ಶುಕ್ರವಾರ, ಜೂಲೈ 10, 2020
28 °C
ಸಂಕಷ್ಟದಲ್ಲಿರುವ ಕಲಾವಿದರಿಗೆ ನೆರವು ನೀಡಬೇಕಾದುದು ಇಂದಿನ ತುರ್ತು

ವಿಶ್ಲೇಷಣೆ | ಕಲೋಪಾಸನೆ ಮತ್ತು ಮಾನವೀಯ ನೆಲೆ

ಡಿ.ಎಸ್.ಚೌಗಲೆ Updated:

ಅಕ್ಷರ ಗಾತ್ರ : | |

ಕೊರೊನಾ ಸಾಂಕ್ರಾಮಿಕದ ಕಾರಣದಿಂದ, ಸಾಮುದಾಯಿಕ ಕಲೆಗಳಾದ ಚಿತ್ರಕಲೆ ಮತ್ತು ರಂಗಭೂಮಿ ಬಿಕ್ಕಟ್ಟಿನಲ್ಲಿವೆ. ನಾಟಕಗಳು ಮತ್ತು ಕಲಾಪ್ರದರ್ಶನಗಳು ನಿಂತಿವೆ. ಆನ್‍ಲೈನ್‍ನಲ್ಲಿ ವೆಬಿನಾರ್ ಎಂಬ ವಿಚಾರ ಸಂಕಿರಣಗಳು ಏರ್ಪಾಟು ಆಗುತ್ತಿವೆ, ಕಲಾಪ್ರದರ್ಶನಗಳು ಮತ್ತು ಕಲಾ ಸ್ಪರ್ಧೆಗಳು ನಡೆಯುತ್ತಿವೆ. ಇವು ವರ್ಚುವಲ್ ಅಷ್ಟೆ.

ನೋಟು ರದ್ದತಿ ಮತ್ತು ಜಿಎಸ್‍ಟಿ ಜಾರಿಯ ಬಳಿಕ ಚಿತ್ರಕಲೆಯ ಮಾರುಕಟ್ಟೆ ಕುಸಿದುಹೋಗಿದೆ. ಕಲಾ ಪ್ರದರ್ಶನಗಳಿಗೆ ಹಿಂದಿದ್ದ ಮೆರುಗು ಉಳಿದಿಲ್ಲ. ಮುಂಬೈ, ದೆಹಲಿ, ಕೋಲ್ಕತ್ತದಲ್ಲೂ ಚಿತ್ರಕಲೆಯ ಪರಿಸ್ಥಿತಿ ಬೇರೆ ರೀತಿಯಾಗೇನೂ ಇಲ್ಲ. ದೇಶದ ಮತ್ತು ಜಗತ್ತಿನ ಆರ್ಥಿಕ ಹಿಂಜರಿತ ಇದಕ್ಕೆ ಇನ್ನೊಂದು ಕಾರಣ ಎಂದು ಹೇಳಲಾಗುತ್ತಿದೆ.

ಚಿತ್ರಕಲೆಯಲ್ಲಿ ಹಣ ತೊಡಗಿಸುವವರು ಈಗ ಅತ್ತ ಸುಳಿಯುತ್ತಿಲ್ಲ. ಗಾಯದ ಮೇಲೆ ಉಪ್ಪು ಸವರಿದಂತೆ, ಚಿತ್ರಕಲಾಕೃತಿ ಮಾರಾಟದ ಮೇಲೆ ಕೇಂದ್ರ ಸರ್ಕಾರ ಜಿಎಸ್‌ಟಿ ಹೇರಿದೆ. ಇತ್ತೀಚೆಗೆ ಆನ್‍ಲೈನ್‍ನಲ್ಲಿ ಕಲಾಕೃತಿಗಳನ್ನು ಪ್ರದರ್ಶಿಸಿ ಮಾರುವ ವೆಬ್‍ಗ್ಯಾಲರಿಯೊಂದು ‘ಜಿಎಸ್‍ಟಿ ನಂಬರ್ ಕೊಡಿ, ಇಲ್ಲದಿದ್ದರೆ ನಿಮ್ಮ ಕೃತಿಗಳನ್ನು ವೆಬ್‍ನಿಂದ ತೆಗೆದು ಹಾಕಲಾಗುವುದು’ ಎಂದು ಎಚ್ಚರಿಕೆಯ ಸೂಚನೆಯನ್ನು ನೀಡಿತು. ಜಾಗತಿಕ ಆರ್ಥಿಕ ಕುಸಿತ ಮತ್ತು ಕೋವಿಡ್‌ನಿಂದಾಗಿ ವೃತ್ತಿಪರ ಚಿತ್ರಕಲಾವಿದರು ಬಹುದೊಡ್ಡ ಪ್ರಮಾಣದಲ್ಲಿ ಸಂಕಷ್ಟಕ್ಕೆ ಒಳಗಾಗಿದ್ದಾರೆ.

ಪ್ರಪಂಚದಲ್ಲಿ ಸಾಹಿತ್ಯ, ನಾಟಕ, ಕಲೆ ಮುಂತಾದ ಮಾನವಿಕ ವಿಷಯಗಳಿಗೆ ಆಳರಸರಿಂದ ಉತ್ತಮ ಪ್ರೋತ್ಸಾಹ ಲಭಿಸಿದೆ. ಅರಸರ ಕಾಲದ ದೃಶ್ಯಕಲಾ ಪರಂಪರೆ ಇಂದಿಗೂ ಮುಂದುವರಿದಿದೆ. ಈ ದಿಸೆಯಲ್ಲಿ ಅತ್ಯಂತ ಸ್ಮರಣೀಯ ಕಾರ್ಯವಾಗಿದ್ದು ಬರೋಡಾದ ಅರಸ ಸಯಾಜಿರಾವ ಗಾಯಕವಾಡರ ಕಾಲದಲ್ಲಿ. ಅವರು ಯುರೋಪ್‌ ಪ್ರವಾಸ ಕೈಗೊಂಡಿದ್ದರು. ಅದು ಅವರ ಪ್ರಥಮ ಪ್ರವಾಸ. ಅಲ್ಲಿಯ ಪ್ರವಾಸಿ ತಾಣಗಳಿಗೆ ಭೇಟಿ ಕೊಟ್ಟರು. ಅಲ್ಲಿಯ ಶಿಲ್ಪಕಲೆ ಮತ್ತು ಚಿತ್ರಕಲೆ ಅವರನ್ನು ಸೆಳೆಯಿತು. ಪ್ಯಾರಿಸ್, ರೋಮ್, ಲಂಡನ್ ನಗರಗಳ ಶ್ರೇಷ್ಠ ಕಲಾವಿದರ ಕೃತಿಗಳಪ್ರದರ್ಶನವನ್ನು ಗ್ಯಾಲರಿಗಳಲ್ಲಿ ವೀಕ್ಷಿಸಿದರು. ಅವರ ಬಗ್ಗೆ ಅರಿತುಕೊಂಡರು. ಶಿಕ್ಷಣ ಸಂಸ್ಥೆಗಳನ್ನು ಗಮನಿಸಿದರು. ಅಲ್ಲಿಯ ಸಾಧಕರ ಚರಿತ್ರೆ ಓದಿದರು. ಪ್ರಭಾವಿತರಾದರು. ಉದ್ಯೋಗ ಸೃಷ್ಟಿ, ಕೃಷಿ, ಶಿಕ್ಷಣ ಮತ್ತು ಕಲೆಯ ವ್ಯವಸ್ಥೆಗೆ ಬೆರಗಾಗಿ, ಇಂಥ ಒಂದು ಮಾದರಿ ಕೇಂದ್ರವು ಬರೋಡಾದಲ್ಲಿ ಆಗಬೇಕೆಂದು ಬಯಸಿದರು.

ಮರಾಠಿ ಲೇಖಕ ಬಾಬಾ ಭಾಂಡ ಅವರ ಕೃತಿ ‘ಲೋಕಪಾಲ ರಾಜಾ ಸಯಾಜಿರಾವ’ ಕೃತಿಯಲ್ಲಿ ಅವರ ಕೊಡುಗೆಯನ್ನು ವಿವರಿಸಿದ್ದಾರೆ. ಸಯಾಜಿರಾವ ಅವರು ಭಾವಿಸಿದ್ದು- ‘ಭಾರತೀಯ ಚಿತ್ರಕಲೆಗೆ ಪ್ರಾಚೀನ ಪರಂಪರೆ ಇದೆ. ಕಾಲದ ಓಘದಲ್ಲಿ ಅದರತ್ತ ನಮ್ಮ ಸಮಾಜ ನಿರ್ಲಕ್ಷ್ಯ ಮಾಡಿದೆ. ಸಾಮಾಜಿಕ ಬದುಕು ಮತ್ತು ಪರಂಪರೆಯ ವಿವಿಧ ರೂಪಗಳನ್ನು ಚಿತ್ರಕಲಾವಿದ ಚಿತ್ರಣ ಮಾಡುತ್ತಿರುತ್ತಾನೆ. ಕಲಾವಿದನನ್ನು ಮತ್ತು ಕಲೆಯನ್ನು ಗೌರವಿಸುವುದು ರಾಜ್ಯವನ್ನು ಆಳುವವನ ಆದ್ಯ ಕರ್ತವ್ಯವೇ ಹೌದು’. ಎಂತಹ ಕಾಳಜಿ. ಇಂತಹ ಉದಾತ್ತ ಧೋರಣೆಯನ್ನು ಇಂದಿನ ಜನಪ್ರತಿನಿಧಿಗಳೂ ಅಳವಡಿಸಿಕೊಳ್ಳಬೇಕು. ಕಲಾ ಪೋಷಣೆಯು ಆಳುವವರ ಆದ್ಯ ಕರ್ತವ್ಯವೆನಿಸಬೇಕು.

ಈ ಪರಂಪರೆಯನ್ನು ಗುರುತಿಸಿಯೇ ರಾಜಾ ರವಿವರ್ಮ ಅವರನ್ನು ದೊರೆ ಸಯಾಜಿರಾವ ಆಹ್ವಾನಿಸಿ ಯಥೋಚಿತ ಗೌರವ ನೀಡಿ, ಅವರ ಚಿತ್ರಕಲಾ ಪ್ರದರ್ಶನ ಏರ್ಪಡಿಸಿದ್ದನ್ನು ಮರಾಠಿ ಕಾದಂಬರಿಕಾರ ರಣಜಿತ ದೇಸಾಯಿ ಉಲ್ಲೇಖಿಸುತ್ತಾರೆ. ಸಯಾಜಿರಾವ ಅವರಿಗೆ ಕಲೆಯ ಹುಚ್ಚಿತ್ತು. ಅವರು ಮಹಾರಾಣಿಯರಾದ ಚಿಮಣಾಬಾಯಿ-1 ಮತ್ತು ಚಿಮಣಾಬಾಯಿ-2, ಜಯಸಿಂಹರಾವ, ಫತ್ತೆಸಿಂಹರಾವ ಮುಂತಾದವರ ಪೋರ್ಟ್ರೇಟ್‌ಗಳನ್ನು ಕಲಾವಿದರಿಂದ ಮಾಡಿಸಿದ್ದರು. ಅಂದಿನ ಕಾಲದ ಖ್ಯಾತ ಕಲಾವಿದ ಫೈಜಿ ರಹಮಾನ ಅವರನ್ನು ಆಹ್ವಾನಿಸಿ, ಹದಿನೈದು ಚಿತ್ರಕೃತಿಗಳನ್ನು ಅವರಿಂದ ಬರೆಸಿಕೊಳ್ಳುತ್ತಾರೆ. ಇದು ಮಹತ್ವದ್ದು. ಅವರ ಕಾಲದ ಬರೋಡಾ ಕಲಾ ಕಾಲೇಜು ಇಂದು ಜಗತ್ಪ್ರಸಿದ್ಧ. ಬರೋಡಾ ಕಲಾ ಘರಾಣೆಯಲ್ಲಿ ವ್ಯಾಸಂಗ ಮಾಡಿದ ಕಲಾವಿದರು ಸಮಕಾಲೀನ ಚಿತ್ರಕಲೆಯಲ್ಲಿ ಬಹುದೊಡ್ಡ ಹೆಸರನ್ನು ಗಳಿಸಿದ್ದಾರೆ. ಅದರಲ್ಲಿ ಕರ್ನಾಟಕದವರೂ ಇದ್ದಾರೆ.

ಹಿಂದಿನ ಆಳರಸರು ಸಾಮಾನ್ಯವಾಗಿ ಕಲಾವಿದರಿಂದ ತಮ್ಮ ಕುಟುಂಬದವರ ಭಾವಚಿತ್ರಗಳನ್ನು ಬರೆಸಿಕೊಳ್ಳುತ್ತಿದ್ದರು. ನಮ್ಮ ಮೈಸೂರು ಅರಸರೂ ಕಲೆ, ನಾಟಕ ಮತ್ತು ಹಿಂದೂಸ್ತಾನಿ ಸಂಗೀತಗಾರರಿಗೆ ಪ್ರೋತ್ಸಾಹ ನೀಡಿದ್ದರು. ಅವರನ್ನು ಅರಮನೆಗೆ ಆಹ್ವಾನಿಸಿ ಅವರ ಕಲಾ ಪ್ರಯೋಗಗಳನ್ನು ತಮ್ಮ ಆಸ್ಥಾನದಲ್ಲಿ ಏರ್ಪಡಿಸುತ್ತಿದ್ದರೆಂಬ ಉಲ್ಲೇಖಗಳು ದೊರೆಯುತ್ತವೆ. ಪ್ರಸಿದ್ಧ ಕಲಾವಿದ ಹಳದಣಕರ ಅವರ ದೀಪ ಹಿಡಿದ ಮಹಿಳೆಯ ಕೃತಿ ಗಮನಾರ್ಹ.

ಕೋವಿಡ್- 19 ಮತ್ತು ಆರ್ಥಿಕ ಕುಸಿತದಿಂದ ಎಲ್ಲ ರಂಗಗಳೂ ಕಂಗೆಟ್ಟಿವೆ. ಚಿತ್ರಕಲೆ ಮತ್ತು ರಂಗಭೂಮಿಯನ್ನು ವೃತ್ತಿಯಾಗಿ ಸ್ವೀಕರಿಸಿದವರ ಬಾಳು ದುರ್ಭರವಾಗಿದೆ. ಬಾಳು ಸದಲಗೆ ಮತ್ತು ಮೀನಾಕ್ಷಿ ಸದಲಗೆ ನಮ್ಮ ನಡುವಿನ ಹೆಸರಾಂತ ಕಲಾವಿದರು. ತಮ್ಮ ಬದುಕನ್ನು ಕಲೆಯಿಂದಲೇ ಕಟ್ಟಿಕೊಂಡವರು. ದೇಶದಾದ್ಯಂತ ಕಲಾಪ್ರದರ್ಶನ ನಡೆಸಿ, ಕೃತಿಗಳ ಮಾರಾಟದಿಂದ ಆರ್ಥಿಕ ಆತ್ಮನಿರ್ಭರತೆ ಕಂಡುಕೊಂಡ ಕಲಾವಿದರು. ಬಾಳು ಸದಲಗೆ ಹೇಳುವಂತೆ- ‘ಕೊರೊನಾ ಹರಡುವ ಮುನ್ನ, ದಿಲ್ಲಿಯಲ್ಲಿ ಪ್ರದರ್ಶನವಿತ್ತು. ಅಲ್ಲಿಯ ನಮ್ಮ ಕೃತಿಗಳನ್ನು ಯಾವತ್ತೂ ಕೊಳ್ಳುವ ಬಾಯರ್ (ಚಿತ್ರಕಲಾಕೃತಿ ಕೊಳ್ಳುವವ) ಪೇಂಟಿಂಗ್ ಕೊಂಡುಕೊಂಡು ಮನೆಗೆ ಹೋದರು. ಎರಡು ದಿನ ಆಗಿರಲಿಕ್ಕಿಲ್ಲ. ಅವರು ತಿರುಗಿ ಮತ್ತೆ ಆ ಕೃತಿಯೊಂದಿಗೆ ಗ್ಯಾಲರಿಗೆ ಹಾಜರಾದರು. ‘ಈ ಪೇಂಟಿಂಗ್ ವಾಪಸ್ ತಗೊಳ್ಳಿರಿ. ಮತ್ತೆ ಮುಂದೆ ಕೊಂಡುಕೊಳ್ಳುವೆ. ಈಗ ಆರ್ಥಿಕ ಕುಸಿತ. ಕೊರೊನಾ ಹಾವಳಿ ಹೆಚ್ಚಾಗುವ ಲಕ್ಷಣಗಳಿವೆ, ದುಡ್ಡು ಕಾಯ್ದುಕೊಂಡು ಇರಬೇಕು, ನೀವೂ ಸಹ’ ಎಂದರು. ಅವರ ಮಾತು ನಿಜ ಅನಿಸುತ್ತಿದೆ. ಗ್ಯಾಲರಿಗಳಲ್ಲಿ ಪೇಂಟಿಂಗ್ ಸೇಲ್ ಝೀರೊ ಆಗಿದೆ. ಇರೋ ದುಡ್ಡಲ್ಲಿ ಹೊಂದಿಸಿಕೊಂಡು ಬದುಕಬೇಕು ಸರ್’ ಎಂದು ಹೇಳಿ ನಿಟ್ಟುಸಿರುಬಿಟ್ಟರು.

ಬಹಳಷ್ಟು ಕಲಾವಿದರ ಬದುಕು ಕಡು ಕಷ್ಟದ್ದಾಗಿದೆ. ಅನೇಕ ಆಧುನಿಕ ವೃತ್ತಿಪರ ಕಲಾವಿದರನ್ನು ಸಾಲ ಎತ್ತುವ ದುಃಸ್ಥಿತಿಗೆ ತಳ್ಳಿದ ದುರಿತ ಕಾಲವಿದು. ಸರ್ಕಾರವು ಚಲನಚಿತ್ರ ಮತ್ತು ಟಿ.ವಿ. ಧಾರಾವಾಹಿಗಳ ಚಿತ್ರೀಕರಣಕ್ಕೆ ಷರತ್ತುಬದ್ಧ ಒಪ್ಪಿಗೆ ನೀಡಿರುವಂತೆ, ರಂಗಚಟುವಟಿಕೆಗಳನ್ನು ನಡೆಸಲು, ತಜ್ಞರ ಅಭಿಪ್ರಾಯ ಪಡೆದು ನಾಟಕಗಳನ್ನು ಆಡಲು ಅನುಮತಿ ನೀಡಲಿ. ಇನ್ನೂರು ಮಂದಿಗೆ ಆಸನ ವ್ಯವಸ್ಥೆ ಇರುವ ರಂಗಮಂದಿರದಲ್ಲಿ ನೂರು ಪ್ರೇಕ್ಷಕರಿಗೆ ಅವಕಾಶ ಕಲ್ಪಿಸಿ ನಾಟಕವಾಡಲು ಯೋಚಿಸಬಹುದು. ಶಾಲೆ, ಕಾಲೇಜುಗಳು ಆರಂಭವಾದರೆ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ನಾಟಕ ಮತ್ತೆ ಪುನರುಜ್ಜೀವನ ಪಡೆಯಲು ಅವಕಾಶವಿದೆ. ಅಲ್ಲಿಯತನಕ ಸರ್ಕಾರ ಹೆಚ್ಚು ಮಾನವೀಯ ನೆಲೆಯಲ್ಲಿ ಚಿಂತಿಸಬೇಕು. ಸಯಾಜಿರಾವ ಗಾಯಕವಾಡ ಅವರಂತಹ ಕಲೋದ್ಧಾರಕರು ಮಾದರಿ ಹಾಗೂ ಪ್ರೇರಣೆಯಾಗಬೇಕು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಆರ್ಥಿಕ ನೆರವು ನೀಡಲು ಕಾರ್ಯಪ್ರವೃತ್ತವಾಗಿದೆ. ಆದರೆ ಅದು ಎಲ್ಲ ಕಲಾವಿದರಿಗೆ ತಲುಪಿಲ್ಲ. ಸಂಸ್ಕೃತಿ ಇಲಾಖೆಯ ಆಯಾ ಜಿಲ್ಲಾ ಸಹಾಯಕ ನಿರ್ದೇಶಕರು ಜನಪದ ಕಲಾವಿದರು, ಚಿತ್ರಕಲಾವಿದರು, ಬಯಲಾಟ ಕಲಾವಿದರು, ನೃತ್ಯಕಲಾವಿದರು, ರಂಗಕಲಾವಿದರ ನಿರ್ದಿಷ್ಟ ಪಟ್ಟಿ ಸಿದ್ಧಪಡಿಸಿ, ಪ್ರಧಾನ ಕಚೇರಿಗೆ ಕಳುಹಿಸಿದ್ದಾರೆ. ಆದರೆ, ಅರ್ಧದಷ್ಟು ಕಲಾವಿದರಿಗೆ ಮಾತ್ರ ನೆರವು ದೊರೆತಿದೆ. ಉಳಿದವರಿಗೆ ಸಿಕ್ಕಿಲ್ಲ. ಬಿಕ್ಕಟ್ಟಿನ ಈ ಸಂದರ್ಭದಲ್ಲಿ ಕಲಾವಿದರ ಕೈಹಿಡಿಯಬೇಕಾದುದು ಸರ್ಕಾರದ ಕರ್ತವ್ಯ. ಇದನ್ನು ಅತ್ಯಂತ ಆದ್ಯತೆಯ ಕಾರ್ಯವೆಂದು ಪರಿಗಣಿಸಿ, ಉಳಿದವರಿಗೂ ಸರ್ಕಾರ ಪರಿಹಾರ ನೀಡಬೇಕು. ಕಲಾವಿದರನ್ನು ಸಂಕಷ್ಟದಿಂದ ಪಾರು ಮಾಡಬೇಕು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು