ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆಲದ ಕಾನೂನಿಗೆ ಹೊಸ ಭಾಷ್ಯ ಬರೆದ ತೀರ್ಪು

Last Updated 9 ನವೆಂಬರ್ 2019, 18:43 IST
ಅಕ್ಷರ ಗಾತ್ರ

ಭಾವನಾತ್ಮಕ ಅಂಶಗಳು ಅಡಕವಾಗಿದ್ದ, ಯಥೇಚ್ಛ ರಾಜಕೀಯ ಪಲ್ಲಟಗಳಿಗೆ ಅಸ್ತ್ರವಾಗಿದ್ದ, ದಶಕಗಳ ಕಾಲ ನನೆಗುದಿಗೆ ಬಿದ್ದಿದ್ದ ಐತಿಹಾಸಿಕ ವ್ಯಾಜ್ಯವೊಂದು ಕಡೆಗೂ ಸುಖಾಂತ್ಯ ಕಂಡಿದೆ. ಇದು ಕೇವಲ ಇಬ್ಬರು ವ್ಯಕ್ತಿಗಳ ಅಥವಾ ಟ್ರಸ್ಟ್‌ಗಳ ನಡುವಿನ ವ್ಯಾಜ್ಯವಾಗಿರಲಿಲ್ಲ. ಬದಲಿಗೆ ಎರಡು ಬಹುದೊಡ್ಡ ಸಮುದಾಯಗಳ ನಡುವಿನ ಸೂಕ್ಷ್ಮ ಮತ್ತು ಸಂವೇದನಾಶೀಲ ಪ್ರಕರಣವೆನಿಸಿತ್ತು. ಇಂತಹದೊಂದು ಮಹತ್ವಪೂರ್ಣ, ಸುದೀರ್ಘ ಕಾಲದ ಮೊಕದ್ದಮೆಗೆ ಸುಪ್ರೀಂ ಕೋರ್ಟ್‌ ಇಂದು ನೀಡಿರುವ ತೀರ್ಪು ಐತಿಹಾಸಿಕ ಎಂಬುದರಲ್ಲಿ ಸಂಶಯವೇ ಇಲ್ಲ.

ಒಂದು ಕಾಲದಲ್ಲಿ ದೇಶದಾದ್ಯಂತ ಅಷ್ಟೇಕೆ, ವಿಶ್ವದಾದ್ಯಂತ ಎಲ್ಲರ ಗಮನ ಸೆಳೆದಿದ್ದ ಈ ಪ್ರಕರಣ ಇವತ್ತು ನಿಶ್ಚಿತವಾಗಿಯೂ ಉಭಯ ಪಕ್ಷಗಾರರಿಗೆ ಸಮಾಧಾನ ಎನಿಸುವ ರೀತಿಯಲ್ಲಿ ಹೊರಬಿದ್ದಿದೆ. ದೇಶದ ಏಕತೆಗೆ, ಸಮಗ್ರತೆಗೆ, ಪ್ರಗತಿಗೆ ಮತ್ತು ಸಮೃದ್ಧತೆಗೆ ಪುಷ್ಟಿ ನೀಡುವಂತಿದೆ. ಸುಪ್ರೀಂ ಕೋರ್ಟ್‌ನ ಚಾರಿತ್ರಿಕ ತೀರ್ಪುಗಳ ಸಾಲಿನಲ್ಲಿ ಅಯೋಧ್ಯೆ ವಿಷಯ ಖಂಡಿತವಾಗಿಯೂ ನೂರು ಕಾರಣಕ್ಕೆ ಅತಿಶಯ ಎನಿಸುತ್ತದೆ.

ಸಾಮಾನ್ಯವಾಗಿ ವ್ಯಾಜ್ಯ ಎಂದ ಮೇಲೆ ಒಬ್ಬ ಪಕ್ಷಗಾರ ಸೋಲುತ್ತಾರೆ. ಇನ್ನೊಬ್ಬರು ಗೆಲ್ಲುತ್ತಾರೆ. ಆದರೆ, ಈ ಪ್ರಕರಣದಲ್ಲಿ ಇಬ್ಬರಿಗೂ ಸಂತೈಕೆಯಾಗುವ ಪರಿಹಾರ ದೊರೆತಿದೆ. ಐವರು ನ್ಯಾಯಮೂರ್ತಿಗಳಿದ್ದ ಪಂಚಪೀಠದ ತೀರ್ಪಿಗೆ ಎಲ್ಲ ನ್ಯಾಯಮೂರ್ತಿಗಳೂ ಸಹಮತದ ಅಂಕಿತ ಹಾಕಿದ್ದಾರೆ ಎಂಬುದನ್ನು ನಾವು ಬಹುಮುಖ್ಯವಾಗಿ ಪರಿಗಣಿಸಬೇಕು. ಇದರಿಂದಾಗಿ ಸುಪ್ರೀಂ ಕೋರ್ಟ್‌ ಮೇಲೆ ಜನರಿಟ್ಟಿರುವ ವಿಶ್ವಾಸ ದುಪ್ಪಟ್ಟುಗೊಂಡಿದೆ.

ಇವತ್ತಿನ ತೀರ್ಪಿನ ಒಟ್ಟು ಸಂದೇಶ ಒಂದಾಗಿ ಬಾಳಿ; ಕೂಡಿ ಬಾಳಿ ಎಂಬುದೇ ಆಗಿದೆ. ಇದರಿಂದಾಗಿ ವಿವಿಧತೆಯಲ್ಲಿ ಏಕತೆ ಸಾರುವ ಈ ನೆಲದ ಗುಣಕ್ಕೆ ಆನೆ ಬಲ ಬಂದಂತಾಗಿದೆ. ತೀರ್ಪಿನ 1,045 ಪುಟಗಳಲ್ಲಿನ ಅನೇಕ ವ್ಯಾಖ್ಯೆಗಳು ಈ ನೆಲದ ಕಾನೂನಿಗೆ ಹೊಸ ಭಾಷ್ಯ ಬರೆದಿವೆ. ಹಿಂಸೆ, ತಿಕ್ಕಾಟಗಳನ್ನು ತೊರೆದು ನೆಮ್ಮದಿಯಿಂದ ಬದುಕಿ ಎಂಬ ಸಿದ್ಧಾಂತವನ್ನು ಬಿಡಿಸಿ ಹೇಳಿವೆ.

ಭಾರತದ ಪ್ರಜಾಪ್ರಭುತ್ವದ ಸೌಂದರ್ಯ ನವನಾವೀನ್ಯ ಗುಣ ಹೊಂದಿದೆ. ಗಟ್ಟಿಯಾದ ತಳಹದಿಯಲ್ಲಿ ನಮ್ಮ ಸಂವಿಧಾನ ರೂಪುಗೊಂಡಿದೆ. ಕಾಲಕಾಲಕ್ಕೆ ನಾವು ಚಲನಶೀಲ ಕಾನೂನು ಮತ್ತು ನೀತಿಗಳನ್ನು ಅಳವಡಿಸಿಕೊಂಡು ಬೃಹತ್‌ ವ್ಯವಸ್ಥೆಯ ಶಾಂತಿ ಕಾಪಾಡಿಕೊಂಡು ಹೋಗುತ್ತಿರುವ ರಾಷ್ಟ್ರವಾಗಿದ್ದೇವೆ. ಇಂತಹ ರಾಷ್ಟ್ರದಲ್ಲಿ ಅಯೋಧ್ಯೆ ಪ್ರಕರಣದ ತೀರ್ಪು ಸಹಜವಾಗಿಯೇ ಎಲ್ಲರ ಕುತೂಹಲ ಕೆರಳಿಸಿತ್ತು. ಇಂತಹ ಕುತೂಹಲಕ್ಕೆ ಶಾಂತಿಯ, ಶಾಶ್ವತ ಮುದ್ರೆ ಬಿದ್ದಿದೆ ಎಂಬುದೇ ಹೆಗ್ಗಳಿಕೆ.

ನಮ್ಮ ದೇಶದ ಸರ್ಕಾರಗಳು ಬಹುಮತ ಇದೆ ಎಂದಾಕ್ಷಣ ತೋಚಿದ್ದನ್ನೆಲ್ಲಾ ಮಾಡಲು ಆಗುವುದಿಲ್ಲ. ನಮ್ಮ ಪ್ರಜಾಪ್ರಭುತ್ವ ಪ್ರಬುದ್ಧವಾದ ತಾಕತ್ತನ್ನು ಒಳಗೊಂಡಿದೆ. ಸಂವಿಧಾನದ 368ನೇ ವಿಧಿಯ ಅನುಸಾರ ಸಂವಿಧಾನದ ತಿದ್ದುಪಡಿಗೆ ಅವಕಾಶ ಮಾಡಿಕೊಡಲಾಗಿದೆ ನಿಜ. ಆದರೆ, ಇದೇ ವೇಳೆ ನಮ್ಮ ಮೂಲಭೂತ ಹಕ್ಕುಗಳನ್ನು ತಿದ್ದುಪಡಿ ಮಾಡಲು ಸಾಧ್ಯವಿಲ್ಲ ಎಂದೂ ಹೇಳಿದೆ. ಇದನ್ನು ಕೇಶವಾನಂದ ಭಾರತೀ ಸ್ವಾಮೀಜಿಗಳ ಪ್ರಕರಣದಲ್ಲಿ ನಾವು ಸ್ಪಷ್ಟವಾಗಿ ನೋಡಬಹುದು.

ಈ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ದೇಶದ ಜನರ ಮೂಲಭೂತ ಹಕ್ಕುಗಳನ್ನು ಕಾಪಾಡಲು ಹೇಗೆ ದೇಶದ ಧ್ವನಿಯಾಗಿ ತನ್ನ ಹೊಣೆಗಾರಿಕೆ ಮೆರೆದಿದೆ ಎಂಬುದು ನಮಗೆ ಸದಾ ಕೈಗನ್ನಡಿ. ಹಾಗಾಗಿ ಇವತ್ತಿನ ತೀರ್ಪು ಪುನಃ ಚರ್ಚೆಗೆ ಅವಕಾಶ ಕೊಡದ ರೀತಿಯಲ್ಲಿ ಐವರು ನ್ಯಾಯಮೂರ್ತಿಗಳು ಬಹುತ್ವದಲ್ಲಿ ಏಕತೆಯನ್ನು ಮಾರ್ದನಿಸಿದ್ದಾರೆ. ಎಲ್ಲ ತಥ್ಯಾಂಶಗಳನ್ನೂ ವಿಚಾರ ಮಾಡಿ, ಅಳೆದೂ ತೂಗಿ ಹಿಂದೂ– ಮುಸ್ಲಿಮರಿಬ್ಬರೂ ಅನ್ಯೋನ್ಯವಾಗಿರುವಂತಹ ಸಂದೇಶ ನೀಡಿದ್ದಾರೆ.

ಕೋರ್ಟ್‌ಗಳು ಎಂದರೆ ನ್ಯಾಯಾಂಗ ನಿಂದನೆ ಅಸ್ತ್ರದ ಮೂಲಕ ಜನರಲ್ಲಿ ಕೋರ್ಟ್‌ಗಳ ಬಗ್ಗೆ ಭಯ ಹುಟ್ಟಿಸುವುದಲ್ಲ. ಕೋರ್ಟ್‌ಗಳು ವಿಶ್ವಾಸದ ಮೂಲಕ ಜನರ ಮನಸ್ಸಿಗೆ, ಭಾವನೆಗೆ, ನ್ಯಾಯೋಚಿತ ನ್ಯಾಯದಾನಕ್ಕೆ ಹತ್ತಿರವಾಗಿ ನಡೆದುಕೊಳ್ಳಬೇಕು. ಇಂತಹದೊಂದು ಶಕ್ತಿ ತುಂಬುವ ತೀರ್ಪನ್ನು ಸುಪ್ರೀಂ ಕೋರ್ಟ್‌ ಇವತ್ತು ಪರಿಪಾಠವಾಗಿಸಿ ಭರವಸೆಯ ಹೆಜ್ಜೆ ಗುರುತು ಮೂಡಿಸಿದೆ.

ನ್ಯಾಯದಾನ ಎಂದರೆ ಹಂಚುವುದಲ್ಲ. ನ್ಯಾಯಪೀಠದ ತೀರ್ಪುಗಳು ನಿಶಿತ ಮತ್ತು ದೂರದೃಷ್ಟಿಯುಳ್ಳ ವಿವರಣೆಗಳ ಮೇಲೆಯೇ ನಿಂತಿರುತ್ತವೆ. ಸುಪ್ರೀಂ ಕೋರ್ಟ್ ತೀರ್ಪು ಎಂದಮೇಲೆ ಅದು ಈ ನೆಲದ ಕಾನೂನಾಗಿ ಮಾರ್ಪಾಡು ಆಗುತ್ತದೆ. ಕೋರ್ಟ್, ಸರ್ಕಾರ, ಸಂಘ–ಸಂಸ್ಥೆ, ನಾಗರಿಕರೂ ಸೇರಿದಂತೆ ಪ್ರತಿಯೊಬ್ಬರೂ ಅದರ ಚೌಕಟ್ಟಿನೊಳಗೆ ಮುನ್ನಡೆಯುವುದು ಅನಿವಾರ್ಯವಾಗುತ್ತದೆ. ಹಾಗಾಗಿ, ‘ತೀರ್ಪು ಪ್ರಶ್ನಿಸಿ ಮರುಪರಿಶೀಲನಾ ಅರ್ಜಿ ಸಲ್ಲಿಸುವುದಿಲ್ಲ’ ಎಂಬ ಸುನ್ನಿ ವಕ್ಫ್‌ ಬೋರ್ಡ್‌ ಹೇಳಿಕೆ ಸ್ವಾಗತಾರ್ಹವೇ ಸರಿ. ಆದಾಗ್ಯೂ ಇದರ ಸಾಧ್ಯಾಸಾಧ್ಯತೆಗಳನ್ನು ಈಗಲೇ ಪರಾಮರ್ಶಿಸಲು ಆಗುವುದಿಲ್ಲ.

ನ್ಯಾಯಮೂರ್ತಿಗಳು ಕಾನೂನನ್ನು ಮುರಿದು ತೀರ್ಪು ಕೊಡಲು ಸಾಧ್ಯವಿಲ್ಲ. ಆದರೆ, ಕಾನೂನನ್ನು ಬಗ್ಗಿಸಿ ತೀರ್ಪು ನೀಡಬಹುದು. ಯಾವುದೇ ತೀರ್ಪು ಪ್ರಕಟವಾದ ನಂತರ ಸಮಾಜದ ಮೇಲೆ ಅದರಿಂದಾಗುವ ಪರಿಣಾಮಗಳು ಏನು ಎಂಬುದೂ ಮುಖ್ಯ. ಅಂತಹುದೊಂದು ಸನ್ನಿವೇಶಕ್ಕೆ ನಿದರ್ಶನವಾಗಿದ್ದ ಈ ಪ್ರಕರಣದಲ್ಲಿ ವ್ಯತಿರಿಕ್ತ ಸನ್ನಿವೇಶಗಳು ಮೂಡುವುದಕ್ಕೆ ಆಸ್ಪದವಿಲ್ಲದಂತೆ, ಧಾರ್ಮಿಕ ಲೇಪನಗಳಿಲ್ಲದ, ದೇಶ ಒಪ್ಪಿಕೊಳ್ಳುವಂತಹ ತೀರ್ಪು ಬಂದಿರುವುದು ಗಮನಾರ್ಹ.

ಲೇಖಕರು: ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ

ನಿರೂಪಣೆ ಬಿ.ಎಸ್‌.ಷಣ್ಮುಖಪ್ಪ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT