ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೆಹಲಿಯಲ್ಲಿ ಕೆಲಸ ಮಾಡದ ಮೋದಿ ಅಲೆ, ಬಿಜೆಪಿಗಿಲ್ಲ ನೆಲೆ

ಬಿಜೆಪಿ ಹಿನ್ನಡೆಗೆ ಕಾರಣಗಳೇನು?
Last Updated 11 ಫೆಬ್ರುವರಿ 2020, 10:38 IST
ಅಕ್ಷರ ಗಾತ್ರ
ADVERTISEMENT
""

ನವದೆಹಲಿ:ಈರುಳ್ಳಿ ಸೇರಿದಂತೆ ತರಕಾರಿಗಳ ದರ ಹೆಚ್ಚಳದ ಪರಿಣಾಮ 1998ರಲ್ಲಿ ದೆಹಲಿಯಲ್ಲಿ ಅಧಿಕಾರ ಕಳೆದುಕೊಂಡಿದ್ದ ಬಿಜೆಪಿಗೆ ಬಳಿಕ ಈವರೆಗೆ ಅಲ್ಲಿ ನೆಲೆ ಕಂಡುಕೊಳ್ಳುವುದು ಸಾಧ್ಯವಾಗಿಲ್ಲ. 2013ರಲ್ಲಿ ಸರಳ ಬಹುಮತದ ಸನಿಹಕ್ಕೆ ಬಂದು ನಿಂತಿದ್ದು ಬಿಟ್ಟರೆ ಇತ್ತೀಚಿನ ವರ್ಷಗಳಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ಹೇಳಿಕೊಳ್ಳುವಂತಹ ಸಾಧನೆ ಬಿಜೆಪಿ ಮಾಡಿಲ್ಲ (ಲೋಕಸಭೆ ಚುನಾವಣೆ ಹೊರತುಪಡಿಸಿ). 2015ರ ವಿಧಾನಸಭೆ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಅಲೆಯಿಂದ ಗೆಲುವಿನ ಕನಸು ಕಂಡಿದ್ದರೂ ಹೀನಾಯವಾಗಿ ಸೋಲನುಭವಿಸಬೇಕಾಯಿತು.

ಈ ಬಾರಿ ಬಿಜೆಪಿ ತುಸು ಚೇತರಿಕೆ ಕಂಡಿದ್ದರೂ ಗೆಲುವನ್ನು ಅಧಿಕಾರದ ಮೆಟ್ಟಿಲಾಗಿ ಪರಿವರ್ತಿಸುವ ಹಂತಕ್ಕೆ ಬರಲು ಸಾಧ್ಯವಾಗಲಿಲ್ಲ. 2015ರಲ್ಲಿ ಇದ್ದುದಕ್ಕಿಂತ ಹೆಚ್ಚು ಸ್ಥಾನ ಪಡೆಯಲು ಸಾಧ್ಯವಾಗಿದ್ದು ಮತ್ತು ಮತಹಂಚಿಕೆ ಪ್ರಮಾಣ ಹೆಚ್ಚಾಗಿರುವುದು ಪಕ್ಷಕ್ಕಾದ ಲಾಭವಷ್ಟೆ. 2015ರ ವಿಧಾನಸಭೆ ಚುನಾವಣೆಯಲ್ಲಿ ಮೂರು ಸ್ಥಾನ ಗೆದ್ದಿದ್ದ ಬಿಜೆಪಿ ಶೇ 32.2 ಮತಹಂಚಿಕೆ ಪಡೆದಿತ್ತು. ಈ ಬಾರಿ 7 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದು ಶೇ 38.7 ಮತ ಹಂಚಿಕೆ ಗಳಿಸಿದೆ.

ಮೋದಿಯನ್ನೇ ನೆಚ್ಚಿಕೊಂಡಿದ್ದು ಮುಳುವಾಯ್ತೇ?:ಐದು ವರ್ಷ ಹಿಂದೆಯೂ ವಿಧಾನಸಭೆ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನೇ ನೆಚ್ಚಿಕೊಂಡಿದ್ದ ಬಿಜೆಪಿ ಈ ಬಾರಿಯೂ ಅವರನ್ನೇ ಅವಲಂಬಿಸಿತ್ತು. ಮೋದಿ ವರ್ಚಸ್ಸು, ಲೋಕಸಭಾ ಚುನಾವಣೆಯಲ್ಲಿ ದೆಹಲಿಯಲ್ಲಿ ಸಿಕ್ಕಿದ ಗೆಲುವು, ಕೇಜ್ರಿವಾಲ್ ವೈಫಲ್ಯಗಳು (ಬಿಜೆಪಿ ನಾಯಕರು ಹೇಳಿಕೊಂಡಂತೆ) ಗೆಲುವಿಗೆ ಮೆಟ್ಟಿಲುಗಳಾಗಬಹುದು ಎಂಬ ಲೆಕ್ಕಾಚಾರಬಿಜೆಪಿ ನಾಯಕರಲ್ಲಿತ್ತು. ಆದರೆ ಇದು ಪ್ರಯೋಜನಕ್ಕೆ ಬರಲಿಲ್ಲ.

ಮುಗಿಯದ ಆಂತರಿಕ ಗೊಂದಲ:ಬಿಜೆಪಿಯ ದೆಹಲಿ ಘಟಕವು ಆಂತರಿಕವಾಗಿ ಹಲವು ಸಮಸ್ಯೆಗಳನ್ನು, ಗೊಂದಲಗಳನ್ನು ಎದುರಿಸುತ್ತಿದೆ. ಪಕ್ಷದ ದೆಹಲಿ ಘಟಕದ ಮುಖ್ಯಸ್ಥ ಮನೋಜ್ ತಿವಾರಿಗೆ ಕೇಂದ್ರ ಸಚಿವರಾದ ವಿಜಯ್ ಗೋಯಲ್ ಮತ್ತು ವಿಜೇಂದರ್ ಗುಪ್ತಾ ಬಣಗಳ ಸವಾಲು ಒಂದೆಡೆಯಾದರೆ, ಪರವೇಶ್ ವರ್ಮಾ ಸಹ ಇತ್ತೀಚಿನ ದಿನಗಳಲ್ಲಿ ಪಕ್ಷದ ಮೇಲೆ ಹಿಡಿತ ಸಾಧಿಸಲು ಪ್ರಯತ್ನಿಸುತ್ತಿದ್ದಾರೆ. ದೆಹಲಿ ಘಟಕದ ಮಾಜಿ ಅಧ್ಯಕ್ಷ ಸತೀಶ್ ಉಪಾಧ್ಯಾಯ ಸಹ ಪಕ್ಷದ ಪ್ರಮುಖ ಹುದ್ದೆ ಮೇಲೆ ಕಣ್ಣಿಟ್ಟಿದ್ದರು. ಕೇಂದ್ರ ಸಚಿವ ಹರ್ಷವರ್ಧನ್ ಅವರ ನಿಷ್ಠಾವಂತರ ತಂಡ ಚುನಾವಣೆ ಗೆಲುವಿನ ದೃಷ್ಟಿಯಿಂದ ಹೆಚ್ಚು ಕೆಲಸ ಮಾಡಿರಲಿಲ್ಲ ಎಂದೂ ಕೆಲವು ಮೂಲಗಳು ಹೇಳಿವೆ. ಈ ಎಲ್ಲ ಅಂಶಗಳು ಬಿಜೆಪಿಗೆ ಹಿನ್ನಡೆ ಉಂಟುಮಾಡಿದವು. ರಾಷ್ಟ್ರೀಯ ನಾಯಕರು ಅಬ್ಬರದ ಪ್ರಚಾರ ನಡೆಸಿದರೂ ಸ್ಥಳೀಯ ನಾಯಕರು ಜನರ ಒಲವು ಗಳಿಸುವಲ್ಲಿ ವಿಫಲರಾದರು ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ಸಿಎಎ ವಿರೋಧಿ ಪ್ರತಿಭಟನೆಗಳು:ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರುದ್ಧ ದೆಹಲಿಯಲ್ಲಿ ನಿರಂತರವಾಗಿ ನಡೆಯುತ್ತಿರುವ ಪ್ರತಿಭಟನೆಗಳೂ ಬಿಜೆಪಿಗೆ ಹಿನ್ನಡೆ ಉಂಟುಮಾಡಿದವು ಎನ್ನಲಾಗುತ್ತಿದೆ. ಪ್ರತಿಭಟನಾನಿರತರ ಮೇಲೆ ನಡೆದ ದಾಳಿಗಳು, ವಿಶ್ವವಿದ್ಯಾಲಯಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ಪೊಲೀಸರು ಕ್ರಮ ಕೈಗೊಂಡದ್ದು ಜನರಲ್ಲಿ ಬಿಜೆಪಿ ಬಗ್ಗೆ ಅಸಮಾಧಾನಕ್ಕೆ ಕಾರಣವಾಗಿರಬಹುದು. ಮೋದಿ–ಶಾ ನಾಯಕತ್ವವು ಜನಸಾಮಾನ್ಯರ ಭಾವನೆಗಳು ಮತ್ತು ಆತಂಕಕ್ಕೆ ಬೆಲೆ ನೀಡುತ್ತಿಲ್ಲ ಎಂಬ ಭಾವನೆ ಮೂಡಿಸಿರಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.

‘ಬಿಜೆಪಿ ಹಿಂದುತ್ವವನ್ನು ಹೇರಲು ಯತ್ನಿಸುತ್ತಿದೆ ಎಂಬ ಭಾವನೆ ದೆಹಲಿಯ ಶೇ 12–13ರಷ್ಟು ಮುಸ್ಲಿಮರಲ್ಲಿದೆ. ಇದು ಸ್ವಲ್ಪ ಮಟ್ಟಿಗೆ ಇದ್ದ ಆಡಳಿತ ವಿರೋಧಿ ಅಲೆಯನ್ನು ಮೆಟ್ಟಿ ನಿಲ್ಲುವಲ್ಲಿ ಆಡಳಿತಾರೂಢ ಪಕ್ಷಕ್ಕೆ ನೆರವಾಯಿತು’ ಎಂದು ಎಎಪಿ ನಾಯಕರೊಬ್ಬರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕೇಜ್ರಿವಾಲ್ ಜನಪರ ಯೋಜನೆಗಳು:ಕೇಜ್ರಿವಾಲ್ ಸರ್ಕಾರದ ಉಚಿತ ನೀರು ಸರಬರಾಜು, 200 ಯೂನಿಟ್‌ಗಳವರೆಗೆ ಉಚಿತ ವಿದ್ಯುತ್, ₹ 5 ಲಕ್ಷವರೆಗಿನ ಉಚಿತ ಚಿಕಿತ್ಸೆ, ಶಾಲಾ ಆಡಳಿತ ಸುಧಾರಣೆ ಯೋಜನೆಗಳು ಎಎಪಿಯ ಕೈಹಿಡಿದವು. ಆದರೆ ಬಿಜೆಪಿಯು ಕೇಜ್ರಿವಾಲ್ ಅವರ ಕುರಿತಾದ ವೈಯಕ್ತಿಕ ನಿಂದನೆ, ಆರೋಗ್ಯ ಮತ್ತು ಶಿಕ್ಷಣ ಯೋಜನೆಗಳಲ್ಲಿ ಅವ್ಯವಹಾರ ನಡೆದಿವೆ ಎಂಬ ಆರೋಪಗಳನ್ನೇ ಪ್ರಚಾರಕ್ಕೆ ನೆಚ್ಚಿಕೊಂಡಿತು. ಆದರೆ, ಮತದಾರ ಇದನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಕೇಜ್ರಿವಾಲ್ ಸರ್ಕಾರ ಜನಪ್ರಿಯ ಯೋಜನೆಗಳತ್ತ ಮುಖ ಮಾಡಿದರೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಸಬ್ಸಿಡಿಗಳನ್ನು ಕಡಿತ ಮಾಡುವ ಒಲವು ಹೊಂದಿರುವುದು ಈ ಹಿಂದಿನ ನಿರ್ಧಾರಗಳಿಂದ ಸ್ಪಷ್ಟವಾಗಿತ್ತು. ಇದೂ ಬಿಜೆಪಿಗೆ ಹಿನ್ನಡೆಯುಂಟುಮಾಡಿತು.

ದೆಹಲಿಯಲ್ಲಿ ಕುಡಿಯುವ ನೀರು ಶುದ್ಧವಾಗಿಲ್ಲ ಎಂದುಭಾರತೀಯ ಗುಣಮಟ್ಟ ಮಾಪನ ಸಂಸ್ಥೆ (ಬಿಐಎಸ್‌) ನಡೆಸಿದ ಅಧ್ಯಯನದ ವರದಿಯಲ್ಲಿ ಹೇಳಲಾಗಿತ್ತು. ಈ ವಿಚಾರವಾಗಿ ಗಮನ ಸೆಳೆಯುವ ಕೆಲಸವನ್ನು ಪ್ರಚಾರದ ವೇಳೆ ಬಿಜೆಪಿ ಮಾಡಲೇ ಇಲ್ಲ. ಶುದ್ಧ ಕುಡಿಯುವ ನೀರು, ಯಮುನಾ ನದಿ ಶುಚಿತ್ವ ಇತ್ಯಾದಿ ವಿಚಾರಗಳನ್ನು ಚುನಾವಣಾ ವಿಷಯವನ್ನಾಗಿಸಿ ಎಎಪಿಗೆ ಸೆಡ್ಡು ಹೊಡೆಯಲು ಬಿಜೆಪಿ ಪ್ರಯತ್ನಿಸಬಹುದಿತ್ತು. ಆದರೆ ಸಿಎಎ, ಎನ್‌ಪಿಆರ್‌, ಎನ್‌ಆರ್‌ಸಿ ಇವುಗಳಿಗೇ ಪ್ರಚಾರದ ವೇಳೆ ಹೆಚ್ಚು ಒತ್ತು ನೀಡಿತು. ಅಂತಿಮವಾಗಿ ಇದರಿಂದ ಬಿಜೆಪಿಗೆ ಹಿನ್ನಡೆಯೇ ಆಯಿತು.

ಹಿಂದುತ್ವದ ಮಂತ್ರಕ್ಕೆ ಕೇಜ್ರಿವಾಲ್ ತಿರುಮಂತ್ರ:2015ರಲ್ಲಿ ಎಡಪಂಥೀಯ ಒಲವುಳ್ಳ ಪಕ್ಷಗಳ ಜತೆ ಗುರುತಿಸಿಕೊಂಡಿದ್ದ ಕೇಜ್ರಿವಾಲ್ ಇತ್ತೀಚೆಗೆ ಹಿಂದುತ್ವ ಪರ ಹೇಳಿಕೆಗಳನ್ನು ನೀಡಿದ್ದರು. ಜಮ್ಮು–ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದತಿಗೆ ಬೆಂಬಲ ಸೂಚಿಸಿದ್ದರು. ಕಳೆದ ವರ್ಷ ‘ತೀರ್ಥಯಾತ್ರಾ’ ಯೋಜನೆಯನ್ನೂ ಅನುಷ್ಠಾನಗೊಳಿಸಿದ್ದರು.

ಕೇಜ್ರಿವಾಲ್ ಓರ್ವ ಭಯೋತ್ಪಾದಕ ಎನ್ನಲು ಸಾಕಷ್ಟು ಆಧಾರಗಳಿವೆ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಇತ್ತೀಚೆಗೆ ಟೀಕಿಸಿದ್ದರು. ಅದಕ್ಕೆ ತಿರುಗೇಟು ನೀಡಿದ್ದ ಕೇಜ್ರಿವಾಲ್, ‘ನಾನೊಬ್ಬ ನಿಷ್ಠೆಯ ಹಿಂದೂ’ ಎಂದು ಹೇಳಿದ್ದರು. ಅಲ್ಲದೆ, ‘ಶಾಹೀನ್‌ಬಾಗ್‌ನಲ್ಲಿ ಸಿಎಎ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆಯ ವಿಷಯವನ್ನಿಟ್ಟುಕೊಂಡೇ ದೆಹಲಿಯಲ್ಲಿ ಬಿಜೆಪಿ ಚುನಾವಣಾ ಪ್ರಚಾರ ನಡೆಸುತ್ತಿದೆ, ನನ್ನನ್ನು ಹಿಂದೂ ವಿರೋಧಿಯೆಂದು ಬಿಂಬಿಸಲು ಯತ್ನಿಸುತ್ತಿದೆ’ ಎಂದು ಆರೋಪಿಸಿದ್ದರು. ಚುನಾವಣಾ ಪ್ರಚಾರದ ಅಂಗವಾಗಿ, ‘ದೇಶಕ್ಕೆ ಮೋದಿ, ದೆಹಲಿಗೆ ಕೇಜ್ರಿ’ ಎಂಬ ಬರಹಗಳುಳ್ಳ ಬ್ಯಾನರ್‌ಗಳು ದೆಹಲಿಯ ಹಲವೆಡೆ ರಾರಾಜಿಸಿದ್ದವು. ಈ ಪೈಕಿ ಕೆಲವರಲ್ಲಿ ಆರ್‌ಎಸ್‌ಎಸ್, ಬಿಜೆಪಿ ಕಾರ್ಯಕರ್ತರ ಸಹಿಯೂ ಇದ್ದವು. ಈ ಎಲ್ಲ ಅಂಶಗಳು ಹಿಂದುತ್ವ ಮತಬ್ಯಾಂಕ್‌ ಸೆಳೆಯುವ ಬಿಜೆಪಿ ಪ್ರಯತ್ನಕ್ಕೆ ಅಡ್ಡಿಯುಂಟುಮಾಡಿದವು ಎಂದು ರಾಜಕೀಯ ವಲಯದಲ್ಲಿ ವಿಶ್ಲೇಷಿಸಲಾಗುತ್ತಿದೆ.

ಚುನಾವಣಾ ಪ್ರಚಾರದ ವೇಳೆ ದೆಹಲಿಯ ಹಲವೆಡೆ ಕಾಣಿಸಿದ್ದ ‘ದೇಶಕ್ಕೆ ಮೋದಿ, ದೆಹಲಿಗೆ ಕೇಜ್ರಿ’ ಎಂಬ ಬರಹಗಳುಳ್ಳ ಬ್ಯಾನರ್‌ಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT