ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಕೀಲರಿಲ್ಲದೆ ನ್ಯಾಯಸಮ್ಮತ ವಿಚಾರಣೆಯೇ?

ಕಾನೂನು ನೆರವು ಪಡೆಯುವ ಹಕ್ಕು ನಮ್ಮ ಸಮಾಜದ ಮೂಲ ಅಂಶ
Last Updated 5 ಮಾರ್ಚ್ 2020, 20:00 IST
ಅಕ್ಷರ ಗಾತ್ರ
ADVERTISEMENT
""

ನಳಿನಿ ಬಾಲಕುಮಾರ್ ಎನ್ನುವ ವಿದ್ಯಾರ್ಥಿನಿಯ ಪರ ಹಾಜರಾಗದಂತೆ ತನ್ನ ಸದಸ್ಯರಿಗೆ ಸೂಚಿಸುವ ನಿರ್ಣಯವನ್ನು ಮೈಸೂರು ವಕೀಲರ ಸಂಘ ಈಚೆಗೆ ತೆಗೆದುಕೊಂಡಿತು. ‘ಫ್ರೀ ಕಾಶ್ಮೀರ’ ಎಂಬ ಬರಹವಿದ್ದ ಭಿತ್ತಿಪತ್ರ ಪ್ರದರ್ಶಿಸಿದ್ದಕ್ಕೆ ನಳಿನಿ ದೇಶದ್ರೋಹದ ಆರೋಪ ಹೊತ್ತಿದ್ದಾರೆ. ದೇಶದ್ರೋಹದ ಆರೋಪ ಎದುರಿಸುತ್ತಿರುವ ಕಾಶ್ಮೀರ ಮೂಲದ ಮೂವರು ವಿದ್ಯಾರ್ಥಿಗಳ ಪರ ವಾದ ಮಂಡಿಸಲು ನಿರಾಕರಿಸುವ ನಿರ್ಣಯವನ್ನು ಹುಬ್ಬಳ್ಳಿಯ ವಕೀಲರ ಸಂಘ ತೆಗೆದುಕೊಂಡಿತ್ತು (ನಂತರ, ಈ ನಿರ್ಣಯ ಹಿಂಪಡೆಯಲಾಗಿದೆ ಎಂದು ವರದಿಯಾಗಿದೆ).

ಈ ನಿರ್ಣಯಕ್ಕೆ ಸಹಮತ ತೋರದ ಕರ್ನಾಟಕ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಅಭಯ್ ಎಸ್. ಓಕಾ ಅವರು, ‘ನಿರ್ಣಯ ಕೈಗೊಳ್ಳುವ ಮೂಲಕ ಅವರು ನ್ಯಾಯಾಲಯದ ಕೆಲಸವನ್ನು ಸ್ಥಗಿತಗೊಳಿಸುತ್ತಿದ್ದಾರೆ. ಅವರು ತಾವೇ ಸಣ್ಣ ಪ್ರಮಾಣದ ವಿಚಾರಣೆ ನಡೆಸುತ್ತಿದ್ದಾರೆಯೇ? ಈ ನಡೆಯನ್ನು ಒಪ್ಪಬಾರದು’ ಎಂದಿದ್ದಾರೆ. ಇದಾದ ನಂತರ, ಧಾರವಾಡದಲ್ಲಿ ಕೆಲವು ವಕೀಲರು, ಈ ವಿದ್ಯಾರ್ಥಿಗಳ ಪರವಾಗಿ ಬೆಂಗಳೂರಿನಿಂದ ಬಂದಿದ್ದ ವಕೀಲರಿಗೆ ನ್ಯಾಯಾಲಯದ ಹೊರಗೆ ಅಡ್ಡಿ ಉಂಟುಮಾಡಿದರು ಎಂದು ವರದಿಯಾಗಿದೆ. ಆಡಳಿತಾರೂಢರಿಗೆ, ಇತರ ಬಲಿಷ್ಠ ಹಿತಾಸಕ್ತಿಗಳಿಗೆ ವಿರುದ್ಧವಾಗಿರುವವರಿಗೆ ವಕೀಲರ ನೆರವು ಸಿಗಬಾರದು ಎಂದು ವಕೀಲರ ಸಂಘಗಳು ನಿರ್ಣಯ ಕೈಗೊಳ್ಳುತ್ತಿರುವ ಕಳವಳಕಾರಿ ವಿದ್ಯಮಾನಗಳ ಉದಾಹರಣೆಗಳು ಇವು.

ನಮ್ಮ ಕ್ರಿಮಿನಲ್ ನ್ಯಾಯದಾನ ವ್ಯವಸ್ಥೆಯು ನ್ಯಾಯಸಮ್ಮತ ಆಗಿರಬೇಕು ಎಂದಾದರೆ ವಕೀಲರ ನೆರವು ಮೂಲಭೂತ ಅಗತ್ಯ. ತನ್ನ ಆಯ್ಕೆಯ ವಕೀಲನ ಜೊತೆ ಸಮಾಲೋಚಿಸುವ, ಅವನಿಂದ ನೆರವು ಪಡೆಯುವ ಹಕ್ಕನ್ನು ಬಂಧಿತ ವ್ಯಕ್ತಿಯಿಂದ ಕಿತ್ತುಕೊಳ್ಳುವಂತಿಲ್ಲ ಎಂದು ಸಂವಿಧಾನದ 22ನೇ ವಿಧಿ ಹೇಳುತ್ತದೆ. ಸಂವಿಧಾನ ರಚನಾ ಸಭೆಯ ಸದಸ್ಯರು ಈ ಅತಿಮುಖ್ಯವಾದ ಹಕ್ಕನ್ನು ಸಂವಿಧಾನದಲ್ಲಿ ಸೇರಿಸುವಾಗ ತಮ್ಮ ಅನುಭವಗಳನ್ನು ಜ್ಞಾಪಿಸಿಕೊಂಡಿದ್ದರು. ಈ ಸದಸ್ಯರಲ್ಲಿ ಕೆಲವರು ‘ವಕೀಲರೂ ಇಲ್ಲ, ವಿಚಾರಣೆಯೂ ಇಲ್ಲ, ಮೇಲ್ಮನವಿಯೂ ಇಲ್ಲ’ ಎಂಬ ಸೂತ್ರದ ಅಡಿ ಬ್ರಿಟಿಷರ ಕಾಲದಲ್ಲಿ ಸುದೀರ್ಘ ಅವಧಿಗೆ ಬಂಧನದಲ್ಲಿದ್ದವರು. ಹಾಗಾಗಿ, ಕಾನೂನು ನೆರವು ಪಡೆಯುವ ಹಕ್ಕು ನಮ್ಮ ಸಮಾಜದ ಮೂಲ ಅಂಶ; ವಕೀಲರ ಸಂಘಗಳು ತಮ್ಮ ವಿವೇಚನಾಧಿಕಾರ ಬಳಸಿ ನೀಡುವಂಥದ್ದಲ್ಲ.

ಕಾನೂನು ನೆರವಿನ ಅಗತ್ಯ ಇರುವುದು ಕ್ರಿಮಿನಲ್ ಪ್ರಕರಣಗಳ ನ್ಯಾಯಾಂಗ ವಿಚಾರಣೆಯ ಹಂತದಲ್ಲಿ ಮಾತ್ರವೇ ಅಲ್ಲ, ಅದು ಬಂಧನ ನಡೆದ ಹೊತ್ತಿನಿಂದಲೇ ಬೇಕಾಗುತ್ತದೆ. ಬಂಧನ ಮತ್ತು ವಶಕ್ಕೆ ಪಡೆದುಕೊಳ್ಳುವ ಪ್ರಕ್ರಿಯೆಯು ಬಂಧಿತನ ವೈಯಕ್ತಿಕ ಸ್ವಾತಂತ್ರ್ಯವನ್ನು, ಬಹುಪಾಲು ಮೂಲಭೂತ ಸ್ವಾತಂತ್ರ್ಯಗಳನ್ನು ಕಿತ್ತುಕೊಳ್ಳುತ್ತದೆ. ಹಾಗಾಗಿ, ಜಾಮೀನು ವಿಚಾರಣೆಯ ಹಂತದಲ್ಲಿಯೂ ಕಾನೂನಿನ ನೆರವು ಬಂಧಿತರಿಗೆ ಅಗತ್ಯವಾಗಿರುತ್ತದೆ. ಪ್ರಾಸಿಕ್ಯೂಷನ್‌ ಹಾಗೂ ಆರೋಪಿಗಳ ನಡುವೆ ವಾದ–‍ಪ್ರತಿವಾದ ನಡೆಯುವ ನಮ್ಮ ವ್ಯವಸ್ಥೆಯಲ್ಲಿ ಪ್ರಕ್ರಿಯೆಗಳು ನ್ಯಾಯಸಮ್ಮತವಾಗಿರಬೇಕು ಎಂದಾದರೆ ಕಾನೂನಿನ ನೆರವು ಬೇಕೇಬೇಕು. ಈ ವ್ಯವಸ್ಥೆಯಲ್ಲಿ ಆರೋಪಿಗೆ ವಕೀಲರ ನೆರವು ಇಲ್ಲವಾದರೆ, ಪಳಗಿದ ಪ್ರಾಸಿಕ್ಯೂಟರ್‌ ಅಥವಾ ಪೊಲೀಸರ ಎದುರು ಆತನ ಕೈ ಕಟ್ಟಿಹಾಕಿದಂತೆ ಆಗುತ್ತದೆ.

ಪ್ರಕ್ರಿಯೆಗಳು ನ್ಯಾಯಸಮ್ಮತವಾಗಿದ್ದರೂ ನ್ಯಾಯಾಲಯ ನೆರವಿಗೆ ಬಂದರೂ ವಕೀಲರ ನೆರವು ಇಲ್ಲದ ಆರೋಪಿಗಳು ಕ್ರಿಮಿನಲ್ ಪ್ರಕರಣದ ವಿಚಾರಣೆಯಲ್ಲಿ ತಮ್ಮನ್ನು ಸಮರ್ಥಿಸಿಕೊಳ್ಳುವ ಸ್ಥಿತಿ ಎದುರಾದಾಗ ಸಂಕಷ್ಟಕ್ಕೆ ಸಿಲುಕುತ್ತಾರೆ. ವಕೀಲನ ಮೂಲಕ ತಮ್ಮ ವಾದ ಮಂಡಿಸುವ ಹಕ್ಕು ಇಲ್ಲವಾದರೆ, ‘ವಾದ ಮಂಡಿಸುವ ಹಕ್ಕು’ ಅರ್ಥ ಕಳೆದುಕೊಳ್ಳುತ್ತದೆ. ಬುದ್ಧಿವಂತರು, ಸುಶಿಕ್ಷಿತರಿಗೆ ಕೂಡ ಕಾನೂನಿನ ಪೂರ್ಣ ಅರಿವು ಹಾಗೂ ಅದರ ಸಂಕೀರ್ಣತೆಗಳ ಮಾಹಿತಿ ಇರುವುದಿಲ್ಲ.

ಅಪರಾಧ ಎಸಗಿದ ಆರೋಪ ಎದುರಾದಾಗ, ಆರೋಪಿ ಸ್ಥಾನದಲ್ಲಿದ್ದವನಿಗೆ ತನ್ನ ಮೇಲಿರುವ ಆರೋಪ ಸರಿಯೋ ತಪ್ಪೋ ಎಂಬುದು ಸಾಮಾನ್ಯ ಸಂದರ್ಭಗಳಲ್ಲಿ ಗೊತ್ತಾಗುವುದಿಲ್ಲ. ಸಾಕ್ಷ್ಯಗಳಿಗೆ ಸಂಬಂಧಿಸಿದ ಕಾನೂನು ಅವರಿಗೆ ಗೊತ್ತಿರುವುದಿಲ್ಲ. ವಕೀಲನ ನೆರವು ಸಿಗದೇ ಇದ್ದರೆ ಆ ಆರೋಪಿ ಸೂಕ್ತ ದೋಷಾರೋಪ ಇಲ್ಲದಿದ್ದರೂ ವಿಚಾರಣೆ ಎದುರಿಸಬೇಕಾಗಬಹುದು, ಅಸಮರ್ಪಕ ಸಾಕ್ಷ್ಯ–ಆಧಾರಗಳೇ ಅವನನ್ನು ಶಿಕ್ಷೆಗೆ ಗುರಿಪಡಿಸಬಹುದು. ತನ್ನನ್ನು ಸಮರ್ಥಿಸಿಕೊಳ್ಳಲು ಬೇಕಿರುವ ಆಧಾರಗಳು ಅವನಲ್ಲಿ ಇದ್ದರೂ, ಅದನ್ನು ಬಳಸಿಕೊಳ್ಳುವ ಕೌಶಲ ಹಾಗೂ ಜ್ಞಾನ ಅವನಲ್ಲಿ ಇರುವುದಿಲ್ಲ.

‘ಕಾನೂನಿನ ಎದುರು ಎಲ್ಲರೂ ಸಮಾನರು’, ‘ನ್ಯಾಯದಾನ ವ್ಯವಸ್ಥೆಯ ಮೊರೆ ಹೋಗಲು ಅವಕಾಶ ಎಲ್ಲರಿಗೂ ಇದೆ’ ಎನ್ನುವ ತತ್ವಗಳಿಗೆ ಜೀವಕೊಡಲಿಕ್ಕೆ ಕಾನೂನಿನ ನೆರವು ಪಡೆಯುವ ಹಕ್ಕು ಬಹಳ ಮುಖ್ಯ. ವ್ಯಕ್ತಿ ಅಪರಾಧ ಮಾಡಿಯೇ ಮಾಡಿದ್ದಾನೆ ಎಂಬ ರೀತಿಯಲ್ಲಿ ವಕೀಲರ ಸಂಘಗಳು ಮಾತನಾಡುವುದು, ಆರೋಪಿಗಳಿಗೆ ನ್ಯಾಯಸಮ್ಮತ ವಿಚಾರಣೆ ಲಭ್ಯವಾಗದಂತೆ ಮಾಡುವುದು ಕಳವಳಕಾರಿ. ನಮ್ಮ ಸಮಾಜವು ಕಾನೂನಿಗೆ ಅನುಗುಣವಾಗಿ ನಡೆಯುವಂತೆ ನೋಡಿಕೊಳ್ಳುವಲ್ಲಿ ವಕೀಲರದ್ದು ಮುಖ್ಯ ಪಾತ್ರ. ವಕೀಲರು ತಮ್ಮ ಕಕ್ಷಿದಾರರನ್ನು ಪ್ರತಿನಿಧಿಸುವ ಕೆಲಸವನ್ನಷ್ಟೇ ಮಾಡುವುದಿಲ್ಲ. ಅವರು ನ್ಯಾಯಾಂಗ ವ್ಯವಸ್ಥೆಯ ಮೊದಲನೆಯ ಸಾಲಿನ ಪ್ರತಿನಿಧಿಗಳೂ ಹೌದು. ಆದರೆ, ವಕೀಲರ ಸಂಘಗಳು ಕೆಲವರ ಪರ ವಾದ ಮಂಡಿಸಲು ನಿರಾಕರಿಸಿ, ಅವರು ‘ದೇಶ ವಿರೋಧಿಗಳು’ ಎನ್ನುವ ವಿಶೇಷಣ ಬಳಸಿ ಕರೆದಿದ್ದರ ಪರಿಣಾಮವಾಗಿ ಅವರು ‘ಅಪರಾಧಿ’ಗಳು ಎಂದು ವಿಚಾರಣೆ ಆರಂಭಕ್ಕೆ ಮುನ್ನವೇ ಘೋಷಿಸಿದಂತೆ ಆಗಿದೆ.

ಕೆಲವು ಶಂಕಿತರ ಪರ ಅಥವಾ ಕೆಲವು ಆರೋಪಿಗಳ ಪರ ವಾದಿಸಲು ನಿರಾಕರಿಸುವ, ಇತರರು ಕೂಡ ಅವರ ಪರ ವಾದಿಸುವುದನ್ನು ತಡೆಯುವ ಮೂಲಕ ವಕೀಲರ ಸಂಘಗಳು ‘ಕಾನೂನಿನ ಅನ್ವಯ ಆಡಳಿತ’ ಎನ್ನುವ ತತ್ವ ಉಲ್ಲಂಘಿಸಿದಂತೆ ಆಗಿದೆ. ಶಂಕಿತರನ್ನು ಅಪರಾಧಿಗಳು ಎಂದು ಘೋಷಿಸಿ, ‘ಅಪರಾಧ ಸಾಬೀತಾಗುವವರೆಗೆ ಅಮಾಯಕ’ ಎಂಬ ತತ್ವವನ್ನು ವಕೀಲರ ಸಂಘಗಳು ಉಲ್ಲಂಘಿಸಬಾರದು. ನ್ಯಾಯಸಮ್ಮತ ವಿಚಾರಣೆಗೆ ಈ ತತ್ವ ಬಹಳ ಅಗತ್ಯ. ಏಕೆಂದರೆ, ಒಬ್ಬ ವ್ಯಕ್ತಿ ಹಾಗೂ ಸರ್ಕಾರದ ನಡುವೆ ಹೋಲಿಕೆ ಮಾಡಿದರೆ, ತನಿಖೆ, ಪ್ರಾಸಿಕ್ಯೂಷನ್‌ ಪ್ರಕ್ರಿಯೆ, ವಿಚಾರಣೆಗೆ ಸಂಬಂಧಿಸಿದಂತೆ ಸರ್ಕಾರದ ಬಳಿ ಅಪಾರ ಸಂಪನ್ಮೂಲ ಇರುತ್ತದೆ. ಹಾಗಾಗಿ, ಸರ್ಕಾರವು ತನ್ನ ಬಲ, ಸಂಪನ್ಮೂಲಗಳನ್ನು ಕೆಲವು ಚೌಕಟ್ಟುಗಳ ಒಳಗೆ, ವ್ಯಕ್ತಿಯ ಘನತೆ ಮತ್ತು ಸ್ವಾತಂತ್ರ್ಯಕ್ಕೆ ಗೌರವ ನೀಡಿ, ಬಳಕೆ ಮಾಡಲು ಅವಕಾಶವಿದೆ.

‘ಅಪರಾಧ ಸಾಬೀತಾಗುವವರೆಗೆ ಅಮಾಯಕ’ ಎನ್ನುವ ತತ್ವವನ್ನು ವಿಚಾರಣಾಪೂರ್ವ ಹಂತದಲ್ಲಿ ಕೂಡ ಪಾಲಿಸಬೇಕಿರುವುದು ವಿಚಾರಣೆ ನ್ಯಾಯಸಮ್ಮತವಾಗಿ ನಡೆಯುವುದಕ್ಕೆ ಅಗತ್ಯ. ವಕೀಲರದ್ದು ಸಮಾಜದಲ್ಲಿ ಶಕ್ತಿಶಾಲಿ ಗುಂಪು. ಅವರು ತಮ್ಮ ಸಾಮೂಹಿಕ ಅಭಿಪ್ರಾಯದ ಮೂಲಕ ಸಾರ್ವಜನಿಕರ ಅಭಿಪ್ರಾಯದ ಮೇಲೆ ಪ್ರಭಾವ ಬೀರುತ್ತಾರೆ. ಕೆಲವು ಟಿ.ವಿ. ಚಾನೆಲ್‌ಗಳ ನಿರೂಪಕರು, ಕೆಲವು ರಾಜಕಾರಣಿಗಳು ಸಾರ್ವಜನಿಕ ಅಭಿಪ್ರಾಯವು ಆರೋಪಿಗಳ ವಿರುದ್ಧವಿರುವಂತೆ ಮಾಡಿರುವಾಗ, ಆರೋಪಿಗಳಿಗೆ ನ್ಯಾಯಸಮ್ಮತ ತನಿಖೆ ಮತ್ತು ವಿಚಾರಣೆಯ ಭರವಸೆ ಸಿಗಬಹುದೇ? ವಕೀಲರ ಸಂಘಗಳು ಕೂಡ ಹೀಗೆ ಮಾಡಿದರೆ ನಮ್ಮ ನ್ಯಾಯಾಂಗ ವ್ಯವಸ್ಥೆಗೆ ಉಳಿಗಾಲವಿರುವುದಿಲ್ಲ.

ವೈಯಕ್ತಿಕ ರಾಜಕೀಯ ನಿಲುವುಗಳು ಏನೇ ಇದ್ದರೂ ವಕೀಲರು ಕಾನೂನು ಮತ್ತು ನ್ಯಾಯಾಂಗದ ಪರ ನಿಲ್ಲಬೇಕು. ಮನುಷ್ಯನನ್ನು ಜೈಲಿಗೆ ಕಳುಹಿಸುವುದು ಸಮಾಜ ನೀಡುವ ಅತಿದೊಡ್ಡ ಶಿಕ್ಷೆ. ಅಂತಹ ಶಿಕ್ಷೆಗೆ ಮುನ್ನ ಅದು ಆ ವ್ಯಕ್ತಿಗೆ ನ್ಯಾಯಸಮ್ಮತ ವಿಚಾರಣೆಯ ಅವಕಾಶ ನೀಡುತ್ತದೆ. ಈ ಹೆಮ್ಮೆಯ ತತ್ವದ ಪರವಾಗಿ ನಿಂತ ಪರಂಪರೆ ಭಾರತದ ವಕೀಲರಿಗೆ ಇದೆ. ಅಗತ್ಯವಿದ್ದವರಿಗೆ ನೆರವು ನೀಡಿದ ಹಿರಿಮೆಯೂ ಅವರಿಗಿದೆ. ಇಂಥದ್ದನ್ನು ವಕೀಲರು ಮುಂದುವರಿಸಬೇಕು. ಎಲ್ಲರಿಗೂ ನ್ಯಾಯ ದೊರಕುವಂತೆ ನೋಡಿಕೊಳ್ಳಬೇಕು.

ಲೇಖಕ: ವಕೀಲ ಮತ್ತು ದಕ್ಷ್ ಸಂಸ್ಥೆಯ ಸಹಸಂಸ್ಥಾಪಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT