ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಶಿಷ್ಟ ಜಾತಿಗಳು ‘ಏಕಸ್ವರೂಪಿ’ ಸಮುದಾಯವೇ?

Last Updated 8 ಸೆಪ್ಟೆಂಬರ್ 2020, 19:31 IST
ಅಕ್ಷರ ಗಾತ್ರ

ಪರಿಶಿಷ್ಟ ಜಾತಿ, ಪಂಗಡಗಳಲ್ಲಿ ಒಳಮೀಸಲಾತಿ ಜಾರಿಗೆ ತರಲು ಇದ್ದ ಅಡೆತಡೆಗಳ ನಿವಾರಣೆಗೆ ಸರ್ವೋಚ್ಚ ನ್ಯಾಯಾಲಯದ ಅರುಣ್ ಮಿಶ್ರಾ ನೇತೃತ್ವದ ಐವರು ನ್ಯಾಯಮೂರ್ತಿಗಳ ಪೀಠ ಒಲವು ತೋರಿರುವುದು ಮಹತ್ವದ ಹೆಜ್ಜೆ ಎನಿಸಿದೆ. 2005 ರಲ್ಲಿ ನ್ಯಾಯಮೂರ್ತಿ ಸಂತೋಷ ಹೆಗ್ಡೆ ನೇತೃತ್ವದ ಐವರು ನ್ಯಾಯಮೂರ್ತಿಗಳ ಪೀಠದ ತೀರ್ಪು ಒಳಮೀಸಲಾತಿ ಹೋರಾಟವನ್ನು ಕಟ್ಟಿಹಾಕಿತ್ತು.

ಸಂವಿಧಾನದ 341ರ ವಿಧಿ ಅನ್ವಯ ಪರಿಶಿಷ್ಟ ಜಾತಿಗಳ ಪಟ್ಟಿಯನ್ನು ಯಾವ ರೀತಿಯಲ್ಲೂ ಮಾರ್ಪಾಡು, ಪುನರ್ ವಿಂಗಡನೆ ಮಾಡಲು ಸಾಧ್ಯವಿಲ್ಲ ಎಂದು ತೀರ್ಪಿನಲ್ಲಿ ಸ್ಪಷ್ಟಪಡಿಸಲಾಗಿತ್ತು. ಪರಿಶಿಷ್ಟ ಜಾತಿಗಳು ‘ಏಕಸ್ವರೂಪದ’ ಸಮುದಾಯವಾದ್ದರಿಂದ ಅದನ್ನು ಗುಂಪಾಗಿ ವಿಭಜಿಸಲಾಗದು ಎಂದು ಹೇಳಿದ್ದ ಅಂದಿನ ನ್ಯಾಯಪೀಠ ತೀರ್ಪಿನ ಕೊನೆಯಲ್ಲಿ ‘Constitution must be interpreted liberally, broadly and in a manner suitable for the changing times and social needs’ ( ಬದಲಾದ ಕಾಲ ಮತ್ತು ಸಾಮಾಜಿಕ ಅಗತ್ಯಗಳ ಅನುಗುಣವಾಗಿ ಸಂವಿಧಾನದ ವಿಧಿಗಳನ್ನು ಉದಾರವಾಗಿ ಅರ್ಥೈಸಿಕೊಳ್ಳಬೇಕು) ಎಂದು ಹೇಳಿತ್ತು. ಅರುಣ್ ಮಿಶ್ರಾ ನೇತ್ರತ್ವದ ನ್ಯಾಯಪೀಠ ತನ್ನ ತೀರ್ಪಿನಲ್ಲಿ ಈ ಅಂಶವನ್ನೇ ವಿಸ್ತರಿಸಿರುವುದು ಸ್ಪಷ್ಟವಾಗುತ್ತದೆ.

ಪರಿಶಿಷ್ಟ ಜಾತಿಗಳನ್ನು ಏಕಸ್ವರೂಪದ ಗುಂಪೆಂದು ಸ್ವೀಕರಿಸಿ ಒಳ ವರ್ಗೀಕರಣವನ್ನು ನಿರಾಕರಿಸುವುದರಿಂದ ಅಸಮಾನತೆಯನ್ನು ಪೋಷಿಸಿದಂತಾಗುತ್ತದೆ ಎಂದು ಹೊಸ ತೀರ್ಪು ಸ್ಪಷ್ಟವಾಗಿ ಹೇಳಿದೆ. ಅಂದಿನ ಅಖಂಡ ಆಂಧ್ರಪ್ರದೇಶದ ಪರಿಶಿಷ್ಟ ಜಾತಿಗಳ ಪಟ್ಟಿ ಸ್ಥೂಲವಾಗಿ ಏಕಸ್ವರೂಪದಲ್ಲಿರುವುದು ನಿಜ; ಅದರೆ ಕರ್ನಾಟಕವೂ ಸೇರಿದಂತೆ ಅನೇಕ ರಾಜ್ಯಗಳ ಪರಿಶಿಷ್ಟ ಜಾತಿಗಳ ಪಟ್ಟಿಯಲ್ಲಿ ಸ್ಪೃಶ್ಯ ಹಾಗು ಅಸ್ಪೃಶ್ಯರೆಂಬ ಎರಡು ಭಿನ್ನ ಗುಂಪುಗಳ ಜಾತಿಗಳಿರುವುದರಿಂದ ‘ಏಕಸ್ವರೂಪದ ಸಮುದಾಯ’ ಎಂದು ಗುರುತಿಸಲಾಗದು. ಹಾಗೆಯೇ ಕರ್ನಾಟಕದ ಮೈಸೂರು ಸಂಸ್ಥಾನದ ವ್ಯಾಪ್ತಿಯಲ್ಲಿ ವ್ಯಾಪಕವಾಗಿ ನೆಲೆಸಿರುವ ಹೊಲೆಯ ಸಮುದಾಯದವರಿಗೆ ‘ನಾಲ್ವಡಿ ಸ್ಪರ್ಶ’ ದಕ್ಕಿದೆ. ಅದರಿಂದಾಗಿ ಮೀಸಲಾತಿಯ ಸದ್ಬಳಕೆಯಲ್ಲಿ ಈ ಸಮುದಾಯ ಎರಡು ಪೀಳಿಗೆಯಷ್ಟು ಮುಂದಿದೆ ಎಂಬುದನ್ನು ಗಮನಿಸಬೇಕು.

ನಿಕೃಷ್ಟ ಜಾತಿ - ಉದ್ಯೋಗ ಮತ್ತು ಬಡತನ - ಈ ಮೂರರ ಬಾಣಲೆಯೊಳಗೆ ಸಿಲುಕಿದವರನ್ನು ಹುರಿದು ಮುಕ್ಕಿಬಿಡಲಾಗುತ್ತದೆ ಎಂದು ಹೊಸತೀರ್ಪು ಹೇಳಿರುವುದು ನಮ್ಮಲ್ಲಿನ ಸಾಮಾಜಿಕ ವ್ಯವಸ್ಥೆಗೆ ಹಿಡಿದ ಕನ್ನಡಿಯಾಗಿದೆ. ಪೌರಕಾರ್ಮಿಕರು, ಸ್ವಚ್ಛತಾಕರ್ಮಿಗಳು, ಹಾದಿಬದಿಯ ಚರ್ಮಕಾರರು, ಅಸ್ತಿತ್ವ ಇಲ್ಲದ ಅಲೆಮಾರಿ ಸಮುದಾಯಗಳ ‘ಹುರಿದು ಮುಕ್ಕಿದ ಬದುಕು’ ಮೀಸಲಾತಿಯೊಳಗಿನ ಅಸಮಾನ ಸ್ಪರ್ಧೆಯನ್ನು ನಿಚ್ಚಳಗೊಳಿಸಿದೆ. ನ್ಯಾಯೋಚಿತ ವರ್ಗೀಕರಣ ಮಾತ್ರ ಈ ಅಸಮಾನ ಸ್ಪರ್ಧೆಯನ್ನು ಸರಿಪಡಿಸಬಲ್ಲದು.

ಹಾಗೆ ನೋಡಿದರೆ ಒಳ ಮೀಸಲಾತಿ ಬಿಜೆಪಿಯ ಸ್ಥಾಪಕ ಚಿಂತಕರಲ್ಲಿ ಒಬ್ಬರಾದ ದೀನದಯಾಳ್ ಉಪಾಧ್ಯಾಯ ಪ್ರತಿಪಾದಿಸಿದ ‘ಅಂತ್ಯೋದಯ’ವೇ ಆಗಿದೆ. ಸಾಲಿನ ಕೊನೆಯಲ್ಲಿ ಉಳಿದವರಿಗೆ ಆದ್ಯತೆ ಸಿಗಬೇಕು, ಅದೇ ನಿಜವಾದ ಸಾಮಾಜಿಕ ನ್ಯಾಯ.

ಒಳ ಮೀಸಲಾತಿಯ ಪ್ರಶ್ನೆ ಕೇವಲ ಕರ್ನಾಟಕದ್ದೂ ಅಲ್ಲ, ಪಂಜಾಬ್, ಹರಿಯಾಣ, ಉತ್ತರಪ್ರದೇಶ, ಬಿಹಾರ, ತೆಲಂಗಾಣ, ಆಂಧ್ರಪ್ರದೇಶ, ತಮಿಳುನಾಡಿನಲ್ಲೂ ವಿವಿಧ ಹಂತಗಳಲ್ಲಿ ಒಳಮೀಸಲಾತಿಯ ಪ್ರಶ್ನೆ ಜ್ವಲಂತವಾಗಿದೆ. ಇದರಲ್ಲಿ ಅನೇಕ ರಾಜ್ಯಗಳಲ್ಲಿ ಬಿಜೆಪಿಗೆ ರಾಜಕೀಯ ನೆಲೆ ವಿಸ್ತರಣೆಗೂ ಇದು ಪೂರಕ.

ನ್ಯಾಯಮೂರ್ತಿ ಅರುಣ್ ಮಿಶ್ರಾ ಪೀಠ ಒಳಮೀಸಲಾತಿಯನ್ನು ಬಲವಾಗಿ ಪ್ರತಿಪಾದಿಸಿದೆಯಾದರೂ ಪೂರ್ತಿ ಬಾಗಿಲು ತೆರೆದಿಲ್ಲ, ಏಳು ಅಥವಾ ಅದಕ್ಕೂ ಹೆಚ್ಚಿನ ಸದಸ್ಯರ ಪೀಠದ ಅನುಮೋದನೆ ಸಿಗಬೇಕು, ಇಲ್ಲವೇ ಸಂಸತ್ತಿನ ಮೂಲಕ 341ನೇ ವಿಧಿಗೆ ತಿದ್ದುಪಡಿಯಾಗಬೇಕು.

ಒಳ ವರ್ಗೀಕರಣ, ಮೀಸಲಾತಿಯ ಮೂಲ ಆಶಯದ ವಿಸ್ತರಣೆಯೇ ಆಗಿದೆ. ಮೀಸಲಾತಿ ಜೊತೆಗೆ ಅದರ ನ್ಯಾಯೋಚಿತ ಹಂಚಿಕೆಯೂ ಸಾಮಾಜಿಕ ನ್ಯಾಯದ ಆಧಾರ ಸ್ತಂಭವೇ ಆಗುತ್ತದೆ. ಹಾಗಾಗಿಯೇ ಒಳಮೀಸಲಾತಿಯನ್ನು ಪರಿಶಿಷ್ಟ ಜಾತಿಗಷ್ಟೆ ಅಲ್ಲ, ಪರಿಶಿಷ್ಟ ಪಂಗಡಕ್ಕೂ ವಿಸ್ತರಿಸಬೇಕು.

(ಲೇಖಕ ಆರ್‌ಎಸ್‌ಎಸ್‌ ಕಾರ್ಯಕರ್ತ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT