ಶನಿವಾರ, ಸೆಪ್ಟೆಂಬರ್ 19, 2020
27 °C
ಮಹಿಳೆಯರೇ, ಇನ್ನೂ ಎಷ್ಟು ದಿನ ಈ ದೌರ್ಜನ್ಯವನ್ನು ಸಹಿಸಿಕೊಳ್ಳುತ್ತೀರಿ?

ನಾಚಿಕೆ ಸತ್ತ ಸಮಾಜ

ಸಬಿತಾ ಬನ್ನಾಡಿ Updated:

ಅಕ್ಷರ ಗಾತ್ರ : | |

ಈ ಸಮಾಜಕ್ಕೆ ನಾಚಿಕೆ, ಮಾನ, ಮರ್ಯಾದೆ ಏನಾದರೂ ಇದೆಯಾ? ಯಾವ ಸಮಾಜದಲ್ಲಿ ಹೆಣ್ಣು ಮಗುವನ್ನು ಅದು ಹೆಣ್ಣು ಎಂಬ ಕಾರಣಕ್ಕೆ ಗರ್ಭದಲ್ಲೇ ಕೊಲ್ಲಲಾಗುತ್ತದೆಯೋ ಅಲ್ಲಿ ಅತ್ಯಾಚಾರ ಕೂಡ ಸಾಮಾನ್ಯ ಸಂಗತಿ ಆಗಿಯೇ ಆಗುತ್ತದೆ ಎಂಬ ಎಚ್ಚರಿಕೆಯಾಗಲೀ ಪ್ರಜ್ಞೆಯಾಗಲೀ ಇಲ್ಲದ ನಾವು, ಕೊಚ್ಚೆ ಗುಂಡಿಯ ಮೇಲೆ ಸಭ್ಯತೆಯ ಮಹಲು ಕಟ್ಟಿಕೊಂಡು ನಾಗರಿಕತೆಯ ನಾಟಕ ಆಡುತ್ತಿದ್ದೇವೆ.

ನಾನು ಒಬ್ಬ ನಿರ್ಭಯಾಳ ಬಗೆಗಾಗಲೀ ಪಶುವೈದ್ಯೆಯ ಬಗೆಗಾಗಲೀ ಹೇಳುತ್ತಿಲ್ಲ. ಅತ್ಯಾಚಾರಕ್ಕೆ ಒಳಗಾದ ಸಾವಿರಾರು (ಬಹುಶಃ ಲಕ್ಷಾಂತರ?) ಹೆಣ್ಣುಮಕ್ಕಳ ಕುರಿತು ಹೇಳುತ್ತಿದ್ದೇನೆ. ಆ ಮಣಿಪುರದ ತಾಯಿ ಇರೋಮ್ ಶರ್ಮಿಳಾ ಅವರು ಸಶಸ್ತ್ರ ಮೀಸಲು ಪಡೆಯ ವಿಶೇಷಾಧಿಕಾರ ರದ್ದತಿಗೆ ಆಗ್ರಹಿಸಿ ಹದಿನಾರು ವರ್ಷ ಸತ್ಯಾಗ್ರಹ ಮಾಡಿದರು. ಆ ಪಡೆಯ ಕೆಲವರು, ಮನೆಮಂದಿ ಎದುರಿಗೇ ಹೆಂಗಸರನ್ನು ಎಳೆದೊಯ್ದು ಅತ್ಯಾಚಾರ ಮಾಡುತ್ತಿದ್ದುದನ್ನು ಹೇಳಿದರು. ಆ ಅವಧಿಯಲ್ಲಿ ಎಷ್ಟು ಸರ್ಕಾರಗಳು ಆಗಿಹೋದವೋ. ಏನೂ ಆಗಲಿಲ್ಲ. ಇರೋಮ್‌ ಎಲೆಕ್ಷನ್‍ಗೆ ನಿಂತಾಗ ಅವರಿಗೆ ಬರೀ ತೊಂಬತ್ತೊಂಬತ್ತು ವೋಟುಗಳು ಬಿದ್ದವು. ಅತ್ಯಾಚಾರ ಯಾರು ಮಾಡಿದರೇನು? ಆತ ಅಪರಾಧಿಯೇ ಎಂದು ಗಟ್ಟಿಧ್ವನಿಯಲ್ಲಿ ಹೇಳಲೂ ಸಾಧ್ಯವಿಲ್ಲದ ಸಮಾಜ ಆ ಮೂಲಕ ಅತ್ಯಾಚಾರಿಗಳನ್ನು ರಕ್ಷಿಸುವ ಕೆಲಸವನ್ನು ಬಟಾಬಯಲಿನಲ್ಲಿ ಮಾಡುತ್ತಿದೆ. ಹೀಗೆ ಒಬ್ಬರಿಗೊಂದು ಇನ್ನೊಬ್ಬರಿಗೊಂದು ನೀತಿ ಮಾಡಿ ಸಮಾಜವನ್ನು ಸರಿ ಮಾಡಲು ಸಾಧ್ಯವೇ? ಎಲ್ಲಿ ಜಾತಿ, ಧರ್ಮ, ಲಿಂಗ, ವರ್ಗಗಳು ತಾರತಮ್ಯದ ಮಾನದಂಡಗಳಾಗಿವೆಯೋ ಅಲ್ಲಿ ನ್ಯಾಯದ ಮಾತು ಆಡಲು ಸಾಧ್ಯವೇ?

ಹುಟ್ಟಿನಿಂದಲೇ ಹೆಣ್ಣಿನ ಮೇಲೆ ಅಧಿಕಾರ ಚಲಾಯಿಸಲು ಸಮ್ಮತಿಯನ್ನು ಹುಟ್ಟಿಸಿಕೊಂಡು ಅದಕ್ಕೆ ಸಂಪ್ರದಾಯ, ಸಂಸ್ಕೃತಿ ಎಂಬೆಲ್ಲಾ ಸುಂದರ ಹೆಸರುಗಳನ್ನು ಇಟ್ಟುಕೊಂಡಿರುವವರೇ ಸ್ವಲ್ಪ ಆಲೋಚಿಸಿ. ಮಧ್ಯಮ ವರ್ಗದ ಸುಶಿಕ್ಷಿತ, ಸುಂದರ ಹೆಣ್ಣುಮಕ್ಕಳ ಮೇಲೆ ಅಮಾನುಷ ಕ್ರೌರ್ಯದ ಅತ್ಯಾಚಾರಗಳಾದಾಗ ದೊಡ್ಡ ಸುದ್ದಿಯಾಗುತ್ತದೆ. ಆಗ ಬೆಚ್ಚಿ ಬೀಳುತ್ತೀರಿ, ಮನೆ ಮಕ್ಕಳನ್ನು ಎಲ್ಲಿ ಅಡಗಿಸಿಡಲಿ ಎಂದು ಕಂಗಾಲಾಗುತ್ತೀರಿ. ಈ ಮನಃಸ್ಥಿತಿಗಳು ಬದಲಾಗಲಿ, ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆಯಾಗಲಿ ಎಂದು ಆಗ್ರಹಿಸುತ್ತೀರಿ. ಆದರೆ ಆಮೇಲೆ ಏನಾಗುತ್ತದೆ? ಇಂಥದ್ದೇ ಇನ್ನೊಂದು ಪ್ರಕರಣ ಆಗುವತನಕ ಮತ್ತೆ ನಿದ್ದೆ. ಆದರೆ ಅತ್ಯಾಚಾರಿಗಳು ಬೇರೆ ಬೇರೆ ರೂಪಗಳಲ್ಲಿ ಮೆರೆಯುತ್ತಲೇ ಇರುತ್ತಾರೆ. ನಿರ್ಭಯಾ ಪ್ರಕರಣದ ಡಾಕ್ಯುಮೆಂಟರಿಯನ್ನು ನಿಷೇಧಿಸಲಾಯಿತು. ಆದರೆ ಅದರಲ್ಲಿ ಅತ್ಯಾಚಾರಿಯ ಪರವಾಗಿ ಮಾತನಾಡಿದ ವಕೀಲನ ಮಾತು ಮತ್ತು ಅತ್ಯಾಚಾರಿಗಳ ಮಾತನ್ನು ಸರ್ಕಾರಗಳೂ, ಜನಸಾಮಾನ್ಯರೂ ಕೇಳಿಸಿಕೊಳ್ಳಲೇ ಬೇಕು. ಎಷ್ಟು ಎಗ್ಗಿಲ್ಲದೆ ಅತ್ಯಾಚಾರವನ್ನು ಗಂಡಸಿನ ಅಸ್ತ್ರ ಎಂಬಂತೆ ಅವರು ಭಾವಿಸಿಕೊಂಡಿದ್ದಾರೆಂದರೆ, ಅದು ಅವರಿಗೆ ಪೌರುಷದ ಪ್ರಶ್ನೆ. ಪಶ್ಚಾತ್ತಾಪದ ಲವಲೇಶವೂ ಅವರಿಗಿಲ್ಲ. ಅದರ ಜೊತೆಗೆ ಇನ್ನೊಂದು ಅತ್ಯಂತ ಗಂಭೀರ ಸಂಗತಿಯೂ ಇದೆ. ಇವರಿಗೆ ಕಾನೂನಿನ ಭಯ ಇಲ್ಲವೇ ಎಂದು ಕೇಳಿದರೆ, ಎಷ್ಟೋ ರೇಪ್ ಮಾಡಿಯೂ ಸಿಕ್ಕಿಹಾಕಿಕೊಳ್ಳದಿದ್ದರೆ ಆಯಿತು ಎಂಬ ನಿರಾಳತೆ ಅವರಿಗಿದೆ! ಅರೆ! ಇದು ಎಲ್ಲಿಂದ ಬಂತು ಈ ನಿರಾಳತೆ? ಹೆಂಗಸನ್ನು ಸದಾ ಅಧೀನದಲ್ಲಿಟ್ಟೂ ಇಟ್ಟೂ, ಅವಳೂ ಅದನ್ನು ಒಪ್ಪಿಕೊಂಡು ಇವರ ಅಡಿಯಾಳಾಗಿ ಇರುವಂತೆ ಮಾಡಿದ್ದರಿಂದ ಬಂತು. ‘ಹೆಂಗಸಿನ ದೇಹದ ಮೇಲೆ ಅನಿಯಂತ್ರಿತ ಅಧಿಕಾರ ನಿನಗಿದೆ’ ಎಂಬ ಸಂದೇಶ ದಾಟಿಸಿದ್ದರಿಂದ ಬಂತು. ಎಲ್ಲಾ ಅವಕಾಶಗಳಿಂದ ವಂಚಿತಗೊಳಿಸಿ ಕೆಲವೇ ಕೆಲವು ಜಾತಿಗಳ ಹೆಣ್ಣುಮಕ್ಕಳನ್ನು ಊರಿಗೇ ಆಹಾರವಾಗಿಸಿದ ದೇವದಾಸಿ ಅಥವಾ ಇನ್ನೂ ಬೇರೆ ಬೇರೆ ಹೆಸರಿನಲ್ಲಿನ ಹೀನ ಆಚರಣೆಗಳನ್ನು ವ್ಯಕ್ತ ಮತ್ತು ಅವ್ಯಕ್ತ ರೂಪಗಳಲ್ಲಿ ಜೀವಂತವಾಗಿ ಇರಿಸಿದ್ದರಿಂದ ಬಂತು. ಈ ಮೂಲ ಅಡಿಪಾಯವನ್ನೇ ನಾಶ ಮಾಡದೆ ಬರೀ ಮನಃಸ್ಥಿತಿ ಬದಲಾಗಲಿ ಎಂದು ನಾವು ಎಷ್ಟು ಅರಚಿದರೂ ಬದಲಾವಣೆ ಸಾಧ್ಯವಿಲ್ಲ.

ಹೆಂಗಸರೇ, ಇನ್ನೂ ಎಷ್ಟು ದಿನ ಇದನ್ನು ಸಹಿಸಿಕೊಳ್ಳುತ್ತೀರಿ? ಇನ್ನೂ ಎಷ್ಟು ದಿನ ಯಾವನೋ ಒಬ್ಬ ಹೀರೊ ಬಂದು ನಮ್ಮನ್ನು ಬಚಾವು ಮಾಡುತ್ತಾನೆ ಎಂದು ಕಾದು ಕುಳಿತುಕೊಳ್ಳುತ್ತೀರಿ? ಯಾವನೋ ಯಾಕೆ ಬರಬೇಕು? ನಾವೇ ಒಂದು ಹೆಜ್ಜೆ ಮುಂದೆ ಇಡಬೇಕೆಂದರೆ ನಮ್ಮೊಳಗಿನ ಸ್ತ್ರೀಪ್ರಜ್ಞೆ ಗಟ್ಟಿಗೊಳ್ಳಬೇಕು. ಸರಿಯನ್ನು ಸರಿ, ತಪ್ಪನ್ನು ತಪ್ಪು ಎಂದು ಹೇಳುವ ದಿಟ್ಟತನ ಒಡಲೊಳಗಿಂದ ಹುಟ್ಟಿ ಬರಬೇಕು. ಯಾವುದೇ ಇಂತಹ ಘಟನೆಯ ವಿರುದ್ಧ ಧ್ವನಿ ಎತ್ತಲು ಒಗ್ಗಟ್ಟಾಗಬೇಕು. ಕಾಶ್ಮೀರದ ಕಠುವಾದಲ್ಲಿ ಎಂಟು ವರ್ಷ ವಯಸ್ಸಿನ, ಕುದುರೆ ಮೇಯಿಸಿಕೊಂಡು ಬರಲು ಹೊರಟ ಬಾಲೆಯನ್ನು ದೇವಾಲಯದಲ್ಲೇ ಅತ್ಯಾಚಾರ ಮಾಡಿ ಕೊಲ್ಲಲಾಯಿತು. ಆಗ ಯಾಕೆ ಭಾರತದ ಪ್ರತೀ ದೇವಾಲಯವನ್ನೂ ಶುದ್ಧೀಕರಿಸಲಿಲ್ಲ? ಅತ್ಯಾಚಾರದಿಂದಾಗಿ ಆ ಹುಡುಗಿ ಜೀವನ್ಮರಣದ ರುಗ್ಣಶಯ್ಯೆಯಲ್ಲಿರುವಾಗ ಅತ್ಯಾಚಾರಿ ತನ್ನ ಗೆಳೆಯನಿಗೆ ಫೋನ್ ಮಾಡಿ ‘ನೀನೂ ಬರ್ತೀಯಾ’ ಅಂತ ಕರೆದ. ‘ನಾನೂ ಬರ್ತೀನಿ ತಡಿ’ ಅಂತ ಹೇಳಿ ಅವನು ಬಂದು ರೇಪ್ ಮಾಡಿದ. ಇವೆಲ್ಲ, ಅಪಾಯ ಎಲ್ಲಿಗೆ ತಲುಪಿದೆ ಎಂಬ ಸೂಚನೆಯನ್ನು ನಮಗೇಕೆ ಕೊಡಲಿಲ್ಲ? ಆ ಹುಡುಗಿಯ ಪರ ಹೋರಾಟ ಮಾಡಿದ ವಕೀಲೆಗೆ ಬೆದರಿಕೆ ಬಂದಾಗ ಯಾಕೆ ಗಟ್ಟಿಧ್ವನಿಯಲ್ಲಿ ವಿರೋಧಿಸಲಿಲ್ಲ? ಆ ಅತ್ಯಾಚಾರಿಗಳಿಗೆ, ಅವರ ಬೆಂಬಲಿಗರಿಗೆ ಪ್ರಮೋಶನ್ ಸಿಕ್ಕಿತೇ ಹೊರತು ಸರಿಯಾದ ಶಿಕ್ಷೆ ಆಗಲಿಲ್ಲ. ಅತ್ಯಾಚಾರಿಗಳನ್ನು ಬೆಂಬಲಿಸುವುದು ಅತ್ಯಾಚಾರಕ್ಕಿಂತ ಕಡಿಮೆ ಕೃತ್ಯವೇ? ಅತ್ಯಾಚಾರಿಗಳಲ್ಲೂ ಆಯ್ಕೆ ಮಾಡುವುದು ಇನ್ನೆಂಥ ಕೃತ್ಯ?

ಹೈದರಾಬಾದ್‍ನ ಘಟನೆಯ ಸಂದರ್ಭದಲ್ಲಿ ಒಬ್ಬ ಮುಸ್ಲಿಂ ಯುವಕನನ್ನು ಮಾತ್ರ ಹೆಸರಿಸಿ, ಅವನಿಗೆ ಗಲ್ಲು ಶಿಕ್ಷೆಯಾಗಲಿ ಎಂದು ಚಕ್ರವರ್ತಿ ಸೂಲಿಬೆಲೆಯವರು ಟ್ವೀಟ್ ಮಾಡಿದ್ದಕ್ಕೆ ಆಕ್ರೋಶ ವ್ಯಕ್ತವಾಯಿತೆಂಬ ಸುದ್ದಿ ಓದಿದೆ (ಪ್ರ.ವಾ., ಡಿ.1). ಅಂತಹುದೇ ವಾಟ್ಸ್‌ಆ್ಯಪ್ ಮೆಸೇಜ್‍ಗಳು ಹರಿದಾಡಿದವು. ಇದನ್ನು ನಾನಿರುವ ಗ್ರೂಪ್‍ನಲ್ಲಿ ಉಪನ್ಯಾಸಕಿಯೊಬ್ಬರು ಹಂಚಿಕೊಂಡರು. ಆಘಾತಕಾರಿ ಸಂಗತಿ ಇದು. ಮನಸ್ಸುಗಳು ಎಷ್ಟು ಕೊಳೆತುಹೋಗಿವೆ. ಇವರುಗಳು ಇನ್ನುಳಿದ ಮೂವರು ಅತ್ಯಾಚಾರಿಗಳನ್ನು ಬಚ್ಚಿಡಲು ಸಾಹಸ ಮಾಡುತ್ತಿದ್ದಾರೆ! ಅತ್ಯಾಚಾರಕ್ಕೊಳಗಾದವಳ ಕುರಿತ ನೋವಿಗಿಂತ ಅತ್ಯಾಚಾರಿಗಳೆಲ್ಲರೂ ಅನ್ಯಕೋಮಿಗೇ ಸೇರಿಲ್ಲವಲ್ಲಾ ಎಂಬ ನೋವೇ ಹೆಚ್ಚಾಗಿರಬಹುದು.

ಅತ್ಯಾಚಾರಕ್ಕೆ ಇನ್ನೊಂದು ಮುಖ ಇದೆ. ‘ದಲಿತ ಮಹಿಳೆ, ಬಾಲಕಿಯರ ಮೇಲಿನ ದೌರ್ಜನ್ಯ ಹೆಚ್ಚಳ’ (ಪ್ರ.ವಾ., ನ.30) ಎಂಬಂಥ ಸುದ್ದಿ ಹೇಳುತ್ತಿರುವುದೇನು? ಇದು ಸಾಮಾಜಿಕ ವಾಸ್ತವ (ಜಮೀನ್ದಾರಿ ವ್ಯವಸ್ಥೆಯಲ್ಲಿ ದಲಿತ, ಶೂದ್ರ ಬಡ ಹೆಣ್ಣುಮಕ್ಕಳ ಮೇಲಿನ ದೌರ್ಜನ್ಯಕ್ಕೆ ರೇಪ್ ಎಂಬ ಹೆಸರು ಇರಲಿಲ್ಲ ಅಷ್ಟೆ). ಅವರು ದಲಿತರು ಎಂಬುದಕ್ಕಿಂತ ಆರ್ಥಿಕವಾಗಿ ದುರ್ಬಲರಾಗಿರುವ ದಲಿತರು ಎಂಬುದು ಹೆಚ್ಚಿನ ಸಂದರ್ಭದ ನಿಜ. ಅವರು ಯಾವ ಕೋರ್ಟಿಗೂ ಹೋಗುವುದಿಲ್ಲ ಎಂಬ, ಅವರಿಗೆ ಜೀವ ಬೆದರಿಕೆ ಒಡ್ಡಿ ಬಾಯಿ ಮುಚ್ಚಿಸಬಹುದು ಎಂಬ, ಅವರಿಗಾಗಿ ಸಮಾಜ ಧ್ವನಿ ಎತ್ತುವುದಿಲ್ಲ ಎಂಬ ಎಲ್ಲಾ ರಕ್ಷಣೆ ಈ ಅತ್ಯಾಚಾರಿಗಳಿಗೆ ಇದೆ. ಅಕಸ್ಮಾತ್ ಅತ್ಯಾಚಾರಿ ಅನ್ಯ ಕೋಮಿನವನಾಗಿದ್ದರೆ ಕೆಲವರಿಗೆ ಥಟ್ಟನೆ ಎಚ್ಚರಾಗುವುದಿದೆ. ಇಲ್ಲದಿದ್ದಲ್ಲಿ ಮೌನ. ಹೀಗೇಕೆ ಅತ್ಯಾಚಾರಿಗಳನ್ನು ರಕ್ಷಿಸಲಾಗುತ್ತಿದೆ?

ಅತ್ಯಾಚಾರ ಮತ್ತು ಅತ್ಯಾಚಾರಿಗಳನ್ನು ರಕ್ಷಿಸುವ ಸ್ಥಿತಿ ಮತ್ತು ಮನಃಸ್ಥಿತಿಗಳ ವಿರುದ್ಧ ಇಡೀ ಭಾರತದ ‘ಮನುಷ್ಯ’ರೆಲ್ಲರೂ ಒಟ್ಟಾಗಿ ಒಂದು ದಿನಾಂಕ ನಿಗದಿಗೊಳಿಸಿ ತಮ್ಮೆಲ್ಲಾ ಕೆಲಸಗಳನ್ನು ಒಂದು ಗಂಟೆ ಕಾಲ ಸ್ತಬ್ಧಗೊಳಿಸಿ ಬೀದಿಗೆ ಬಂದು ಮೌನ ಪ್ರತಿಭಟನೆಯನ್ನಾದರೂ ಮಾಡೋಣವೇ? ಅಥವಾ ನಾಚಿಕೆ ಸತ್ತ ಸಮಾಜದ ಭಾಗವಾಗಿ ಇದ್ದುಬಿಡೋಣವೇ?

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು