ಸೋಮವಾರ, ಮಾರ್ಚ್ 30, 2020
19 °C
ಕರಗಿದ ಹಿಮನದಿಗಳು ಹಲವು ದೇಶಗಳ ಆರ್ಥಿಕ ಸ್ಥಿತಿಯನ್ನು ಬುಡಮೇಲು ಮಾಡಿವೆ

ಹಿಮನದಿಗಳಿಗೂ ತಟ್ಟಿದ ಬಿಸಿ

ಟಿ. ಆರ್. ಅನಂತರಾಮು Updated:

ಅಕ್ಷರ ಗಾತ್ರ : | |

‘ವಿಶ್ವ ಸಂಪನ್ಮೂಲ ಸಂಸ್ಥೆ’ ಇತ್ತೀಚೆಗೆ ಬಿಡುಗಡೆ ಮಾಡಿರುವ ನಕ್ಷೆಯಲ್ಲಿ, ಜಾಗತಿಕ ಮಟ್ಟದಲ್ಲಿ ತೀವ್ರ ಜಲ ಒತ್ತಡ ಅನುಭವಿಸುತ್ತಿರುವ ಹದಿನೇಳು ರಾಷ್ಟ್ರಗಳಲ್ಲಿ ಭಾರತ ಹದಿಮೂರನೇ ಸ್ಥಾನದಲ್ಲಿದೆ. ಕತಾರ್, ಇಸ್ರೇಲ್, ಲೆಬನಾನ್‌ ಸ್ಥಾನದಲ್ಲಿ ಅಲ್ಪಸ್ವಲ್ಪ ಬದಲಾದರೂ ಅಂಥ ವ್ಯತ್ಯಾಸವೇನಿಲ್ಲ. ಇವು, ಪಟ್ಟಿಯ ಮೊದಲ ಐದು ದೇಶಗಳಲ್ಲೇ ಶಾಶ್ವತವಾಗಿ ಕಾಣಿಸಿಕೊಳ್ಳುತ್ತವೆ. ಈ ಹದಿನೇಳು ದೇಶಗಳು ಜಗತ್ತಿನ ಜನಸಂಖ್ಯೆಯಲ್ಲಿ ಕಾಲುಭಾಗವನ್ನು ಪ್ರತಿನಿಧಿಸುತ್ತವೆ ಎಂಬುದು ಗಮನಾರ್ಹ.

ಜಲಕ್ಷಾಮ ಎಂದೊಡನೆ ಮುಂದಿನ ಹಂತ ಭೂಮಿಯ ಅಂತರ್ಜಲ ಭಂಡಾರಕ್ಕೆ ಕೈ ಹಾಕುವುದು. ಹೀಗಾಗಿ ಈ ದೇಶಗಳು ತಮ್ಮ ಅಂತರ್ಜಲ ಭಂಡಾರದ ಶೇ 80ರಷ್ಟು ಭಾಗವನ್ನು ಖಾಲಿ ಮಾಡಿಬಿಟ್ಟಿವೆ. ಭಾರತದ ಮಟ್ಟಿಗೆ ನೀತಿ ಆಯೋಗ ಹೌದೆಂದು ಒಪ್ಪಿಕೊಂಡಿದೆ. ಭಾರತವು ಹಿಂದೆಂದಿಗಿಂತ ಹೆಚ್ಚು ಜಲ ಒತ್ತಡವನ್ನು ಅನುಭವಿಸುತ್ತಿದೆ ಎಂಬುದು ಉತ್ಪ್ರೇಕ್ಷೆಯಲ್ಲವೆಂದೂ ಅದು ಪ್ರತಿಕ್ರಿಯಿಸಿದೆ. ಈ ಹದಿನೇಳು ದೇಶಗಳಲ್ಲಿ ಭಾರತದ ಜನಸಂಖ್ಯೆಯು ಉಳಿದೆಲ್ಲ ದೇಶಗಳಿಗಿಂತ ಮೂರು ಪಟ್ಟು ಹೆಚ್ಚು. ಸಹಜವಾಗಿ ನೀರಿನ ಬಳಕೆ ಅಷ್ಟೇ ಪ್ರಮಾಣದಲ್ಲಿ ಏರುತ್ತಿದೆ.

ಭಾರತದ ಉಳಿದ ರಾಜ್ಯಗಳ ಜಲಕ್ಷಾಮ, ಜಲ ನಿರ್ವಹಣೆಯನ್ನು ಆಚೆಗಿಟ್ಟು ನೋಡಿದರೆ, ಎದ್ದುಕಾಣುವುದು ಹಿಮಾಲಯದ ಬುಡದಲ್ಲಿ ಅಥವಾ ಅದರ ಒಂದು ಭಾಗವೇ ಆಗಿರುವ ಉತ್ತರ ರಾಜ್ಯಗಳ ವಿಷಮ ಸ್ಥಿತಿ. ಇವು ನೇರವಾಗಿ ಅವಲಂಬಿಸಿರುವುದು ಸರ್ವಋತು ಮಹಾನದಿಗಳನ್ನೇ. ಈ ನದಿಗಳು ಆಶ್ರಯಿಸಿರುವುದು ಹಿಮನದಿಗಳನ್ನೇ. ಹಿಂದೂಕುಷ್ ಪರ್ವತಶ್ರೇಣಿಗಳೂ ಸೇರಿದಂತೆ ಹಿಮಾಲಯ ಪರ್ವತದಲ್ಲಿ ಹತ್ತಿರ ಹತ್ತಿರ 10 ಸಾವಿರ ಹಿಮನದಿಗಳಿವೆ. ಇವು ಒಟ್ಟು 12 ಸಾವಿರ ಘನ ಕಿಲೊಮೀಟರ್ ಸಿಹಿನೀರನ್ನು ಹಿಡಿದಿಟ್ಟಿವೆ. ಆದರೆ ಈ ಅಂಕಿಅಂಶ ದಶಕದಿಂದ ಏರುಪೇರಾಗುತ್ತಿದೆ.

ಕಳೆದ 25 ವರ್ಷಗಳಲ್ಲಿ ಹಿಮಾಲಯದ ಹಿಮನದಿಗಳು ಕರಗುತ್ತಿರುವುದು ಹಿಂದಿನ ದಶಕಗಳಿಗಿಂತ ಎರಡು ಪಟ್ಟು ಹೆಚ್ಚಾಗಿದೆ. ಕರಗುವುದೆಂದರೆ ಹಿಂದೆ ಹಿಂದಕ್ಕೆ ಸರಿಯುವುದು; ಗಾತ್ರದಲ್ಲಿ ಕುಗ್ಗುವುದು. 1975-2000ದ ನಡುವೆ ಇಡೀ ಹಿಮಾಲಯವು 400 ಕೋಟಿ ಟನ್‌ ಹಿಮಗಡ್ಡೆಯನ್ನು ಕಳೆದುಕೊಂಡಿದೆ. ಕಳೆದ ಎರಡು ದಶಕಗಳಲ್ಲಿ ವಾರ್ಷಿಕ 800 ಕೋಟಿ ಟನ್‌ ಹಿಮ ನಷ್ಟ ಅನುಭವಿಸಿದೆ. ಇದನ್ನು ಸರಳಗೊಳಿಸಿ ಹೇಳುವುದಾದರೆ, ಇಷ್ಟೂ ಹಿಮಗಡ್ಡೆಗಳಿಂದ ಬರುವ ನೀರನ್ನು ಹರಿಸಿದರೆ 32 ಲಕ್ಷ ಒಲಿಂಪಿಕ್ ಈಜುಕೊಳಗಳನ್ನು ತುಂಬಬಹುದು ಎಂಬುದು ಹಿಮ ವಿಜ್ಞಾನಿಗಳ ಲೆಕ್ಕ. ಕಳೆದ 20 ವರ್ಷಗಳಲ್ಲಿ ಹಿಮಾಲಯದ ನೆತ್ತಿಯಲ್ಲಿ ಒಂದು ಡಿಗ್ರಿ ಸೆಲ್ಷಿಯಸ್ ಉಷ್ಣತೆ ಹೆಚ್ಚಿದೆ. ಜಾಗತಿಕ ಉಷ್ಣತೆಯಲ್ಲಿ ಹೆಚ್ಚಳವಾದರೆ ಹಿಮಾಲಯವೂ ಅದಕ್ಕೆ ಹೊರತಲ್ಲ.

ಅಮೆರಿಕ ತನ್ನ ಬೇಹುಗಾರಿಕಾ ಉಪಗ್ರಹಗಳನ್ನು ಬಳಸುತ್ತಿರುವುದು ಗುಟ್ಟೇನಲ್ಲ. ಆದರೆ ಅದು ಕೊಡುವ ಮಾಹಿತಿಯನ್ನು ಸಂಪನ್ಮೂಲ ನಷ್ಟ ಅಥವಾ ಲಾಭವಾಗಿರುವ ಪ್ರದೇಶಗಳನ್ನು ಗುರುತಿಸಲು ವಿಜ್ಞಾನಿಗಳು ಬಳಸುತ್ತಿದ್ದಾರೆ. ಹಿಮನದಿಗಳ ಸ್ಥಿತಿಗಳ ಬಗ್ಗೆಯೂ ಇದರಿಂದ ಮಾಹಿತಿ ಸಿಕ್ಕುತ್ತದೆ. ಗಂಗಾ ನದಿಯ ಪ್ರಮುಖ ಉಪನದಿಯಾಗಿ ಸೇರುವ ಗಂಗೋತ್ರಿ ಬಹು ದೊಡ್ಡ ಹಿಮನದಿ. ಅದು ಭಾಗೀರಥಿ ನದಿಯ ಮೂಲವೂ ಹೌದು. ಇದೊಂದೇ 27 ಘನ ಕಿಲೊಮೀಟರ್ ನೀರನ್ನು ಹಿಡಿದಿಟ್ಟುಕೊಂಡಿದೆ. ಅಮೆರಿಕದ ನಾಸಾ ಸಂಸ್ಥೆ ಮತ್ತು ಅಲ್ಲಿನ ಭೂವೈಜ್ಞಾನಿಕ ಸಮೀಕ್ಷಾ ಸಂಸ್ಥೆ ಜಂಟಿಯಾಗಿ, ಜಗತ್ತಿನ ಬೇರೆ ಬೇರೆ ಭಾಗಗಳಲ್ಲಿ ಹಿಮನದಿಗಳ ಸ್ಥಿತಿಗತಿಯನ್ನು ಅರಿಯಲು ಇನ್ನಷ್ಟು ಉಪಗ್ರಹಗಳ ನೆರವನ್ನು ಪಡೆಯುತ್ತಿವೆ. ಗಂಗೋತ್ರಿ ಹಿಮನದಿ 1757ರಿಂದ ಈವರೆಗೆ ತನ್ನ ಮೂಲದಿಂದ 1,147 ಮೀಟರ್ ಹಿಂದೆ ಸರಿದಿದೆ. ಈಗ ವಾರ್ಷಿಕ 19 ಮೀಟರ್ ಹಿಂದೆ ಸರಿಯುತ್ತಿದೆ ಎಂಬ ಮಾಹಿತಿ ಸಿಕ್ಕಿದೆ. ಇದು ಗಂಗೋತ್ರಿ ನದಿಯೊಂದರ ಕಥೆಯಲ್ಲ. ಆಲ್ಪ್ಸ್ ಪರ್ವತಗಳದ್ದೂ ಇದೇ ಸ್ಥಿತಿ.

25 ಲಕ್ಷ ವರ್ಷಗಳ ಹಿಂದೆ ಹಿಮಯುಗ ಪರಾಕಾಷ್ಠೆಯಲ್ಲಿದ್ದಾಗ, ಹಿಮಾಲಯದ ಎಲ್ಲ ಹಿಮನದಿಗಳೂ ಕನಿಷ್ಠ 100 ಕಿಲೊಮೀಟರ್ ಉದ್ದವಿದ್ದವು. ಈಗ ಗಂಗೋತ್ರಿಯೂ ಸೇರಿದಂತೆ ಯಾವುವೂ 30 ಕಿಲೊಮೀಟರ್‌ಗಿಂತ ಹೆಚ್ಚು ಉದ್ದವಿಲ್ಲ. ಏರುತ್ತಿರುವ ಉಷ್ಣತೆ ಇನ್ನೊಂದು ಬಗೆಯಲ್ಲೂ ಅಪಾಯಕಾರಿಯಾಗಿ ಕಾಡುತ್ತಿದೆ. ಹಿಂದೂಕುಷ್ ಪರ್ವತಶ್ರೇಣಿಯಲ್ಲಿ ಹಿಮನದಿಗಳೇ ಛಿದ್ರವಾಗಿ ಒಂದೊಂದೂ ಕೊಳಗಳಾಗಿ ತುಂಬಿ ಯಾವ ಗಳಿಗೆಯಲ್ಲಾದರೂ ಸ್ಫೋಟಿಸಬಹುದು ಎಂಬ ಭಯ ಹುಟ್ಟಿಸುತ್ತಿವೆ. ಹಿಂದೂಕುಷ್ ಪರ್ವತಮಾಲೆ ಒಂದರಲ್ಲೇ 8,750 ಹಿಮನದಿ ಕೊಳಗಳಿವೆ. ಭಾರತದ ಪಶ್ಚಿಮ ಭಾಗ ಸೇರಿದಂತೆ ಎಂಟು ದೇಶಗಳು ಹಿಂದೂಕುಷ್ ಪರ್ವತಮಾಲೆಯಲ್ಲೇ ಬರುತ್ತವೆ.

ಹಿಮಾಲಯ ಪರ್ವತಶ್ರೇಣಿಯನ್ನು ಕೈಗಾರಿಕಾ ಕ್ರಾಂತಿಯೇ ಮೊದಲು ಕಾಡಲಾರಂಭಿಸಿತು. ಇಂಗ್ಲೆಂಡಿನಲ್ಲಾದ ಕೈಗಾರಿಕಾ ಕ್ರಾಂತಿಯೊಟ್ಟಿಗೇ ಸಾಗಿದ ಕಲ್ಲಿದ್ದಲ ದಹನಕ್ಕೆ ಹಿಮಾಲಯದಲ್ಲಿಯೇ ಸಾಕ್ಷಿ ಸಿಕ್ಕಿದೆ. ಹಿಮಾಲಯ ಶ್ರೇಣಿಯಲ್ಲಿರುವ ದಾನುವೋಪು ಎನ್ನುವ, 7,200 ಮೀಟರ್ ಎತ್ತರದಲ್ಲಿರುವ ಹಿಮನದಿಯಲ್ಲಿ ವಿಜ್ಞಾನಿಗಳು ಬೈರಿಗೆ ಹಾಕಿ ತಿರುಳು ತೆಗೆದು ವಿಶ್ಲೇಷಿಸಿದಾಗ, ಕಲ್ಲಿದ್ದಲ ದಹನದಿಂದ ಹೊರಬರುವ ಕ್ಯಾಡ್ಮಿಯಂ, ಕ್ರೋಮಿಯಂ, ನಿಕ್ಕಲ್ ಮುಂತಾದ ವಿಷಕಾರಿ ಧಾತುಗಳು ಕಂಡುಬಂದವು. ಹದಿನೆಂಟನೇ ಶತಮಾನದಲ್ಲೇ ಈ ಮಾಲಿನ್ಯಕಾರಕಗಳು ಗಾಳಿಯಲ್ಲಿ ತೇಲಿ ಹಿಮಾಲಯದ ಹಿಮಸ್ತರಗಳನ್ನು ಸೇರಿದವು. ಈಗ ಹಿಮಸ್ತರದ ಕಾಲನಿರ್ಣಯ ಮಾಡುವುದು ಕಷ್ಟವೇನಿಲ್ಲ. ಹಿಮಾಲಯವೊಂದಕ್ಕೇ ಇಷ್ಟೊಂದು ಸಮಸ್ಯೆಗಳು ಎದುರಾಗಿವೆಯೇ? ಹಾಗೇನಿಲ್ಲ, ಆಲ್ಪ್ಸ್ ಪರ್ವತಶ್ರೇಣಿಯಲ್ಲೂ ಹಿಮನದಿಗಳು ಹಿಂದೆ ಹಿಂದಕ್ಕೆ ಸರಿಯುತ್ತಿರುವುದು ಢಾಳಾಗಿ ಕಾಣುತ್ತಿದೆ.

ಭೂಮಿಯ ದಕ್ಷಿಣ ಧ್ರುವದಲ್ಲಿರುವ ಅಂಟಾರ್ಕ್‌ಟಿಕ ಖಂಡವು ಹಿಮಖಂಡವೆಂದೇ ಖ್ಯಾತ. ಅಲ್ಲಿನ ನೆಲವನ್ನು ಮೂರು ಕಿಲೊಮೀಟರ್ ದಪ್ಪದ ಹಿಮಸ್ತರಗಳು ಮುಚ್ಚಿಬಿಟ್ಟಿವೆ. ಈ ಖಂಡವು ಹಿಮಯುಗದ ಪಳೆಯುಳಿಕೆ. ಜಗತ್ತಿನ ಶೇ 90ರಷ್ಟು ಭಾಗದ ಸಿಹಿನೀರು ಬರ್ಪದ ರೂಪದಲ್ಲಿ ಇಲ್ಲಿ ಘನೀಭವಿಸಿದೆ. ಕಳೆದ ತಿಂಗಳು ಈ ಖಂಡದ ಹೊರಗಿನ ದ್ವೀಪವೊಂದರಲ್ಲಿ ಅರ್ಜೆಂಟಿನಾ ಶಿಬಿರದಲ್ಲಿ ಉಷ್ಣತೆಯನ್ನು ಅಳೆದಾಗ, ಮೊದಲ ಬಾರಿಗೆ 18.3 ಡಿಗ್ರಿ ಸೆಲ್ಷಿಯಸ್ ದಾಖಲಾಯಿತು. ಹಿಂದೆ 1983ರಲ್ಲಿ ರಷ್ಯಾದ ಓಸ್ತಾಕ್ ಎಂಬ ಭಾಗದಲ್ಲಿ ಉಷ್ಣತೆ ಮೈನಸ್ 89 ಡಿಗ್ರಿ ಸೆಲ್ಷಿಯಸ್ ತಲುಪಿ ದಾಖಲೆ ಸ್ಥಾಪಿಸಿತ್ತು. ಈಗಲೂ ಕಡುಬೇಸಿಗೆಯಲ್ಲಿ ಅಲ್ಲಿ ಮೈನಸ್ 14 ಡಿಗ್ರಿ ಸೆಲ್ಷಿಯಸ್ ಉಷ್ಣತೆ ಇರುತ್ತದೆ. ಸದ್ಯ ಪೆಂಗ್ವಿನ್‍ಗಳು ಮೊಟ್ಟೆ ಇಡುವ ಜಾಗವನ್ನೇ ಬದಲಾಯಿಸುವಷ್ಟು ಹವಾಗುಣ ವೈಪರೀತ್ಯ ಅಲ್ಲಿ ತಲೆದೋರಿದೆ.

ಅಂಟಾರ್ಕ್‌ಟಿಕವನ್ನು ಹೊರತುಪಡಿಸಿದರೆ ಅತಿ ದೊಡ್ಡ ಹಿಮರಾಶಿ ಇರುವುದು ಗ್ರೀನ್‍ಲ್ಯಾಂಡಿನಲ್ಲಿ. ಅದು ಡೆನ್ಮಾರ್ಕ್‌ನ ಆಡಳಿತದಲ್ಲಿದೆ. ಅಲ್ಲೂ ಹಿಮ ಕರಗುತ್ತಿದೆ. 1992- 2018ರ ನಡುವೆ ಗ್ರೀನ್‍ಲ್ಯಾಂಡಿನಲ್ಲಿ ಲಕ್ಷಾಂತರ ಟನ್‌ ಹಿಮಗಡ್ಡೆ ಕರಗಿಹೋಗಿದೆ. ಇದು ಇನ್ನೊಂದು ವಿಚಿತ್ರ ಸನ್ನಿವೇಶವನ್ನು ನಿರ್ಮಾಣ ಮಾಡಿದೆ. ಗ್ರೀನ್‍ಲ್ಯಾಂಡಿನ ಅನೇಕ ಭಾಗಗಳಲ್ಲಿ ತೈಲ ಕ್ಷೇತ್ರಗಳು ಪತ್ತೆಯಾಗಿವೆ, ವಿರಳ ಲೋಹಗಳಿರುವ ಜಾಗಗಳು ಕಂಡುಬಂದಿವೆ. ಇದು ತಿಳಿದೊಡನೆ ಅಮೆರಿಕವು ಇಡೀ ಗ್ರೀನ್‍ಲ್ಯಾಂಡನ್ನೇ ಕೊಳ್ಳುವ ಪ್ರಸ್ತಾಪವನ್ನು ಮುಂದಿಟ್ಟಿತ್ತು. ಗ್ರೀನ್‍ಲ್ಯಾಂಡ್ ಒಪ್ಪದ ಕಾರಣ ಟ್ರಂಪ್ ಮುನಿಸಿಕೊಂಡಿದ್ದೂ ಉಂಟು. ಬಹು ಹಿಂದೆಯೇ ಯೋಜಿಸಿದ್ದ ಗ್ರೀನ್‍ಲ್ಯಾಂಡ್ ಭೇಟಿಯನ್ನು ಇದಾದ ಮೇಲೆ ದಿಢೀರೆಂದು ರದ್ದು ಮಾಡಲಾಯಿತು.

ಬಹುಶಃ ಕರಗಿದ ಹಿಮಸ್ತರದಿಂದ ಹೆಚ್ಚು ಲಾಭ ಮಾಡಹೊರಟಿರುವುದು ಗ್ರೀನ್‍ಲ್ಯಾಂಡ್ ಒಂದೇ. ಉಳಿದಂತೆ, ಕರಗಿದ ಹಿಮವು ಹಲವು ದೇಶಗಳ ಆರ್ಥಿಕ ಸ್ಥಿತಿಯನ್ನು ಬುಡಮೇಲು ಮಾಡಿರುವುದೇ ಹೆಚ್ಚು. ಆದರೆ ಉತ್ತರ ಧ್ರುವದ ಕೆಲವು ಜೌಗು ಪ್ರದೇಶಗಳಿಂದ ವಾರ್ಷಿಕ ಐದು ಕೋಟಿ ಟನ್‌ ಮೀಥೇನ್ ಹೊರಬಂದು ಉಷ್ಣವರ್ಧಕ ಅನಿಲವಾಗಿ ವಾಯುಗೋಳವನ್ನು ಸೇರುತ್ತಿರುವ ಅವಘಡ ಕಣ್ಣಿಗೆ ಕಾಣುತ್ತಿಲ್ಲ.


ಟಿ.ಆರ್‌.ಅನಂತರಾಮು

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು