ಶನಿವಾರ, ಜೂನ್ 6, 2020
27 °C
ಬುದ್ಧಗುರುವಿನ ಸಮುತ್ಪಾದ ತತ್ವದ ತಿರುಳು, ಈ ಹೊತ್ತಿನ ನಮ್ಮ ಸಂಕಟಕ್ಕೆ ಪರಿಹಾರವಾಗಬಲ್ಲದು

ವಿಶ್ಲೇಷಣೆ | ದುಃಖ ನಿವಾರಕ ‘ವೈದ್ಯ’ ಗೌತಮ ಬುದ್ಧ

ಎಸ್. ನಟರಾಜ ಬೂದಾಳು Updated:

ಅಕ್ಷರ ಗಾತ್ರ : | |

Prajavani

‘ಇದು ‘ಆಗುತ್ತಲೇ’ ಇರುವ ಜಗತ್ತು; ಆಗಿ ಇರುವುದಲ್ಲ. ಸಂಬಂಧಾಧಾರಿತವಾದ ಜಗತ್ತಿನಲ್ಲಿ ಎಲ್ಲರೂ ಪರಸ್ಪರ ಸಂಬಂಧಿಗಳೇ. ಜಾತಿ, ಧರ್ಮ, ದೇಶ ಎಲ್ಲವೂ ಪೊಳ್ಳು. ಇಡೀ ಜಗತ್ತು ಸಂಬಂಧದ ಒಂದು ಜಾಲ. ಸದಾ ಬದಲಾಗುತ್ತ ಹರಿಯುತ್ತಿರುವ ಲೋಕಪ್ರವಾಹದಲ್ಲಿ ನಾವೆಲ್ಲ ಇದ್ದೇವೆ. ಧರ್ಮ, ಲಿಂಗ, ಜಾತಿ, ದೇಶದ ಕಾರಣವನ್ನು ಮುಂದಿಟ್ಟು ಇನ್ನೊಂದು ಜೀವಿಯ ಬದುಕನ್ನು ಕಿತ್ತುಕೊಳ್ಳಲು ಯಾರಿಗೂ ಹಕ್ಕಿಲ್ಲ. ಸಂಬಂಧ ಉಂಟಾದರೆ ಬದುಕು; ಇಲ್ಲವಾದರೆ ಸಾವು. ಆದುದರಿಂದ ಜೀವಜಗತ್ತಿನ ಬಗೆಗೆ ಕರುಣೆ, ಮೈತ್ರಿಯಿಂದ ವರ್ತಿಸುವುದು ಮಾತ್ರ ನಿಜವಾದ ಧರ್ಮ’– ಇದು ಬುದ್ಧಗುರುವಿನ ಪ್ರತೀತ್ಯ ಸಮುತ್ಪಾದ ತತ್ವದ ತಿರುಳು. ಈ ಹೊತ್ತಿನ ಸಂಕಟಕ್ಕೆ ಇದು ಪರಿಹಾರವೂ ಹೌದು. ಎಲ್ಲರೂ ಪರಸ್ಪರ ಸಂಬಂಧಿಗಳು, ಯಾರು ಯಾರಿಗೂ ವೈರಿಗಳಲ್ಲ ಎಂಬ ಈ ತತ್ವವನ್ನೇ ಸೂಕ್ಷ್ಮಾಣುವೊಂದು ತೋರಿಸಿಕೊಟ್ಟಿದೆ.

ಬೌದ್ಧ ದರ್ಶನವು ವಿಜ್ಞಾನದಂತೆ ಜಗತ್ತಿನ ಎಲ್ಲರಿಗೂ ಸಲ್ಲುವಂತಹದು. ಧರ್ಮ, ದೇಶಗಳನ್ನು ಮೀರಿ ವೈದ್ಯನೊಬ್ಬನು ಹೇಗೆ ಲೋಕದ ಎಲ್ಲರಿಗೂ ಬೇಕಾದವನೋ ಹಾಗೆಯೇ ಬೌದ್ಧ ದರ್ಶನವು ಇಂದಿನ ಎಲ್ಲರ ಅಗತ್ಯ. ಲೋಕದ ಸಂಕಟಕ್ಕೆ ಕಾರಣ ಮತ್ತು ಪರಿಹಾರ ಹುಡುಕಿಕೊಟ್ಟವನು ಬುದ್ಧ. ಹಾಗಾಗಿ ಬುದ್ಧನನ್ನು ವೈದ್ಯಗುರು ಎನ್ನುತ್ತಾರೆ. ಲೋಕ ನಂಬಿ ಬಾಳುತ್ತಿರುವ ರಾಶಿ ರಾಶಿ ಪೊಳ್ಳುಗಳಿಗೂ ಅವರ ಸಂಕಟಕ್ಕೂ ನೇರ ಸಂಬಂಧವಿದೆ ಎಂದು ಅರಿತ ಬುದ್ಧ, ಅವುಗಳನ್ನು ನಿವಾರಿಸಿಕೊಳ್ಳುವ ದಾರಿಯನ್ನು ತೋರಿಸಿಕೊಟ್ಟನು.

ಧ್ಯಾನವು ಬೌದ್ಧ ಧರ್ಮವನ್ನು ಅರಿತುಕೊಳ್ಳುವ ಮಾಧ್ಯಮ. ಲೋಕವನ್ನು ಅರಿತುಕೊಳ್ಳುವ ಮಾಧ್ಯಮವೂ ಹೌದು. ತನ್ನನ್ನು ತಾನು ಅರಿತುಕೊಳ್ಳುವುದು ಅದರ ಮೊದಲ ಅಗತ್ಯ. ಅದು ಧ್ಯಾನದಿಂದ ಮಾತ್ರ ಸಾಧ್ಯ. ಜೀವನಪೂರ್ತಿ ಲೋಕವನ್ನು ನೋಡುತ್ತ ಬದುಕುವವರಿಗೆ ಒಮ್ಮೆ ನಿಮ್ಮನ್ನು ನೀವು ನೋಡಿಕೊಳ್ಳಿ ಎಂದು ಎಚ್ಚರಿಸಿದವನು ಬುದ್ಧ. ಇದನ್ನು ಮನಗಾಣಿಸಲು ಒಂದು ಕತೆಯಿದೆ.

ಒಬ್ಬ ಭಿಕ್ಷುಕ ಮೂವತ್ತು ವರ್ಷಗಳಿಂದ ರಸ್ತೆಯೊಂದರ ಬದಿಯಲ್ಲಿ ಕೂತು ಭಿಕ್ಷೆ ಬೇಡುತ್ತಿದ್ದ. ಒಂದು ದಿನ ಒಬ್ಬ ದಾರಿಹೋಕ ಆ ಮಾರ್ಗದಲ್ಲಿ ನಡೆದುಹೋದ. ‘ಏನಾದರೂ ಕೊಡಿ ಸ್ವಾಮಿ’ ಎಂದು ಭಿಕ್ಷುಕ ತಟ್ಟೆಯನ್ನು ಒಡ್ಡಿದ. ‘ನನ್ನ ಹತ್ತಿರ ಏನೂ ಇಲ್ವಲ್ಲಪ್ಪಾ’ ಎಂದ ದಾರಿಹೋಕ, ಭಿಕ್ಷುಕನಿಗೆ, ‘ಎಷ್ಟು ವರ್ಷಗಳಿಂದ ಇಲ್ಲಿ ಕೂತು ಭಿಕ್ಷೆ ಬೇಡುತ್ತಿದ್ದೀಯಾ?’ ಎಂದು ಕೇಳಿದ. ಅದಕ್ಕೆ ಭಿಕ್ಷುಕ, ‘ಸುಮಾರು ಮೂವತ್ತು ವರ್ಷಗಳಿಂದ’ ಎಂದ. ‘ನೀನು ಮೇಲೆ ಕೂತಿರುವ ಆ ಪೆಟ್ಟಿಗೆಯ ಒಳಗೆ ಏನಿದೆ?’ ಎಂದು ದಾರಿಹೋಕ ಕೇಳಿದ್ದಕ್ಕೆ ಭಿಕ್ಷುಕ, ‘ನಾನೆಂದೂ ನೋಡಿಲ್ಲ. ಅಷ್ಟಕ್ಕೂ ಈ ಹಳೇ ಪೆಟ್ಟಿಗೆಯಲ್ಲಿ ಏನಿರುತ್ತೆ?’ ಎಂದ ತಾತ್ಸಾರದಿಂದ. ‘ಯಂಗಾರ ಆಗಲಿ ಒಂದು ಸಲ ನೋಡು’ ಎಂದು ದಾರಿಹೋಕ ಒತ್ತಾಯಿಸಿದ. ಅದರ ಮುಚ್ಚಳವನ್ನು ಕಷ್ಟಪಟ್ಟು ತೆಗೆದು ನೋಡಿದರೆ, ಪೆಟ್ಟಿಗೆಯ ತುಂಬಾ ಚಿನ್ನದ ನಾಣ್ಯಗಳಿದ್ದವು! ಅದರ ಮೇಲೆ ಕುಳಿತು ಅವನು ಮೂವತ್ತು ವರ್ಷಗಳಿಂದ ಭಿಕ್ಷೆ ಬೇಡಿದ್ದ!

ನಿಮ್ಮನ್ನು ನೀವು ನೋಡಿಕೊಳ್ಳಿ ಎಂದು ಹೇಳುತ್ತಿರುವ ಆ ದಾರಿಹೋಕನೇ ಬುದ್ಧಗುರು. ನೀವು ತೆರೆದು ನೋಡಬೇಕಿರುವುದು ಆ ಪೆಟ್ಟಿಗೆಗಿಂತ ಇನ್ನೂ ಹತ್ತಿರದಲ್ಲಿರುವ ನಿಮ್ಮ ಒಳಗನ್ನು. ‘ನಾನೇನು ಭಿಕ್ಷುಕನೇ?’ ಅಂತ ನೀವು ಅಂದುಕೊಳ್ಳುತ್ತಿರುವುದು ಕೇಳಿಸುತ್ತಿದೆ! ತನ್ನ ತಾನು ತಿಳಿದು, ಆ ಮಹಾಸುಖವನ್ನು ಅನುಭವಿಸಲಾರದವನ ಹತ್ತಿರ ಎಷ್ಟು ಸಂಪತ್ತು ಇದ್ದರೇನಂತೆ, ಭಿಕ್ಷುಕನೇ ಅಲ್ಲವೇ? ಚೂರುಪಾರು ಸುಖಕ್ಕೆ ಹೊರಗೆ ತಡಕಾಡುತ್ತ ಬದುಕನ್ನು ಮುಗಿಸುತ್ತೇವೆ. ಒಮ್ಮೆ ಪೆಟ್ಟಿಗೆ ತೆರೆದು ನೋಡಬಾರದೇ!?

ನಮ್ಮ ಜೀವನಕ್ರಮವನ್ನು ನಿರ್ಧರಿಸುತ್ತಿರುವ ಪೊಳ್ಳುತತ್ವಜ್ಞಾನಗಳು ಇವತ್ತಿನ ಬಹುಪಾಲು ಸಂಕಟಗಳಿಗೆ ಕಾರಣವಾಗಿವೆ. ಲೋಕವನ್ನು ಆವರಿಸಿಕೊಂಡಿರುವ ಕೊರೊನಾ ಸಂಕಟಕ್ಕಿಂತ ಪೊಳ್ಳು ನಂಬಿಕೆಗಳಿಂದಾಗುತ್ತಿರುವ ಸಂಕಟಕ್ಕೆ ದೇಶ ಜರ್ಜರಿತವಾಗಿದೆ. ‘ಗುಡಿ, ಚರ್ಚು, ಮಸೀದಿಗಳ ಬಿಟ್ಟು ಹೊರಬನ್ನಿ’ ಎಂಬ ಕುವೆಂಪು ಅವರ ಮಾತು ಅದನ್ನೇ ಸಮರ್ಥಿಸುತ್ತಿದೆ. ಅದನ್ನು ಬುದ್ಧಗುರುವಿನ ಈ ಮಾತುಕತೆ ತಿಳಿಸುತ್ತದೆ. ‘ವಿಷಪೂರಿತ ಬಾಣ ತಗುಲಿ ಸಾಯುವ ಅವಸ್ಥೆಯಲ್ಲಿರುವ ಮನುಷ್ಯನನ್ನು ಉಪಚರಿಸಲು ತಜ್ಞ ವೈದ್ಯನೊಬ್ಬನು ಪ್ರಯತ್ನ ಆರಂಭಿಸುತ್ತಾನೆ ಎಂದುಕೊಳ್ಳೋಣ. ಗಾಯಗೊಂಡ ಆ ಮನುಷ್ಯ, ತನಗೆ ನಾಟಿರುವ ಬಾಣವನ್ನು ತೆಗೆಯುವ ಮೊದಲು, ಬಾಣವನ್ನು ಬಿಟ್ಟವರಾರು, ಅದು ಯಾವ ಲೋಹದ್ದು, ಅದಕ್ಕೆ ಹಚ್ಚಿರುವ ವಿಷ ಯಾವುದು ಇವನ್ನೆಲ್ಲ ನನಗೆ ತಿಳಿಸಿದರೆ ಮಾತ್ರ ವೈದ್ಯನಿಗೆ ಉಪಚರಿಸಲು ಬಿಡುತ್ತೇನೆ ಎಂದರೆ ಏನಾಗುತ್ತದೆ? ಅವನಿಗೆ ಬೇಕಿರುವುದು ವೈದ್ಯನ ಉಪಚಾರವೋ ಬಾಣವನ್ನು ಕುರಿತಾದ ವ್ಯರ್ಥ ಮಾಹಿತಿಯೋ? ಹಾಗೆಯೇ ನಾನು ತೋರಿದ ಸರಿದಾರಿಯಲ್ಲಿ ನಡೆಯಬಯಸುವವರು, ಈ ಲೋಕದ ಆರಂಭ, ಅಂತ್ಯಗಳು ನನಗೆ ಗೊತ್ತಿದೆಯೇ? ಲೋಕ ಶಾಶ್ವತವೋ ಅಲ್ಲವೋ? ಲೋಕಕ್ಕೆ ಕೊನೆ ಮೊದಲು ಇದೆಯೋ ಇಲ್ಲವೋ? ಆತ್ಮ ಮತ್ತು ದೇಹ ಒಂದೆಯೋ ಬೇರೆ ಬೇರೆಯೋ? ಇಂತಹ ಪ್ರಶ್ನೆಗಳಿಗೆ ಉತ್ತರ ಹೇಳಿದರೆ ಮಾತ್ರ ನಿನ್ನನ್ನು ಅನುಸರಿಸುತ್ತೇನೆ ಎಂದರೆ, ಈ ಯಾವ ಪ್ರಶ್ನೆಗಳಿಗೂ ನಾನು ಉತ್ತರ ಹೇಳಹೋಗುವುದಿಲ್ಲ; ಹೇಳಿಯೂ ಇಲ್ಲ. ಈ ಪ್ರಶ್ನೆಗಳು ಮತ್ತು ಉತ್ತರಗಳು ಎರಡೂ ಅಸಂಬದ್ಧ ಮತ್ತು ಅಪ್ರಸ್ತುತ. ಅಂತಹ ವ್ಯರ್ಥಾಲಾಪಕ್ಕೆ ನಾನು ತೊಡಗಲಾರೆ’– ಇದು ಬುದ್ಧನ ನೇರ ಮಾತು. ಬದುಕಿನ ನಿಜ ಸಮಸ್ಯೆಗಳನ್ನು ಎದುರಿಸಲಾಗದ ತಾತ್ವಿಕತೆಯಿಂದ ಏನೂ ಪ್ರಯೋಜನವಿಲ್ಲ. ದುರಂತವೆಂದರೆ, ಪ್ರಪಂಚದ ಬಹುಪಾಲು ಧರ್ಮಗಳು ಇಂತಹ ಪೊಳ್ಳನ್ನು ನಮ್ಮ ತಲೆಗೆ ತುಂಬಿ ನಮ್ಮನ್ನು ಆಳಾಗಿಸಿಕೊಂಡಿವೆ.

ಅಂಗುಲಿಮಾಲನ ಕತೆಯ ಅನೇಕ ಪಠ್ಯಗಳಿವೆ. ಅದರ ಒಂದು ಪಠ್ಯ ಇದು: ಒಮ್ಮೆ ಬುದ್ಧಗುರು ಹೋಗುತ್ತಿದ್ದ ದಾರಿಯಲ್ಲಿ ಕೆಲವು ಶ್ರಮಿಕರು, ಮುಂದೆ ಇರುವ ಕಾಡಿನಲ್ಲಿ ಅಂಗುಲಿಮಾಲನೆಂಬ ಕ್ರೂರಿ ದರೋಡೆಕೋರನಿರುವನೆಂದೂ ಅವನು ದಾರಿಹೋಕರನ್ನು ದರೋಡೆ ಮಾಡಿ, ಅವರ ಒಂದು ಬೆರಳನ್ನು ಕತ್ತರಿಸಿಕೊಂಡು ಹೋಗುವನೆಂದೂ ಆ ಕಡೆ ಹೋಗಬೇಡಿ ಎಂದೂ ತಿಳಿಸುತ್ತಾರೆ. ಬುದ್ಧ ಸ್ವಲ್ಪವೂ ಹಿಂಜರಿಯದೆ ಅದೇ ದಾರಿಯಲ್ಲಿ ಮುನ್ನಡೆಯುತ್ತಾನೆ. ದಾರಿಹೋಕನೊಬ್ಬ ಬರುತ್ತಿರುವುದನ್ನು ಕಂಡ ಅಂಗುಲಿಮಾಲ ಎಂದಿನಂತೆ ತನ್ನ ಉದ್ಯೋಗಕ್ಕೆ ಸಿದ್ಧನಾಗುತ್ತಾನೆ. ಸಾಮಾನ್ಯವಾಗಿ ತನ್ನನ್ನು ಕಂಡರೆ ದಿಕ್ಕಾಪಾಲಾಗಿ ಓಡಿಹೋಗುವವರೇ ಎಲ್ಲ, ಆದರೆ ಈ ಸನ್ಯಾಸಿ ಸ್ವಲ್ಪವೂ ವಿಚಲಿತನಾಗದೆ ತನ್ನ ಕಡೆಗೇ ಬರುವುದನ್ನು ಕಂಡು ಅವನಿಗೂ ದಿಗಿಲಾಗುತ್ತದೆ. ಸಮಾಧಾನದಿಂದ ಮಾತನಾಡಿಸಿದ ಬುದ್ಧನ ಕರುಣೆಗೆ ಅವನು ಕ್ಷಣಾರ್ಧದಲ್ಲಿ ಶರಣಾಗುತ್ತಾನೆ. ಬುದ್ಧ ಅವನನ್ನು ಸಂತೈಸುತ್ತಾನೆ. ತಾನೀಗ ಏನು ಮಾಡಲಿ ಎಂದು ಅಂಗುಲಿಮಾಲ ಕೇಳುತ್ತಾನೆ. ‘ನಿನ್ನ ಊರಿಗೆ ಹೋಗಿ ಸ್ವಲ್ಪಕಾಲ ಇದ್ದು, ಯಾರು ಏನೇ ಶಿಕ್ಷೆ ಕೊಟ್ಟರೂ ಅನುಭವಿಸಿ ಬಾ’ ಎನ್ನುತ್ತಾನೆ.

ಅಂಗುಲಿಮಾಲ ತನ್ನ ಊರಿಗೆ ಹೋಗಿ ಸ್ವಲ್ಪಕಾಲ ತಂಗುತ್ತಾನೆ. ಇವನು ಸಜ್ಜನನಾಗಿರುವ ಸಂಗತಿ ಗೊತ್ತಾಗಿ ಜನ ಇವನನ್ನು ನಾನಾ ರೀತಿಯಲ್ಲಿ ದಂಡಿಸಿದರೂ ಸಹಿಸಿಕೊಳ್ಳುತ್ತಾನೆ. ಆರು ತಿಂಗಳ ನಂತರ ಅಂಗುಲಿಮಾಲ ಒಂದು ಬೆಳಗಿನ ಜಾವ ಬುದ್ಧನನ್ನು ಕಾಣಲು ಬರುತ್ತಾನೆ. ಬುದ್ಧನಿಗೆ ನಮಸ್ಕರಿಸಿ, ತನ್ನ ಊರ ಹೊರಗಿರುವ ಗುಡಿಸಲೊಂದರಲ್ಲಿ ಗರ್ಭಿಣಿಯೊಬ್ಬಳಿಗೆ ಹೆರಿಗೆ ಕಷ್ಟವಾಗಿ ಅಪಾರ ವೇದನೆಯಿಂದ ನರಳುತ್ತಿರುವುದಾಗಿಯೂ ಅವಳ ಸಂಕಟವನ್ನು ಕಂಡು ಸಹಿಸಲಾಗದೆ, ಅವಳಿಗೆ ಸುಖಪ್ರಸವವಾಗಲಿ ಎಂದು ತಮ್ಮ ಆಶೀರ್ವಾದವನ್ನು ಬೇಡಿ ಬಂದಿರುವುದಾಗಿಯೂ ನಿವೇದಿಸಿಕೊಳ್ಳುತ್ತಾನೆ. ದರೋಡೆ ಮಾಡಿ ಬೆರಳನ್ನು ಕತ್ತರಿಸುತ್ತಿದ್ದ ಅಂಗುಲಿಮಾಲ, ಇಂದು ಅಪರಿಚಿತ ಹೆಣ್ಣೊಬ್ಬಳ ಪ್ರಸವವೇದನೆಯ ಸಂಕಟಕ್ಕೆ ಮಿಡಿಯುತ್ತಾ ಬಂದಿರುವುದನ್ನು ಕಂಡು ನಕ್ಕ ಬುದ್ಧಗುರು, ಆ ಹೆಂಗಸಿಗೆ ಸುಖಪ್ರಸವವಾಗಲಿ ಎಂದು ಆಶೀರ್ವದಿಸಿದನಂತೆ. ಎಲ್ಲ ಮನುಷ್ಯನಿಗೂ ಒಳಿತಿನ ದಾರಿ ಯಾವಾಗಲೂ ತೆರೆದೇ ಇರುತ್ತದೆ.

ಲೋಕ ತಲ್ಲಣಿಸುತ್ತಿರುವ ಈ ಹೊತ್ತಿನಲ್ಲಿ ಬುದ್ಧನ ಕರುಣೆ, ಮೈತ್ರಿಗಳು ನಮ್ಮನ್ನು ಕೈಹಿಡಿದು ನಡೆಸಲಿ.


ಎಸ್. ನಟರಾಜ ಬೂದಾಳು

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.