ಶುಕ್ರವಾರ, ಮೇ 29, 2020
27 °C

ಸಂಕಷ್ಟ ಕಾಲದ ಪಿತೂರಿ ಸಿದ್ಧಾಂತ: ವಿಜ್ಞಾನಿಗಳೂ ವಿವಾದ ಶಾಮೀಲಾಗಿರುವುದು ದುರಂತ

ಟಿ.ಆರ್.ಅನಂತರಾಮು Updated:

ಅಕ್ಷರ ಗಾತ್ರ : | |

ಇಡೀ ಜಗತ್ತು ಈಗ ಕೊರೊನಾ ವೈರಸ್‍ನ ಬಿಗಿಮುಷ್ಟಿಯಲ್ಲಿ ಏದುಸಿರುಬಿಡುತ್ತಿದೆ. ಖಂಡ ಖಂಡಗಳನ್ನು ದಾಟಿ ಸಾಗಿದ ಕೊರೊನಾ, ಅಮೆರಿಕ ಒಂದರಲ್ಲೇ 65 ಸಾವಿರಕ್ಕೂ ಮಿಕ್ಕಿ ಜನರನ್ನು ಬಲಿ ತೆಗೆದುಕೊಂಡಿದೆ. ಇದರ ಅಟ್ಟಹಾಸವನ್ನು ಹತ್ತಿಕ್ಕಲು ಲಸಿಕೆಯೊಂದೇ ಮಾರ್ಗ ಎಂಬ ಸತ್ಯ ಎಲ್ಲ ದೇಶಗಳಿಗೂ ಈಗ ಅರಿವಾಗಿದೆ. ಜನತ್ತಿನಾದ್ಯಂತ ವೈದ್ಯಕೀಯ ಪ್ರಯೋಗಾಲಯಗಳು ಲಸಿಕೆ ತಯಾರಿಸಲು ನಿರಂತರವಾಗಿ ಕಾರ್ಯನಿರತವಾಗಿವೆ.

ಜರ್ಮನಿಯ ಕ್ಯೂರ್‌ವ್ಯಾಕ್ ಎಂಬ ಔಷಧಿ ಕಂಪನಿ, ಈ ಜೂನ್ ತಿಂಗಳ ಹೊತ್ತಿಗೆ ಲಸಿಕೆಯನ್ನು ಸಿದ್ಧಪಡಿಸುವುದಾಗಿ ಭರವಸೆಯಿಂದ ಮುನ್ನುಗ್ಗುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆ ಘೋಷಿಸಿರುವಂತೆ, ಜಾಗತಿಕ ಮಟ್ಟದಲ್ಲಿ ಪುಣೆಯ ಸೀರಂ ಸಂಸ್ಥೆ ಸೇರಿದಂತೆ ಮೂವತ್ತು ಬಹು ದೊಡ್ಡ ಔಷಧಿ ಕಂಪನಿಗಳು ಲಸಿಕೆ ತಯಾರಿಸಲು ಸ್ಪರ್ಧೆ ಹೂಡಿದಂತೆ ಕಾಣುತ್ತಿದೆ. ವಿಶೇಷವೆಂದರೆ, ಕೊರೊನಾ ವೈರಸ್ ಮೊದಲು ಕಾಣಿಸಿಕೊಂಡ ಚೀನಾದ ಅದೇ ವುಹಾನ್‌ ನಲ್ಲಿರುವ ಸರ್ಕಾರಿ ಸಂಸ್ಥೆ ‘ವುಹಾನ್ ಇನ್‍ಸ್ಟಿಟ್ಯೂಟ್ ಆಫ್ ವೈರಾಲಜಿ’, ಮಾನವರ ಮೇಲಿನ ಪರೀಕ್ಷೆಯ ಘಟ್ಟ ತಲುಪಿರುವುದಾಗಿ ಘೋಷಿಸಿದೆ.

ನಿಜ, ಜನಸಾಮಾನ್ಯರಿಗೆ ಈ ಲಸಿಕೆಯ ವಿವರಗಳು ಬೇಕಿಲ್ಲ. ನೀವು ಯಾವುದಾದರೂ ವಿಧಾನ ಅನುಸರಿಸಿ, ಕೊರೊನಾ ವೈರಸ್ಸನ್ನು ಹಿಮ್ಮೆಟ್ಟಿಸಿ ಎಂಬ ದಯನೀಯ ಸ್ಥಿತಿಗೆ ತಲುಪಿದ್ದಾರೆ. ಇಂಥ ಗಂಭೀರ ಸ್ಥಿತಿಯಲ್ಲೂ ಸಾಮಾಜಿಕ ಮಾಧ್ಯಮಗಳಲ್ಲಿ ಎಂಥೆಂಥವೋ ಸುಳ್ಳು ಸುದ್ದಿಗಳು ಹುಟ್ಟಿ, ಅವು ನಿಜವೋ ಎಂಬ ಭ್ರಮೆಯನ್ನು ತರುತ್ತಿವೆ. ಕೆಲವು ವಿಜ್ಞಾನಿಗಳು ವಿವಾದ ಹುಟ್ಟಿಸುವುದರಲ್ಲಿ ಶಾಮೀಲಾಗಿರುವುದು ಇನ್ನೊಂದು ದುರಂತ.

ಎಚ್.ಐ.ವಿ. ವೈರಸ್‍ಗೆ ಲಸಿಕೆ ಕಂಡುಹಿಡಿದವರಲ್ಲಿ ಫ್ರಾನ್ಸ್‌ನ ವೈರಸ್ ತಜ್ಞ ಲುಕ್ ಮಾಂಟೇಗ್ನಿಯರ್ ಕೂಡ ಒಬ್ಬರು. 2008ರಲ್ಲಿ ಈ ಶೋಧಕ್ಕಾಗಿ ಅವರಿಗೆ ನೊಬೆಲ್ ಪ್ರಶಸ್ತಿ ಕೂಡ ಲಭಿಸಿತ್ತು. ಸಹಜವಾಗಿಯೇ ವಿಜ್ಞಾನ ವಲಯದಲ್ಲಿ ಇವರ ಮಾತಿಗೆ ಕಿಮ್ಮತ್ತು ಇದೆ. ಆದರೆ ಈಗ ಆದದ್ದೇ ಬೇರೆ. ಚೀನಾದಲ್ಲಿ ಕೊರೊನಾ ವೈರಸ್ ನೈಸರ್ಗಿಕವಾಗಿ ಪ್ರಾಣಿಗಳಿಂದ ಮನುಷ್ಯನಿಗೆ ಬಂದದ್ದಲ್ಲ, ಬದಲು ವುಹಾನ್‍ನಲ್ಲಿ ಇರುವ ವೈರಸ್ ಪ್ರಯೋಗಾಲಯದಿಂದ ಹೊರಬಿದ್ದದ್ದು, ಆ ತಳಿಯನ್ನು ನೋಡಿದರೆ ಸಾಕು ಯಾವ ವಿಜ್ಞಾನಿಗಾದರೂ ಅರ್ಥವಾದೀತು ಎಂದು ಮಾತಿನ ಬಾಂಬ್ ಎಸೆದರು. ಫ್ರಾನ್ಸ್‌ನಲ್ಲಿ ಅವರು ಸಂಶೋಧನೆ ಮಾಡುತ್ತಿದ್ದ ಲೂಯಿ ಪಾಶ್ಚರ್ ಸಂಸ್ಥೆಯ ಸಹವಿಜ್ಞಾನಿಗಳಿಗೆ ಈ ಮಾತು ಅಚ್ಚರಿ ತಂದಿತ್ತು. ಜಗತ್ತಿನ ಇತರ ವಿಜ್ಞಾನಿಗಳು ಬಲವಾಗಿ ಇದನ್ನು ಅಲ್ಲಗಳೆದರು. ಕೊರೊನಾ ವೈರಸ್‍ನಲ್ಲಿ ಬೇರೆ ಬೇರೆ ಪ್ರಭೇದಗಳಿವೆ ಎಂಬುದರ ಅರಿವು ಇವರಿಗಿಲ್ಲ ಎಂದು ತರಾಟೆಗೆ ತೆಗೆದುಕೊಂಡರು. ಆದರೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್‍ ಅವರಿಗೆ ಅವರ ಮಾತೇ ಮುಖ್ಯವಾಯಿತು. ಅದರಲ್ಲಿ ಮನುಷ್ಯನ ಕೈವಾಡವಿದ್ದರೆ, ಚೀನಾ ಅದಕ್ಕೆ ಭಾರಿ ಬೆಲೆ ತೆರಬೇಕಾದೀತು ಎಂದು ಅವರು ಎಚ್ಚರಿಕೆ ಕೊಟ್ಟಿದ್ದಾರೆ.

ವಿಚಿತ್ರವೆಂದರೆ, ಅಮೆರಿಕದ ಸ್ಕ್ರಿಪ್ಸ್ ಸಂಶೋಧನಾ ಸಂಸ್ಥೆಯು ಕೊರೊನಾ ವೈರಸ್ ಹರಡಿದ ಆರಂಭಿಕ ಹಂತದಲ್ಲೇ ವೈರಸ್‍ನ ತಳಿ ಗುಣವನ್ನು ಅಧ್ಯಯನ ಮಾಡಿದೆ. ಇದು ಪ್ರಯೋಗಾಲಯದಿಂದ ಬೇಕೆಂದೇ ಸೃಷ್ಟಿಮಾಡಿಬಿಟ್ಟ ವೈರಸ್ ಅಲ್ಲ, ಅದರ ರಚನೆ ಮತ್ತು ಜೀವಕೋಶವನ್ನು ಸೀಳಿ ಒಳನುಗ್ಗುವ ಪರಿ ಗಮನಿಸಿದರೆ ಇದು ಸಹಜವಾಗಿ ವಿಕಾಸವಾದ ವೈರಸ್ ಎಂದು ಅದು ವರದಿ ಕೊಟ್ಟರೂ ಟ್ರಂಪ್ ಅದಕ್ಕೆ ಕವಡೆ ಕಿಮ್ಮತ್ತನ್ನೂ ಕೊಡಲಿಲ್ಲ.

ಇದರ ಹಿಂದೆಯೇ ಸಾಮಾಜಿಕ ಮಾಧ್ಯಮಗಳು ಬಹುಬೇಗ ಚುರುಕಾದವು. ನೊಬೆಲ್ ಪ್ರಶಸ್ತಿ ವಿಜೇತ ವಿಜ್ಞಾನಿಯೇ ಹೇಳಿದ್ದಾರೆ, ಕೊರೊನಾ ವೈರಸ್ ಸೃಷ್ಟಿಯಲ್ಲಿ ಚೀನಾದ ಕೈವಾಡವಿದೆ ಎಂದು. ಇಷ್ಟು ಸಾಕಾಗಿತ್ತು ಸುದ್ದಿ ‘ಫಾರ್ವರ್ಡ್’ ಆಗುತ್ತಾ ಹೋಯಿತು. ಕೊರೊನಾ ವೈರಸ್ ಹರಡುವ ವೇಗಕ್ಕಿಂತ ಇದೇ ಹೆಚ್ಚು ವೇಗ ಗಳಿಸಿತು. ಈ ಸುದ್ದಿ ನಿಜವಾದ ಅರ್ಥದಲ್ಲಿ ವೈರಲ್ ಆಯಿತು.

ಈಗ ಇನ್ನೊಬ್ಬ ನೊಬೆಲ್ ಪ್ರಶಸ್ತಿ ವಿಜೇತ ಜಪಾನಿನ ತಸುಕೋ ಹೋಂಜೋ ಬೇರೆಯದೇ ಕಾರಣಕ್ಕೆ ಸುದ್ದಿಯಾದರು. ಇವರು ರೋಗ ನಿರೋಧಕತೆ ಕುರಿತು ಮಾಡಿದ ಸಂಶೋಧನೆಗೆ 2018ರಲ್ಲಿ ನೊಬೆಲ್ ಪ್ರಶಸ್ತಿ ಸಿಕ್ಕಿದೆ. ಇದ್ದಕ್ಕಿದ್ದಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಇವರ ಹೆಸರು ಹರಿದಾಡಿತು. ಇದಕ್ಕೆ ‘ಶಾಕಿಂಗ್’ ಎಂಬ ತಲೆಬರಹ ಬೇರೆ. ಅವರು ಹೇಳಿದ ಮಾತುಗಳು ಎಂದು ಉಲ್ಲೇಖಿಸುತ್ತ: ‘ಚೀನಾದ ವುಹಾನ್ ಲ್ಯಾಬ್‍ನಲ್ಲಿ ನಾಲ್ಕು ವರ್ಷ ಕೆಲಸ ಮಾಡಿದ್ದೇನೆ. ನನ್ನ 40 ವರ್ಷಗಳ ಅನುಭವದಲ್ಲಿ ಇಷ್ಟು ಹೇಳಬಲ್ಲೆ. ಈ ವೈರಸ್ ಆ ಲ್ಯಾಬಿನಿಂದ ಸೃಷ್ಟಿಸಿದ್ದು. ಅದು ಸಹಜವಾಗಿದ್ದರೆ ಚೀನಾದಲ್ಲಿ ಯಾವ ಮಟ್ಟದ ತಾಪಮಾನವಿತ್ತೋ ಅದೇ ತಾಪಮಾನದಲ್ಲಿರುವ ಇತರ ದೇಶಗಳಿಗೆ ಹರಡಬೇಕಾಗಿತ್ತು. ಈಗ ನೋಡಿ, ಅದು ಜಗದ್ವ್ಯಾಪಿಯಾಗಿದೆ. ಈ ಕುರಿತು ವುಹಾನ್ ಲ್ಯಾಬ್‍ನ ಸಹೋದ್ಯೋಗಿಗಳನ್ನು ವಿಚಾರಿಸೋಣವೆಂದರೆ ಆಸಾಮಿಗಳು ಫೋನ್ ಎತ್ತುತ್ತಿಲ್ಲ’. ಇಂಥ ಮಾತುಗಳನ್ನು ಯಾರು ತಾನೇ ನಂಬುವುದಿಲ್ಲ? ಅದರಲ್ಲೂ ನೊಬೆಲ್ ಪ್ರಶಸ್ತಿ ವಿಜೇತರ ಮಾತೆಂದರೆ! ಆದರೆ ತಸುಕೋ ಹೇಳಿದ್ದಕ್ಕೂ ಇದಕ್ಕೂ ಸಂಬಂಧವೇ ಇಲ್ಲ. ಯಾವ ಮಾಧ್ಯಮದಲ್ಲೂ ಅವರ ಹೇಳಿಕೆಗಳು ಪ್ರಕಟವಾಗಿಲ್ಲ. ಜಪಾನೀಯರನ್ನು ಆದಷ್ಟು ಬೇಗ ವೈರಸ್ ಪತ್ತೆ ಮಾಡುವ ಪ್ರಯೋಗಗಳಿಗೆ ಒಳಪಡಿಸಬೇಕು ಮತ್ತು ಸೋಂಕು ಹೆಚ್ಚು ಹರಡದಂತೆ ಭೌತಿಕ ಅಂತರವನ್ನು ಕಾಯ್ದುಕೊಂಡು ಯಶಸ್ವಿಯಾದ ತೈವಾನ್‌ ಮಾದರಿಯನ್ನು ನಾವೂ ಅನುಸರಿಸಬೇಕು ಎಂದಿದ್ದರು. ಸುಳ್ಳು ಯಾವಾಗಲೂ ನಿಜದ ತಲೆಯ ಮೇಲೆ ಹೊಡೆದಂತೆಯೇ ಇರುತ್ತದೆ.

ಹಾರ್ವರ್ಡ್ ವಿಶ್ವವಿದ್ಯಾಲಯದ ಕೆಮಿಸ್ಟ್ರಿ ಪ್ರೊಫೆಸರ್‌ ಒಬ್ಬರ ಫಜೀತಿ ಇನ್ನೊಂದು ಬಗೆಯದು. ಚಾರ್ಲ್ಸ್‌ ಲೈಬರ್, ಕೆಮಿಸ್ಟ್ರಿಯಲ್ಲಿ ಅದರಲ್ಲೂ ವಿಶೇಷವಾಗಿ ನ್ಯಾನೊ ತಂತ್ರಜ್ಞಾನದಲ್ಲಿ ವಿಶೇಷ ಪರಿಣತಿ ಇರುವ ವಿಜ್ಞಾನ ಸಂಶೋಧಕ. ಇದೇ ಜನವರಿ 28ರಂದು ಪ್ರಯೋಗಾಲಯಕ್ಕೆ ಪೊಲೀಸರು ದಿಢೀರನೆ ನುಗ್ಗಿ ಅವರನ್ನು ಬಂಧಿಸಿದರು. ಅಮೆರಿಕದ ಯಾವ ಯಾವ ವಿಜ್ಞಾನಿಗಳು ವಿದೇಶಿ ದೇಣಿಗೆಗೆ ಕೈ ಒಡ್ಡಿದ್ದಾರೆ, ನಿಜಕ್ಕೂ ಏನು ಮಾಡುತ್ತಿದ್ದಾರೆ ಎಂಬುದರ ಬಗ್ಗೆ ಅಮೆರಿಕ ನಿಗಾ ಇಡುತ್ತಿದೆ. ಈ ಗುಮಾನಿಯಲ್ಲಿ ಸಿಕ್ಕಿಹಾಕಿಕೊಂಡವರು ಲೈಬರ್. ಹಾಗೆ ನೋಡಿದರೆ ಈ ವರ್ಷದ ಜನವರಿಯಲ್ಲಿ ಅಮೆರಿಕಕ್ಕೇನು ಬಂತು, ಇಡೀ ಯುರೋಪಿನ ಯಾವ ನಗರವನ್ನೂ ಕೊರೊನಾ ವೈರಸ್ ತಟ್ಟಿರಲಿಲ್ಲ.

ಲೈಬರ್ ಮೊದಲು ತಾನು ಯಾವ ದೇಶದಿಂದಲೂ ದೇಣಿಗೆ ಪಡೆಯಲಿಲ್ಲವೆಂದು ಹೇಳಿಕೆ ಕೊಟ್ಟಿದ್ದರು. ದೀರ್ಘವಾಗಿ ವಿಚಾರಣೆಗೆ ಒಳಪಡಿಸಿದಾಗ ಗೊತ್ತಾದ ಸಂಗತಿಯೇ ಬೇರೆ. ಚೀನಾದಿಂದ 2012-17ರ ಅವಧಿಯಲ್ಲಿ ಮಾಸಿಕ 50,000 ಡಾಲರ್ ಪಡೆದು ವೈರಸ್ ಸಂಶೋಧನೆಗೆ, ಇದಲ್ಲದೆ ವುಹಾನಿನ ಬಯೊಟೆಕ್ ಲ್ಯಾಬ್‍ನಲ್ಲಿ ಹೊಸ ಸಂಶೋಧನಾ ಘಟಕ ಸ್ಥಾಪಿಸುವ ಕರಾರಿಗೂ ಒಪ್ಪಿದ್ದರು. ಇದು ಫೆಡರಲ್ ಬ್ಯೂರೊ ಆಫ್ ಇನ್‍ವೆಸ್ಟಿಗೇಷನ್ ಮಾಡಿದ ವಿಚಾರಣೆಯಿಂದ ತಿಳಿದುಬಂತು. ಈ ಸಂಗತಿ ಇಷ್ಟಕ್ಕೇ ನಿಲ್ಲಬೇಕಾಗಿತ್ತು. ಈ ಸುದ್ದಿ ಮುಂದೆಮುಂದಕ್ಕೆ ಹೋದಂತೆ ವಿವಿಧ ಅವತಾರಗಳನ್ನು ತಾಳಿತು. ಜಾಲತಾಣಗಳಲ್ಲಿ ಇವರನ್ನು ಜಾಲಾಡಿದ್ದೂ ಜಾಲಾಡಿದ್ದೇ. ಅಂತಿಮವಾಗಿ ಅದು ಪಡೆದ ಕೊನೆಯ ತಿರುವೆಂದರೆ, ಹಾರ್ವರ್ಡ್ ವಿಶ್ವವಿದ್ಯಾಲಯದ ಈ ಪ್ರೊಫೆಸರ್, ವುಹಾನ್ ಲ್ಯಾಬಿನಲ್ಲಿ ಕೊರೊನಾ ಸೃಷ್ಟಿಸುವಲ್ಲಿ ಚೀನೀಯರೊಂದಿಗೆ ಕೈಜೋಡಿಸಿದ್ದಾರೆ ಎಂಬ ಸುದ್ದಿ.

ನಿಜ, ಚೀನಾವನ್ನು ಯಾರೂ ಸದ್ಯದಲ್ಲಿ ಸಮರ್ಥಿಸಿಕೊಳ್ಳುತ್ತಿಲ್ಲ. ಈಗಾಗಲೇ ಹಲವು ದೇಶಗಳು ಟ್ರಿಲಿಯನ್ ಡಾಲರ್ (3 ಲಕ್ಷ ಕೋಟಿ ಡಾಲರ್‌) ಮೊತ್ತದ ದಾವೆಯನ್ನು ಚೀನಾದ ವಿರುದ್ಧ ಹೂಡಿವೆ. ಆದರೆ ಸುಳ್ಳು ಸುದ್ದಿಗಳು ಹುಟ್ಟಲು ಮತ್ತು ವರ್ಧಿಸಲು ಸಾಮಾಜಿಕ ಜಾಲತಾಣಗಳೇ ಸುಲಭ ಮಾರ್ಗವಾಗಿ ಒದಗಿರುವುದು ತಂತ್ರಜ್ಞಾನದ ದೌರ್ಭಾಗ್ಯ.


ಟಿ.ಆರ್.ಅನಂತರಾಮು

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು