ಭಾನುವಾರ, 28 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೀಸಲಾತಿ ಸಾಂವಿಧಾನಿಕ ಹಕ್ಕು, ಔದಾರ್ಯವಲ್ಲ

Last Updated 6 ಸೆಪ್ಟೆಂಬರ್ 2020, 21:31 IST
ಅಕ್ಷರ ಗಾತ್ರ
ಮೀಸಲಾತಿ ಸಾಂವಿಧಾನಿಕ ಹಕ್ಕು, ಔದಾರ್ಯವಲ್ಲ
ADVERTISEMENT
""
ಮೀಸಲಾತಿ ಸಾಂವಿಧಾನಿಕ ಹಕ್ಕು, ಔದಾರ್ಯವಲ್ಲ
""

ಪಂಜಾಬ್‌ ಸರ್ಕಾರ ಮತ್ತು ದೇವಿಂದರ್‌ ಸಿಂಗ್‌ ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ನ ಸಂವಿಧಾನ ಪೀಠವು, 2004ರ ಇ.ವಿ. ಚಿನ್ನಯ್ಯ ಮತ್ತು ಆಂಧ್ರಪ್ರದೇಶ ಸರ್ಕಾರ ಪ್ರಕರಣದಲ್ಲಿ, ಸುಪ್ರೀಂ ಕೋರ್ಟ್‌ನ ಐವರು ನ್ಯಾಯಮೂರ್ತಿಗಳ ಸಂವಿಧಾನ ಪೀಠವು ನೀಡಿದ್ದ ತೀರ್ಪನ್ನು ಮರುಪರಿಶೀಲಿಸಲು ವಿಸ್ತೃತ ಪೀಠಕ್ಕೆ ಒಪ್ಪಿಸಬೇಕು ಎಂದು ಶಿಫಾರಸು ಮಾಡಿದೆ. 2020ರ ಆಗಸ್ಟ್‌ 27ರಂದು ಈ ಬೆಳವಣಿಗೆ ನಡೆದಿದೆ.

ಮೀಸಲಾತಿ ಸಾಂವಿಧಾನಿಕ ಹಕ್ಕು, ಔದಾರ್ಯವಲ್ಲ
ನ್ಯಾ. ವಿ.ಗೋಪಾಲಗೌಡ

ಈ ವಿವಾದದ ಮೂಲದಲ್ಲಿರುವ ಪ್ರಶ್ನೆ ಎಂದರೆ, ‘ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ನೀಡಲಾಗಿರುವ ಮೀಸಲಾತಿಯಲ್ಲಿ, ಉಪ ವರ್ಗೀಕರಣ ಮಾಡಲು ರಾಜ್ಯ ಸರ್ಕಾರಗಳಿಗೆ ಅನುಮತಿ ಇದೆಯೇ’ ಎಂಬುದಾಗಿದೆ. ಮೂಲತಃ ಇದರ ಅರ್ಥವೆಂದರೆ, ‘ಮೀಸಲು ಸ್ಥಾನಗಳೊಳಗೆಯೇ ಕೆಲವು ಸ್ಥಾನಗಳನ್ನು ಸರ್ಕಾರವು ನಿರ್ದಿಷ್ಟ ಜಾತಿ ಅಥವಾ ಪಂಗಡಕ್ಕೆ ಮೀಸಲು ಇಡಬಹುದೇ’ ಎಂಬುದಾಗಿದೆ.

ಸಂವಿಧಾನದ ವ್ಯಾಖ್ಯಾನ ಮತ್ತು ನಿಬಂಧನೆಗಳಿಗೆ ಒಳಪಟ್ಟು, ಏಳುಮಂದಿ ನ್ಯಾಯಮೂರ್ತಿಗಳ ಸಂವಿಧಾನಪೀಠವು ಈ ವಿಚಾರವಾಗಿ ತೀರ್ಮಾನ ಕೈಗೊಳ್ಳಲಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಮೀಸಲಾತಿಯನ್ನು ಜಾರಿಮಾಡುವುದರ ಹಿಂದಿನ ಪ್ರಾಮುಖ್ಯ ಹಾಗೂ ಐತಿಹಾಸಿಕ ಮಹತ್ವವನ್ನು ಕುರಿತು ಚರ್ಚಿಸಲು ಇದು ಒಳ್ಳೆಯ ಸಂದರ್ಭವಾಗಿದೆ.

ಸಾಂಪ್ರದಾಯಿಕವಾಗಿ ಭಾರತೀಯ ಹಿಂದೂ ಸಮಾಜವು ವರ್ಣ ವ್ಯವಸ್ಥೆಯ ಆಧಾರದಲ್ಲಿ ವಿಭಜನೆಯಾಗಿದೆ. ವೃತ್ತಿಯ ಆಧಾರದಲ್ಲಿ, ಹುಟ್ಟಿನಿಂದಲೇ ಅವುಗಳ ನಿರ್ಣಯವಾಗುತ್ತಿತ್ತು. ಇಂದಿನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು ಐದನೇ ವರ್ಗಕ್ಕೆ ಸೇರಿದವರಾಗಿದ್ದರು. ಇಡೀ ವ್ಯವಸ್ಥೆಯಲ್ಲಿ ಇವರು ಅತ್ಯಂತ ಕೆಳಗಿನವರು. ಇವರು ದಲಿತರು ಅಥವಾ ಹರಿಜನರು ಅಥವಾ ಅಸ್ಪೃಶ್ಯರಾಗಿದ್ದರಿಂದ ‘ವರ್ಣ’ ವ್ಯವಸ್ಥೆಯಿಂದ ಹೊರಗೆ ಉಳಿದಿದ್ದರು.

ಮೀಸಲಾತಿ ಸಾಂವಿಧಾನಿಕ ಹಕ್ಕು, ಔದಾರ್ಯವಲ್ಲ
ವಕೀಲೆಮೌಲಶ್ರೀ ಪಾಠಕ್‌

ಈ ವರ್ಗದ ಜನರು ಚಾರಿತ್ರಿಕವಾಗಿ ಶತಮಾನಗಳಿಂದ ಕ್ರೂರ ದಬ್ಬಾಳಿಕೆಯನ್ನು ಅನುಭವಿಸಿದ್ದಾರೆ ಮತ್ತು ಯಾವುದೇ ರೀತಿಯ ಅಭಿವೃದ್ಧಿ ಅವಕಾಶಗಳಿಂದ ವಂಚಿತರಾಗಿದ್ದಾರೆ. ಕ್ರೌರ್ಯವು ಆರ್ಥಿಕ ಅವಕಾಶಗಳಿಂದ ವಂಚಿತರಾಗುವಲ್ಲಿಗಷ್ಟೇ ಸೀಮಿತವಾಗಿರಲಿಲ್ಲ, ಅಸ್ಪೃಶ್ಯತೆ ಆಚರಣೆಯ ಮೂಲಕ, ಒಟ್ಟಾರೆ ಸಾಮಾಜಿಕ ವ್ಯವಸ್ಥೆಯಿಂದಲೇ ಇವರನ್ನು ಹೊರಗಿಡಲಾಗಿತ್ತು. ಸಂವಿಧಾನ ರಚಿಸಿದವರಿಗೆ ಇದರ ಅರಿವಿದ್ದುದರಿಂದ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಸಂವಿಧಾನದಲ್ಲಿ ವಿಶೇಷ ಅವಕಾಶಗಳನ್ನು ಕಲ್ಪಿಸುವ ಮೂಲಕ ಶತಮಾನಗಳಿಂದ ನಡೆಯುತ್ತಿದ್ದ ಕ್ರೌರ್ಯವನ್ನು ಕೊನೆಗೊಳಿಸಲು ಮುಂದಾದರು.

ಸಂವಿಧಾನದ 17ನೇ ವಿಧಿ ಅಸ್ಪೃಶ್ಯತೆಯನ್ನು ರದ್ದುಗೊಳಿಸಿದೆ. 15(4) ವಿಧಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಅಭಿವೃದ್ಧಿಗಾಗಿ ವಿಶೇಷ ಯೋಜನೆಗಳನ್ನು ರೂಪಿಸಲು ರಾಜ್ಯ ಸರ್ಕಾರಗಳಿಗೆ ಅಧಿಕಾರ ನೀಡುತ್ತವೆ. 16(4) ಹಾಗೂ 16(4ಎ) ವಿಧಿಗಳು ಬಡ್ತಿಯಲ್ಲಿ ಮೀಸಲಾತಿ ಮುಂತಾದ ವಿಚಾರಗಳಲ್ಲಿ ನಿಯಮ ರೂಪಿಸುವ ಅಧಿಕಾರವನ್ನು ರಾಜ್ಯಗಳಿಗೆ ನೀಡುತ್ತವೆ. 46ನೇ ವಿಧಿಯು ಈ ವರ್ಗದವರ ಶೈಕ್ಷಣಿಕ ಮತ್ತು ಆರ್ಥಿಕ ಹಿತಾಸಕ್ತಿಗಳನ್ನು ವಿಶೇಷ ಕಾಳಜಿಯಿಂದ ಉತ್ತೇಜಿಸಲು ಮತ್ತು ಅವರನ್ನು ಅನ್ಯಾಯ ಮತ್ತು ಶೋಷಣೆಯಿಂದ ರಕ್ಷಿಸಲು ರಾಜ್ಯದ ಮೇಲೆ ಬಾಧ್ಯತೆಯನ್ನು ಹೊರಿಸುತ್ತದೆ. ಗ್ರಾಮಪಂಚಾಯಿತಿ, ನಗರಸಭೆ ಹಾಗೂ ಲೋಕಸಭೆಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಸ್ಥಾನಗಳನ್ನು ಮೀಸಲಿಡುವುದನ್ನೂ ಸಂವಿಧಾನ ಖಾತರಿಗೊಳಿಸುತ್ತದೆ.

ನಮ್ಮ ಸಂವಿಧಾನ ಕರ್ತೃಗಳು ದಾರ್ಶನಿಕರಾಗಿದ್ದರು. ಸಮಾನ ವೇದಿಕೆಯನ್ನು ಕಲ್ಪಿಸಲು ಸಾಕಷ್ಟು ಕ್ರಮಗಳನ್ನು ಕೈಗೊಳ್ಳದ ಹೊರತು ನಿಜಾರ್ಥದಲ್ಲಿ ಸಮಾನತೆಯನ್ನು ಸಾಧಿಸಲು ಮತ್ತು ಶತಮಾನಗಳ ಅಸಮಾನತೆಯನ್ನು ತೊಡೆದುಹಾಕಲು ಸಾಧ್ಯವಾಗದು ಎಂಬುದನ್ನು ಅವರು ಅರಿತಿದ್ದರು. 1992ರಲ್ಲಿ ಇಂದಿರಾ ಸಾಹ್ನಿ ಮತ್ತು ಭಾರತ ಸರ್ಕಾರ ಪ್ರಕರಣದಲ್ಲಿ, ಒಂಬತ್ತು ನ್ಯಾಯಮೂರ್ತಿಗಳನ್ನು ಹೊಂದಿದ್ದ ಪೀಠವು ನೀಡಿದ್ದ ಮಹತ್ವದ ತೀರ್ಪಿನಲ್ಲಿ, ಸಾಂವಿಧಾನಿಕ ನ್ಯಾಯದ ಸಾಧನವಾಗಿ ಮೀಸಲಾತಿಯ ಅಗತ್ಯವನ್ನು ಕುರಿತು ಈ ಕೆಳಗಿನ ಮಾತುಗಳನ್ನು ಪುನರುಚ್ಚರಿಸಿದೆ...

‘ಅಸಹ್ಯಕರ ಸಾಮಾಜಿಕ ಸ್ಥಾನಮಾನ ಹಾಗೂ ಕೆಳದರ್ಜೆಯ ಮಾನವನಾಗಿ ಬಾಳುವ ಪರಿಸ್ಥಿತಿಗಳು, ಜೀವನದ ಪ್ರತಿ ಹಂತದಲ್ಲೂ ಸಮಾನತೆ ಎಂಬುದು ಪುರಾಣಗಳಲ್ಲಿ ಮಾತ್ರ ಇರುತ್ತದೆಯೇ ವಿನಾ ನಿಜಜೀವನದಲ್ಲಿ ಅಲ್ಲ ಎಂಬ ಭಾವನೆಯನ್ನು ಮೂಡಿಸುತ್ತದೆ. ಧರ್ಮ, ಜನಾಂಗ, ಜಾತಿ, ಲಿಂಗ, ಹುಟ್ಟಿದ ಸ್ಥಳ ಎಲ್ಲವುಗಳನ್ನೂ ಮೀರಿ, ಸಮತಾವಾದದ ಸಮಾಜ ಸೃಷ್ಟಿಸಲು, ಎಲ್ಲಾ ಹಂತಗಳಲ್ಲೂ ಸಮಾನ ಸ್ಥಾನಮಾನ ಮತ್ತು ಸಮಾನ ಅವಕಾಶವನ್ನು ಸಾಧಿಸಲು ಇರುವ ಏಕೈಕ ಮತ್ತು ಅತ್ಯಂತ ಭರವಸೆಯ ಮಾರ್ಗವೆಂದರೆ ಸಾಂವಿಧಾನಿಕ ನ್ಯಾಯ ಮಾತ್ರ ಎಂದು ನಂಬಲಾಗಿದೆ; ಮತ್ತು ಅದು ನಿಜವೂ ಹೌದು’

ಆದ್ದರಿಂದ, ಮೀಸಲಾತಿ ಎಂಬುದು ಸರ್ಕಾರವು ತೋರಿಸುವ ಔದಾರ್ಯವಲ್ಲ. ಅದು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರಿಗೆ ಖಾತರಿಪಡಿಸಲಾದ ಮೂಲಭೂತ ಹಕ್ಕು. ‘ಅವರು ಹಿಂದುಳಿದವರಷ್ಟೇ ಅಲ್ಲ, ಅತ್ಯಂತ ಹಿಂದುಳಿದವರು. ಒಬ್ಬ ವ್ಯಕ್ತಿಯು ಬೇರೆ ಧರ್ಮಕ್ಕೆ ಮತಾಂತರ ಹೊಂದಿದ ನಂತರವೂ ಆತನ ‘ಪರಿಶಿಷ್ಟ ಜಾತಿ’ ಹಣೆಪಟ್ಟಿ ಸಹಜವಾಗಿ ಅಳಿಸಿಹೋಗುವುದಿಲ್ಲ’ ಎಂದು ನ್ಯಾಯಮೂರ್ತಿ
ಎಸ್‌.ಬಿ. ಸಿನ್ಹಾ ಅವರು ಚಿನ್ನಯ್ಯ ಪ್ರಕರಣದ ಸಹಮತದ ತೀರ್ಪಿನಲ್ಲಿ ಹೇಳಿದ್ದರು.

ಸಮಾಜದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಘನತೆಯನ್ನು ಹೆಚ್ಚಿಸುವ ದಿಕ್ಕಿನಲ್ಲಿ ಮತ್ತು ನಮ್ಮ ಪ್ರಜಾಪ್ರಭುತ್ವದಲ್ಲಿ ಅವರನ್ನು ಸಮಾನ ಭಾಗೀದಾರರನ್ನಾಗಿಸುವಲ್ಲಿ ಮೀಸಲಾತಿಯು ಮಹತ್ವದ ಪಾತ್ರ ವಹಿಸಿದೆ. ಆದರೆ, ಅಪೇಕ್ಷೆಗಳು ಇನ್ನೂ ಸಾಕಷ್ಟಿವೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸಾಕಷ್ಟು ಜನರು ಈಗಲೂ ಪಾರಂಪರಿಕ ಜಾತಿ ವ್ಯವಸ್ಥೆಯು ನಿಗದಿ ಮಾಡಿದ್ದ ವೃತ್ತಿಯಿಂದ ಹೊರಬಂದಿಲ್ಲ. ಈಗಲೂ ಅವರು ದೌರ್ಜನ್ಯ ಅನುಭವಿಸುತ್ತಿದ್ದಾರೆ. ಮೀಸಲಾತಿ ಎಂಬುದು ಶತಮಾನಗಳ ಅಸಮಾನತೆಯ ಸಂಕೋಲೆಯನ್ನು ಒಡೆದು ಹೊರಬರಲು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಇರುವ ಸಾಂವಿಧಾನಿಕ ಅಸ್ತ್ರವಾಗಿದೆ. ಇದರಲ್ಲಿ ಯಾವುದೇ ಬದಲಾವಣೆ ಮಾಡಬಾರದು.

(ಲೇಖಕರಾದ ಗೋಪಾಲಗೌಡರು ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ, ಪಾಠಕ್‌ ಅವರು ವಕೀಲೆ)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT