ಭಾನುವಾರ, ಸೆಪ್ಟೆಂಬರ್ 26, 2021
21 °C
ಮುಕ್ತ ಹರಿವಿನ ಪಾಪನಾಶಿನಿ: ಮುಂದಿನ ಪೀಳಿಗೆಯು ಖುಷಿಯಿಂದ ಕಾಣಲು ಬಿಡಲಾರೆವೇ?

ಸಾಗರಮಾಲಾ: ಅಘನಾಶಿನಿ ಜೀವ ಸಂಕುಲಕ್ಕೂ ಕುತ್ತು

ರೋಹಿಣಿ ನಿಲೇಕಣಿ Updated:

ಅಕ್ಷರ ಗಾತ್ರ : | |

ಅತ್ಯಂತ ಅಮೂಲ್ಯ ರತ್ನದಂತಹ ಈ ನದಿ 124 ಕಿಲೊ ಮೀಟರ್‌ ಹಾದಿಯನ್ನು ಅಡೆತಡೆಗಳಿಲ್ಲದೆ ಕ್ರಮಿಸುತ್ತದೆ. ಇದು ಬಹುಶಃ ಪಶ್ಚಿಮ ಘಟ್ಟ ಸಾಲುಗಳಷ್ಟೇ ಹಳೆಯದು, ಹಿಮಾಲಯ ಪರ್ವತ ಶ್ರೇಣಿಗಿಂತ ಹಿಂದಿನದು. ಈ ನದಿಯ ಹರಿವು ಅಷ್ಟೇನೂ ದೀರ್ಘವಲ್ಲದಿದ್ದರೂ, ಸನಿಹದಲ್ಲೇ ಇರುವ ತುಸು ದೊಡ್ಡದಾದ ಕಾಳಿ ಹಾಗೂ ಶರಾವತಿ ನದಿಗಳಲ್ಲಿ ಇರುವಷ್ಟು ನೀರು ಇದರಲ್ಲೂ ಇದೆ. ಇದು ಶಿರಸಿ ಪಟ್ಟಣದ ಶಂಕರಹೊಂಡದಲ್ಲಿ ಜನಿಸಿ, ಕಣಿವೆಗಳ ಮೂಲಕ ಜೌಗು ನೆಲ, ಪುರಾತನ ಅರಣ್ಯ ಹಾಗೂ ಕೃಷಿ ಜಮೀನುಗಳ ಮೂಲಕ ಶುಭ್ರವಾಗಿ, ಅಂಕುಡೊಂಕಾಗಿ ಸಾಗಿ ಕುಮಟಾ ಬಳಿ ಅರಬ್ಬಿ ಸಮುದ್ರ ಸೇರುತ್ತದೆ. ನದಿಯ ಅಳಿವೆಯಲ್ಲಿ ಚಿಪ್ಪಿನ ಜೀವಿಗಳು, ಏಡಿಗಳು, ಕಾಂಡ್ಲಾ ಸಸ್ಯ, ಡಜನ್ನುಗಟ್ಟಲೆ ಬಗೆಬಗೆಯ ಮೀನುಗಳು ಇವೆ.

ಇಳಿಜಾರಿನ ಮೂಲಕ ಸಾಗುವ ಇದು ಉಂಚಳ್ಳಿ ಜಲಪಾತದಂತಹ ಸೌಂದರ್ಯಗಳನ್ನು ಸೃಷ್ಟಿಸಿದೆ. ಈ ಜಲಪಾತದ ಬಳಿ ಹುಣ್ಣಿಮೆಯ ದಿನ ‘ಚಂದ್ರಬಿಲ್ಲು’ ಕಾಣಬಹುದು (ಹುಣ್ಣಿಮೆಯ ಬೆಳಕಿನಲ್ಲಿ ಕಾಣಿಸುವ ಕಾಮನಬಿಲ್ಲು). ಇದು ಅಘನಾಶಿನಿ ನದಿ– ಅಂದರೆ, ಪಾಪನಾಶಿನಿ. ಈ ನದಿ ಮುಕ್ತವಾಗಿ ಹರಿಯುತ್ತಿದೆ, ಕಲುಷಿತಗೊಂಡಿಲ್ಲ, ಸಹಸ್ರಾರು ವರ್ಷಗಳಿಂದಲೂ ತನ್ನ ಸಹಜ ಹರಿವನ್ನು ಕಾಯ್ದುಕೊಂಡಿದೆ. ಹಾಗಾಗಿ ಇದು ಬಹಳ ವಿಶಿಷ್ಟ ನದಿ. ದೇಶದ ಬಹುತೇಕ ನದಿಗಳು ಮುಕ್ತವಾಗಿ ಹರಿಯುತ್ತಿಲ್ಲ; ಅವುಗಳಿಗೆ ಅಡ್ಡವಾಗಿ ಅಣೆಕಟ್ಟೆ ನಿರ್ಮಿಸಲಾಗಿದೆ, ಕಾಲುವೆಗಳ ಮೂಲಕ ಅವು ಹರಿಯುವಂತೆ ಮಾಡಲಾಗಿದೆ. ­ಅನೇಕ ನದಿಗಳ ಜಲಾನಯನ ಪ್ರದೇಶಗಳು ಹಾಗೂ ಅವುಗಳಿಗೆ ನೀರು ತರುವ ಕಾಲುವೆಗಳು ಒತ್ತುವರಿಯಾಗಿವೆ. ಹಲವು ನದಿಗಳು ಈಗ ಸಮುದ್ರ ಸೇರುವ ಸ್ಥಿತಿಯಲ್ಲೂ ಇಲ್ಲ. ಜಲಚಕ್ರ ಮತ್ತು ಮುಂಗಾರು ಮಳೆಯುಸಮುದ್ರ ಸೇರುವ ನದಿಗಳನ್ನು ಅವಲಂಬಿಸಿವೆ. ನೀರಿನ ವಿಚಾರದಲ್ಲಿ ನಮ್ಮಲ್ಲಿರುವ ಭ್ರಮೆಗಳು ಈ ಎಲ್ಲ ವಾಸ್ತವಗಳನ್ನು ಒಪ್ಪಿಕೊಳ್ಳದಂತೆ ಮಾಡುತ್ತಿವೆ, ನಮ್ಮ ನದಿಗಳ ಹರಿವಿನ ಉದ್ದಕ್ಕೂ ಮೂಲಸೌಕರ್ಯ ನಿರ್ಮಿಸುವುದನ್ನು ನಾವು ಮುಂದುವರಿಸಿದ್ದೇವೆ.

ತಾನು ಹರಿದು ಸಾಗುವ ಹಾದಿಯ ಅಕ್ಕಪಕ್ಕದಲ್ಲಿ ಇರುವ ಜನರಿಗೆ ಅಘನಾಶಿನಿಯು ಜೀವನೋಪಾಯ ಕಲ್ಪಿಸಿದೆ. ಇಂದಿಗೂ ಅಂದಾಜು ಎರಡು ಲಕ್ಷ ಕುಟುಂಬಗಳು ಈ ನದಿಯ ಅಳಿವೆಯನ್ನು ನೇರವಾಗಿ ಅವಲಂಬಿಸಿವೆ– ಪ್ರೋಟೀನ್‌ ಸಮೃದ್ಧವಾಗಿರುವ ಚಿಪ್ಪಿನ ಜೀವಿಗಳು, ಏಡಿಗಳು ಮತ್ತು ಸೀಗಡಿಗಳಿಗೆ ಇದು ಪ್ರಸಿದ್ಧ. ನದಿಗುಂಟ ಇರುವ ಪವಿತ್ರ ಕ್ಷೇತ್ರಗಳಿಗೆ ಬರುವ ಯಾತ್ರಿಕರ ಪಾಲಿಗೆ ಅಘನಾಶಿನಿಯು ಆಧ್ಯಾತ್ಮಿಕ ತೃಪ್ತಿ ನೀಡುತ್ತಾಳೆ. ಪ್ರವಾಸಿಗರು ಮತ್ತು ಸಂಶೋಧಕರ ಪಾಲಿಗೆ ಈ ನದಿ, ಅನೇಕ ವೈಶಿಷ್ಟ್ಯಗಳನ್ನು ತೋರಿಸುತ್ತದೆ. ಯಾವತ್ತೂ ಕೊಡಲಿ ಏಟು ಕಾಣದ ಇಲ್ಲಿನ ಪವಿತ್ರ ಕಾಡುಗಳು, ದಟ್ಟವಾದ ಮ್ಯಾಂಗ್ರೋವ್‌ಗಳು, ಅಳಿವಿನಂಚಿನಲ್ಲಿ ಇರುವ ಸಿಂಗಳೀಕಗಳು, ಹಾಲಕ್ಕಿಗಳಂತಹ ಆದಿವಾಸಿ ಸಮುದಾಯಗಳು, ಉಪ್ಪಿನಕಾಯಿಯಲ್ಲಿ ಬಳಸುವ ಅಪ್ಪೆ ಮಾವು, ಇಲ್ಲಿನ ಉಪ್ಪು, ಕೀಟ ನಿರೋಧಕ ಕಗ್ಗ ಭತ್ತ... ಇಲ್ಲಿನ ವಿಶೇಷಗಳ ಪಟ್ಟಿಗೆ ಕೊನೆಯಿಲ್ಲ.

ಈ ನದಿಯ ಆಸುಪಾಸಿನಲ್ಲಿ ವಿವಿಧ ಯೋಜನೆಗಳನ್ನು ಜಾರಿಗೊಳಿಸಲು ಆಗಾಗ ಆಲೋಚಿಸಿದ್ದಿದೆ. ಉಪ್ಪು ತಯಾರಿಕೆ ಯೋಜನೆ ರೂಪಿಸಿ, ಬಳಿಕ ಕೈಬಿಡಲಾಯಿತು. ನಂತರ ಜಲವಿದ್ಯುತ್ ಉತ್ಪಾದನಾ ಘಟಕ, ಉಷ್ಣವಿದ್ಯುತ್ ಸ್ಥಾವರ, ಬಂದರು, ನದಿಯ ನೀರನ್ನು ದೂರದ ಪಟ್ಟಣಗಳಿಗೆ ತಿರುಗಿಸುವ ಯೋಜನೆಗಳನ್ನು ರೂಪಿಸಿದ್ದಿದೆ. ಪರಿಸರ ವಿಜ್ಞಾನಿಗಳು, ಆಧ್ಯಾತ್ಮಿಕ ನಾಯಕರು, ಮೀನುಗಾರರು ಸೇರಿದಂತೆ ಎಲ್ಲ ವರ್ಗಗಳ ಜನ ಇವುಗಳನ್ನು ವಿರೋಧಿಸಿ ಬಲವಾದ ಪ್ರತಿಭಟನೆ ದಾಖಲಿಸಿದರು. ಈ ಯೋಜನೆಗಳನ್ನು ಕೈಬಿಡಲಾಯಿತು. ನದಿಯ ಮುಕ್ತ ಹರಿವು ಮುಂದುವರಿಯಿತು.

ಇದನ್ನೂ ಓದಿ... ಸಾಗರಮಾಲಾಕ್ಕೆ ವಿರೋಧ: ಸಂಸದ, ಶಾಸಕಿ ಫೋಟೊಗಳಿಗೆ ಸೆಗಣಿ ಎರಚಿ, ಚಪ್ಪಲಿಯೇಟು

ಈಗ, ಸಾಗರಮಾಲಾ ಯೋಜನೆಯ ಅಡಿ ಬೃಹತ್ತಾದ, ಸರ್ವಋತು ಬಂದರನ್ನು ಈ ನದಿಯ ಅಳಿವೆ ಪ್ರದೇಶದಲ್ಲಿ ನಿರ್ಮಿಸುವ ಪ್ರಸ್ತಾವ ಇದೆ. ಇದು ಈಗಾಗಲೇ ಇರುವ ತದಡಿ ಬಂದರನ್ನು ವಿಸ್ತರಿಸುತ್ತದೆ, ಇದಕ್ಕೆ ಒಟ್ಟು ₹ 40 ಸಾವಿರ ಕೋಟಿ ವೆಚ್ಚ ಮಾಡಲಾಗುತ್ತದೆ.

ರಾಜ್ಯದ 300 ಕಿ.ಮೀ. ಉದ್ದದ ಕರಾವಳಿಯಲ್ಲಿ ಈಗಾಗಲೇ 13 ಬಂದರುಗಳಿವೆ. ಇವುಗಳ ಪೈಕಿ ಮಂಗಳೂರು ಬಂದರು ಹೆಚ್ಚಿನ ಸರಕು ಸಾಗಣೆಯನ್ನು ನಿಭಾಯಿಸುತ್ತದೆ. ಹತ್ತಿರದ ಬಂದರುಗಳನ್ನು ಪೂರ್ಣ ಸಾಮರ್ಥ್ಯದ ಮಟ್ಟಕ್ಕೆ ಬಳಸಿಕೊಳ್ಳದಿರುವಾಗ ತದಡಿ ಬಂದರು ಕಾರ್ಯಸಾಧುವಾಗುತ್ತದೆ ಎಂದು ಸರ್ಕಾರ ಹೇಗೆ ತೀರ್ಮಾನಿಸಿತು ಎನ್ನುವುದು ಸ್ಪಷ್ಟವಾಗಿಲ್ಲ.

ಉತ್ತರಕ್ಕೆ 25 ಕಿ.ಮೀ. ದೂರದಲ್ಲಿ ಬೇಲೆಕೇರಿ ಬಂದರು ಇದೆ. ಕಬ್ಬಿಣದ ಅದಿರು ರಫ್ತು ಮಾಡಲು, ಕಲ್ಲಿದ್ದಲು ಆಮದು ಮಾಡಿಕೊಳ್ಳಲು ಇದನ್ನು ಮೊದಲು ಬಳಸಲಾಗುತ್ತಿತ್ತು. 25 ಕಿ.ಮೀ. ದಕ್ಷಿಣಕ್ಕೆ ಶತಮಾನಗಳಷ್ಟು ಹಳೆಯದಾದ ಹೊನ್ನಾವರ ಬಂದರು ಇದೆ. ಇವೆರಡೂ ಕೊಂಕಣ ರೈಲು ಮಾರ್ಗ ಹಾಗೂ ರಾಷ್ಟ್ರೀಯ ಹೆದ್ದಾರಿಯ ಮೂಲಕ ಉತ್ತಮ ಸಂಪರ್ಕ ಹೊಂದಿವೆ.

ಈ ಬಂದರು ಆರ್ಥಿಕವಾಗಿ ಎಂದಾದರೂ ಲಾಭಕರ ಆಗಲಿದೆಯೇ ಎಂಬುದು ಸ್ಪಷ್ಟವಿಲ್ಲವಾದರೂ, ಪರಿಸರ ಅನುಮತಿ ಪ್ರಕ್ರಿಯೆಗಳು ವೇಗ ಪಡೆದುಕೊಂಡಿವೆ. ಈ ಪ್ರದೇಶದ ನೈಸರ್ಗಿಕ ಸಂಪತ್ತಿನ ಬಗ್ಗೆ ವರದಿಯಲ್ಲಿ ಯಾವ ಅಂಶಗಳು ಬಿಟ್ಟುಹೋಗಿವೆ, ಬಂದರು ನಿರ್ಮಾಣದಿಂದ ಏನೆಲ್ಲ ನಷ್ಟವಾಗುತ್ತದೆ ಎಂಬುದರ ಬಗ್ಗೆ ಮಾಮೂಲಿ ಅಭಿಪ್ರಾಯಗಳು ವ್ಯಕ್ತವಾಗಿವೆ.

ಆದರೆ, ಈ ನದಿ ಹಾಗೂ ಅದರ ಜಲಾನಯನ ಪ್ರದೇಶವು ಸೃಷ್ಟಿಸಿದ ಆರ್ಥಿಕ ಅವಕಾಶಗಳು ಮತ್ತು ಭವಿಷ್ಯಕ್ಕೆ ಅಗತ್ಯವಿರುವ ಅವಕಾಶಗಳನ್ನು ಅದು ಸೃಷ್ಟಿಸಿದ್ದರ ಬಗ್ಗೆ ಸೂಕ್ತ ದಾಖಲೀಕರಣ ನಡೆದಿಲ್ಲ. ಸಹಜ ಸೌಂದರ್ಯ ಹೊಂದಿರುವ ಈ ನದಿ ಪಾತ್ರವನ್ನು ಪರಿಸರ ಪ್ರವಾಸೋದ್ಯಮಕ್ಕೆ ಬಳಸಿಕೊಳ್ಳಲು ಸಾಧ್ಯವಿದೆ. ಅದು ಗಣನೀಯ ಆದಾಯ ತಂದುಕೊಡಬಹುದು. ಪಶ್ಚಿಮ ಘಟ್ಟಗಳು, ಕಾಂಡ್ಲಾ ಕಾಡು ಇಂಗಾಲದ ಡೈ ಆಕ್ಸೈಡ್‌ ಹೀರಿಕೊಳ್ಳುವ ತಾಣಗಳು. ಇವು ಈ ಪ್ರದೇಶದಲ್ಲಿ ಪ್ರವಾಹ ಬಾರದಂತೆ ತಡೆಯುವುದು, ಸವಕಳಿ ತಡೆಯುವುದು ಸೇರಿದಂತೆ ಉಲ್ಲೇಖವಾಗಿಲ್ಲದ ಹಲವು ಬಗೆಯ ಪರಿಸರ ಸೇವೆ ಒದಗಿಸುತ್ತವೆ.

ಬಂದರು ನಿರ್ಮಾಣ ಆಗುವುದಾದಲ್ಲಿ, ಅಲ್ಲಿ ದೊಡ್ಡ ಪ್ರಮಾಣದಲ್ಲಿ ಹೂಳೆತ್ತುವ ಕೆಲಸ ಆಗಬೇಕಾಗುತ್ತದೆ. ಏಕೆಂದರೆ, ಈಗ ಅಲ್ಲಿ ನೀರಿನ ಆಳ ಇರುವುದು ಹೆಚ್ಚೆಂದರೆ ಎರಡು ಮೀಟರ್‌. ಅಲ್ಲಿ ಹಡಗುಗಳು ತಂಗಬೇಕು ಎಂದಾದರೆ ಕನಿಷ್ಠ 20 ಮೀಟರ್ ಆಳದವರೆಗೆ ಹೂಳೆತ್ತಬೇಕಾಗುತ್ತದೆ. ಈ ಪ್ರಕ್ರಿಯೆಯಲ್ಲಿ ಇಂಗಾಲಯುಕ್ತ ಮಣ್ಣು ಹೊರಹೋಗುತ್ತದೆ. ಇದರಿಂದ ಲಾಭ ಯಾರಿಗೆ? ಉದ್ಯೋಗ ಸೃಷ್ಟಿಯ ಹೆಸರಿನಲ್ಲಿ ನಾವು ಪರಿಸರ ಆಧಾರಿತ ಜೀವನೋಪಾಯಗಳನ್ನು ಮತ್ತೆ ಮತ್ತೆ ನಾಶ ಮಾಡುತ್ತಾ ಇರುತ್ತೇವೆ.


ರೋಹಿಣಿ ನಿಲೇಕಣಿ

ಹಣಕಾಸಿನ ಶಿಸ್ತು ಕಾಯ್ದುಕೊಳ್ಳುವಾಗ ಪರಿಸರ ಶಿಸ್ತನ್ನೂ ಕಾಯ್ದುಕೊಳ್ಳಬೇಕು. ಸಾಗರಮಾಲಾ ಯೋಜನೆಯ ಅಡಿಯಲ್ಲಿನ ಎಲ್ಲ ಬಂದರುಗಳನ್ನೂ ನಿರ್ಮಿಸುವ ಕೆಲಸಕ್ಕೆ ಮುಂದಾದಲ್ಲಿ, ಪ್ರಯೋಜನಕ್ಕೆ ಬಾರದ ಆಸ್ತಿ ಸೃಷ್ಟಿಸುತ್ತೇವೆ, ಸಾಮರ್ಥ್ಯಕ್ಕಿಂತ ಕಡಿಮೆ ಪ್ರಮಾಣದಲ್ಲಿ ಬಳಕೆಯಾಗಿರುವ ಮೂಲಸೌಕರ್ಯಗಳ ಮೇಲೆ ಕೋಟ್ಯಂತರ ರೂಪಾಯಿ ಸುರಿಯುತ್ತೇವೆ. ಪರಿಣಾಮಗಳ ಕುರಿತು ಸಮಗ್ರ ಹಾಗೂ ವೈಜ್ಞಾನಿಕ ಅಧ್ಯಯನ ನಡೆಸದೆ ಹಿಮಾಲಯ ಪ್ರದೇಶದಲ್ಲಿ ಒಂದಾದ ನಂತರ ಒಂದರಂತೆ ಅಣೆಕಟ್ಟುಗಳನ್ನು ನಿರ್ಮಿಸಿದ ಪರಿಣಾಮವಾಗಿ, ಇಂಥದ್ದೇ ಪರಿಸ್ಥಿತಿ ಕಾಣುತ್ತಿದೆ.

ಸಂತರು, ಕವಿಗಳು, ಸಾರ್ವಜನಿಕ ಆಡಳಿತಗಾರರು, ದೇಸಿ ಶಿಲ್ಪಿಗಳನ್ನು ಕಂಡ ಈ ದೇಶದಲ್ಲಿ, ಮುಕ್ತವಾಗಿ ಹರಿಯುತ್ತಿರುವ ಪ್ರಮುಖ ನದಿಯೊಂದನ್ನು ಅದರ ಪಾಡಿಗೆ ಬಿಟ್ಟುಬಿಡಲು ಸಾಧ್ಯವಿಲ್ಲದ ಹಂತಕ್ಕೆ ಆಲೋಚನೆಗಳು ಕುಗ್ಗಿಹೋಗಿವೆಯೇ? ಮುಂದಿನ ತಲೆಮಾರಿಗೆ ಈ ನದಿಯನ್ನು ಖುಷಿಯಿಂದ ಕಾಣಲು, ಅದರ ಲಾಭ ಪಡೆದುಕೊಳ್ಳಲು ಬಿಡಲಾರೆವೇ? ಅಘನಾಶಿನಿಯು ಅವಿರತವಾಗಿಯೂ ನಿರ್ಮಲವಾಗಿಯೂ ಹರಿಯುತ್ತಿರಲಿ.

(ಆಗಸ್ಟ್‌ 7, 2019ರಂದು ಪ್ರಕಟವಾಗಿದ್ದ ಲೇಖನ)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು