ಶನಿವಾರ, ಡಿಸೆಂಬರ್ 4, 2021
20 °C

ಭಾರಿ ಬದಲಾವಣೆ ಅಸಾಧ್ಯ: ಆದರೂ ಬೇಕು ಒಳ ಮೀಸಲು

ಬಾಲನ್ Updated:

ಅಕ್ಷರ ಗಾತ್ರ : | |

ಒಳ ಮೀಸಲಾತಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನ ಪೀಠವು ಇತ್ತೀಚೆಗೆ ನೀಡಿರುವ ತೀರ್ಪನ್ನು ನಾನು ಸ್ವಾಗತಿಸುತ್ತೇನೆ. ಈ ಹಿಂದಿನ ಕೆಲವು ತೀರ್ಪುಗಳು ಒಳ ಮೀಸಲಾತಿ ಬೇಕಿಲ್ಲ ಎಂದು ಹೇಳಿದ್ದವು. ಪರಿಶಿಷ್ಟ ಜಾತಿ–ಪಂಗಡಗಳಲ್ಲಿ (ಎಸ್‌ಸಿ–ಎಸ್‌ಟಿ) ಅತ್ಯಂತ ಹಿಂದುಳಿದವರನ್ನು ಒಳ ಮೀಸಲಾತಿಯ ಮೂಲಕ ಮುಂದಕ್ಕೆ ತರಲು ಸಾಧ್ಯವಿದೆ. ಹೀಗಾಗಿ ಇದೊಂದು ಐತಿಹಾಸಿಕ ತೀರ್ಪು ಎಂದರೆ ಉತ್ಪ್ರೇಕ್ಷೆ ಆಗಲಾರದು. ಈ ತೀರ್ಪನ್ನು ವಿರೋಧಿಸುವವರನ್ನು ‘ಪರಿಶಿಷ್ಟರ ವಿರೋಧಿಗಳು’ ಎಂದು ಕರೆದರೂ ತಪ್ಪಿಲ್ಲ.

ಪರಿಶಿಷ್ಟರನ್ನು ಆರ್ಥಿಕವಾಗಿ, ಸಾಮಾಜಿಕವಾಗಿ ಮತ್ತು ರಾಜಕೀಯವಾಗಿ ಮುಂದಕ್ಕೆ ತರುವ ಉದ್ದೇಶದಿಂದ ಮೀಸಲಾತಿ ವ್ಯವಸ್ಥೆಯನ್ನು ಜಾರಿಗೆ ತರಲಾಗಿತ್ತು. ಆದರೆ, ಈವರೆಗೆ ಪರಿಶಿಷ್ಟ ಸಮುದಾಯದ ಒಂದೆರಡು ಜಾತಿಗಳಿಗಷ್ಟೇ ಈ ಮೀಸಲಾತಿಯ ಅನುಕೂಲ ದೊರೆತಿವೆ. ಆ ಜಾತಿಗಳು ಆರ್ಥಿಕವಾಗಿ, ಸಾಮಾಜಿಕವಾಗಿ ಮತ್ತು ರಾಜಕೀಯವಾಗಿ ಮುಂದುವರಿದಿವೆ. ಹಲವು ಸಮುದಾಯಗಳಿಗೆ ಮೀಸಲಾತಿಯ ಅನುಕೂಲ ದೊರೆತಿಲ್ಲ. ಮೀಸಲಾತಿ ಜಾರಿ ಸಂದರ್ಭದಲ್ಲಿ ಆ ಸಮುದಾಯಗಳ ಸ್ಥಿತಿ ಹೇಗಿತ್ತೋ, ಅವು ಈಗಲೂ ಅದೇ ಸ್ಥಿತಿಯಲ್ಲಿ ಇವೆ. ಹೀಗಾಗಿ ಒಳ ಮೀಸಲಾತಿಯ ಅವಶ್ಯಕತೆ ಇದೆ.

ಕರ್ನಾಟಕದ ಪರಿಶಿಷ್ಟರಲ್ಲಿ ಬೋವಿಗಳು (ವಡ್ಡರು) ಮತ್ತು ಮಾದಿಗರು ಬರುತ್ತಾರೆ. ಒಟ್ಟಾರೆ ಸಮುದಾಯವನ್ನು ಪರಿಗಣಿಸಿದರೆ ಬೋವಿಗಳ ಸ್ಥಿತಿ ಉತ್ತಮವಾಗಿದೆ. ಆದರೆ ಮಾದಿಗರ ಸ್ಥಿತಿ ಉತ್ತಮವಾಗೇನೂ ಇಲ್ಲ. ಮಾದಿಗರನ್ನು ತಮಿಳುನಾಡಿನಲ್ಲಿ ಅರುಂಧತಿಯರು, ಆಂಧ್ರಪ್ರದೇಶದಲ್ಲಿ ಯಾನಾದಿಗಳು ಮತ್ತು ಉತ್ತರ ಭಾರತದಲ್ಲಿ ವಲ್ಮೀಕಿಯರು ಎಂದು ಕರೆಯಲಾಗುತ್ತದೆ. ಕರ್ನಾಟಕದ ಮಾದಿಗರಲ್ಲಿ ಬಲಗೈ ಮತ್ತು ಎಡಗೈ ಎಂಬ ವಿಭಜನೆ ಇದೆ. ಇದರಲ್ಲಿ ಎಡಗೈ ಸಮುದಾಯದವರು ಅತ್ಯಂತ ನಿಕೃಷ್ಟ ಸ್ಥಿತಿಯಲ್ಲಿದ್ದಾರೆ. ಈಗಲೂ ಕಕ್ಕಸು ತೊಳೆಯುವ ಕೆಲಸವನ್ನೇ ಮಾಡುವ ಈ ಜನರು, ಪರಿಶಿಷ್ಟರಲ್ಲೇ ಅಸಮಾನತೆಗೆ ಗುರಿಯಾಗಿರುವ ಜಾತಿಯವರು. ಹೀಗಾಗಿ ಈ ಜಾತಿಯ ಜನರಿಗೆ ಒಳ ಮೀಸಲಾತಿ ನೀಡಬೇಕಾದ ಅಗತ್ಯ ಇದೆ.

ಈ ಜಾತಿಯ ಬಹುತೇಕ ಮಂದಿ ಪೌರ ಕಾರ್ಮಿಕರಾಗಿ, ದುಡಿಯುತ್ತಿದ್ದಾರೆ. ಬೆಂಗಳೂರಿನಲ್ಲಿ ಪೌರ ಕಾರ್ಮಿಕರ ಹಕ್ಕುಗಳ ರಕ್ಷಣೆಗಾಗಿ ನಾನು 40 ವರ್ಷಗಳಿಂದ ದುಡಿಯುತ್ತಿದ್ದೇನೆ. ಬೆಂಗಳೂರಿನಲ್ಲಿರುವ ಪೌರ ಕಾರ್ಮಿಕರಲ್ಲಿ ಬಹುತೇಕ ಮಂದಿ ಈ ಸಮುದಾಯದವರೇ ಆಗಿದ್ದಾರೆ. ಇವರು ಪರಿಶಿಷ್ಟರಲ್ಲಿಯೇ ಅಸ್ಪೃಶ್ಯರು. ಬೆಂಗಳೂರಿನಂತಹ ನಗರದಲ್ಲೇ ಈ ಜಾತಿಯವರನ್ನು ಮುಟ್ಟಿಸಿಕೊಳ್ಳದ ಸ್ಥಿತಿ ಇದೆ. ನಗರದ ಕೆಲವು ಬಡಾವಣೆಗಳಿಗೆ ಹೊಂದಿಕೊಂಡಂತೆ ಈ ಜಾತಿಯವರ ಕೊಳೆಗೇರಿಗಳಿವೆ. ಆ ಕೊಳೆಗೇರಿಗಳಲ್ಲಿ ಮಾದಿಗರನ್ನು ಹೊರತುಪಡಿಸಿ ಬೇರೆ ಪರಿಶಿಷ್ಟರು ಇಲ್ಲ. ನಗರದ ಶೇಷಾದ್ರಿಪುರ, ಎಚ್‌ಎಎಲ್ ಬಳಿಯ ನೆಲ್ಲೂರುಪುರ, ಕಾಕ್ಸ್‌ಟೌನ್‌ನಲ್ಲಿ ಇಂತಹ ಕೊಳೆಗೇರಿ ಇದೆ. ಪರಿಶಿಷ್ಟ ಸಮುದಾಯದ ಬೇರೆ ಜಾತಿಯವರು ಇವರ ಮನೆಯಲ್ಲಿ ನೀರು ಕುಡಿಯುವುದೂ ಇಲ್ಲ, ಊಟ ಮಾಡುವುದೂ ಇಲ್ಲ. ಅತ್ಯಂತ ತುಳಿತಕ್ಕೆ ಒಳಗಾಗಿರುವ ಈ ಜಾತಿಯ ಜನರನ್ನು ಗುರುತಿಸಿ, ಅವರು ಇರುವ ಪ್ರದೇಶಗಳನ್ನು ಗುರುತಿಸಿ ಒಳ ಮೀಸಲಾತಿ ನೀಡುವ ಅಧಿಕಾರವನ್ನು ರಾಜ್ಯ ಸರ್ಕಾರಗಳಿಗೆ ನೀಡಬೇಕು. ಈ ದಿಸೆಯಲ್ಲಿ ಸುಪ್ರೀಂ ಕೋರ್ಟ್‌ ಇತ್ತೀಚೆಗೆ ನೀಡಿರುವ ತೀರ್ಪು ಅತ್ಯಂತ ಮಹತ್ವದ್ದು.

ಪರಿಶಿಷ್ಟ ಸಮುದಾಯಗಳ ಬೇರೆ ಜಾತಿಗಳಲ್ಲಿ ಹಲವರು ಐಎಎಸ್‌, ಐಪಿಎಸ್‌ ಅಧಿಕಾರಿಗಳಾಗಿದ್ದಾರೆ. ವೈದ್ಯರು, ಎಂಜಿನಿಯರ್‌ಗಳಾಗಿದ್ದಾರೆ. ರಾಜಕೀಯವಾಗಿಯೂ ಮುಂದುವರಿದಿದ್ದಾರೆ. ಆದರೆ ಮಾದಿಗರಲ್ಲಿ ಈ ಸ್ವರೂಪದ ಅಭಿವೃದ್ಧಿ ಇಲ್ಲ. ಅವರು ಮುಖ್ಯವಾಹಿನಿಗೆ ಬರಲು ಸಾಧ್ಯವಾಗಿಯೇ ಇಲ್ಲ. ಪೌರ ಕಾರ್ಮಿಕರ ಮಕ್ಕಳು ಇಂತಹ ಹುದ್ದೆಗಳಿಗೆ ಹೋಗಿರುವ ನಿದರ್ಶನವೇ ಇಲ್ಲ. ನಾನು 40 ವರ್ಷದಿಂದ ಈ ಜಾತಿಯವರನ್ನು ಹತ್ತಿರದಿಂದ ನೋಡಿದ್ದೇನೆ. ಅವರಿಗಾಗಿ ಹೋರಾಡುತ್ತಿದ್ದೇನೆ. ‘ನಿನ್ನ ಮಗ ಏನ್ ಮಾಡ್ತಿದೀನಾಮ್ಮ, ಮಗಳು ಏನ್ ಮಾಡ್ತಿದಾಳಮ್ಮ?’ ಎಂದು ಯಾವ ಪೌರ ಕಾರ್ಮಿಕರನ್ನು ಕೇಳಿದರೂ, ಬರುವ ಉತ್ತರ ಒಂದೇ. ‘ಆ ವಾರ್ಡ್‌ನಲ್ಲಿ ಕಸ ಗುಡುಸ್ತಾನೆ ಸಾರ್, ಪಬ್ಲಿಕ್‌ ಟಾಯ್ಲೆಟ್‌ನಲ್ಲಿ ಅವ್ನೆ’ ಎಂಬ ಉತ್ತರವಷ್ಟೇ ಬರುತ್ತದೆ. ಮೀಸಲಾತಿ ಬಂದು ಇಷ್ಟು ದಶಕಗಳು ಕಳೆದರೂ, ಈ ಜಾತಿಯು ಅದೇ ಸ್ಥಿತಿಯಲ್ಲಿ ಇದೆ ಎನ್ನುವುದಾದರೆ ಮೀಸಲಾತಿಯ ಅನುಕೂಲ ಇವರಿಗೆ ದೊರೆತಿಲ್ಲ ಎಂಬುದೇ ನಿಜ.

ಕಾರ್ಪೊರೇಟ್‌ ಕಂಪನಿಗಳು, ಕಾರ್ಖಾನೆಗಳು, ಬೇರೆ ಕಚೇರಿಗಳು, ಆಸ್ಪತ್ರೆಗಳು, ವಿಮಾನ ನಿಲ್ದಾಣಗಳು, ಮಾಲ್‌ಗಳಲ್ಲಿ ಕಸ ಗುಡಿಸುವ ಮತ್ತು ಶೌಚಾಲಯ ಶುಚಿ ಮಾಡುವ ಕೆಲಸ ಮಾಡುವುದು ಇದೇ ಜಾತಿಯವರು. ಬೇರೆ ಜಾತಿಯವರು ಈ ಕೆಲಸಗಳಿಗೆ ಸೇರುವುದಿಲ್ಲ. ಇದೇ ಮಾದಿಗ ಸಮುದಾಯದ ಜನರು ಪರಸ್ಪರ ಸಂಪರ್ಕದ ಮೂಲಕ ಈ ಕೆಲಸಕ್ಕೆ ಸೇರುತ್ತಾರೆ. ಬಹುತೇಕ ಕಡೆ ಇವರು ಗುತ್ತಿಗೆ ಉದ್ಯೋಗಿಗಳು ಆಗಿರುತ್ತಾರೆ. ಆಸ್ಪತ್ರೆಗಳಲ್ಲಿ ಇವರನ್ನು ನಡೆಸಿಕೊಳ್ಳುವ ಸ್ಥಿತಿ ಶೋಚನೀಯವಾಗಿದೆ. ಮಾನವ ತ್ಯಾಜ್ಯವನ್ನು ಕೈಗಳಲ್ಲಿ ಹೊರಬೇಕಾದ ಸ್ಥಿತಿ ಆಸ್ಪತ್ರೆಗಳಲ್ಲಿ ಇದೆ. ಈ ಎಲ್ಲಾ ಕೆಲಸಗಳನ್ನು ಈಗ ‘ಹೌಸ್‌ ಕೀಪಿಂಗ್‌’ ಎಂದು ಕರೆಯಲಾಗುತ್ತದೆ. 

ಒಳ ಮೀಸಲಾತಿ ದೊರೆತ ತಕ್ಷಣ ಈ ಸಮುದಾಯದ ಎಲ್ಲರೂ ಉದ್ಧಾರವಾಗುತ್ತಾರೆ ಎಂದೇನೂ ಇಲ್ಲ. ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಈ ಜಾತಿಯು ಮುಂದುವರಿಯುತ್ತದೆ ಎಂದು ಹೇಳಲೂ ಆಗುವುದಿಲ್ಲ. ಮೀಸಲಾತಿ ಅನುಕೂಲ ಪಡೆದು ಮುಂದುವರಿದಿರುವ ಪರಿಶಿಷ್ಟರು ಈಗ ಕೊಳೆಗೇರಿಗಳಲ್ಲಿ ಉಳಿದಿಲ್ಲ. ದೊಡ್ಡ ಬಡಾವಣೆಗಳಲ್ಲಿ ಇರುತ್ತಾರೆ. ಒಳ ಮೀಸಲಾತಿ ದೊರೆತರೆ ಮಾದಿಗರಲ್ಲೂ ಕೆಲವರಷ್ಟೇ ಮುಂದುವರಿಯುತ್ತಾರೆ. ಹೀಗಾಗಿ ಒಳ ಮೀಸಲಾತಿಯಿಂದ ಅತ್ಯಂತ ದೊಡ್ಡ ಬದಲಾವಣೆಯನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ಆದರೆ, ತುಳಿತಕ್ಕೆ ಒಳಗಾಗಿರುವ ಜಾತಿಗೆ ಸೇರಿರುವ ಕೆಲವರಾದರೂ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಮುಂದುವರಿಯುವ ಅವಕಾಶವನ್ನು ಒಳ ಮೀಸಲಾತಿ ಒದಗಿಸುತ್ತದೆ. ಈ ದೃಷ್ಟಿಯಿಂದ ನೋಡುವುದಾದರೆ, ಸುಪ್ರೀಂ ಕೋರ್ಟ್‌ನ ತೀರ್ಪು ಸರಿಯಾಗಿದೆ.

ಒಳ ಮೀಸಲಾತಿ ದೊರೆಯುವುದರಿಂದ ಮಾದಿಗರಿಗೆ ಸ್ವಲ್ಪ ಅನುಕೂಲವಾಗಲಿದೆ. ಹೀಗಾಗಿ ಸುಪ್ರೀಂ ಕೋರ್ಟ್‌ನ ಈ ತೀರ್ಪನ್ನು ಅವರು ಸ್ವಾಗತಿಸುತ್ತಾರೆ. ಬೋವಿಗಳು ಮತ್ತು ತಿಗಳರಿಗೆ ಇದರಿಂದ ಅನನುಕೂಲವಾಗಲಿದೆ. ಹೀಗಾಗಿ ಅವರು ಈ ತೀರ್ಪನ್ನು ವಿರೋಧಿಸುತ್ತಾರೆ. ತಿಗಳರು ಮತ್ತು ಬೋವಿಗಳು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಮುಂದುವರಿದಿದ್ದಾರೆ. ಈ ಎರಡೂ ಸಮುದಾಯಗಳು ಈ ತೀರ್ಪನ್ನು ಸ್ವಾಗತಿಸಬೇಕು.

–ಲೇಖಕರು ವಕೀಲರು ಮತ್ತು ಪೌರ ಕಾರ್ಮಿಕರ ಹಕ್ಕುಗಳ ರಕ್ಷಣಾ ಕಾರ್ಯಕರ್ತ

 

ಮೀಸಲಾತಿಗೆ ಖಾಸಗೀಕರಣದ ಕುತ್ತು

ಕೇಂದ್ರ ಸರ್ಕಾರ ಈಗ ಎಲ್ಲಾ ಕ್ಷೇತ್ರಗಳನ್ನೂ ಖಾಸಗೀಕರಣ ಮಾಡುತ್ತಿದೆ. ಸರ್ಕಾರಿ ಸ್ವಾಮ್ಯದ ಬೃಹತ್ ಕೈಗಾರಿಕೆಗಳನ್ನೂ ಖಾಸಗೀಕರಣ ಮಾಡಲಾಗುತ್ತಿದೆ. ಬಿಪಿಸಿಎಲ್‌, ಎಚ್‌ಪಿಸಿಎಲ್‌, ಬಿಎಚ್‌ಇಎಲ್‌ಗಳನ್ನು ಖಾಸಗೀಕರಣ ಮಾಡಲಾಗುತ್ತಿದೆ. ಕೆಲವು ರೈಲುಗಳು ಮತ್ತು ಕೆಲವು ವಿಮಾನ ನಿಲ್ದಾಣಗಳನ್ನು ಖಾಸಗಿಯವರಿಗೆ ಒಪ್ಪಿಸಲಾಗುತ್ತಿದೆ. ಈ ಎಲ್ಲಾ ಸಂಸ್ಥೆಗಳು ಸಾಕಷ್ಟು ಉದ್ಯೋಗವಕಾಶವನ್ನು ಒದಗಿಸುತ್ತವೆ. ಇವು ಸರ್ಕಾರಿ ಸಂಸ್ಥೆಗಳಾಗಿರುವವರೆಗೆ ನೇಮಕಾತಿಯಲ್ಲಿ ಮೀಸಲಾತಿ ಅನ್ವಯವಾಗುತ್ತದೆ. ಖಾಸಗೀಕರಣದ ನಂತರ ಮೀಸಲಾತಿ ಅನುಕೂಲವಿರುವುದಿಲ್ಲ. ಆಗ ಮೀಸಲಾತಿ ವ್ಯಾಪ್ತಿಗೆ ಬರುತ್ತಿದ್ದ ಹುದ್ದೆಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗುತ್ತದೆ. ಈ ರೀತಿಯಲ್ಲಿ ಖಾಸಗೀಕರಣವು ಮೀಸಲಾತಿಯ ಉದ್ದೇಶಕ್ಕೆ ಧಕ್ಕೆ ತರುತ್ತದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು