ ಸಾಂಪ್ರದಾಯಿಕ ಕಲೆಗಳು ರೂಪನಿಷ್ಠ ಕಲೆಗಳು. ಶೈಲಿಯನ್ನು ಆಧರಿಸಿ ನಡೆಯುವಂಥವು. ಹಾಗಾದರೆ ಪ್ರಯೋಗಗಳು ಬೇಡವೇ ? ಬೇಕು. ಸಾಂಪ್ರದಾಯಿಕ ಕಲೆಗಳಲ್ಲಿ ಹೊಸತನವು ಸೇರ್ಪಡೆಯಾಗುವಾಗ ಅದು ಹಾಲು ಜೇನಿನಂತೆ ಸೇರಿಕೊಳ್ಳಬೇಕಾಗುತ್ತದೆ. ಈ ಸೌಂದರ್ಯಜ್ಞಾನವನ್ನು ಹೊಸ ತಲೆಮಾರಿಗೆ ತಿಳಿಸುವುದು ಯಾಕೋ ಕಷ್ಟವಾಗಿದೆ. ಈ ಸಮಸ್ಯೆ ಯಕ್ಷಗಾನಕ್ಕೆ ಸೀಮಿತವಾದದ್ದಲ್ಲ. ಸಾಮಾಜಿಕವಾಗಿಯೂ ಸೌಂದರ್ಯಜ್ಞಾನದ ಬಗ್ಗೆ ಒಂದು ಬಗೆಯ ನಿರ್ಲಕ್ಷ್ಯ ಇದಾಗಿದೆ.

ಇದನ್ನು ಬಗೆಹರಿಸುವ ಪ್ರಯತ್ನವನ್ನು ಹೇಗೆ ಮಾಡಬಹುದು?
ಯಕ್ಷಗಾನ ಕ್ಷೇತ್ರದಲ್ಲಿ ತೊಡಗಿಸಿಕೊಂಡ ಎಲ್ಲರೂ, ಅಂದರೆ ಕಲಾವಿದರು, ರಂಗತಜ್ಞರು, ಮೇಳದ ಯಜಮಾನರು, ದೇವಸ್ಥಾನಗಳು ಹಾಗೂ ಸರ್ಕಾರದ ಪ್ರತಿನಿಧಿಗಳು ಸೇರಿ, 25 ವರ್ಷಗಳ ಅವಧಿಗೆ ಒಂದು ವಿಶನ್ ಡಾಕ್ಯುಮೆಂಟ್ ಸಿದ್ಧಪಡಿಸಬೇಕು. ದೇವಸ್ಥಾನಗಳು ಕೂಡ ಹಣಸಂಗ್ರಹಕ್ಕೆ ಸೀಮಿತಗೊಳ್ಳದೇ ಕಲಾನೀತಿ ರೂಪಿಸಿಕೊಳ್ಳಬೇಕು. ಎಲ್ಲ ಮೇಳಗಳಿಗೆ ಅನ್ವಯವಾಗುವ ಸಾಮಾನ್ಯ ನಿಯಮವೊಂದನ್ನು ರೂಪಿಸಬೇಕು. ಇಂದು ಯಕ್ಷಗಾನದ ಪ್ರಸಿದ್ಧಿ ಗಡಿಗಳನ್ನು ಮೀರಿ ಸಾಕಷ್ಟು ವಿಸ್ತರಿಸಿದೆ. ಹಾಗಿದ್ದರೆ ವಿದೇಶಗಳಲ್ಲಿ ನಮ್ಮ ಕಲೆಯನ್ನು ಪ್ರಸ್ತುತಪಡಿಸುವಾಗ, ಅವುಗಳು ಹೇಗಿರಬೇಕು? ಅದು ನಮ್ಮಕಲೆಯ ವರ್ಚಸ್ಸನ್ನು ವೃದ್ಧಿಸಿ ಪ್ರಸ್ತುತಪಡಿಸಬೇಕು ಅಲ್ಲವೇ? ಅಲ್ಲಿನ ಪ್ರೇಕ್ಷಕರು ಅದನ್ನು ಭಾರತದ ಕಲೆಯೆಂದು ಗುರುತಿಸುತ್ತಾರೆ. ಆ ಜವಾಬ್ದಾರಿ ಯಕ್ಷಗಾನ ಕ್ಷೇತ್ರದಲ್ಲಿರುವ ಎಲ್ಲರ ಹೆಗಲ ಮೇಲೂ ಇದೆ.

ಯಕ್ಷಗಾನಕ್ಕೆ ಭಾಗವತರಿರುವಾಗ ಸಂಪ್ರದಾಯವು ನಿರ್ದೇಶಕನ ಸ್ಥಾನದಲ್ಲಿರುತ್ತದೆ. ಆದರೆ ಇಂದು ಪರಿಸ್ಥಿತಿ ಬದಲಾಗಿದೆ. ಚೌಕಿ, ವೇಷ, ಬಣ್ಣಗಾರಿಕೆ, ಅರ್ಥಗಾರಿಕೆ ಸೇರಿದಂತೆ ಈ  ರಂಗಭೂಮಿಯ ಎಲ್ಲ ತತ್ತ್ವಗಳನ್ನು ಅರಿತ, ಕಲಾನಿಷ್ಠೆಯಿರುವ ಒಂದು ನಿರ್ದೇಶನ ವ್ಯವಸ್ಥೆ ಬೇಕಾಗಿದೆ. ಅಂತರರಾಷ್ಟ್ರೀಯ ಗುಣಮಟ್ಟಕ್ಕೆ ತಕ್ಕಂತಿರುವ ಒಂದು ಸಮಗ್ರ ಆರ್ಕೈವ್ಸ್‌ ಮಾಡುವುದರಿಂದ, ಮಲ್ಟಿ ಮೀಡಿಯಾ ಸ್ಟೋರೇಜ್ ರೂಪಿಸುವುದರಿಂದ ಹೊಸಬರಿಗೆ ಅದನ್ನು ಕಲಿಯಲು ಸುಲಭವಾಗುತ್ತದೆ.  ಇಂದಿನ ಯುವ ಕಲಾವಿದರು ಹೊಸದನ್ನು ಕಲಿಯುವ ಉತ್ಸಾಹದಲ್ಲಿದ್ದಾರೆ. ಅವರು ಇತರ ಕಲಾಪ್ರಕಾರಗಳನ್ನು ನೋಡುವುದಕ್ಕೆ ಅವಕಾಶಗಳನ್ನು ಕಲ್ಪಿಸಬಹುದು. ಅಂದರೆ ಕಥಕ್ಕಳಿಯನ್ನು ನೋಡಿ, ಆ ಕಲಾಪ್ರಕಾರವನ್ನು ಗಮನಿಸಬೇಕೇ ಹೊರತು, ರಂಗಸ್ಥಳಕ್ಕೇ ಅದನ್ನು ನೇರವಾಗಿ ತರುವುದಲ್ಲ. ಈ ಅಗೋಚರ ಗೆರೆಯೊಂದನ್ನು ಕಲಾವಿದ ಅರ್ಥ ಮಾಡಿಕೊಳ್ಳಬೇಕು

ನಿಮ್ಮ ಸಿಟ್ಟು ಮತ್ತು ವ್ಯಂಗ್ಯದ ಬಗ್ಗೆಯೂ ಮಾತುಗಳನ್ನು ಕೇಳಿದ್ದುಂಟು...
ನನ್ನನ್ನು ಚೆನ್ನಾಗಿ ಬಲ್ಲವರಿಗೆ ಇದರ ಮೂಲ ತಿಳಿದಿದೆ. ವ್ಯ‌ಕ್ತಿಗಿಂತ ಕಲಾಪ್ರಕಾರ ಮುಖ್ಯ, ಕಲಾಜ್ಞಾನವು ಮುಖ್ಯ ಎಂದು ನಂಬಿದ ಎಲ್ಲರನ್ನೂ ಹೀಗೆಯೇ ಹೇಳುತ್ತಾರೇನೋ. ಯಾರು ಸರಿ ಎನ್ನುವುದಕ್ಕಿಂತ ಯಾವುದು ಸರಿ ಎಂಬ ಉದ್ದೇಶದಿಂದ ನಾನು ಜನರೊಡನೆ ಮಾತನಾಡುತ್ತೇನೆ. ಹಾಗಾಗಿ ನನ್ನ ಮಾತುಗಳು ಅಪ್ರಿಯವೆನಿಸಿರಬಹುದು. ಈ ಪುರಾತನವಾದ, ಅಗಾಧ ಸ್ವರೂಪಿಯಾದ ಕಲೆಯಾಗಿರುವ ಈ ಯಕ್ಷಗಾನದ ಮುಂದೆ ನಾನೊಬ್ಬ ಸಾಮಾನ್ಯ ವ್ಯಕ್ತಿ.

ಈ ನಿರಂತರ ಓಡಾಟ, ಅಧ್ಯಯನದ ಹಿನ್ನೆಲೆಯಲ್ಲಿರುವ ಸ್ಫೂರ್ತಿಯೇನು?
ನನ್ನ ಪತ್ನಿ ಸುಚೇತಾ ನನ್ನ ಬದುಕನ್ನು ಒಪ್ಪ ಓರಣಗೊಳಿಸಲು ಸದಾ ಸಹಾಯ ಮಾಡಿದವಳು. ಕ್ರೀಡೆ, ಕೃಷಿ, ಓದು, ಬರಹ, ತಾಳಮದ್ದಳೆಗಳು, ಯಕ್ಷಗಾನ ಪ್ರದರ್ಶನಗಳೆಂದು ನನ್ನ ಓಡಾಟ ನಿರಂತರವಾಗಿರುವಾಗ ಅಂತಂಗದ ಸ್ರೋತವಾಗಿ ಅವಳು ನನ್ನೊಡನೆ ನಿಂತಿದ್ದಾಳೆ. ನಾನು ಉಪನ್ಯಾಸಕನಾಗಿ ಕೆಲಸ ಮಾಡಿದ ಬೆಸೆಂಟ್ ಶಿಕ್ಷಣ ಸಂಸ್ಥೆಯು ನನ್ನನ್ನು ಪೋಷಿಸಿದೆ. ಇನ್ನಷ್ಟು ಅಧ್ಯಯನ ಮಾಡಬೇಕಿತ್ತು, ಕೆಲಸಗಳನ್ನು ನಿರ್ವಹಿಸಬೇಕಿತ್ತು ಎಂಬ ಜ್ಞಾನ–ಹಸಿವು ಸದಾ ಇದ್ದದ್ದೇ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು