ಶನಿವಾರ, ಅಕ್ಟೋಬರ್ 31, 2020
24 °C
ಕೀರ್ತನೆಗಳಲ್ಲಿ ಕಂಡ ಆ ಧರ್ಮಾತ್ಮ ರಾಮನನ್ನು ಅರಿಯುವ ಬಗೆ...

ತ್ಯಾಗರಾಜರು ಚಿತ್ರಿಸಿದ ‘ರಾಮ’ | ಟಿ.ಎಂ.ಕೃಷ್ಣ ಬರಹ

ಟಿ.ಎಂ.ಕೃಷ್ಣ Updated:

ಅಕ್ಷರ ಗಾತ್ರ : | |

Prajavani

ಅವನು ಸದಾ ನನ್ನ ಬದುಕಿನ ಭಾಗವಾಗಿದ್ದಾನೆ: ಅಜ್ಜಿ ಹೇಳಿದ ಕಥೆಗಳು, ರಾಜಾಜಿಯವರ ರಾಮಾಯಣಂ, ಅಮರಚಿತ್ರ ಕಥೆಗಳ ಚಿತ್ರಗಳು, ವಾಲ್ಮೀಕಿ ರಾಮಾಯಣದ ಆಧ್ಯಾತ್ಮಿಕ ಚಿಂತನೆಗಳು, ಅಷ್ಟೇಕೆ ರಮಾನಂದ ಸಾಗರರ ‘ರಾಮಾಯಣ’ ಧಾರಾವಾಹಿ ಮತ್ತು ‘ರಘುಪತಿ ರಾಘವ ರಾಜಾರಾಂ’ ಭಜನೆಯ ಸಾಲುಗಳು; ಈ ಎಲ್ಲವೂ ನನ್ನ ಮನಸ್ಸಿನಲ್ಲಿ ಅವನನ್ನು ಗಾಢವಾಗಿ ಅಚ್ಚೊತ್ತಿವೆ. ನಾನು ಅವನನ್ನು ಹೊರಗೆಲ್ಲಿಯೂ ಹುಡುಕಬೇಕಾಗಿಯೇ ಇಲ್ಲ.

ಆದರೆ, ಮೊನ್ನೆ ಆಗಸ್ಟ್ 5ರಂದು ಹುಡುಕಿದೆ. ಅಯೋಧ್ಯೆಯಲ್ಲಿ ಶಿಲಾನ್ಯಾಸದ ಹೋಮಕ್ಕಾಗಿ ಕಟ್ಟಿದ ವೇದಿಕೆಯಲ್ಲಿ ಹುಡುಕಿದೆ. ಅಲ್ಲಿ ನೆರೆದವರ ಮುಖದಲ್ಲಿ ಹುಡುಕಿದೆ. ಆ ಮಂತ್ರಘೋಷಗಳಲ್ಲಿ, ಜೈಕಾರಗಳಲ್ಲಿ ಹುಡುಕಿದೆ. ಭಕ್ತಿಯೇನೋ ಕಂಡಿತು, ಆದರೆ ಅದು ರಾಜಕೀಯದ ಶಾಲು ಹೊದ್ದಿತ್ತು. ನನಗೆ ಧರ್ಮವೂ ಕಂಡಿತು ಅಲ್ಲಿ, ಆದರೆ ಅದಕ್ಕೆ ವಿಜಯೋತ್ಸವದ ಬಣ್ಣ ಢಾಳಾಗಿ ಮೆತ್ತಿತ್ತು. ನನಗೆ ಗೊತ್ತಿರುವ ರಾಮನನ್ನು ಅಲ್ಲಿ ಕಾಣಲಿಲ್ಲ. ಆ ರಾಮ ಯಾರು?

ನಾನು ಓದಿದ ಮತ್ತು ಕೇಳಿದ ಎಲ್ಲದರಲ್ಲಿ ರಾಮನಿದ್ದ; ಆದರೆ ಸಂಗೀತದ ವಿದ್ಯಾರ್ಥಿಯಾದ ನನಗೆ, ಆತ ಪಠ್ಯ ಮತ್ತು ಕಥೆಗಳಿಂದ ಹೊರಬಂದು ಸಜೀವವಾಗಿ ಮೈದಳೆಯುವುದು ತ್ಯಾಗರಾಜರ ಕೀರ್ತನೆಗಳಲ್ಲಿ ಮಾತ್ರ. ತ್ಯಾಗರಾಜರು ಲೆಕ್ಕವಿಲ್ಲದಷ್ಟು ರಾಗಗಳಲ್ಲಿ ರಾಮನನ್ನು ರಮಿಸಿದ್ದಾರೆ, ಬೇಡಿಕೊಂಡಿದ್ದಾರೆ, ಆಗ್ರಹಿಸಿದ್ದಾರೆ, ಸ್ತುತಿಸಿದ್ದಾರೆ, ರಾಮನೊಂದಿಗೆ ವಾದವನ್ನೂ ಮಾಡಿದ್ದಾರೆ. ನನ್ನ ಗುರುಗಳು ಕೀರ್ತನೆಗಳ ಪ್ರತಿಯೊಂದು ಸಾಲನ್ನೂ ಅದರ ಪೌರಾಣಿಕ ಸಂದರ್ಭದೊಡನೆ ವಿವರಿಸುತ್ತ, ಪುರುಷೋತ್ತಮನ ಉದಾತ್ತ ಗುಣಗಳನ್ನು ಚಿತ್ರಿಸುತ್ತಿದ್ದರು. ಕೆಲವೊಮ್ಮೆ ನಾವು ಹಾಡುವುದನ್ನು ಕೇಳುತ್ತ ರಾಮ ಅಲ್ಲೇ ಮೂಲೆಯಲ್ಲಿ ಕುಳಿತಿರುತ್ತಾನೆ ಎಂದು ಕಲ್ಪಿಸಿಕೊಳ್ಳುತ್ತಿದ್ದೆ.


ವಾಗ್ಗೇಯಕಾರ ಶ್ರೀತ್ಯಾಗರಾಜರು

ಮತ್ತೆ ತ್ಯಾಗರಾಜರ ರಾಮನಾದರೂ ಎಂಥವನು... ಆತ ಕರುಣಾಳು, ಮೃದುಭಾಷಿ, ನೋಡಲು ಮನೋಹರ, ಮಧುರವಾಗಿ ಮಾತನಾಡುವವನು. ಈ ಗುಣವಾಚಕಗಳು ರಾಮ ಕಿವಿಗಿಂಪು ಧ್ವನಿಯವನು ಎನ್ನುವುದನ್ನಷ್ಟೇ ಮೇಲ್ತೋರಿಕೆಯಲ್ಲಿ ಸೂಚಿಸದೆ, ಅಪಾರ ಪ್ರೇಮಮಯಿ ವ್ಯಕ್ತಿಯನ್ನು ಚಿತ್ರಿಸುತ್ತವೆ. ತ್ಯಾಗರಾಜರು ತಮ್ಮ ‘ವಾಚಾಮಗೋಚರಮೆ’ ಎಂಬ ಕೀರ್ತನೆಯಲ್ಲಿ, ರಾಮ ಸ್ವತಃ ಹೇಗೆ ಪ್ರಾಣಿಯೊಂದನ್ನು ಕೊಲ್ಲುವುದನ್ನು ಕೈಬಿಟ್ಟ ಎಂಬುದನ್ನು ವರ್ಣಿಸುತ್ತಾರೆ. ಇಂತಹ ಕರುಣಾಸಾಗರ ರಾಮ ಅಯೋಧ್ಯೆಯಲ್ಲಿ ಒಂದು ತುಂಡು ಭೂಮಿಗಾಗಿ ನಡೆದ ರಕ್ತಪಾತ ಮತ್ತು ಸಾವುಗಳ ಕುರಿತು ಯೋಚಿಸುತ್ತಿರಲಿಲ್ಲವೇ? ಈ ಸಂದರ್ಭದಲ್ಲಿ ಕೊನೇಪಕ್ಷ ನಾವು, ಮಸೀದಿಯನ್ನು ಬೀಳಿಸಿದ್ದಕ್ಕಾಗಿ ಒಂದು ರಾಷ್ಟ್ರವಾಗಿ ಕ್ಷಮೆಯನ್ನಾದರೂ ಕೋರಲಿ ಎಂದು ಆ ರಾಮ ಆಶಿಸುತ್ತಿರಲಿಲ್ಲವೇ? ಸುಪ್ರೀಂ ಕೋರ್ಟ್ ಕೂಡ ಇದನ್ನು ‘ಕಾನೂನಿನ ನಿಯಮಗಳ ಆಘಾತಕಾರಿ ಉಲ್ಲಂಘನೆ’ ಎಂದಿದೆ.

ರಾಮ ಒಬ್ಬ ಆದರ್ಶ ರಾಜ ಕೂಡ. ‘ನಿನ್ನಂತೆ ರಾಜ್ಯಭಾರ ಮಾಡುವವರು ಯಾರಾದರೂ ಇದ್ದಾರೇನು’ ಎಂದು ಕೇಳುವ ತ್ಯಾಗರಾಜರು, ರಾಮರಾಜ್ಯದಲ್ಲಿ ಮಳೆ ಸಕಾಲಕ್ಕೆ ಆಗುತ್ತಿತ್ತು, ಜನ ಆರೋಗ್ಯವಂತರಾಗಿ ಆನಂದದಿಂದ, ಅಭಿಮಾನದಿಂದ ಬಾಳುತ್ತಿದ್ದರು ಎನ್ನುತ್ತಾರೆ. ಓರ್ವ ರಾಜನಿಗೆ, ಪ್ರಜೆಗಳ ಅಸ್ಮಿತೆ ಅಪ್ರಸ್ತುತ, ಹೀಗಾಗಿ ತ್ಯಾಗರಾಜರು ಎಂದೂ ರಾಮನ ಭಕ್ತರಿಗೆ ವಿಶೇಷ ಉಪಚಾರವನ್ನಾಗಲೀ ನಿರ್ದಿಷ್ಟ ವಿಭಾಗವನ್ನಾಗಲೀ ಉಲ್ಲೇಖಿಸುವುದಿಲ್ಲ. ಸರ್ವರೂ ಸಮಾನರು, ಸರ್ವರೂ ಏಳಿಗೆಯಾಗಬೇಕು.

ಆ ಸತ್ಯಸಂಧ ರಾಮನಿಗೆ ಇಷ್ಟೆಲ್ಲ ಆಡಂಬರದ ಕಾರ್ಯಕ್ರಮ ನಡೆಸುವಾಗ, ಸುಪ್ರೀಂ ಕೋರ್ಟಿನ ಅದೇ ತೀರ್ಪು ಇನ್ನೂ ಒಂದು ಅಂಶ ಹೇಳಿರುವುದನ್ನು ದೇಶದ ಜನತೆಗೆ ನೆನಪು ಮಾಡಿಕೊಡುವ ಯಾವ ಪ್ರಯತ್ನವನ್ನೂ ಅಂದು ಮಾಡಲಿಲ್ಲ. ‘ಅಲ್ಲಿ ಮೊದಲೇ ಇದ್ದಿರಬಹುದಾದ ಕಟ್ಟಡದ ಅವಶೇಷಗಳ ಕುರುಹುಗಳು ಇವೆ ಎಂದು ಪುರಾತತ್ವ ಇಲಾಖೆಯು ತನ್ನ ವರದಿಯಲ್ಲಿ ಹೇಳಿದೆ. ಆದರೆ ಮೊದಲಿನ ನಿರ್ಮಿತಿಯ ನಾಶದ ಕಾರಣವನ್ನು ಮತ್ತು ಮಸೀದಿ ನಿರ್ಮಾಣದ ಉದ್ದೇಶಕ್ಕಾಗಿಯೇ ಮೊದಲಿನ ನಿರ್ಮಿತಿಯನ್ನು ಕೆಡವಲಾಗಿತ್ತು ಎಂಬುದಕ್ಕೆ ಯಾವುದೇ ಪುರಾವೆಯನ್ನೂ ಒದಗಿಸಿಲ್ಲ’. ಕೋರ್ಟ್ ಇನ್ನೊಂದು ಅಂಶವನ್ನೂ ಒತ್ತಿ ಹೇಳಿದೆ.

‘ಅವಶೇಷಗಳಡಿ ಇರುವ ನಿರ್ಮಿತಿಯು 12ನೇ ಶತಮಾನಕ್ಕೆ ಸೇರಿದೆ ಎಂದು ಪುರಾತತ್ವ ಇಲಾಖೆ ವರದಿಯು ಹೇಳಿರುವುದರಿಂದ, ಆ ನಿರ್ಮಿತಿಗೂ ಮೇಲಿರುವ ಮಸೀದಿ ನಿರ್ಮಾಣಕ್ಕೂ ಸುಮಾರು ನಾಲ್ಕು ಶತಮಾನಗಳ ಅಂತರವಿದೆ. ಈ ನಡುವಿನ ಸಮಯದಲ್ಲಿ ಏನಾಯಿತು ಎಂಬುದನ್ನು ವಿವರಿಸಲು ಯಾವುದೇ ಪುರಾವೆಗಳಿಲ್ಲ’.


ವಿದ್ವಾನ್ ಟಿ.ಎಂ.ಕೃಷ್ಣ

ತ್ಯಾಗರಾಜರು ರಾಮನ ಭಕ್ತಿಯಲ್ಲಿಯೇ ಮುಳುಗಿದ್ದರು, ಪರವಶರಾಗಿದ್ದರು. ಬೇರಾವ ದೇವರೂ ಅವರ ಈ ‘ಇಷ್ಟ ದೇವತೆ’ಯ ಸನಿಹ ಬರಲು ಎಂದಿಗೂ ಸಾಧ್ಯವಿರಲಿಲ್ಲ. ಅವರು ತಮ್ಮ ಒಂದು ಕೀರ್ತನೆಯನ್ನು ಆರಂಭಿಸುವುದೇ ‘ರಾಮಾ ನೀ ಸಮಾನಮೆವರು’ (‘ರಾಮಾ... ನಿನಗೆ ಸರಿಸಮಾನರು ಯಾರು?’) ಎಂಬ ಸಾಲಿನಿಂದ. ಆದರೆ ಹಾಗೆಂದು ಅವರು ಬೇರಾವುದೇ ದೇವತೆಗಳನ್ನೂ ತೆಗಳಲಿಲ್ಲ. ಅಷ್ಟೇಕೆ, ಬೇರೆಯವರ ನಂಬಿಕೆಗಳ ಕುರಿತು ವಾಗ್ವಾದ ಮಾಡುವುದರಲ್ಲಿ ಏನೂ ಸುಖವಿಲ್ಲ ಎಂದರು. ಅವರು ತಮ್ಮ ‘ಸುಖಿ ಎವ್ವರೋ ರಾಮ ನಾಮ’ ಕೃತಿಯಲ್ಲಿ ‘ಸತ್ಯಮು ತಪ್ಪಕಾ ಸಕಲಲೋಕುಲಕು, ಭೃತ್ಯಡೈ ದೈವ ಭೇದಮು ಲೇಕ’ ಎನ್ನುತ್ತಾರೆ. ‘ಯಾವುದೇ ಭೇದಭಾವವಿಲ್ಲದೇ ತಾರತಮ್ಯವಿಲ್ಲದೇ ಭಕ್ತಿಯಿಂದ ನಡೆದುಕೊಳ್ಳುವವರಿಗೆ ಸಂತೋಷ ದೊರೆಯುವುದು’ ಎಂದರವರು.

ತ್ಯಾಗರಾಜರ ರಾಮ ‘ಧರ್ಮಾತ್ಮ’ನಾಗಿದ್ದವನು, ಸಕಲರಿಗೂ ಒಳಿತು ಬಯಸುವವನು. ಅವರು ‘ಉಂಡೇದಿ ರಾಮುಡೊಕಡು’ ಕೃತಿಯಲ್ಲಿ ರಾಮನನ್ನು ಸ್ತುತಿಸುತ್ತ ಹೇಳುತ್ತಾರೆ ‘ತಾಮಸಾದಿ ಗುಣರಹಿತುಡು, ಧರ್ಮಾತ್ಮಮುಡು ಸರ್ವಸಮುಡು’. ತಾಮಸಾದಿ ಗುಣಗಳಿಲ್ಲದ ಧರ್ಮಾತ್ಮನಾಗಿದ್ದ ಆ ರಾಮ. ತ್ಯಾಗರಾಜರು ಚಿತ್ರಿಸಿದ್ದು ಆ ಧರ್ಮಾತ್ಮನನ್ನು, ಬಿಲ್ಲುಬಾಣ ಹೆದೆಯೇರಿಸಿದ ಇಂದಿನ ರಾಮನನ್ನು ಅಲ್ಲ.

ಮುಸ್ಲಿಮರು ಮಾತ್ರವಲ್ಲದೆ, ಇನ್ನಿತರ ಕೆಲವು ವರ್ಗಗಳಿಗೂ ತಮ್ಮನ್ನು ಹೊರಗಿಡಲಾಗಿದೆ ಎಂಬ ಭಾವ ಒಳಗೊಳಗೇ ಅಭದ್ರತೆ ಮೂಡಿಸಿದೆ ಎಂಬುದು ಪೂರ್ಣ ಅರಿವಿದ್ದಾಗಲೂ ಅಹಂಕಾರ, ಅಬ್ಬರದ ಪ್ರದರ್ಶನವಾದ ಭೂಮಿ ಪೂಜೆಯಲ್ಲಿ ಏನಾದರೂ ‘ಧರ್ಮ’ವಿತ್ತೇ? ಎಲ್ಲರನ್ನೂ ಬಿಗಿದಪ್ಪಿ ನಡೆಯಲು ಈ ಸನ್ನಿವೇಶವನ್ನು ಬಳಸಬಹುದಾಗಿತ್ತೇನೋ. ಆದರೆ ಬರಿಯ ಜನ್ಮಭೂಮಿ ವಿಚಾರವನ್ನು ರುಜುವಾತುಪಡಿಸಲು ನಿರ್ಧರಿಸಲಾಯಿತು. ಕುಟಿಲನೀತಿ, ಕುಯುಕ್ತಿಗಳೇ ಮೇಲುಗೈಯಾಗಿರುವಾಗ, ಈ ಅಯೋಧ್ಯೆಯು ಎಳ್ಳಷ್ಟಾದರೂ ಆ ರಾಮರಾಜ್ಯವನ್ನು ಹೋಲುವುದೇ? ತ್ಯಾಗರಾಜರು ತಮ್ಮ ಹಲವಾರು ರಚನೆಗಳಲ್ಲಿ ಹೇಳುತ್ತಾರೆ, ‘ವ್ಯಕ್ತಿಯೊಬ್ಬ ತನ್ನ ಮನಸ್ಸನ್ನು ನಿಯಂತ್ರಣದಲ್ಲಿ ಇರಿಸಿಕೊಳ್ಳದಿದ್ದರೆ, ಆತ ಅಹಂಕಾರಿಯಾಗಿದ್ದರೆ, ಪವಿತ್ರ ನದಿಯಲ್ಲಿ ಮುಳುಗೆದ್ದು, ಪೂಜೆ ಮಾಡುವುದರಿಂದ ಪ್ರಯೋಜನವೇನು?’

ತ್ಯಾಗರಾಜರು ತಮ್ಮ ರಾಮನನ್ನು ಅರಸುತ್ತ ಹಳ್ಳಿಗಳು, ಪಟ್ಟಣಗಳಲ್ಲಿ ಅಲೆದಾಡಿದರು. ನೂರಾರು ದೇಗುಲಗಳಿಗೆ ಹೋದರು. ಇಷ್ಟಾಗಿಯೂ ಅವರಿಗೆ ತಮ್ಮೊಳಗಿನ ರಾಮನನ್ನು ಕಂಡುಕೊಳ್ಳುವುದರ ಅಗತ್ಯದ ಬಗ್ಗೆಯೂ ಪೂರ್ಣವಾಗಿ ಅರಿವಿತ್ತು. ಅವರು ಹೋದ
ದೇವಸ್ಥಾನಗಳಲ್ಲೆಲ್ಲ ಆಯಾ ದೇವ ದೇವತೆಯರನ್ನು ಕುರಿತು ಸ್ತುತಿಸಿ ಹಾಡಿದರು. ಆದರೆ, ನಮ್ಮೊಳಗಿನ ಶುದ್ಧತೆಯನ್ನು ಅನುಭವಿಸಲಾಗದಿದ್ದರೆ, ಅದನ್ನು ಮೈಗೂಡಿಸಿಕೊಳ್ಳದಿದ್ದರೆ, ಇದೆಲ್ಲವೂ ಅರ್ಥಹೀನ ಎಂದರವರು. ಆಗ ಅಯೋಧ್ಯೆಯೂ ಅಮುಖ್ಯವಾಗುತ್ತದೆ.

ಆ ಮಹಾನ್ ರಾಮಭಕ್ತ ತ್ಯಾಗರಾಜರು ಹೇಳಿದರು- ‘ನಡಚಿ ನಡಚಿ ಜೂಚೇರಯೋಧ್ಯಾ ನಗರಮು ಕಾನರೇ...’ ಅವರು ಅಯೋಧ್ಯೆಯವರೆಗೆ ನಡೆದೇ ನಡೆದರು, ಆದರೂ ಅವನನ್ನು ಕಾಣಲಿಲ್ಲ. ಈಗ ನಮ್ಮ ಸ್ಥಿತಿಯೂ ಹಾಗೆಯೇ ಆಗಿದೆ.  

ಲೇಖಕ: ಕರ್ನಾಟಕ ಶಾಸ್ತ್ರೀಯ ಸಂಗೀತದ ಗಾಯಕ ಮತ್ತು ಚಿಂತಕ

(ಲೇಖನದ ಇಂಗ್ಲಿಷ್‌ ಅವತರಣಿಕೆ ‘ದಿ ಇಂಡಿಯನ್‌ ಎಕ್ಸ್‌ಪ್ರೆಸ್‌’ನಲ್ಲಿ ಪ್ರಕಟವಾಗಿದೆ)

 

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು