ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆರೆ ತಂದ ದುರಂತ: ನೆಲಕಚ್ಚಿದ್ದನ್ನು ಎತ್ತಿ ನಿಲ್ಲಿಸುವುದು ಹೇಗೆ?

ಕಟ್ಟುವ ಕೆಲಸಕ್ಕೆ ಉದ್ಯೋಗ ಖಾತರಿ ಯೋಜನೆ ಆಸರೆಯಾಗಲಿ
Last Updated 30 ಆಗಸ್ಟ್ 2019, 19:45 IST
ಅಕ್ಷರ ಗಾತ್ರ

ನೆರೆ ಬಂತು, ಬದುಕನ್ನು ಕೊಚ್ಚಿಕೊಂಡು ಹೋಯ್ತು. ಇದ್ದುದನ್ನೆಲ್ಲ ಬಳಿದುಕೊಂಡು ಹೋಯ್ತು. ಯಾರಾದರೂ ಹೇಳಿದರೆ ನಂಬುವುದು ಕಷ್ಟ. ನೆರೆಯೆಂದರೆ ಅಷ್ಟು ಭೀಕರವಾಗಿ ಇರುತ್ತದೆಯೇ? ಸ್ವತಃ ನೋಡಲು ಹೋದಾಗ ಎದೆ ನಡುಗಿದ್ದು ನಿಜ. ಒಂದೊಂದು ಕತೆಯನ್ನೂ ಕೇಳಿದಾಗ ಕಣ್ಣೀರು ಕಪಾಳಕ್ಕಿಳಿದಿದ್ದರ ಬಗ್ಗೆ ಬರೆಯಲು ಸಂಕೋಚವೆನಿಸುತ್ತಿಲ್ಲ. ನಿಜ ಪರಿಸ್ಥಿತಿ ಹಾಗಿದೆ ಅಲ್ಲಿ.

ಇದ್ದ ಪುಟ್ಟ ಮನೆ ಪೂರ್ತಿಯಾಗಿ ಬಿದ್ದು ನೆಲಸಮವಾಗಿ, ಒಳಗೆ ಕೂಡಲೂ ಜಾಗವಿಲ್ಲದೆ ನಿರಾಶ್ರಿತರಾಗಿ ತಲೆಯ ಮೇಲೆ ಕೈ ಹೊತ್ತು ಪರಿಹಾರ ಕೇಂದ್ರದಲ್ಲಿ ಕುಳಿತವರ ಕತೆ ಒಂದಾದರೆ, ಅರ್ಧಂಬರ್ಧ ಮನೆ ಬಿದ್ದು, ಮನೆಯೊಳಗಿನ ಸಾಮಾನುಗಳೆಲ್ಲ ಕೊಚ್ಚಿಕೊಂಡು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವರ ಕತೆ ಇನ್ನೊಂದು. ನೆರೆ ಬಂತೆಂದು ಮನೆಮಂದಿ, ಜಾನುವಾರುಗಳನ್ನು ಕಟ್ಟಿಕೊಂಡು ಓಡಿದವರು, ಪ್ರವಾಹ ಇಳಿದ ನಂತರ ಬಂದು ನೋಡಿದಾಗ ಕಂಡ ಭೀಕರ ಯುದ್ಧಸದೃಶ ದೃಶ್ಯ ಮತ್ತೊಂದು. ಕಾಳುಕಡ್ಡಿಯೆಲ್ಲ ತೋಯ್ದು ಕೊಳೆತು ನಾರುವ ಮನೆಯೊಳಗೆ ಕಾಲಿಡಲೂ ಭಯ. ಎಲ್ಲಿಂದ ಸ್ವಚ್ಛತಾ ಕಾರ್ಯ ಶುರು ಮಾಡಬೇಕು? ಮತ್ತೊಂದು ಗೋಡೆ ಕುಸಿದರೆ? ಅಡುಗೆ, ಊಟ ಹೇಗೆ? ಗ್ಯಾಸ್ ಒಲೆ, ಸಿಲಿಂಡರುಗಳೂ ಕೊಚ್ಚಿಕೊಂಡು ಹೋಗಿರುವಾಗ ಬೇಯಿಸುವುದೆಂತು? ಎಲ್ಲಿ ನೋಡಿದರೂ ಒಂದೇ ಬಗೆಯ ದೃಶ್ಯ. ಒಂದೇ ಬಗೆಯ ಮುಖಭಾವ. ಕೊಚ್ಚಿಕೊಂಡು ಹೋದ ಬದುಕನ್ನು ಕಟ್ಟಿಕೊಳ್ಳುವುದೆಂತು? ಮನೆಗಳ ಜೊತೆ ಮುರಿದುಬಿದ್ದ ಆತ್ಮವಿಶ್ವಾಸವನ್ನು ಪುನರ್ ನಿರ್ಮಿಸುವುದೆಂತು? ಮತ್ತೆ ಸರಿಹೋದೀತೇ ಬದುಕು?

ಒಬ್ಬಾಕೆಗೆ ಇದ್ದೊಬ್ಬ ಮಗಳೂ, ಮನೆಯೊಳಗೆ, ಊರೊಳಗೆ ನೀರು ಪ್ರವೇಶಿಸುತ್ತಿದ್ದುದನ್ನು ನೋಡುತ್ತಲೇ ಎದೆ ಒಡೆದು ಸತ್ತಳು. ಇನ್ನೊಬ್ಬಳಿಗೆ, ತನ್ನ ನಾಲ್ವರು ಮಕ್ಕಳನ್ನು ಬಿಟ್ಟರೆ ಜೀವನದಲ್ಲಿ ಬೇರೇನೂ ಉಳಿದಿಲ್ಲ. ಇಷ್ಟು ದಿನ ಪರಿಹಾರ ಕೇಂದ್ರವಾಗಿದ್ದ ಶಾಲೆಯು ಮತ್ತೆ ಮಕ್ಕಳಿಗಾಗಿ ತೆರೆದಿದೆ, ಬಿಟ್ಟು ಹೊರಡಬೇಕು. ಆದರೆ ಹೋಗುವುದೆಲ್ಲಿಗೆ? ಎಲ್ಲಿಂದ ಶುರು ಮಾಡಬೇಕು ಮತ್ತೆ ತಮ್ಮ ಬದುಕನ್ನು? ಬಾಡಿಗೆಗೆ ಮನೆ ಪಡೆದು ಇರೋಣವೆಂದರೂ ಊರೆಲ್ಲ ಬಿದ್ದುಹೋಗಿರುವುದರಿಂದ ಬಾಡಿಗೆ ಮನೆಯೂ ಸಿಕ್ಕುತ್ತಿಲ್ಲ. ಮುರುಕು ಮನೆಯಲ್ಲೇ ಬದುಕು ಹೊಂದಿಸಿಕೊಳ್ಳಲು ಪ್ರಯತ್ನಿಸುತ್ತಿರುವವರು ಹಲವರು.

ಹೊರಗಿನಿಂದ ಸಹಾಯವೂ ಪ್ರವಾಹದಂತೆಯೇ ಹರಿದು ಬರುತ್ತಿದೆ. ಅಕ್ಕಿ, ಬೇಳೆ ಕೊಡುವವರೇನು, ಉಡಲು, ಹೊದೆಯಲು ಕೊಡುತ್ತಿರುವವರೇನು, ಪಾತ್ರೆ ಪಗಡಿ ಕೊಡುತ್ತಿರುವವರೇನು... ಗಾಡಿಗಳಲ್ಲಿ ಬರುತ್ತಾರೆ, ಕೊಟ್ಟು ಹೊರಡುತ್ತಾರೆ. ಕೊಟ್ಟಿದ್ದನ್ನು ಬೇಯಿಸಿಕೊಳ್ಳುವುದೆಂತು? ಹಾಸಿಗೆಯನ್ನು ಹಾಸುವುದೆಲ್ಲಿ?

ಈ ವರ್ಷ ಸುರಿದ ಮಳೆ ಮತ್ತು ಬಂದ ಪ್ರವಾಹಕ್ಕೆ ರಾಜ್ಯದ 18 ಜಿಲ್ಲೆಗಳಲ್ಲಿ ಪ್ರಳಯವೇ ಆದಂತಾಗಿದೆ. ಬಹುಶಃ ಜನರಿಗೆ ತಮ್ಮ ಬದುಕನ್ನು ಪುನರ್ ನಿರ್ಮಿಸಿಕೊಳ್ಳುವುದು ಹೇಗೆ ಎಂಬ ಪ್ರಶ್ನೆ ಎದ್ದಿರುವಂತೆಯೇ, ಸರ್ವನಾಶವಾಗಿರುವ ಹಳ್ಳಿಗಳನ್ನು ಪುನಃ ಕಟ್ಟುವುದು ಹೇಗೆಂಬ ಪ್ರಶ್ನೆಗೆ ಸರ್ಕಾರವೂ ಉತ್ತರ ಕಾಣದೆ ಮೂಕವಾಗಿರಬಹುದು. ಕೆಲಸ ಕಳೆದುಕೊಂಡವರಿಗೆ ₹ 1,800, ಮನೆ ನಾಶವಾದವರಿಗೆ ಬಾಡಿಗೆಗೆಂದು ₹ 5,000, ಜನ– ಜಾನುವಾರು ಕಳೆದುಕೊಂಡವರಿಗೆ ₹ 5 ಲಕ್ಷ ಎಂದೆಲ್ಲ ಘೋಷಣೆಗಳಾಗುತ್ತಿವೆಯೇ ಹೊರತು, ಹೆಚ್ಚಿನ ನಿರಾಶ್ರಿತರ ಕೈಗಂತೂ ಏನೂ ತಲುಪಿಲ್ಲ. ಬಂದವರಿಗೆ ಉತ್ತರ ಹೇಳುತ್ತ ಎಷ್ಟು ಕಾಲ ಜನರು ಕುಳಿತಾರೋ ಗೊತ್ತಿಲ್ಲ. ಅವರು ಪೂರ್ತಿ ಹತಾಶರಾಗುವ ಮೊದಲು, ಕುಸಿದ ಅವರ ವಿಶ್ವಾಸವನ್ನು ಪುನಶ್ಚೇತನಗೊಳಿಸಲು ಸರ್ಕಾರ ಕಾರ್ಯಗತವಾಗಲೇಬೇಕು. ಕೈಗೆ ಒಂದಿಷ್ಟು ಹಣದ ಜೊತೆಗೆ ಮೈ ಮನಸ್ಸನ್ನು ತೊಡಗಿಸುವಂಥ ಉದ್ಯೋಗಗಳು ತಕ್ಷಣದ ಅವಶ್ಯಕತೆ. ಸರ್ಕಾರದಲ್ಲಿ ಇರುವವರು ಈ ಬಗ್ಗೆ ಹೆಚ್ಚು ಮಾನವೀಯ ದೃಷ್ಟಿಯಿಂದ ವಿಚಾರ ಮಾಡಿ ಕಾರ್ಯತತ್ಪರರಾಗಲೇಬೇಕಾಗಿದೆ.

ಬೆಳೆಗಳೂ ಸಂಪೂರ್ಣ ನಾಶವಾಗಿವೆ. ಉದ್ಯೋಗ ಕೊಡದಂತಾಗಿದೆ ಕೃಷಿ. ಚಿಕ್ಕಪುಟ್ಟ ಅಂಗಡಿಕಾರರು, ಗಾಡಿ ಹೊಡೆಯುವವರು, ಹಣ್ಣು ಮಾರುವಂಥವರು ಮಾತ್ರ, ಸಾಮಾನುಗಳು ಉಳಿದಿದ್ದರೆ ತಮ್ಮ ಉದ್ಯೋಗಕ್ಕೆ ಮರಳುತ್ತಿದ್ದಾರೆ. ಬಹುತೇಕರಿಗೆ ತಮ್ಮ ಮನೆ ಬಿಟ್ಟು ಹೋಗಲಿಕ್ಕೂ ಹೆದರಿಕೆ. ಇವೆಲ್ಲದರ ಜೊತೆಗೆ ಎದ್ದು ಕಾಣುತ್ತಿರುವ ಇನ್ನೂ ಒಂದು ಸಂಗತಿಯೆಂದರೆ, ತುಂಬಿಕೊಂಡಿರುವ ಗಟಾರಗಳು. ನಮ್ಮ ಗಟಾರಗಳು ಯಾವಾಗಲೂ ತುಂಬಿಯೇ ಇರುತ್ತವೆ ನಿಜ. ಆದರೆ ಈಗ ದಂಡೆಗಳು ಒಡೆದಿದ್ದು, ಮಣ್ಣು ಕೊಚ್ಚಿಕೊಂಡು ಬಂದು ಅಡ್ಡ ನಿಂತಿದೆ. ಮನೆಗೋಡೆಗಳು ಬಿದ್ದಿದ್ದು, ಎಲ್ಲ ಸೇರಿ ಹರಿಯುವ ನೀರಿಗೆ ಅಡ್ಡ ನಿಂತಿರುವುದೇ ಹೆಚ್ಚು. ಇವೆಲ್ಲವನ್ನೂ ಬದಿಗೆ ಸರಿಸದ ಹೊರತು, ಗಟಾರದ ನೀರು ಹೊರ ಹೋಗುವುದು ಸಾಧ್ಯವಿಲ್ಲ.

ಒಂದು ಕಡೆ ಕೆಲಸದ ರಾಶಿಯೇ ಇದೆ. ಇನ್ನೊಂದು ಕಡೆ ಕೆಲಸವಿಲ್ಲದೆ, ಮಾಡಲು ತೋಚದೆ ಕುಳಿತಿರುವ ಕೈಗಳು. ನೆರವಿಗೆಂದು ಹೊರಗಿನಿಂದ ಬರುವವರು ತಮಗೆ ತಿಳಿದಂತೆ ಒಮ್ಮೆ ಮಾಡಿ ಹೋಗಬಹುದಾದರೂ ಸರಿಯಾದ ಕೆಲಸ ಸ್ಥಳೀಕರಿಂದಲೇ ಸಾಧ್ಯ. ಅವರ ನಾಶವಾದ ಮನೆಗಳ ಪುನರ್ ನಿರ್ಮಾಣದ ಜೊತೆಗೆ ಆತ್ಮವಿಶ್ವಾಸದ ನಿರ್ಮಾಣವೂ ಆಗಬೇಕು. ಇವೆರಡು ಸಮಸ್ಯೆಗಳಿಗೂ ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಕೆಲಸವು ಉತ್ತರವಾಗಬಲ್ಲದು. ಇದಕ್ಕಾಗಿ ಸಮರೋಪಾದಿಯಲ್ಲಿ ಯೋಜನೆಗಳಾಗಬೇಕು. ಅಧಿಕಾರಿಗಳು ಕಾರ್ಯನಿರತರಾಗಬೇಕು. ಬಿದ್ದಿರುವ ಮನೆಗಳ ಸಾಮಾನುಗಳನ್ನು ತೆಗೆದುಹಾಕಲು, ಅರ್ಧ ಬಿದ್ದಿರುವ ಮನೆಗಳನ್ನು ಪೂರ್ತಿ ಕೆಡವಿ ಅವಶೇಷ ತೆರವುಗೊಳಿಸಲು, ಗಟಾರಗಳನ್ನು ಸ್ವಚ್ಛ ಮಾಡಲು, ಊರಿನ ರಸ್ತೆಗಳನ್ನು ದುರಸ್ತಿ ಮಾಡಲು ಉದ್ಯೋಗ ಖಾತರಿಯನ್ನು ಬಳಸಿಕೊಳ್ಳಬಹುದು.

ಭೂಹೀನ ಬಡ ಕುಟುಂಬಗಳಿಗೆ ಮತ್ತು ಚಿಕ್ಕ ಹಿಡುವಳಿದಾರರಿಗೆ ಹದಿನೈದು ದಿನಗಳ ಕಾಲ ಇಷ್ಟು ಕೆಲಸವನ್ನು ಕೊಟ್ಟರೆ ಊರೂ ಸ್ವಚ್ಛವಾಗುತ್ತದೆ. ಮುಂದಿನ ಹಂತವಾಗಿ, ಮನೆಗಳ ಪುನರ್ ನಿರ್ಮಾಣ ಕೆಲಸವನ್ನು ಆರಂಭಿಸಿ, ಅದೇ ಕುಟುಂಬಕ್ಕೆ 90 ದಿನಗಳ ಕೆಲಸವನ್ನು ಕೊಟ್ಟು, ತಮ್ಮ ಮನೆಯನ್ನು ತಾವೇ ನಿರ್ಮಿಸಿಕೊಳ್ಳುವುದರಲ್ಲಿ ಅವರನ್ನು ತೊಡಗಿಸಿಕೊಳ್ಳಬಹುದು. ತಮ್ಮದೇ ಮನೆಯನ್ನು ತಾವು ಕಟ್ಟಿಕೊಂಡು ಮುಗಿಸುವ ಹೊತ್ತಿಗೆ ಕುಟುಂಬಗಳು ತಕ್ಕಮಟ್ಟಿಗೆ ಚೇತರಿಸಿಕೊಂಡು ಆತ್ಮವಿಶ್ವಾಸವನ್ನು ಮರಳಿ ಪಡೆಯಬಹುದು.

ಇದರೊಂದಿಗೆ ಗ್ರಾಮೀಣ ರಸ್ತೆಗಳ ಪುನರ್ ನಿರ್ಮಾಣ, ನಾಶವಾದ ಬೆಳೆಗಳನ್ನು ತೆಗೆದುಹಾಕಿ ಹೊಲ ಸ್ವಚ್ಛಗೊಳಿಸುವುದು, ಬದು ನಿರ್ಮಾಣ, ಕೊಚ್ಚಿ ಹೋದ ಕಾಲುವೆಗಳು, ಒಡೆದುಹೋದ ಕೆರೆಕುಂಟೆಗಳ ಪುನರ್ ನಿರ್ಮಾಣ, ಗಿಡ ನೆಡುವುದು... ಇವೆಲ್ಲವನ್ನೂ ಉದ್ಯೋಗ ಖಾತರಿಯಡಿ ತೆಗೆದುಕೊಂಡರೆ, ಈ ವರ್ಷವಿಡೀ ಜನರಿಗೆ ಕೆಲಸ ಕೊಟ್ಟಂತಾಗುತ್ತದೆ. ಕೆಳಗೆ ಬಿದ್ದವರನ್ನು ಕೈಹಿಡಿದು ಎತ್ತಿದಂತಾಗುತ್ತದೆ.

ಆದರೆ ಇದು ಸುಲಭವಲ್ಲ. ಅರ್ಜಿ ಹಾಕಿದರೂ ಸರಿಯಾದ ಸಮಯಕ್ಕೆ ಕೆಲಸ ಸಿಗದಿರುವುದು, ಕೆಲಸ ಮಾಡಿದರೂ ಕೂಲಿ ಪಾವತಿ ತಡವಾಗುವುದು... ಹೀಗೆಲ್ಲ ಬಹಳಷ್ಟು ಸಮಸ್ಯೆಗಳಿವೆ. ಮೇಲಧಿಕಾರಿಗಳಿಗೆ ಇಚ್ಛಾಶಕ್ತಿ ಇದ್ದರೆ ಮಾತ್ರ, ಜನರಿಗಾಗಿ ಜಾರಿಯಾದ ಈ ಯೋಜನೆ ಆಪತ್ಕಾಲದಲ್ಲಿ ಜನರ ನೆರವಿಗೆ ಬರಲು ಸಾಧ್ಯ. ಒಂದೊಂದು ಹಳ್ಳಿಯೂ ಪುನರ್ ನಿರ್ಮಾಣ ಆಗಬೇಕಾಗಿದೆ. ನಶಿಸಿಹೋದ ಜೀವನವನ್ನು ಮತ್ತೆ ಕಟ್ಟಬೇಕಾಗಿದೆ. ನೊಂದವರು ನಿರಾಸೆಯಿಂದ ಆತ್ಮಹತ್ಯೆಯ ಕಡೆಗೆ ಹೋಗದಂತೆ ತಡೆಯಬೇಕಾಗಿದೆ.

ಸಂಘಟನೆಗಳು, ಸ್ವಯಂಸೇವಾ ಸಂಸ್ಥೆಗಳ ನೆರವನ್ನು ಪಡೆದು ಜನರನ್ನು ಸಂಘಟಿಸಿದರೆ, ಖಚಿತವಾಗಿಯೂ ಇದು ಮಾಡಬಹುದಾದ ಕೆಲಸ, ಮಾಡಲೇಬೇಕಾದ ಕೆಲಸ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT