ಮಂಗಳವಾರ, ಆಗಸ್ಟ್ 11, 2020
26 °C
ಆಗಸ್ಟ್ 1ರಂದು ತಿಲಕರ ನೂರನೇ ಪುಣ್ಯತಿಥಿ

ಹಿಂದೂ–ಮುಸ್ಲಿಂ ಏಕತೆಗಾಗಿ ಶ್ರಮಿಸಿದ ಲೋಕಮಾನ್ಯರು

ಸುಧೀಂದ್ರ ಕುಲಕರ್ಣಿ Updated:

ಅಕ್ಷರ ಗಾತ್ರ : | |

Prajavani

ಭಾರತ–ಪಾಕಿಸ್ತಾನ ಸಂಬಂಧಗಳು ಮತ್ತೊಮ್ಮೆ ಕಗ್ಗತ್ತಲೆ ತುಂಬಿದ ಸುರಂಗದಲ್ಲಿ ಪ್ರವೇಶಿಸಿವೆ ಹಾಗೂ ಇದರಿಂದ ಬೇಗನೇ ಹೊರಬರುವ ಯಾವ ಬೆಳಕಿನ ಕಿರಣವೂ ಕಾಣುತ್ತಿಲ್ಲ. ಭಾರತದಲ್ಲಿ ಹಿಂದೂ–ಮುಸ್ಲಿಂ ಸಂಬಂಧಗಳನ್ನು ವಿಭಜಿಸುವ ಮತ್ತು ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಪರಿವರ್ತಿಸುವ ಕುಪ್ರಯತ್ನಗಳು ಅಭೂತಪೂರ್ವಾಗಿ ನಡೆದಿವೆ.

ಇಂಥಾ ಕಠಿಣ ಪರಿಸ್ಥಿತಿಯಲ್ಲಿ ಈ ಎರಡೂ ಸಂಬಂಧಗಳನ್ನು ಸುಧಾರಿಸಲು ನಮಗೆ ವಿಚಾರ ಮತ್ತು ಪ್ರೇರಣೆ ಸಿಗುವುದು ಎಲ್ಲಿಂದ? ಯಾರಿಂದ? ಈ ಪ್ರಶ್ನೆಯ ಉತ್ತರ ಸ್ಪಷ್ಟವಾಗಿದೆ. ನಮ್ಮ ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹಿಂದೂ–ಮುಸ್ಲಿಂ ಏಕತೆಗಾಗಿ ಸಾಹಸ ಮತ್ತು ನಿಷ್ಠಾಪೂರ್ವಕವಾಗಿ ಹೋರಾಡಿದ ಮಹಾನಾಯಕರಿಂದಲೆ.

ಇಂಥ ಒಬ್ಬ ಮಹಾನಾಯಕರೆಂದರೆ ಲೋಕಮಾನ್ಯ ಬಾಲಗಂಗಾಧರ ತಿಲಕ್ (1856–1920). ಆಗಸ್ಟ್ 1ರಂದು ಅವರ ಪುಣ್ಯತಿಥಿಗೆ ನೂರು ವರ್ಷಗಳು ಕಳೆದಿವೆ. ಬ್ರಿಟಿಷ್ ವಿರೋಧಿ ಆಂದೋಲನದ ಇತಿಹಾಸದಲ್ಲಿ ಮಹಾತ್ಮ ಗಾಂಧಿ ಯುಗ ಶುರುವಾಗುವ ಮೊದಲು ಎಲ್ಲಕ್ಕಿಂತ ಎತ್ತರದ ಹಾಗೂ ಜನಪ್ರಿಯ ನಾಯಕ ರೆಂದರೆ ತಿಲಕರೆ. ಆ ಕಾಲದಲ್ಲಿ ಭಾರತದ ವ್ಯವಹಾರಗಳನ್ನು ನೋಡುತ್ತಿದ್ದ ಬ್ರಿಟಿಷ್ ವಿದೇಶ ಮಂತ್ರಿ ಎಡ್ವಿನ್ ಮೊಂಟೆಗ್ಯೂ ಹೇಳಿದ ಮಾತಿದು–‘ಇಂದು ಭಾರತದಲ್ಲಿ ತಿಲಕರಿಗಿಂತ ಹೆಚ್ಚು ಶಕ್ತಿಶಾಲಿ ಮುಖಂಡರು ಯಾರೂ ಇಲ್ಲ’. ತಮ್ಮ ಆತ್ಮಚರಿತ್ರೆಯಲ್ಲಿ ಜವಾಹರಲಾಲ್ ನೆಹರೂ ಬರೆದರು–‘ತಿಲಕ್ ಅವರದು ಅದಮ್ಯ ನಾಯಕತ್ವ. ಅವರು ಹೋರಾಟದಲ್ಲಿ ಪೆಟ್ಟು ತಿನ್ನಬಹುದು. ಆದರೆ, ಎಂದೂ ಬಾಗುವವರಲ್ಲ’.

ಮುಂಬೈಯಲ್ಲಿ 1920ರ ಆಗಸ್ಟ್ 1ರ ಬೆಳಿಗ್ಗೆ ಅಲ್ಪಾವಧಿಯ ಅನಾರೋಗ್ಯದಿಂದ ತಿಲಕರು ಕೊನೆಯುಸಿರೆಳೆದರು. ಅವರ ಅಂತ್ಯಯಾತ್ರೆಯಲ್ಲಿ ಲಕ್ಷಾಂತರ ಜನ ಸೇರಿದ್ದರು. ಅವರಲ್ಲಿ ಗಾಂಧೀಜಿ ಹಾಗೂ ‘ನಾನು ತಿಲಕರ ಅನುಯಾಯಿ’ ಎಂದು ಹೇಳಿದ್ದ ಖಿಲಾಫತ್ ಚಳವಳಿಯ ಅಗ್ರ ನಾಯಕ ಮೌಲಾನಾ  ಶೌಕತ್ ಅಲಿ ಕೂಡಾ ಇದ್ದರು. ತಮ್ಮ ಶ್ರದ್ಧಾಂಜಲಿ ಸಂದೇಶದಲ್ಲಿ ಗಾಂಧೀಜಿ ‘ಒಂದು ಸಿಂಹದ ಗರ್ಜನೆ ನಿಂತು ಹೋಗಿದೆ. ಸ್ವರಾಜ್ಯದ ಮಂತ್ರವನ್ನು ಲೋಕಮಾನ್ಯರಷ್ಟು ಸತತವಾಗಿ ಮತ್ತು ಸಮರ್ಥವಾಗಿ ಇನ್ಯಾರೂ ಘೋಷಿಸಿರಲಿಲ್ಲ’ ಎಂದು ಹೇಳಿದ್ದರು. ಆ ಕಾಲದಲ್ಲಿ ತಿಲಕರ ನಿಕಟ ಸಂಗಾತಿಯಾಗಿದ್ದ, ನಂತರ ಪಾಕಿಸ್ತಾನದ ಜನಕರಾದ ಮೊಹಮ್ಮದ್ ಅಲಿ ಜಿನ್ನಾ ಅವರ ಗೌರವೋದ್ಗಾರ ಹೀಗಿದೆ–‘ತಿಲಕ್ ಅವರು ರಾಷ್ಟ್ರಕ್ಕಾಗಿ ಅಪಾರ ಸೇವೆ ಸಲ್ಲಿಸಿದರು. ಹಿಂದೂ–ಮುಸ್ಲಿಂ ಏಕತೆಗಾಗಿ ಅತಿ ಮಹತ್ವದ ಪಾತ್ರ ವಹಿಸಿದರು. ಅವರಿಂದಾಗಿಯೇ ಕಾಂಗ್ರೆಸ್ ಮತ್ತು ಮುಸ್ಲಿಂ ಲೀಗ್ ಪಕ್ಷಗಳ ನಡುವೆ 1916ರಲ್ಲಿ ಐತಿಹಾಸಿಕ ಲಖನೌ ಕರಾರು ಸಾಧ್ಯವಾಯಿತು’.‌

ಭಾರತದ ಸ್ವಾತಂತ್ರ್ಯ ಆಂದೋಲನದಲ್ಲಿ ತಿಲಕ್ ಮತ್ತು ಜಿನ್ನಾ ಅವರ ನಡುವಿನ ಸಹಯೋಗಿತ್ವ ಇಂದಿನ ಪೀಳಿಗೆಗೆ ಗೊತ್ತೇ ಇಲ್ಲ. ಜಿನ್ನಾ ಅವರು ಏಕಕಾಲಕ್ಕೆ ಕಾಂಗ್ರೆಸ್ ಮತ್ತು ಮುಸ್ಲಿಂ ಲೀಗ್ ಪಕ್ಷಗಳ ಸಕ್ರಿಯ ಸದಸ್ಯರಾಗಿದ್ದರು. ಗೋಪಾಲಕೃಷ್ಣ ಗೋಖಲೆ ಅವರು ಜಿನ್ನಾ ಅವರನ್ನು ‘ಹಿಂದೂ–ಮುಸ್ಲಿಂ ಏಕತೆಯ ರಾಯಭಾರಿ’ ಎಂದು ವರ್ಣಿಸಿದ್ದು, ‘ನನಗೆ ಮುಸ್ಲಿಂ ಗೋಖಲೆ ಆಗಬೇಕೆಂದು ಇಚ್ಛೆ ಇದೆ’ ಎಂದು ಜಿನ್ನಾ ಅವರು ಹೇಳಿದ್ದು ಹಾಗೂ ತಿಲಕರ ಜೊತೆಗೂಡಿ ಅವರು ಬ್ರಿಟಿಷ್ ವಿರೋಧಿ ಜನಜಾಗೃತಿಯ ಸಾಹಸಿ ಕಾರ್ಯ ಮಾಡಿದ್ದು–ಇವೆಲ್ಲವನ್ನೂ ನಾವು ಮರೆತು ಹೋಗಿದ್ದೇವೆ. ಏಕೆಂದರೆ ಜಿನ್ನಾ ಅವರನ್ನು ಖಳನಾಯಕರನ್ನಾಗಿ ಮಾಡಿ ಭಾರತದ ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸವನ್ನು ನಮಗೆ ಸರಿ ಎನಿಸುವ ರೀತಿಯಲ್ಲಿ ನಿರೂಪಿಸುತ್ತಾ ಬಂದಿದ್ದೇವೆ. ತಿಲಕರ ಮೃತ್ಯುವಿನ ನಂತರ ಜಿನ್ನಾ ಕಾಂಗ್ರೆಸ್ ಪಕ್ಷ ತ್ಯಾಗ ಮಾಡಿ, ಕ್ರಮೇಣವಾಗಿ ಮುಸ್ಲಿಂ ಪ್ರತ್ಯೇಕತೆಯ ರಾಜಕಾರಣ ನಡೆಸಿ, ಹಲವಾರು ತಪ್ಪು ಹೆಜ್ಜೆಗಳನ್ನಿಟ್ಟು ಪಾಕಿಸ್ತಾನ ಸ್ಥಾಪನೆಗೆ ಕಾರಣರಾದರು ಇದು ವಾದಾತೀತ. ಆದರೆ, ತಿಲಕರ ಜೊತೆಗೆ ಕೈಗೂಡಿಸಿ ಹಿಂದೂ–ಮುಸ್ಲಿಂ ಒಗ್ಗಟ್ಟಿಗಾಗಿ ಅವರು ನೀಡಿದ ಕೊಡುಗೆಯನ್ನು ನಾವು ಮರೆಯಬಾರದು.

‘ಸ್ವರಾಜ್ಯ ನನ್ನ ಜನ್ಮಸಿದ್ಧ ಹಕ್ಕು, ಅದನ್ನು ನಾನು ಪಡೆದೇ ತೀರುವೆ’ ಎಂದು ನಿರ್ಭೀತವಾಗಿ ಗರ್ಜಿಸಿದ ತಿಲಕ್ ಅವರ ಮೇಲೆ ಬ್ರಿಟಿಷರು ಮೂರು ಸಲ ರಾಜದ್ರೋಹದ ಆರೋಪ ಹಾಕಿ ಮೊಕದ್ದಮೆ ನಡೆಸಿದರು. ಮೊದಲು 1897ರಲ್ಲಿ ಅವರಿಗೆ 18 ತಿಂಗಳು ಜೈಲುವಾಸವಾಯಿತು. 1908ರಲ್ಲಿ ಆರು ವರ್ಷಗಳವರೆಗೆ ಬರ್ಮಾದ ಮಂಡಾಲೆಯಲ್ಲಿ ಅವರನ್ನು ಬಂಧಿಸಿ ಇಡಲಾಯಿತು. ಆಗ ದೇಶದಾದ್ಯಂತ ಪ್ರತಿಭಟನೆಯ ಸ್ಫೋಟವಾಯಿತು. ರಷ್ಯಾ ಕ್ರಾಂತಿಯ ನಾಯಕ ವ್ಲಾದಿಮಿರ್ ಲೆನಿನ್ ಕೂಡ ತಿಲಕರ ಸಾಹಸವನ್ನು ಹೊಗಳು ವುದರ ಜೊತೆಗೆಯೇ ‘ಬ್ರಿಟಿಷರ ದಬ್ಬಾಳಿಕೆಯ ಸಾಮ್ರಾಜ್ಯದ ಅಂತ್ಯ ಖಂಡಿತ’ ಎಂದು ಸಾರಿ ದರು. ಮಂಡಾಲೆಯಲ್ಲಿದ್ದಾಗಲೇ ತಿಲಕರು ತಮ್ಮ ಮಹಾಗ್ರಂಥ ‘ಭಗವದ್‌ ಗೀತಾ ರಹಸ್ಯ’ ಬರೆದು ಕರ್ಮ
ಯೋಗ ಸಿದ್ಧಾಂತದ ಮಹತೆಯನ್ನು ವಿಷದಪಡಿಸಿದರು. 1915ರ ರಾಜದ್ರೋಹದ ಮೊಕದ್ದಮೆಯಲ್ಲಿ ತಿಲಕ್ ಅವರ ಪರವಾಗಿ ಮುಂಬೈ ಹೈಕೋರ್ಟಿನಲ್ಲಿ ವಕಾಲತ್ತು ಮಾಡಿ ಅವರು ನಿರ್ದೋಷಿ ಎಂದು ಸಾಬೀತು ಮಾಡಿದವರು ಜಿನ್ನಾ ಅವರೆ.

ಮಂಡಾಲೆಯ ಕಾರಾವಾಸದ ನಂತರ 1914ರಲ್ಲಿ ಬಿಡುಗಡೆಯಾಗಿ ಹೊರಬಂದ ನಂತರ ಹಿಂದೂ–ಮುಸ್ಲಿಂ ಏಕತೆಯ ಬಗೆಗಿನ ತಿಲಕರ ವಿಚಾರ ಇನ್ನೂ ಬಲವತ್ತರವಾಯಿತು. ಕಾಂಗ್ರೆಸ್ ಮತ್ತು ಮುಸ್ಲಿಂ ಲೀಗ್ ಪಕ್ಷಗಳ ನಡುವೆ ರಾಜಕೀಯ ಒಕ್ಕೂಟವಿಲ್ಲದೇ ಸ್ವಾತಂತ್ರ್ಯ ಚಳವಳಿಗೆ ಯಶಸ್ಸು ಸಿಗಲಾರದು ಎಂಬ ನಿರ್ಣಯಕ್ಕೆ ಅವರು ಬಂದರು. ಇದರ ಪರಿಣಾಮವೆಂದರೆ 1916ರ ಲಖನೌ ಕರಾರು. ಈ ಕರಾರಿನ ಪ್ರಕಾರ ಭಾರತದ ಪ್ರಾಂತೀಯ ಅಸೆಂಬ್ಲಿಗಳಲ್ಲಿ ಪ್ರತ್ಯೇಕ ಮತದಾನ ಕ್ಷೇತ್ರದ ಆಧಾರದ ಮೇಲೆ ಮುಸ್ಲಿಮರು ಅಲ್ಪಸಂಖ್ಯೆಯಲ್ಲಿರುವಲ್ಲಿ ಅವರಿಗೆ ಹೆಚ್ಚು ಸೀಟುಗಳನ್ನು ಕೊಡುವುದರ ಬಗ್ಗೆ ಒಪ್ಪಂದವಾಯಿತು. ಅದೇ ರೀತಿ ಹಿಂದೂಗಳು ಅಲ್ಪಸಂಖ್ಯೆಯಲ್ಲಿರುವ ಪಂಜಾಬ್, ಬಂಗಾಲ ಇತ್ಯಾದಿ ಪ್ರಾಂತ್ಯಗಳಲ್ಲಿ ಅವರಿಗೆ ಹೆಚ್ಚಿನ ಸೀಟುಗಳನ್ನು ನೀಡುವುದರ ಬಗ್ಗೆ ಸಂಧಾನವಾಯಿತು. ಇದರ ಹೊರತಾಗಿ ಹಿಂದೂ ಮತ್ತು ಮುಸ್ಲಿಂ ಸಮುದಾಯಗಳು ಒಂದಾಗಿ ಅಧಿಕಾರ ನಡೆಸುವುದರ ಕುರಿತು ಇತರ ಕೆಲವು ವಿಷಯಗಳ ಬಗ್ಗೆ ಕೂಡಾ ಎರಡೂ ಪಕ್ಷಗಳ ನಡುವೆ ಒಮ್ಮತವಾಯಿತು. ಈ ಕರಾರಿನ ಪ್ರಮುಖ ಧುರೀಣರು ತಿಲಕ್ ಮತ್ತು ಜಿನ್ನಾ ಅವರೇ ಆಗಿದ್ದರಿಂದ ಇದಕ್ಕೆ ‘ತಿಲಕ್–ಜಿನ್ನಾ ಕರಾರು’ ಎಂದೂ ಕರೆಯಲಾಗುತ್ತದೆ.

ಈ ಒಪ್ಪಂದದಲ್ಲಿ ಮುಸ್ಲಿಮರಿಗೆ ಅತಿಹೆಚ್ಚು ರಿಯಾಯಿತಿ ಕೊಡಲಾಗಿದೆ. ತಿಲಕರು ಮುಸ್ಲಿಂ ಲೀಗ್ ಮುಂದೆ ಶರಣಾಗತರಾಗಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ಪಂಡಿತ ಮದನ ಮೋಹನ ಮಾಳವೀಯ ಮುಂತಾದ ಮುಖಂಡರು ಆಪಾದಿಸಿದರು. ಇದಕ್ಕೆ ತಿಲಕರು ಲಖನೌ ಅಧಿವೇಶನದಲ್ಲಿ 2000 ಪ್ರತಿನಿಧಿಗಳನ್ನು ಉದ್ದೇಶಿಸಿಯೇ ದಿಟ್ಟವಾಗಿ ಉತ್ತರಿಸಿದರು. ‘ಹಿಂದೂ–ಮುಸ್ಲಿಂ ಪರಸ್ಪರ ಸಹಕಾರವಿಲ್ಲದೇ ಬ್ರಿಟಿಷರು ನಿರ್ಮಿಸಿದ ಸದ್ಯದ ಸಂಕಟದಿಂದ ನಾವು ಹೊರಬರಲು ಸಾಧ್ಯವೇ ಇಲ್ಲ’ ಎಂದು ಹೇಳಿದರು. ತಿಲಕರ ಈ ನಿಲುವಿಗೆ ಕಾಂಗ್ರೆಸ್ ಅಧಿವೇಶನದಲ್ಲಿ ಹಾಗೂ ಅದೇ ಕಾಲಕ್ಕೆ ಲಖನೌದಲ್ಲಿ ನಡೆದಿದ್ದ ಮುಸ್ಲಿಂ ಲೀಗ್ ಅಧಿವೇಶನದಲ್ಲಿ ಭಾರಿ ಸಮರ್ಥನೆ ದೊರೆಯಿತು. ಅಷ್ಟೇ ಅಲ್ಲ, ಇಂದು ನಂಬಲೂ ಸಾಧ್ಯವಿಲ್ಲ ಎಂಬಂಥ ಮತ್ತೊಂದು ಘಟನೆ ನಡೆಯಿತು. ಜಿನ್ನಾ ಮತ್ತಿತರ ಮುಸ್ಲಿಂ ಲೀಗ್ ನಾಯಕರು ತಿಲಕರನ್ನು ತಮ್ಮ ಪಕ್ಷದ ಅಧಿವೇಶನದಲ್ಲಿ ಅತ್ಯಂತ ಮೈತ್ರಿಪೂರ್ವಕವಾಗಿ ಜಯಘೋಷದಿಂದ ಸ್ವಾಗತಿದರು.

ಲಖನೌದಲ್ಲಿ ಮುಸ್ಲಿಂ ಲೀಗ್‌ನ ಅಧಿವೇಶನದಲ್ಲಿ ಜಿನ್ನಾ ಪಕ್ಷದ ಅಧ್ಯಕ್ಷರಾಗಿದ್ದರು. ಅವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಹೇಳಿದ ಮಾತು ಕೂಡ ಇಂದು ನಂಬಲಿಕ್ಕೆ ಸಾಧ್ಯವಿಲ್ಲ ಅಂಥದ್ದು. ‘ನಾನು ಇಂದಿಗೂ ಕೂಡಾ ಕಾಂಗ್ರೆಸ್ಸಿನವನೇ’ ಎಂದು ಘೋಷಿಸಿ, ಯಾವುದೇ ಬಗೆಯ ಸಂಕುಚಿತ ಮಾನಸಿಕತೆಯ ಬೇಡಿಕೆಗಳಿಗೆ ನನ್ನ ಬೆಂಬಲವಿಲ್ಲ’ ಎಂದು ಅವರು ಸ್ಪಷ್ಟಪಡಿಸಿದರು. ಭಾರತದ ಎರಡು ಮಹಾನ್ ಸಮುದಾಯಗಳ ನಡುವಿನ ಸುಮಧುರ ಹಾಗೂ ಪರಸ್ಪರ ಸಹಕಾರದ ಸಂಬಂಧದಿಂದ ಮಾತ್ರ ದೇಶದ ಏಳಿಗೆ ಸಾಧ್ಯ ಎಂದು ಜಿನ್ನಾ ಸಾರಿದರು.

ಭಾರತದ ಸ್ವಾತಂತ್ರ್ಯ ಸಂಗ್ರಾಮದ ದುರ್ಭಾಗ್ಯವೆಂದರೆ ತಿಲಕರ ಮೃತ್ಯುವಿನ ನಂತರ ಲಖನೌ ಕರಾರಿನ ಒಳ ಉಸಿರು ನಿಂತು ಹೋಯಿತು. ಕಾಂಗ್ರೆಸ್ ಮತ್ತು ಮುಸ್ಲಿಂ ಲೀಗ್ ಪಕ್ಷಗಳ ನಡುವೆ ಭಿನ್ನಾಭಿಪ್ರಾಯಗಳು ಬೆಳೆಯುತ್ತಾ ಹೋದವು. ಬ್ರಿಟಿಷರು ಇದರ ಲಾಭ ಪಡೆದು, ಹಿಂದೂ–ಮುಸ್ಲಿಂ ಬಿರುಕನ್ನು ಹೆಚ್ಚಿಸಿದರು. ಕೊನೆಯಲ್ಲಿ ಸ್ವಾತಂತ್ರ್ಯೋತ್ತರ ಕಾಲದಲ್ಲಿ ಅಧಿಕಾರ ಹಂಚಿಕೆಯ ಕುರಿತು ಯಾವುದೇ ಸಂಧಾನವಾಗದ ಕಾರಣದಿಂದಾಗಿ 1947ರಲ್ಲಿ ಭಾರತದ ವಿಭಜನೆಯಾಯಿತು.

ಲೋಕಮಾನ್ಯ ತಿಲಕರ ಜೀವನದಿಂದ ನಾವು ಪಡೆಯಬೇಕಾದ ಅತಿ ಮಹತ್ವದ ಪ್ರೇರಣೆ ಎಂದರೆ ಭಾರತ–ಪಾಕಿಸ್ತಾನ ಮೈತ್ರಿಗಾಗಿ, ಹಿಂದೂ–ಮುಸ್ಲಿಂ ಏಕತೆಗಾಗಿ ಹಾಗೂ ದಕ್ಷಿಣ ಏಷ್ಯಾದ ಉಜ್ವಲ ಭವಿಷ್ಯಕ್ಕಾಗಿ ನಾವೆಲ್ಲರೂ ನಿಶ್ಚಯಪೂರ್ವಕವಾಗಿ ಶ್ರಮಿಸಬೇಕು. ಇದೇ ತಿಲಕರಿಗೆ ನಾವು ಅರ್ಪಿಸಬಹುದಾದ ನಿಜವಾದ ಶ್ರದ್ಧಾಂಜಲಿ.

(ಲೇಖಕರು ಮಾಜಿ ಪ್ರಧಾನ ಮಂತ್ರಿ ಅಟಲ ಬಿಹಾರಿ ವಾಜಪೇಯಿ ಅವರ ನಿಕಟ ಸಹಯೋಗಿಯಾಗಿದ್ದರು. ಈಗ ಅವರು ಭಾರತ–ಪಾಕಿಸ್ತಾನ ಸಂಬಂಧ ಸುಧಾರಣೆಗಾಗಿ ಸಕ್ರಿಯ ಕಾರ್ಯ ನಡೆಸಿದ್ದಾರೆ)

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು