ಭಾನುವಾರ, ಸೆಪ್ಟೆಂಬರ್ 19, 2021
27 °C

ಹಳೆ ಅಡ್ರೆಸ್‌ ಹುಡುಕಾಟದಲ್ಲಿ!

ಕೇಶವ ಜಿ. ಝಿಂಗಾಡೆ Updated:

ಅಕ್ಷರ ಗಾತ್ರ : | |

Prajavani

ಚುರುಗುಟ್ಟುತ್ತಿದ್ದ ಚಳಿಗೆ ಮನಿ ಮುಂದಿನ ಗೇಟ್‌ಗೆ ಒರಗಿಕೊಂಡು ಬಿಸಿಲು ಕಾಯಿಸ್ತಾ ಇದ್ದೆ. ಸಾಂಟಾಕ್ಲಾಸ್‌ ವೇಷಧಾರಿಯೊಬ್ಬ ಅಡ್ರೆಸ್‌ ಕೇಳ್ತಾ ಹತ್ರಾ ಬಂದ. ಕಾಗದದ ಹರಿದ ಚೂರು ನನ್ನ ಮಾರಿ ಮುಂದ್‌ ಹಿಡ್ದು, ‘ಈ ಅಡ್ರೆಸ್‌ನವ್ರ ಮನೆ ಎಲ್ಲಿ ಐತ್ರಿ’ ಅಂತ ಕೇಳ್ದ. ಅದನ್ನ ಹಿಂದ್‌ ಮುಂದ್‌ ತಿರುಗಿಸಿ ನೋಡಿದ್ರೂ ಅದ್ರಾಗ್‌ ಯಾವ್‌ ಅಡ್ರೆಸ್ಸೂ ಕಾಣಲಿಲ್ಲ. ‘ಇದ್ರಾಗ್‌ ಯಾವ್‌ ಅಡ್ರೆಸ್ಸೂ ಕಾಣ್ತಾ ಇಲ್ಲ’ ಎಂದೆ. ‘ವಯಸ್ಸಾಯ್ತು, ಕಣ್ಣು ಮಂಜು ಆಗ್ಯಾವ್‌. ಇಲ್ಲಿ ದೊಡ್ಡ ದ್ಯಾವಪ್ಪ ಅವರ ಮನಿ ಎಲ್ಲಿ ಐತ್ರಿ’ ಎಂದ.

‘ಅಜ್ಜಾ ನಿಂಗ್‌ ವಯಸ್‌ ಎಷ್ಟಪಾ’ ಎಂದೆ. ‘ಎಪ್ಪತ್ತೈದು ಮುಗ್ದಾವ್‌’ ಎಂದ. ‘ಅಂದ್ರ ಅರವತ್ತಕ್ಕ ಅರಳು ಮರಳು ಹಂತ ದಾಟಿ ಭಾಳ್‌ ವರ್ಷ ಆಯ್ತು ಬಿಡು. ಹೀಂಗಾಗಿ ನೀ ಇಲ್ಲಿ ಯಾರ್‌ ಮನಿ ಹುಡುಕಾಕತ್ತಿ ಅನ್ನೋದು ನಿಂಗs ಗೊತ್ತ್‌ ಇದ್ಹಂಗ್‌ ಇಲ್ಲ’ ಎಂದೆ.

‘ನೀ ಹೇಳೂದು ಖರೆ. ಭಾಳ್‌ ವರ್ಷದ ಹಿಂದ್ ದ್ಯಾವಪ್ಪನ ಕಿರಿ ಮಗನ ಮನಿ ಹುಡ್ಕೊಂಡು ಹೋಗಿದ್ದೆ. ಮೊನ್ನೆ ಮಾತಾ ಡುವಾಗ, ಅಂವ್ಗ ಈಗ ಅಡ್ರೆಸs ಇಲ್ಲ ಅಂತ ಬಾಯಿ ತಪ್ಪಿ ಹೇಳಿದ್ದೆ ಘಾತ್ ಆತ್‌ ನೋಡ್‌. ಅಂವಾ ಈಗ ಟ್ವೀಟರ್‌ನ್ಯಾಗ್‌ ತಿರುಗೇಟ್‌ ಕೊಟ್ಟಾನ್‌. ನಾ ಅಷ್ಟೇ ಅಲ್ಲ. ಈಶಪ್ಪ, ಜಗದೀಶಪ್ಪನೂ ಅವ್ನ ಮನಿ ಅಡ್ರೆಸ್‌ ಕೇಳ್ಕೊಂಡ್‌ ಹೋಗಿದ್ರಂತ್‌. ಇನ್ನ ಯಾರ‍್ಯಾರು ಅಡ್ರೆಸ್‌ ಕೇಳ್ಕೊಂಡ್‌ ಬಂದಿದ್ರು ಅಂತ ತಿಳ್ಕೊಳ್ಳೊ ಹುಚ್ಚು ಕೆರಳೇದ’ ಅಂದ.

‘ತ್ರಿಮೂರ್ತಿಗಳು ತನ್ನ ಅಡ್ರೆಸ್ ಕೇಳ್ಕೊಂಡ್‌ ಬಂದಿದ್ರು ಅಂತ ಅಂವಾ ಹೇಳ್ಯಾನ್‌ ಹೌದಲ್ಲ. ಅವನೂ ಕೃಷ್ಣ ಪರಮಾತ್ಮನ ಕಾಲಿಗೆ ಬೀಳಾಕ್ ಅವರಪ್ಪನ ಜತಿ ಹೋಗಿದ್ನಂತ. ಸ್ವತಃ ಕೃಷ್ಣನೇ ತನ್ನ ಹೊಸ ಭಗವದ್ಗೀತೆ ‘ಸ್ಮೃತಿ ವಾಹಿನಿ’ಯೊಳ್ಗ ಹೀಂಗಂತ್‌ ಬರ್ಕೊಂಡಾನ’ ಎಂದೆ.

‘ಕೃಷ್ಣಪ್ಪನ ಮನಿಗಿ ಅವನೂ ಹೋಗಿದ್ನಂತ. ಮತ್ತs ಅದೇ ಕೃಷ್ಣಪ್ಪ ಕಾಂಗ್ರೆಸ್‌ನ್ಯಾಗ್‌ ಎಲ್ಲಾ ಅನುಭವಿಸಿದ ನಂತರ ಕಮಲದ ಅಡ್ರೆಸ್‌ ಕೇಳ್ಕೊಂಡ್‌ ಯಾಕ್‌ ಬಂದಾನಂತ’ ಅಂತ ಕೇಳ್ದ.

‘ಇದನ್ನ ನೀ ಅಂವ್ಗ ಕೇಳ್‌ಬೇಕ್‌. ಇಷ್ಟಕ್ಕೂ ನೀ ಕೇಳಿರೊ ಆಸಾಮಿಯ ಅಡ್ರೆಸ್‌ ಇಲ್ಲಿ ಇಲ್ಲ. ಬಿಡದಿಯ ಕೇತಗಾನಹಳ್ಳಿ  ಶಾಶ್ವತ ಅಡ್ರೆಸ್‌ ಅಂತ. ಈಗ ಅವ್ರ ಬಿಡಾರ್‌ ಎಲ್ಲಿ ಅದ ಅನ್ನೋದು ಗೊತ್ತಿಲ್ಲ. ಬೇಕಿದ್ರ ಅಲ್ಲಿಗೇ ಹೋಗ್‌’ ಎಂದು ಹೇಳಿ ಅವನನ್ನ ಸಾಗ್‌ ಹಾಕಾಕ್‌ ನೋಡಿದೆ.

ಅದೇ ಹೊತ್ತಿಗೆ ಪ್ರಭ್ಯಾನ ಹೆಂಡ್ತಿ ಪಾರೋತಿ ಓಡು ನಡಿಗೆಯಲ್ಲಿ ನಮ್ಮಲ್ಲಿಗೆ ಬಂದಳು. ‘ಮಗನ ಸಾಲಿಗೆ ಹೋಗಿ ಚಾಕ್ಲೇಟ್‌ ಕೊಟ್ಟ ಬರಾಕ್‌ ಕಳಿಸಿದ್ರ, ಇಲ್ಲೇ ನಿಂತಿರಲ್ಲ. ಮೇಡಂ ಫೋನ್‌ ಮಾಡಿ, ನಿಮ್ಮ ಮಗನ ಸಾಂಟಾಕ್ಲಾಸ್‌ ಇನ್ನೂ ಬಂದಿಲಲ್ರಿ ಅಂತ ಜೋರ್‌ ಮಾಡಾಕತ್ತಾರ್‌. ಮೊದಲ್‌ ಇಲ್ಲಿಂದ ಓಡ್ರಿ’ ಎಂದು ದಬಾಯಿಸಿದಳು.

‘ನನಗ್‌ ಗುರ್ತುಸಾಕ್‌ ಆಗ್ದ ಬೇಸ್ತ್‌ ಬಿದ್ದಿಯಲ್ಲ ಮಗ್ನ’ ಅಂತ ಛೇಡಿಸಿದ ಪ್ರಭ್ಯಾ, ‘ಸ್ವಲ್ಪ ಹೊತ್ತು ಬಿಟ್ಟು ಬರ್ತೀನಿ, ಮನ್ಯಾಗ್‌ ಇರು, ಎಲ್ಲೂ ಹೋಗಬ್ಯಾಡ್‌’ ಅಂತ ಹೇಳಿ ಸಾಲಿ ಕಡೆ ಓಡಿದ.

‘ಇವತ್ತ ಯಾರ್‌ ಮುಖಾ ನೋಡಿ ಎದ್ದಿದ್ನೊ’ ಅಂತ ಗೊಣಗಿದೆ. ‘ಹೆಂಡ್ತಿ ಮುಖಾ ನೋಡ್ದ ಮತ್ಯಾರ್‌ ಮಾರಿ ನೋಡಿರ್‌ತೀರಿ’ ಅಂತ ಹೇಳ್ತಾ ಪಾರೋತಿ ಕಿಸಕ್ಕನೆ ನಕ್ಕು, ತನ್ನ ಮನೆ ಕಡೆ ಹೋದಳು.

ಸ್ವಲ್ಪು ಹೊತ್ತು ಬಿಟ್ಟು ಪ್ರಭ್ಯಾ ಬರೋದಕ್ಕೂ ಜಾರ್ಖಂಡ್‌ದಾಗ್ ಕಮಲ ಅಧಿಕಾರದಿಂದ ಜಾರ್ಕೊಂಡು ಮಕಾಡೆ ಬಿದ್ದಿದ್ದು ಖಚಿತವಾ
ಗೋದಕ್ಕೂ ಸರಿ ಹೋಗಿತ್ತು. ‘ನನ್ನ ಗುರ್ತುಸಲಾರ‍್ದ ಮಂಗ್ಯಾ ಆದಿ ಇಲ್ಲ ಮಗ್ನ’ ಎಂದು ಹೇಳ್ತಾ ಹುರುಪ್‌ನ್ಯಾಗ್‌ ಬಂದವನಿಗೆ, ‘ಬಾರಪಾ, ಏನೇನರ ವೇಷಾ ಹಾಕ್ಕೊಂಡು ಜನರನ್ನ ಮಳ್ಳ ಮಾಡೋದು ಭಾಳ್ ದಿನಾ ನಡೆಯೋದಿಲ್ಲ. ನೋಡಲ್ಲಿ, ಜಾರ್ಖಂಡ್‌ದಾಗ್‌ ಕಮಲ ಮುದುಡಿ ಹೋಗಿದೆ’ ಎಂದು ಟೀವಿ ಕಡೆ ಅವನ ಗಮನ ಸೆಳೆದೆ.

ಪ್ರಭ್ಯಾನ ಉತ್ಸಾಹ ಜರ‍್ರನೆ ಇಳಿದಿತ್ತು. ಮಾರಿ ಬಿಸಿಲಿಗೆ ಬಾಡಿದ ಕಮಲದಂಗಾಯ್ತು.

‘ನಾಲ್ಕೇ ತಿಂಗಳಾಗ್‌ ರಾಮನ ದೇವಸ್ಥಾನ ಕಟ್ಟಿಸ್ತೀವಿ ಅಂತ ಅಮಿತ್‌ ಶಾ ಅಮಿತೋತ್ಸಾಹ ದಿಂದ ಬಡ್ಕೊಂಡ್ರೂ ಜನಾ ಕಮಲದ ಕೈ ಹಿಡಿದಿಲ್ಲಲ್ಲೋ’ ಎಂದೆ.

ನನ್ನ ಮಾತಿಗೆ ಕಿವಿಗೊಡ್ದ, ‘ಎಲ್ಲಿಗೆ ಬಂತಪ್ಪ ಕುಮಾರಣ್ಣನ ಟ್ವೀಟ್‌ ಸಮರ’ ಎಂದು ಬೆಳಗಿನ ಮಾತಿಗೆ ಮತ್ತs ಪೀಠಿಕೆ ಹಾಕಿದ.

‘ಅಡ್ರೆಸ್‌ ಹುಡ್ಕೊಂಡ್‌ ಹೋಗಿದ್ದ ತ್ರಿಮೂರ್ತಿಗಳಲ್ಲಿ ಒಬ್ಬರೂ ಟ್ವೀಟೂ ಮಾಡಿಲ್ಲ, ಸುಳ್ಳೆಂದೂ ಹೇಳಿಲ್ಲ. ಕುಮಾರಣ್ಣ → ಹೇಳ್ದಂಗ್‌

ಬೆತ್ತಲಾಗ್ಯಾರ್‌ ನೋಡ್‌’ ಎಂದೆ.

‘ಟ್ವೀಟ್‌ಗೆ ಭಾರಿ ಶಕ್ತಿ ಅದ ಬಿಡಪಾ’ ಎಂದ.

‘ಹೌದಪಾ, ಚಿಂತಿಸಬೇಡಿ ಎಂದು ಅಸ್ಸಾಂ ಜನರಿಗೆ ಅಭಯ ನೀಡಿ ‘ನಮೋ’ ಸಾಹೇಬ್ರು ಟ್ವೀಟ್‌ ಮಾಡ್ತಾರ್‌. ನಿಮ್ದs ಸರ್ಕಾರ ಅಲ್ಲಿ ಇಂಟರ್‌ನೆಟ್‌ ಕಟ್‌ ಮಾಡಿ ಮೂರ್ಖತನ ತೋರುಸ್ತದ. ಪ್ಲೀಸ್‌ ನನ್ನ ನಂಬಿ ಅನ್ನೊ ನಾಟಕಾ ಭಾಳ್‌ ದಿನಾ ನಡೆಂಗಿಲ್ಲ’ ಎಂದೆ.

‘ದೊಡ್ಡವರನ್ನ ಹಂಗೆಲ್ಲ ಹಿಂದ್‌ ಮುಂದ್‌ ನೋಡ್ದ ಮೂರ್ಖರು ಅನ್ನಬ್ಯಾಡ್‌. ಬಾಯಾಗ್‌ ಹುಳಾ ಬಿದ್ದಾವ್‌’ ಅಂತ ಶಾಪ ಕೊಟ್ಟ.

‘ಅಲ್ಲಲೇ, ರಾಷ್ಟ್ರೀಯ ಪೌರತ್ವ ನೋಂದಣಿಯನ್ನ ದೇಶದಾದ್ಯಂತ ಜಾರಿಗೆ ತರ‍್ತೀವಿ ಅಂತ ಶಾಣೆ ಶಾ ರಾಜ್ಯಸಭೆಯೊಳಗ್‌ ಹೇಳಿಕೆ ಕೊಡ್ತಾನ್‌. ನಮೋ ಸಾಹೇಬ್ರು  ಅಂತಹ ಚರ್ಚೇನs ನಡೆದಿಲ್ಲ ಅಂತ ರಾಮಲೀಲಾ ಮೈದಾನದಾಗ್‌ ಎದೆ ತಟ್ಕೊಂಡ್‌ ಹೇಳ್ತಾರ್‌. ಸುಳ್ಳು ಹೇಳೋದ್ರಾಗ್‌ ನಮೋ ಸಾಹೇಬ್ರು ಟ್ರಂಪಣ್ಣನ್ನೂ ಮೀರಿಸ್ಯಾರ್‌. ಜನರಿಗೆಲ್ಲ ಅಡ್ರೆಸ್‌– ಪಡ್ರೆಸ್‌ ಹುಡುಕಾಕ್‌ ಹಚ್ಚಿದವ್ರೆಲ್ಲ ಮುಂದೊಂದು ದಿನ ಅಡ್ರೆಸ್‌ ಇಲ್ಲದಂಗ್‌ ಆದೀತಲೇ. ಸರ್ವರೂ ತಂಪಲೆ, ನಾಡು ತಂಪಲೇ...’ ಅಂತ ಕಾರಣಿಕ ಹೇಳಿಕೆ ನೆನಪಿಸಿದೆ. ದುರ್ದಾನ ತಗೊಂಡವ್ರ ಥರಾ ಧಡಕ್ಕನೆ ಎದ್ದು ನಿಂತ ಪ್ರಭ್ಯಾ ಭುಸುಗುಡುತ್ತಲೇ ಹೊರ ನಡೆದ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.