ಸೋಮವಾರ, ಮಾರ್ಚ್ 30, 2020
19 °C
ಗಾಂಧೀಜಿಯ ರಾಜಕೀಯ ತತ್ವಜ್ಞಾನ ಮುಂದಿರಿಸುವ ಆಧ್ಯಾತ್ಮಿಕತೆಯು ಎಲ್ಲವನ್ನೊಳಗೊಳ್ಳುವ ವಿಶ್ವದೃಷ್ಟಿ

ತತ್ವಜ್ಞಾನಿ, ಸಿದ್ಧಾಂತಿ ಮತ್ತು ಕಾರ್ಯಕರ್ತ

ರಾಜಾರಾಮ ತೋಳ್ಪಾಡಿ/ ನಿತ್ಯಾನಂದ ಬಿ. ಶೆಟ್ಟಿ Updated:

ಅಕ್ಷರ ಗಾತ್ರ : | |

ಪಾತಕತನ ಮತ್ತು ದುಷ್ಟತನ ಜೊತೆಗೂಡಿ ನಡೆಸಿದ ಜೀವಹತ್ಯೆಯ ದಿನವನ್ನು ನಾವು ನಮ್ಮ ದೇಶದಲ್ಲಿ ಹುತಾತ್ಮರ ದಿನವೆಂದು ಆಚರಿಸುತ್ತಿದ್ದೇವೆ. ಹಾಗೆ ಹುತಾತ್ಮ ನಾದ ಮಹಾತ್ಮ ಆಡಿದ ‘ಶಿಕ್ಷೆ ಅಪರಾಧಕ್ಕೇ ಹೊರತು ಅಪರಾಧಿಗಲ್ಲ’ ಎಂಬ ಮಾತಂತೂ ಇಂದಿಗೂ ನಮ್ಮನ್ನು ಇರಿಯುತ್ತಿದೆ. ಮಾನುಷ ಚೇತನವನ್ನು ಅಖಂಡವಾದ ಈ ವಿಶ್ವದ ಸಮಗ್ರತೆಯ ಭಾಗವಾಗಿ ಕಾಣಬಲ್ಲವನು ಮಾತ್ರ ಆಡಬಲ್ಲ ಮಾತಿದು. ದಾರ್ಶನಿಕ ಸೆಳಕುಗಳುಳ್ಳ ಮಾತನ್ನು ಪ್ರಕ್ಷುಬ್ಧ ಕಾಲದಲ್ಲೂ ಆಡಬಹುದಾಗಿದ್ದ ಓರ್ವ ತತ್ವಜ್ಞಾನಿಯನ್ನು ರೂಕ್ಷವೂ, ಕರ್ಮಠವೂ ಆದ ಸಿದ್ಧಾಂತವೊಂದು ಹೇಗೆ ಮರಗಟ್ಟಿಸಿತು ಎಂಬುದರ ವಿಶ್ಲೇಷಣೆಯನ್ನು ನಡೆಸುವುದು ಈ ಬರಹದ ಉದ್ದೇಶ.

ನಮಗೆಲ್ಲರಿಗೂ ಗೊತ್ತಿರುವಂತೆ ಗಾಂಧೀಜಿ, ರಾಷ್ಟ್ರೀಯ ಹೋರಾಟದ ನಾಯಕತ್ವವನ್ನು ಒಂದು ನಿರ್ದಿಷ್ಟ ಕಾಲಘಟ್ಟದಲ್ಲಿ ವಹಿಸಿಕೊಂಡವರು. ಅವರ ನಡುಪ್ರವೇಶದಿಂದಾಗಿ ಈ ಹೋರಾಟದ ಸೈದ್ಧಾಂತಿಕ ರೂಪುರೇಷೆಗಳು ಆಮೂಲಾಗ್ರವಾಗಿ ಬದಲಾದವು. ಅಲ್ಲಿಯತನಕ ಹೋರಾಟದ ಮುಂಚೂಣಿಯಲ್ಲಿದ್ದ ನಗರ ವಾಸಿ ಸುಶಿಕ್ಷಿತ ಗಣ್ಯವರ್ಗದ ನಡುವೆ ಅವರು ಗ್ರಾಮೀಣ ಭಾರತದ ರೈತ ಸಮುದಾಯ ಮತ್ತು ಇನ್ನಿತರ ಅಂಚಿನ ಜನವರ್ಗಗಳಿಗೂ ಸ್ಥಳಾವಕಾಶವನ್ನು ಕಲ್ಪಿಸಿದರು. ಆ ಮೂಲಕ ರಾಷ್ಟ್ರೀಯ ಹೋರಾಟ ಎಂಬ ಚಿಂತನೆಯನ್ನು ಭಾರತೀಯರೆಲ್ಲರ ನಡುವೆ ಬೆಸೆದರು. ಈ ಬೆಸುಗೆಯನ್ನು ರಾಜಕೀಯ ತಂತ್ರಗಾರಿಕೆ ಎಂದು ಭಾವಿಸದೆ ತಮ್ಮ ಆಧ್ಯಾತ್ಮಿಕತೆಯ ಭಾಗ ಎಂದುಕೊಂಡರು.

ಈ ಪ್ರಕ್ರಿಯೆಯನ್ನು ನಡೆಸುವಾಗ ಗಾಂಧೀಜಿ ಪರಮಾಶ್ಚರ್ಯ ಎಂಬಂತೆ ರಾಷ್ಟ್ರೀಯವಾದಿ ಸೈದ್ಧಾಂತಿ ಕತೆಯನ್ನು ಅಲ್ಲಗಳೆಯುವ, ರಾಷ್ಟ್ರಪ್ರಭುತ್ವದ ಮೇರು ವ್ಯಾಖ್ಯಾನಗಳನ್ನು ನಿರಾಕರಿಸುವ ಎಲ್ಲ ತರಹದ ಚಿಂತನೆ ಗಳನ್ನು ಮತ್ತು ಕ್ರಿಯಾಚರಣೆಗಳನ್ನು ನಡೆಸಿದರು. ಅವರ ಸ್ವರಾಜ್ಯ ಹಾಗೂ ಸತ್ಯಾಗ್ರಹದ ಚಿಂತನೆಯು ರಾಷ್ಟ್ರವಾದ ಮತ್ತು ರಾಷ್ಟ್ರಪ್ರಭುತ್ವದ ಬೇರುಗಳನ್ನೇ ಕಡಿದು ಹಾಕು ವಂತಹುದು. ಒಂದು ಸರಳವಾದ ಇತಿಹಾಸ ಕಥನದಲ್ಲಿ ಗಾಂಧೀಜಿ, ರಾಷ್ಟ್ರೀಯ ಹೋರಾಟದ ಮಹಾನ್ ನಾಯಕರಾಗಿ ಹಾಗೂ ಭಾರತದ ರಾಷ್ಟ್ರಪ್ರಭುತ್ವದ ಪಿತಾಮಹರಾಗಿ ಕಾಣಿಸಿದರೂ, ಒಂದು ವಿಮರ್ಶಾತ್ಮಕ ದೃಷ್ಟಿಯಲ್ಲಿ ಅವರು ರಾಷ್ಟ್ರಪ್ರಭುತ್ವ ಮತ್ತು ರಾಷ್ಟ್ರೀಯತೆಗಳ ಕಟು ಟೀಕಾಕಾರರಾಗಿಯೂ ಕಾಣಿಸುತ್ತಾರೆ.

ರಾಷ್ಟ್ರವೆನ್ನುವುದು ನಿಸ್ಸಂಶಯವಾಗಿ ಒಂದು ಅಧಿಕಾರಶಾಹಿ ಕಲ್ಪನೆ. ಈ ಕಲ್ಪನೆಯಲ್ಲಿ ಪ್ರಭುತ್ವ ಒಂದು ಮಹತ್ವದ ಸ್ಥಾನ ಪಡೆದುಕೊಳ್ಳುತ್ತದೆ. ಕೆಲವು ನಿರ್ದಿಷ್ಟ ಚಾರಿತ್ರಿಕ, ಭೌತಿಕ ಹಾಗೂ ಸಾಂಸ್ಕೃತಿಕ ಲಕ್ಷಣಗಳ ಆಧಾರದಲ್ಲಿ ಭಾವನಾತ್ಮಕವಾಗಿ ರಾಷ್ಟ್ರ ಎನ್ನುವ ಸಮುದಾಯ ರೂಪುಗೊಳ್ಳುತ್ತದೆ. ಈ ಭಾವಶೀಲತೆ ಜಾತಿ- ಮತಗಳ ಬಗೆಗೆ ಜನ ಹೊಂದಿರುವ ಅಮಲಿನಷ್ಟೇ ತೀವ್ರವಾಗಿದೆ. ಆದ್ದರಿಂದ ಗಾಂಧೀಜಿ ಆಧುನಿಕ ‘ರಾಷ್ಟ್ರ’ದ ಬಗ್ಗೆ ನಿರ್ಮೋಹಿಯಾಗಿದ್ದರು. ಬಲಿಷ್ಠ ರಾಷ್ಟ್ರದ ಪ್ರತಿಪಾದಕರಾದ ಸಿದ್ಧಾಂತಿಗಳಿಗೆ ಮತ್ತು ಅವರನ್ನು ಅನುಸರಿಸುವ ಭುಜಬಲಿ ಪರಾಕ್ರಮಿಗಳಿಗೆ ಈ ಕಾರಣಕ್ಕಾಗಿ ಗಾಂಧೀಜಿ ‘ಹೆಣ್ಣಿಗ’ನಂತೆಯೂ ಕಂಡರು.

‘ರಾಷ್ಟ್ರ’ದ ಜಿಜ್ಞಾಸೆಯ ಜೊತೆಗೆ ಧರ್ಮದ ಸ್ವರೂಪಕ್ಕೆ ಸಂಬಂಧಿಸಿದಂತೆ ಗಾಂಧೀಜಿ ನಡೆಸಿದ ಚಿಂತನೆಗಳು ಅವರ ತತ್ವಜ್ಞಾನೀಯ ಪ್ರಭೆಯನ್ನು ಬೆಳಗಿಸುವಂತಹವು. ಧಾರ್ಮಿಕತೆಯನ್ನು ಮೂಲತಃ ಸಾಮುದಾಯಿಕ ಜೀವನದ ನೀತಿಶಾಸ್ತ್ರವಾಗಿ ಗ್ರಹಿಸಿದ ಗಾಂಧೀಜಿ, ತನ್ನ ಕಾಲದ ನಿರ್ದಿಷ್ಟ ಸವಾಲುಗಳಿಗೆ ಅನುಗುಣವಾಗಿ ಹಿಂದೂ ಧರ್ಮವನ್ನು ಮರುನಿರೂಪಿಸಿದರು. ಇದು ಕೇವಲ ಮರುನಿರೂಪಣೆಯಾಗಿರದೆ ಹೊಸ ಬಗೆಯ ಹಿಂದೂ ಧರ್ಮದ ಆವಿಷ್ಕಾರವೂ ಆಗಿತ್ತು. ತನ್ನ ಅನ್ವೇಷಣೆಯಲ್ಲಿ ಸಾಕ್ಷಾತ್ಕಾರಗೊಂಡ ಈ ಹಿಂದೂ ಧರ್ಮವನ್ನು ಗಾಂಧೀಜಿ ಹೊಸತೆಂದು ಬಗೆಯದಿದ್ದರೂ, ಆ ವೇಳೆಗಾಗಲೇ ಸಾವರ್ಕರ್ ಪ್ರಬಲವಾಗಿ ಪ್ರತಿಪಾದಿಸು ತ್ತಿದ್ದ ಮತ್ತು ರಾಜಕೀಯವಾಗಿ ಸಂಘಟಿತಗೊಳ್ಳುತ್ತಿದ್ದ ಹಿಂದೂ ಮತೀಯ ಅಸ್ಮಿತೆಗೆ ಗಾಂಧಿಯವರ ಹಿಂದೂ ಧರ್ಮ ತಿರಸ್ಕಾರಯೋಗ್ಯ ಪರಕೀಯವಾಗಿ ಕಾಣಿಸಿತು. ಗಾಂಧೀಜಿ ಚಿಂತನೆ ನಡೆಸಿದ ಸಮಾಜ ಸುಧಾರಣಾ ಪ್ರಣೀತ ಮುಕ್ತನೋಟದ ಹಿಂದೂ ಧರ್ಮವು ಭಾರತದ ಕರ್ಮಠ ಹಿಂದೂವಾದಿಗಳಿಗೆ ಒಪ್ಪಿಗೆಯಾಗಲಿಲ್ಲ. ಜೊತೆಗೆ ಅವರು ಪ್ರತಿನಿಧಿಸಿದ ಹಿಂದೂ ಧರ್ಮದ ಸನಾತನತೆಯ ಗರ್ಭದಲ್ಲಿ ಕಾಣಿಸಿಕೊಳ್ಳುವ ಹೊಸತನ, ಬಹುಕೇಂದ್ರೀಯತೆ, ಪ್ರಭುತ್ವ ನಿರಾಕರಣೆ ಹಾಗೂ ಆತ್ಮಪ್ರತ್ಯಯವನ್ನು ಶುಚಿಗೊಳಿಸುವ ನೈತಿಕತೆಯ ನಿರ್ವಚನ ಇಪ್ಪತ್ತನೆಯ ಶತಮಾನದಲ್ಲಿ ರೂಪುಗೊಳ್ಳುತ್ತಿದ್ದ ಹಿಂದುತ್ವಕ್ಕೆ ಅಜೀರ್ಣವಾಗಿತ್ತು.

ಧರ್ಮ ಮತ್ತು ರಾಷ್ಟ್ರದ ಕುರಿತಂತೆ ಗಾಂಧೀಜಿ ಹಾಗೂ ಸಾವರ್ಕರ್ ಮೂಲಭೂತವಾಗಿ ಭಿನ್ನವಾದ ದೃಷ್ಟಿಕೋನಗಳನ್ನು ಹೊಂದಿದ್ದವರು. ಗಾಂಧೀಜಿ ಕಟ್ಟಿದ ಸಂಕಥನದಲ್ಲಿ ರಾಷ್ಟ್ರೀಯವಾದದ ಬಗ್ಗೆ ಸಮಗ್ರವಾದ ವಿಮರ್ಶೆಯಿಲ್ಲ. ಅದು ಅವರ ಚಿಂತನೆಯ ಜಾಯಮಾನಕ್ಕೆ ಹೊರತಾದದ್ದು. ಆ ಕುರಿತು ಮಾತನಾಡದೇ ಅವರು ರಾಷ್ಟ್ರಪ್ರಭುತ್ವಕ್ಕೆ ಪ್ರತಿಯಾಗಿ ಸ್ವರಾಜ್ಯವನ್ನು ಒಂದು ಮೌಲಿಕ ಪರ್ಯಾಯವಾಗಿ ಮುಂದಿಟ್ಟರು. ರಾಷ್ಟ್ರಪ್ರಭುತ್ವದ ಆಳದಲ್ಲಿ ಹುದುಗಿರುವ ಅಧಿಕಾರಶಾಹಿ, ದಬ್ಬಾಳಿಕೆ, ಕೇಂದ್ರೀಯತೆ ಹಾಗೂ ಹಿಂಸೆಗಳು ಅವರನ್ನು ರಾಷ್ಟ್ರದ ಬಗ್ಗೆ ಸಾರ್ವಕರ್‌ ಅವರು ಹೊಂದಿದ್ದ ಕಲ್ಪನೆ ಗಿಂತ ಬಹುದೂರ ಕೊಂಡೊಯ್ದವು.

ಸಾವರ್ಕರ್ ಅವರು ರಾಷ್ಟ್ರೀಯವಾದದ ಪ್ರಖರ ವಕ್ತಾರ. ಹಿಂದೂ ಸಮುದಾಯದ ಸಾಮಾಜಿಕ ಹಾಗೂ ಸಾಂಸ್ಕೃತಿಕ ಪುನರುತ್ಥಾನದಲ್ಲಿ ಸಶಕ್ತವಾಗಿ ರೂಪುಗೊಳ್ಳಬೇಕಾದ ಹಿಂದೂ ರಾಷ್ಟ್ರದ ಕನಸನ್ನು ತನ್ನ ಮೈ ಮನಸ್ಸುಗಳಲ್ಲಿ ತುಂಬಿಕೊಂಡಿದ್ದ ಸಾವರ್ಕರ್, ಭಾರತದಲ್ಲಿ ಹೊರಹೊಮ್ಮುತ್ತಿದ್ದ ಹೊಸ ರಾಷ್ಟ್ರೀಯವಾದಿ ಜನಸಮುದಾಯದ ಮುಂಚೂಣಿಯ ಪ್ರತಿನಿಧಿ. ಒಂದರ್ಥದಲ್ಲಿ ಸಾವರ್ಕರ್ ಹೊಸದಾಗಿ ರೂಪುಗೊಳ್ಳು ತ್ತಿರುವ ಭಾರತ ಎನ್ನುವ ರಾಷ್ಟ್ರದ, ಹೊಸ ಅಸ್ಮಿತೆಯ ಪ್ರತಿಪಾದಕ.

ವಸಾಹತುಶಾಹಿ ಹಿತಾಸಕ್ತಿ, ಕೋಮುವಾದಿ ರಾಜ ಕಾರಣ ಹಾಗೂ ರಾಷ್ಟ್ರಪ್ರಭುತ್ವದ ಹೊಸ ಲೆಕ್ಕಾಚಾರಗಳು ಭಾರತದ ವಿಭಜನೆಯನ್ನು ಅನಿವಾರ್ಯಗೊಳಿಸಿದವು ಎನ್ನುವುದು ಇಂದು ನಮಗೆಲ್ಲರಿಗೂ ತಿಳಿದಿರುವ ಸಂಗತಿ. ಆ ಸಂದರ್ಭದಲ್ಲಿ ರಾಷ್ಟ್ರಪ್ರಭುತ್ವಕ್ಕೆ ಬದಲಿಯಾಗಿ ಗಾಂಧೀಜಿ ಮಂಡಿಸಿದ ಸ್ವರಾಜ್ಯದ ಕಲ್ಪನೆ ಯಾರಿಗೂ ಬೇಡವಾದ ಗುಜರಿ ಸರಕಾಗಿ ನಿರಾಕರಿಸಲ್ಪಟ್ಟಿತು. ಹಿಂದೂ- ಮುಸ್ಲಿಂ ಸಾಮರಸ್ಯದ ಅವರ ಧಾರ್ಮಿಕ ದೃಷ್ಟಿ ಹೊಸದಾಗಿ ಎಚ್ಚೆತ್ತುಕೊಂಡ ಜನಾಂಗೀಯ ರಾಷ್ಟ್ರೀಯ ಜನಸಮುದಾಯಕ್ಕೆ ಅನವಶ್ಯಕ ಚಿರಿಪಿರಿಯಾಗಿ ಕಾಣಿ ಸಿತು. ಹೀಗೆ ಗಾಂಧೀಜಿ ಹಾಗೂ ಸಾವರ್ಕರ್ ನಡುವಿನ ಬೌದ್ಧಿಕ ಸೆಣಸಾಟವನ್ನು ವೈಯಕ್ತಿಕ ವೈಷಮ್ಯದ ಕಥೆಯಾಗಿ ನೋಡದೆ, ಅದನ್ನು 20ನೆಯ ಶತಮಾನದ ಆಧುನಿಕ ಭಾರತದ ರಾಷ್ಟ್ರಪ್ರಭುತ್ವದ ಉತ್ಕರ್ಷದ ಸಾಂಸ್ಕೃತಿಕ ಪರ್ಯಾವರಣದಲ್ಲಿಟ್ಟು ನೋಡಬೇಕಾಗಿದೆ.

ಗಾಂಧಿಯವರ ರಾಜಕೀಯ ತತ್ವಜ್ಞಾನವು ಆಳವಾದ ಆಧ್ಯಾತ್ಮಿಕ ಸೆಳೆತಗಳಲ್ಲಿ ನೆಲೆಯೂರಿದೆ. ಅದು ಮುಂದಿರಿಸುವ ಆಧ್ಯಾತ್ಮಿಕತೆ ಎಲ್ಲ ವನ್ನೂ ಒಳಗೊಳ್ಳುವ ಹಾಗೂ ಎಲ್ಲವುಗಳಿಂದಲೂ ರೂಪುಗೊಳ್ಳುವ ವಿಶ್ವದೃಷ್ಟಿ. ಗಾಂಧೀಜಿಯ ಈ ವಿಶ್ವದೃಷ್ಟಿಗೆ ವ್ಯತಿರಿಕ್ತವಾಗಿ ಸಾವರ್ಕರ್, ಆತ್ಮಾಭಿಮಾನ ದಿಂದ ಬೀಗುವ ಹೊಸ ಹಿಂದೂ ಧರ್ಮವನ್ನು ಪ್ರತಿಪಾದಿಸುವ ಓರ್ವ ಸಿದ್ಧಾಂತಿ ಮತ್ತು ಪುನರುತ್ಥಾನವಾದಿ ಆಧುನಿಕ ರಾಷ್ಟ್ರದ ದಂಡಧಾರಿ. ಜನಾಂಗೀಯ ಹಿಂದೂ ಸಾಂಸ್ಕೃತಿಕ ರಾಷ್ಟ್ರವಾದದ ಸೈದ್ಧಾಂತಿಕ ಪ್ರತಿಪಾದನೆಯನ್ನು ಸಾವರ್ಕರ್ ಮಾಡಿದಷ್ಟು ಸಮರ್ಥವಾಗಿ ಭಾರತದಲ್ಲಿ ಬೇರಾರೂ ಮಾಡಿಲ್ಲ. ತನ್ನ ರಾಜಕೀಯ ಚಿಂತನೆಯ ಪ್ರಮುಖ ಪ್ರೇರಣೆಗಳನ್ನು ಜರ್ಮನಿ ಹಾಗೂ ಇಟಲಿಯಿಂದ ಪಡೆದು ಕೊಳ್ಳುವ ಸಾವರ್ಕರ್‌ಗೆ ಮ್ಯಾಝಿನಿ ಮತ್ತು ಬಿಸ್ಮಾರ್ಕ್ ಪ್ರಿಯರಾದ ಚಿಂತಕರಾಗಿದ್ದರು.

ಈ ಹಿನ್ನೆಲೆಯಲ್ಲಿ ನೋಡುವುದಾದರೆ ಗಾಂಧಿ ಹತ್ಯೆ; ವಿಶಿಷ್ಟ ಬಗೆಯ ಜನಾಂಗೀಯ ನೆಲೆಯ ರಾಷ್ಟ್ರವಾದಿ ರಾಜಕಾರಣವೊಂದು ವಿಶ್ವಾತ್ಮಕ ನೆಲೆಯ ಧಾರ್ಮಿಕತೆಯ ಮೇಲೆ ಸಾಧಿಸಿದ ಗೆಲುವು. ಅದು ಧರ್ಮದ ಮೇಲಿನ ರಾಜಕೀಯದ ವಿಜಯವೂ ಹೌದು. ಅಂತೆಯೇ ಬಹುತ್ವವನ್ನು ಧೇನಿಸುವ ತತ್ವಜ್ಞಾನದ ಇದಿರು ಏಕತೆಯನ್ನಷ್ಟೇ ಕಟ್ಟುನಿಟ್ಟಾಗಿ ಪ್ರತಿಪಾದಿಸುವ ಸಿದ್ಧಾಂತದ ದಿಗ್ವಿಜಯವೂ ಹೌದು. ಈ ಹತ್ಯೆಯನ್ನು ನಡೆಸಿದ ಗೋಡ್ಸೆ; ಸದರಿ ಸಿದ್ಧಾಂತದ ಓರ್ವ ಕಾರ್ಯಕರ್ತ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು