ಮಂಗಳವಾರ, ಸೆಪ್ಟೆಂಬರ್ 22, 2020
22 °C
ಮಕ್ಕಳ ಸಾಮಾಜಿಕ ನಡವಳಿಕೆಯಲ್ಲಿನ ನ್ಯೂನತೆಯಲ್ಲಿ ಶಿಕ್ಷಣ– ಆರ್ಥಿಕತೆಯ ಪಾತ್ರವಿದೆ

ಸಾಮಾಜಿಕ ನಡೆ ಮತ್ತು ಶಿಕ್ಷಣದ ಗುಣಮಟ್ಟ

ಅರವಿಂದ ಚೊಕ್ಕಾಡಿ Updated:

ಅಕ್ಷರ ಗಾತ್ರ : | |

ವಿದ್ಯೆ ಉಳ್ಳವನ ಮುಖ

ಮುದ್ದು ಬರುವಂತಿಕ್ಕು

ವಿದ್ಯೆ ಇಲ್ಲದವನ ಬರಿ ಮುಖವು
ಹಾಳೂರ ಹದ್ದಿನಂತಿಕ್ಕು ಸರ್ವಜ್ಞ

ಎಂದು ಸರ್ವಜ್ಞ ಹೇಳಿದ್ದಾನೆ. ಇಲ್ಲಿ ವಿದ್ಯೆಯನ್ನು ಬರೀ ಸಾಕ್ಷರತೆ ಎಂದು ಭಾವಿಸಬಾರದು. ಸಾಕ್ಷರರಲ್ಲದವರೂ ವಿದ್ಯಾವಂತರಿರಬಹುದು. ಗುರುಕುಲ ಶಿಕ್ಷಣದಲ್ಲಿ ‘ವಿದ್ಯಾರಂಭಂ ಕರಿಶ್ಯಾಮಿ’ ಎಂದರೆ, ತಾತ್ವಿಕವಾಗಿ ವಿದ್ಯಾರ್ಥಿಗೆ ವಿಶ್ವದ ಒಂದು ಭಾಗವಾಗಿ ತನ್ನ ಅಸ್ತಿತ್ವವನ್ನು ಗುರುತಿಸಿಕೊಳ್ಳಲು ಸಾಧ್ಯವಾಗಬೇಕು. ವಿದ್ಯೆಯು ವಿಶೇಷವಾದ ನಾಗರಿಕ ವರ್ಚಸ್ಸನ್ನು ಕೊಡಬೇಕು. ವಿದ್ಯಾವಂತಿಕೆಯು ನಡವಳಿಕೆಯಲ್ಲಿ ವ್ಯಕ್ತವಾಗಬೇಕು.

ಈ ರೀತಿಯ ವ್ಯವಸ್ಥೆ ಸುಮಾರು 2000ದವರೆಗೂ ಇತ್ತು. ಅದು ಗುಮಾಸ್ತರನ್ನು ತಯಾರಿಸಲು ರೂಪಿಸಿದ ಇಂಗ್ಲಿಷ್ ಶಿಕ್ಷಣವೇ ಇರಬಹುದು; ಆದರೆ ಬಹುತೇಕ ಒಬ್ಬ ಪದವೀಧರನ ಸಾಮಾಜಿಕ ನಡವಳಿಕೆಯಲ್ಲಿ ಆತ ಒಂದಷ್ಟು ವಿದ್ಯಾವಂತ ಎಂದು ಗೊತ್ತಾಗುವ ಹಾಗೆಯೇ ಇತ್ತು. ಭ್ರಷ್ಟ ಇರಬಹುದು; ಆದರೆ ಭ್ರಷ್ಟಾಚಾರವನ್ನು ಸಮರ್ಥಿಸಿಕೊಳ್ಳಬಾರದು ಎಂದೇ ನಡೆದುಕೊಳ್ಳುತ್ತಿದ್ದ. ಸ್ತ್ರೀ ವ್ಯಾಮೋಹಿ ಇರಬಹುದು; ಆದರೆ ಸಾರ್ವಜನಿಕವಾಗಿ ಹೆಣ್ಣಿನ ಕುರಿತಾಗಿ ಗೌರವಯುತವಾಗಿ ಪ್ರತಿಕ್ರಿಯಿಸಬೇಕೆಂಬ ಅರಿವಿತ್ತು. ಈಗಿನ ಪರಿಸ್ಥಿತಿ ಹಾಗಿಲ್ಲ. ವಿದ್ಯಾವಂತ ಯುವಜನಾಂಗ ಎಷ್ಟು ಕೆಟ್ಟದಾಗಿ ಬೇಕಾದರೂ ಸಾರ್ವಜನಿಕವಾಗಿ ಪ್ರತಿಕ್ರಿಯಿಸಿ ಅದನ್ನು ಸಮರ್ಥಿಸಿಕೊಳ್ಳಲೂ ಹಿಂಜರಿಯುವುದಿಲ್ಲ. ಇದು ಗೊತ್ತಾಗುತ್ತಿದ್ದ ಹಾಗೆ, ಅಂತರಂಗದಲ್ಲಿ ವಿದ್ಯಾವಂತರಾಗಿರದೆ ವಿದ್ಯಾವಂತರಂತೆ ನಟಿಸುತ್ತಿದ್ದ ಹಿರಿಯರೂ ಈಗ ನಿಜರೂಪದಲ್ಲಿ ಕಾಣಿಸಿಕೊಳ್ಳತೊಡಗಿದ್ದಾರೆ. ಸಾಮಾಜಿಕ ನಡವಳಿಕೆಯಲ್ಲಿ ಆಗಿರುವ ಈ ಮಹಾ ಕುಸಿತದಲ್ಲಿ ಅವಶ್ಯವಾಗಿ ಶಿಕ್ಷಣದ ಪಾತ್ರವಿದೆ. ಜೊತೆಗೆ ಆರ್ಥಿಕತೆಯ ಪಾತ್ರವೂ ಇದೆ.

ಜಾಗತೀಕರಣದ ನಂತರ ಬಡತನವಿದ್ದರೂ ಹಣವನ್ನು ಹೇಗೋ ಹೊಂದಿಸಿಕೊಳ್ಳಬಹುದಾದ ಸ್ಥಿತಿ ಬಂದಿದೆ. ಜನರಿಗೆ ಹಣದ ರಕ್ಷಣೆ ಸಿಕ್ಕಿದಾಗ, ಮನುಷ್ಯರ ನಡುವಿನ ಅವಲಂಬನೆ ಹೊರಟು ಹೋಗುತ್ತದೆ. ಆಗ ಇನ್ನೊಬ್ಬರನ್ನು ಗೌರವದಿಂದ ಕಾಣಬೇಕು, ಕನಿಷ್ಠಪಕ್ಷ ಸಾರ್ವಜನಿಕವಾಗಿಯಾದರೂ ಒಳ್ಳೆಯವನಾಗಿ ಕಾಣಿಸಿಕೊಳ್ಳಬೇಕೆಂಬ ಪ್ರಜ್ಞೆ ಹೊರಟು ಹೋಗುತ್ತದೆ. ಇದರ ಜೊತೆಗೆ ಒಂದಷ್ಟು ಜನಬೆಂಬಲ ಇದ್ದರಂತೂ ಮುಗಿದೇ ಹೋಯಿತು; ತಾನು ಯಾರ ಬಗ್ಗೆ ಎಷ್ಟು ಕೆಟ್ಟದಾಗಿ ಬೇಕಾದರೂ ಸಾರ್ವಜನಿಕ ಪ್ರತಿಕ್ರಿಯೆ ಕೊಡಬಹುದು ಎಂಬ ಮನೋಭಾವ ಬಲಿಯುತ್ತದೆ. ಒಂದೆರಡು ಪ್ರತಿಕ್ರಿಯೆ ಕೊಟ್ಟಾಗ ಏನೂ ಆಗುವುದಿಲ್ಲ ಎಂದು ಗೊತ್ತಾದರೆ ಅವರು ಆ ನಿಲುವಿನಲ್ಲೇ ಸ್ಥಿರವಾಗುತ್ತಾರೆ.

ಇಂತಹ ಸ್ಥಿತಿಯಲ್ಲಿಯೂ, ವಿದ್ಯಾವಂತನಾದವನು ವಿದ್ಯಾವಂತನಾಗಿಯೇ ಸಾಮಾಜಿಕ ನಡವಳಿಕೆಯನ್ನು ತೋರಿಸಬೇಕೆಂಬುದನ್ನು ಕಲಿಸಬೇಕಾದ್ದು ಶಿಕ್ಷಣ. ಆದರೆ ಶಿಕ್ಷಣದ ಗುಣಮಟ್ಟ ತೀವ್ರವಾಗಿ ಕುಸಿಯುತ್ತಲೇ ಹೋಗಿದೆ. ಪಾಠ ಬೋಧನೆಯು ಪಠ್ಯವಸ್ತುವಿನ ಯಶಸ್ವಿ ನಿರ್ವಹಣೆ ಮತ್ತು ಫಲಿತಾಂಶಕ್ಕೆ ಸೀಮಿತವೇ ಹೊರತು ಸಾಮಾಜಿಕ ವರ್ತನೆಗಳ ಕಲಿಕೆಯ ಕಡೆಗೆ ಅದು ವಿಸ್ತರಿಸಿಕೊಳ್ಳುವುದಿಲ್ಲ. ಏಕೆಂದರೆ ಆ ಬಗ್ಗೆ ಪರೀಕ್ಷೆಯಲ್ಲಿ ಪ್ರಶ್ನೆಗಳು ಬರುವುದಿಲ್ಲ. ಆದ್ದರಿಂದ, ಗಂಡುಮಕ್ಕಳು- ಹೆಣ್ಣುಮಕ್ಕಳು ಪರಸ್ಪರ ಹೇಗೆ ನಡೆದುಕೊಳ್ಳಬೇಕು, ಹಿರಿಯರೊಂದಿಗೆ ಹೇಗೆ ವರ್ತಿಸಬೇಕು, ಸಾರ್ವಜನಿಕವಾಗಿ ಹೇಗೆ ಮಾತನಾಡಬೇಕು, ವಿದ್ಯಾರ್ಥಿಯು ವ್ಯಕ್ತಿತ್ವವನ್ನು ಹೇಗೆ ರೂಪಿಸಿಕೊಳ್ಳಬೇಕು ಎಂಬುದನ್ನು ಕಲಿಸುವುದಿಲ್ಲ. ಸಮಸ್ಯೆಗಳ ನಿರ್ವಹಣೆ ವಿಧಾನಗಳ ಅರಿವು ಹುಟ್ಟಿಸುವುದಿಲ್ಲ. ಸಮಸ್ಯೆಗಳಿಗೆ ಭೌತಿಕವಾಗಿ ಅಥವಾ ಮಾನಸಿಕವಾಗಿ ಮುಖಾಮುಖಿಯಾಗಿ ನಿರ್ವಹಿಸುವುದನ್ನು ಅರಿತುಕೊಳ್ಳುತ್ತಾ ಹೋದಾಗ ಬಹುಮುಖಿಯಾಗಿ ಯೋಚಿಸುವ ಒಂದು ಆಲೋಚನಾ ಕ್ರಮ ಬೆಳೆಯುತ್ತದೆ. ಇದು ಸಾಮಾಜಿಕ ನಡವಳಿಕೆಯನ್ನು ರೂಪಿಸಿಕೊಳ್ಳಲು ಅತ್ಯವಶ್ಯಕ. ಇದೆಲ್ಲ ಆಗುವುದು ಅಂತಿರಲಿ; ಅಧ್ಯಾಪಕರೊಂದಿಗೆ ಹೇಗೆ ವರ್ತಿಸಬೇಕೆನ್ನುವುದೂ ಮಕ್ಕಳಿಗೆ ಮುಖ್ಯವಲ್ಲದ ಸಂಗತಿಯಾಗುತ್ತಾ ಸಾಗಿದೆ. ಅಧ್ಯಾಪಕರನ್ನು ಪ್ರಶ್ನಿಸುವುದು ಎಂದರೆ ಅಧ್ಯಾಪಕರು ಲೆಕ್ಕಕ್ಕೇ ಇಲ್ಲವೆಂದು ವರ್ತಿಸುವುದಲ್ಲ. ಅಧ್ಯಾಪಕರ ವಿಚಾರಕ್ಕಿಂತ ಭಿನ್ನವಾಗಿ ತನ್ನ ವಿಚಾರ ಈ ರೀತಿ ಇದೆ ಎಂದು ಹೇಳಲು ಇರುವ ಅವಕಾಶ ಅದು. ಈ ವ್ಯತ್ಯಾಸವನ್ನು ಮನಗಾಣಿಸಿಕೊಡಲು ಸಾಧ್ಯವಾದಂತಿಲ್ಲ.

ಈ ಸನ್ನಿವೇಶದ ನಿರ್ಮಾಣದಲ್ಲಿ ಅಧ್ಯಾಪಕರ ಮೇಲಿನ ಒತ್ತಡಗಳೂ ಕಾರಣವಾಗಿವೆ. ಎಲ್ಲ ಶಿಕ್ಷಣ ನೀತಿಗಳೂ ಅಧ್ಯಾಪಕರಿಗೆ ಇತರೇ ಕೆಲಸಗಳನ್ನು ಹೆಚ್ಚು ವಹಿಸಬಾರದು ಎಂಬ ಕಾಳಜಿಯನ್ನೇ ಹೇಳುತ್ತವೆ. ಆದರೆ ಆ ಕಾಳಜಿ ವಾಸ್ತವದಲ್ಲಿ ಪರಿಣಾಮವನ್ನುಂಟು ಮಾಡಬೇಕಾದರೆ, ಶಾಲೆಗಳಿಗೆ ಸಂಬಂಧಿಸಿದ ಹೆಚ್ಚುವರಿ ಕೆಲಸಗಳನ್ನು ನಿರ್ವಹಿಸುವವರು ಯಾರು ಎಂಬ ಪ್ರಶ್ನೆಗೆ ಉತ್ತರ ಸಿಗಬೇಕು. ಅರ್ಥಾತ್ ಬೋಧಕೇತರ ಸಿಬ್ಬಂದಿಯನ್ನು ಹೆಚ್ಚಿಸಬೇಕು. ಆಗ ಅಧ್ಯಾಪಕರು ಕಲಿಕಾ ಪ್ರಕ್ರಿಯೆಗೇ ಅವಧಾನವನ್ನು ಕೇಂದ್ರೀಕರಿಸಲು ಸಾಧ್ಯವಾಗುತ್ತದೆ.

ಈ ಪ್ರಕ್ರಿಯೆಯಲ್ಲಿ ಪೋಷಕರ ಪಾತ್ರವೂ ಮಹತ್ವದ್ದು. ಖಾಸಗಿ ವಿದ್ಯಾಸಂಸ್ಥೆಗಳಲ್ಲಿ ಆಡಳಿತ ಮಂಡಳಿಗಳ ದೃಷ್ಟಿಕೋನವೂ ಮಹತ್ವದ್ದು. ಆದರೆ ಈ ಎರಡೂ ನೆಲೆಗಳು ವಿದ್ಯಾರ್ಥಿಗಳ ಸಾಮಾಜಿಕ ನಡವಳಿಕೆ ರೂಪಿಸುವುದರ ಬಗ್ಗೆ ನಿರ್ಲಕ್ಷ್ಯ ವಹಿಸಿದ ಅಥವಾ ಅದರ ಅಗತ್ಯವಿಲ್ಲದಂತೆ ವರ್ತಿಸುವ ಹಾಗೆ ಕಂಡು ಬರುತ್ತದೆ. ಸರ್ಕಾರದ ನೀತಿಯ ಕಾರಣಕ್ಕಾಗಿಯಾದರೂ ವಿದ್ಯಾರ್ಥಿಗಳ ಸಾಮಾಜೀಕರಣಕ್ಕೆ ಕೊಂಚ ಮಹತ್ವ ಉಳಿದುಕೊಂಡಿರುವುದು ಸರ್ಕಾರಿ ವಿದ್ಯಾಸಂಸ್ಥೆಗಳಲ್ಲಿ.

ಪೋಷಕರ ಶೈಕ್ಷಣಿಕ ದೃಷ್ಟಿಕೋನ ಬಹುಮಟ್ಟಿಗೆ ತಮ್ಮ‌ ಮಕ್ಕಳ ಪರೀಕ್ಷಾ ಅಂಕಗಳು, ಅಧಿಕ ವೇತನದ ಉದ್ಯೋಗಕ್ಕೆ ಸೀಮಿತವಾಗಿರುತ್ತದೆ ಹೊರತು ಸಾಮಾಜಿಕ ನಡವಳಿಕೆಗಳ ಕಲಿಕೆಯ ಚಿಂತನೆ ಬರುವುದಿಲ್ಲ. ಬಹುತೇಕ ಕುಟುಂಬಗಳು ಸಣ್ಣ ಕುಟುಂಬಗಳು. ತಂದೆ-ತಾಯಿಗೆ ಮಕ್ಕಳ ಸಾಮಾಜೀಕರಣ ಪ್ರಕ್ರಿಯೆಯಲ್ಲಿ ಹೆಚ್ಚು ತೊಡಗಿಸಿಕೊಳ್ಳಲು ಆಗುವುದಿಲ್ಲ. ಆಗ ಅದನ್ನು ಶಾಲೆಯೇ ಕಲಿಸಬೇಕಾಗುತ್ತದೆ. ತಮಗೂ ಮಾಡಲಾಗದು, ಶಾಲೆಯಲ್ಲಿ ಕಲಿಸಿದರೂ ಕಲಿಸದಿದ್ದರೂ ತೊಂದರೆಯಿಲ್ಲ ಎಂಬಂತಹ ನಿಲುವು ಪೋಷಕರದಾದಾಗ ಸಾಮಾಜಿಕ ನಡವಳಿಕೆಯ ಕಲಿಕಾ ಶೂನ್ಯತೆ ಉಂಟಾಗುತ್ತದೆ. ಅದು ಸಾರ್ವಜನಿಕ ಜೀವನದ ವರ್ತನೆಗಳ ಸೂಕ್ಷ್ಮತೆಯ ಅಗತ್ಯದ ಅರಿವಿಲ್ಲದ ಪೀಳಿಗೆಯನ್ನು ಹುಟ್ಟುಹಾಕುತ್ತದೆ. ಆದ್ದರಿಂದ ಪೋಷಕರಲ್ಲಿ ಈ ಅರಿವು ಹುಟ್ಟಬೇಕಾದ ಅಗತ್ಯವಿದೆ. ಪೋಷಕರ ಧೋರಣೆಗೆ ಸ್ಪಂದಿಸಲೇ ಬೇಕಾದ ಅನಿವಾರ್ಯವು ಖಾಸಗಿ ಆಡಳಿತ ಮಂಡಳಿಗಳಿಗೆ ಇರುವುದರಿಂದ ಪೋಷಕರ ಮನೋಭಾವಕ್ಕೆ ತಕ್ಕ ಹಾಗೆ ಅವು ನಡೆದುಕೊಳ್ಳುತ್ತವೆ.

ಮಕ್ಕಳಿಗೆ ಸಾಮಾಜಿಕ ನಡವಳಿಕೆಗಳನ್ನು ಕಲಿಸಬೇಕಾದರೆ ಅಧ್ಯಾಪಕರಿಗೆ ಅದರ ಸೂಕ್ಷ್ಮತೆಗಳ ಅರಿವಿರಬೇಕು. ಆದ್ದರಿಂದ ಅಧ್ಯಾಪಕರ ಆಯ್ಕೆಯನ್ನು ಬಹಳ ಬಿಗಿಯಾದ ಪದ್ಧತಿಯಲ್ಲಿ ಮಾಡಬೇಕು. ಯೋಗ್ಯ ಅಧ್ಯಾಪಕರನ್ನು ಆಯ್ಕೆ ಮಾಡಿದ ಮೇಲೆ ಯೋಗ್ಯ ಔದ್ಯೋಗಿಕ ಪರಿಸರವೂ ದೊರೆಯಬೇಕು. ಖಾಸಗಿ ಶಾಲೆಗಳಿರಲಿ, ಸರ್ಕಾರಿ ಶಾಲೆಗಳಿರಲಿ ಅಧ್ಯಾಪಕರಿಗೆ ತಮ್ಮ ಉತ್ತಮ ಆಲೋಚನೆಗಳನ್ನು ಕಾರ್ಯಗತಗೊಳಿಸುವ ಶೈಕ್ಷಣಿಕ ಸ್ವಾತಂತ್ರ್ಯವಿರಬೇಕು.

ಶೈಕ್ಷಣಿಕ ವಿಚಾರದಲ್ಲಿ ಗಂಭೀರವಾಗದೇ ಹೋದರೆ ಸಮಾಜ ದುರ್ಬಲವಾಗುತ್ತಾ ಹೋಗುತ್ತದೆ. ಪ್ರಸ್ತುತ ಸಮಾಜದಲ್ಲಿ ಧರ್ಮದ ಬಗ್ಗೆ ಬಹಳ ಚರ್ಚೆಗಳು ನಡೆಯುತ್ತಿವೆ. ಯಾವ ಧರ್ಮವೇ ಇರಲಿ ಅದು ಸಾಕಷ್ಟು ಉನ್ನತ ಸಂಸ್ಕಾರಗಳ ಪ್ರತಿಪಾದನೆಯನ್ನು ಮಾಡುತ್ತದೆ. ಆಗ ನಿಜವಾಗಿ ಹಿರಿಯರೊಂದಿಗೆ ಗೌರವ, ಕಿರಿಯರೊಂದಿಗೆ ಪ್ರೀತಿ, ಸಾಮಾಜಿಕವಾಗಿ ಸುಸಂಸ್ಕೃತ ನಡವಳಿಕೆಗಳೆಲ್ಲ ಹೆಚ್ಚು ಕಾಣಿಸಬೇಕಿತ್ತು. ವಾಸ್ತವದಲ್ಲಿ ಇಂತಹ ನಡವಳಿಕೆಗಳು ಹೆಚ್ಚಾಗುವ ಬದಲು ಕಡಿಮೆಯಾಗುತ್ತಿವೆ ಎಂದರೆ, ನಡೆಯುತ್ತಿರುವ ಧಾರ್ಮಿಕ ಚರ್ಚೆಗಳು ಸಂಸ್ಕಾರವನ್ನು ಪ್ರತಿಪಾದಿಸಲು ವಿಫಲವಾಗಿವೆ ಎಂದು ಅರ್ಥ. ಆದರೆ ಯಾವುದು ವಿಫಲವಾದರೂ ಶಿಕ್ಷಣವು ಮಾಡಬೇಕಾದ್ದನ್ನು ಮಾಡದೇ ಇರಲು ಆಗುವುದಿಲ್ಲ. ಆದ್ದರಿಂದ ಈ ನಿಟ್ಟಿನಲ್ಲಿ ಶಿಕ್ಷಣದ ಪುನರ್‌ ಸಂಘಟನೆಯಾಗಬೇಕಾದ ಅಗತ್ಯವಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು