ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದ್ವೇಷಮುಕ್ತ ಸನ್ಯಾಸಿಗಳಿಂದ ಸಮಾಜ ನಿರ್ಮಾಣ: ಯೆಡತೊರೆ ಶ್ರೀಗಳು

ಯಡತೊರೆ ಶ್ರೀಯೋಗಾನಂದೇಶ್ವರ ಸರಸ್ವತೀ ಮಠ ಶ್ರೀಗಳ ಅಭಿಮತ
Last Updated 17 ಫೆಬ್ರುವರಿ 2021, 4:14 IST
ಅಕ್ಷರ ಗಾತ್ರ

ಮೈಸೂರು ಜಿಲ್ಲೆ ಕೃಷ್ಣರಾಜನಗರದಲ್ಲಿರುವ ಯಡತೊರೆ ಶ್ರೀಯೋಗಾನಂದೇಶ್ವರ ಸರಸ್ವತೀ ಮಠ ಸುಮಾರು ಎಂಟು ಶತಮಾನಗಳಷ್ಟು ಪ್ರಾಚೀನವಾದುದು; ಶಂಕರಾಚಾರ್ಯ ಪರಂಪರೆಗೆ ಸೇರಿರುವಂಥದ್ದು. ಪ್ರಸ್ತುತ ಪೀಠಾಧೀಶರಾಗಿರುವ ಶಂಕರಭಾರತೀ ಮಹಾಸ್ವಾಮಿಗಳ ಉತ್ತರಾಧಿಕಾರಿ ಶಿಷ್ಯಸ್ವೀಕಾರ ಮಹೋತ್ಸವ ಕೃಷ್ಣರಾಜನಗರ ತಾಲೂಕಿನ ಜಪದ ಕಟ್ಟೆಯಲ್ಲಿ ಇಂದು ನಡೆಯಲಿದೆ. ಈ ಸಂದರ್ಭದಲ್ಲಿ ಸ್ವಾಮಿಗಳು ಪ್ರಜಾವಾಣಿಗೆ ನೀಡಿರುವ ಸಂದರ್ಶನ ಇಲ್ಲಿದೆ...

1. ಪ್ರಸ್ತುತ ಸಮಾಜಕ್ಕೆ ಸನ್ಯಾಸಿಗಳ ಆವಶ್ಯಕತೆ ಹೇಗೆ?

ನಮ್ಮ ಸನಾತನ ಧರ್ಮಾವಲಂಬಿಗಳು ನಮ್ಮ ಆರ್ಷೇಯವಾದ ಗ್ರಂಥಗಳ ಬಗ್ಗೆ ಅಪಾರವಾದ ಶ್ರದ್ಧಾನಂಬಿಕೆಗಳನ್ನು ಇಟ್ಟುಕೊಂಡು ಬಂದಿದ್ದಾರೆ. ಹಾಗೆಯೇ ಭಗವದ್ಗೀತೆ ಮೊದಲಾದಂತಹ ಶ್ರೇಷ್ಠವಾದ ಉಪದೇಶಗಳ ಬಗ್ಗೆಯೂ ಅಪಾರವಾದ ಶ್ರದ್ಧಾಭಕ್ತಿಗಳನ್ನು ಹೊಂದಿದ್ದಾರೆ. ಭಗವದ್ಗೀತೆಯಲ್ಲಿ ಭಗವಂತನು ಧರ್ಮದ ಪುನರುದ್ಧಾರಕ್ಕಾಗಿ ಕಾಲಕಾಲಕ್ಕೆ ನಾನು ಅವತಾರವನ್ನು ಮಾಡುತ್ತೇನೆ ಎಂದು ತಿಳಿಸಿದಂತೆ ಭಗವಂತನು ಬೇರೆ ಬೇರೆ ಅವತಾರಗಳನ್ನು ತಾಳಿದ್ದನ್ನು ಕೂಡ ನಾವು ಕಾಣಬಹುದು. ಈ ವಿಷಯದಲ್ಲೂ ನಮಗೆಲ್ಲರಿಗೂ ನಂಬಿಕೆ ಇದೆ.

ಅದರಂತೆ ಸುಮಾರು ಸಾವಿರದ ಇನ್ನೂರ ಮೂವತ್ತು ವರ್ಷಗಳ ಹಿಂದೆ ಭಗವಂತನು ಶಂಕರಾಚಾರ್ಯರ ರೂಪದಲ್ಲಿ ಅವತಾರವನ್ನು ಮಾಡಿ, ಅದರಲ್ಲೂ ಪರಮಹಂಸ ಪರಿವ್ರಾಜಕರಾಗಿ ಸಮಾಜವನ್ನು ಉದ್ಧರಿಸಿರುವುದು ಐತಿಹಾಸಿಕ ಸತ್ಯ. ಅಷ್ಟೇ ಅಲ್ಲದೆ, ಮುಂದಿನ ದಿನಗಳಲ್ಲಿಯೂ ನಮ್ಮ ಸಮಾಜಕ್ಕೆ ಸನ್ಯಾಸಿಗಳು ಸದಾ ಮಾರ್ಗದರ್ಶನ ನೀಡಬೇಕು ಎನ್ನುವುದಕ್ಕಾಗಿ ಮಠ ಪರಂಪರೆಯನ್ನು ಆರಂಭಿಸಿದರು. ಪರಮಹಂಸ ಪರಿವ್ರಾಜಕರು ರಾಗದ್ವೇಷಾದಿಗಳಿಂದ ಮುಕ್ತರಾಗಿರುವುದರಿಂದ ಸಮಾಜದ ಪ್ರತಿಯೊಬ್ಬನ ಬಗ್ಗೆಯೂ ಮತ್ತು ಅವನ ಏಳಿಗೆಯ ಬಗ್ಗೆಯೂ ಯಾವುದೇ ಪೂರ್ವಗ್ರಹವಿಲ್ಲದೆ ಮಾರ್ಗದರ್ಶನವನ್ನು ಮಾಡಬಹುದಾಗಿದೆ.

ಸ್ವತಃ ತನಗೆ ಯಾವ ಅಪೇಕ್ಷೆಯೂ ಇಲ್ಲದೇ ಇರುವುದರಿಂದಲೂ ಸಮಾಜಕ್ಕೆ ಎಲ್ಲ ವಿಧವಾದ ಮಾರ್ಗದರ್ಶನಗಳನ್ನು ಮಾಡಬಹುದಾಗಿದೆ. ಸಮಾಜದ ಪ್ರತಿಯೊಬ್ಬನಿಗೂ ತನ್ನ ಶ್ರೇಯಸ್ಸನ್ನು ಕಂಡುಕೊಳ್ಳುವುದಕ್ಕೆ ವ್ಯಕ್ತಿತ್ವವನ್ನು ವಿಕಾಸ ಮಾಡಿಕೊಳ್ಳುವುದಕ್ಕೆ ಇಂತಹ ಸನ್ಯಾಸಿಗಳ ಆವಶ್ಯಕತೆ ಸದಾಕಾಲವೂ ಇರುತ್ತದೆ.

2. ಶಂಕರಾಚಾರ್ಯರ ತತ್ತ್ವಗಳ ಆಧಾರದಮೇಲೆ ವ್ಯಕ್ತಿನಿರ್ಮಾಣ ಹಾಗೂ ಸಮಾಜದ ನಿರ್ಮಾಣ ಹೇಗೆ?

ಉಪನಿಷತ್ತುಗಳು ನೀಡಿರುವ ಉಪದೇಶಗಳ ಉದ್ದೇಶವೇ ಪ್ರತಿಯೊಬ್ಬ ವ್ಯಕ್ತಿಯ ವ್ಯಕ್ತಿತ್ವ ನಿರ್ಮಾಣ. ಶಂಕರಾಚಾರ್ಯರು ಇದನ್ನು ಮನಗಂಡು ವ್ಯಕ್ತಿತ್ವನಿರ್ಮಾಣ ಹಾಗೂ ಸಮಾಜನಿರ್ಮಾಣವನ್ನು ಮಾಡುವುದಕ್ಕೆ ಉಪನಿಷತ್ತುಗಳ ಹೇಳುವಂತಹ ಇಂತಹ ವಿಚಾರಗಳನ್ನು ಸಮಾಜದ ಪ್ರತಿಯೊಬ್ಬರಿಗೂ ತಲುಪಿಸುವುದಕ್ಕಾಗಿ ಭಾಷ್ಯಗ್ರಂಥಗಳು, ಪ್ರಕರಣಗ್ರಂಥಗಳು, ಸ್ತೋತ್ರಗ್ರಂಥಗಳನ್ನು ರಚಿಸಿದರು. ಇವುಗಳಲ್ಲಿ ವ್ಯಕ್ತಿದೃಷ್ಟಿಯಿಂದ ಹಾಗೂ ಸಮಾಜದ ದೃಷ್ಟಿಯಿಂದ ಉಪನಿಷತ್ತುಗಳು ಹೇಳಿದ ವಿಚಾರಗಳೇ ತುಂಬಿವೆ.

ಶಂಕರಾಚಾರ್ಯರು ಹೊಸದಾಗಿ ಯಾವ ತತ್ತ್ವವನ್ನೂ ತಿಳಿಸುವುದಕ್ಕೆ ಹೋಗಲಿಲ್ಲ. ‘ಅದ್ವೈತ’ – ಈ ಒಂದು ತತ್ತ್ವದ ಪರಿಚಯವು ಪ್ರತಿಯೊಬ್ಬ ಪ್ರಜೆಗೂ ಆದಲ್ಲಿ ಆಗ ಸಹಜವಾಗಿಯೂ ವ್ಯಕ್ತಿಯಲ್ಲಿಬದಲಾವಣೆ ಬರುವುದನ್ನು ಇತಿಹಾಸದಲ್ಲೂ ಕಾಣುತ್ತೇವೆ, ಇವತ್ತೂ ಕಾಣುತ್ತೇವೆ. ಹೀಗಾಗಿ ಶಂಕರಾಚಾರ್ಯರು ಈ ತತ್ತ್ವದ ಆಧಾರದ ಮೇಲೆ ವ್ಯಕ್ತಿನಿರ್ಮಾಣ ಹಾಗೂ ಸಮಾಜದ ನಿರ್ಮಾಣವನ್ನು ಮಾಡುವುದರಲ್ಲಿ ಸಫಲರಾದರು ಎಂದು ಇತಿಹಾಸ ತಿಳಿಸುತ್ತದೆ. ಇದೇ ದಾರಿಯನ್ನು ನಾವು ಇಂದಿನ ಸಮಾಜಕ್ಕೆ ತಿಳಿಸುವುದು ಔಚಿತ್ಯರ್ಪೂಣವಾಗುತ್ತದೆ.

3. ಉತ್ತರಾಧಿಕಾರಿ ಆಯ್ಕೆಯು ಯಾವ ಆಧಾರದ ಮೇಲೆ ನಡೆಯಿತು?

ನಮ್ಮ ಆರಾಧ್ಯದೇವರ ಮತ್ತು ನಮ್ಮ ಗುರುಗಳ ಪ್ರೇರಣೆಯಂತೆ ನಡೆಯಿತು.

4. ಶ್ರೀಮಠದ ಮುಂದಿನ ಯೋಜನೆಗಳೇನು?

ಯೋಗಾನಂದೇಶ್ವರ ಸರಸ್ವತೀ ಮಠವು ತನ್ನ ಎಲ್ಲ ಧಾರ್ಮಿಕ ಚಟುವಟಿಕೆಗಳೊಂದಿಗೆ ವೇದಾಂತಭಾರತಿಯ ಆಶ್ರಯದಲ್ಲಿ ಆಧ್ಯಾತ್ಮಿಕ ಹಾಗೂ ಸಾಮಾಜಿಕ ಕಾರ್ಯಗಳನ್ನು ಮಾಡುತ್ತ ಬರುತ್ತಿದೆ.

ಶಂಕರಾಚಾರ್ಯರು ತಮ್ಮ ಪ್ರಶ್ನೋತ್ತರ ರತ್ನಮಾಲಿಕಾದಲ್ಲಿ ಉಪದೇಶಿಸಿದಂತಹ ಉಪದೇಶಗಳ ಸಂಗ್ರಹವಾದ ವಿವೇಕದೀಪಿನಿಯಲ್ಲಿ ತಿಳಿಸಿದ ನೀತಿಗಳನ್ನು ವ್ಯಾಪಕವಾಗಿ ವಿದ್ಯಾರ್ಥಿಗಳಿಗೆ ತಿಳಿಸುವುದನ್ನು ದೇಶಾದ್ಯಂತ ನಡೆಸುವುದು ಹಾಗೂ ರಾಷ್ಟ್ರೀಯ ಭಾವೈಕ್ಯವನ್ನು ಉಂಟುಮಾಡುವಂತಹ ಶಂಕರಾಚಾರ್ಯರ ಸ್ತೋತ್ರಸಾಹಿತ್ಯದಪರಿಚಯವನ್ನು ವ್ಯಾಪಕವಾಗಿ ಮಾಡುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT