ಭಾನುವಾರ, ಏಪ್ರಿಲ್ 5, 2020
19 °C
ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿರುವ ವಿಕೃತ ಭಾಷೆಯ ಪರಿಣಾಮದ ಬಗ್ಗೆ ಚಿಂತಿಸಬೇಕಿದೆ

ಕೃಷ್ಣಪ್ರಸಾದ್ ಬರಹ | ಕನ್ನಡ ಹರಾಜೋತ್ಸವ: ದಿನಾ ಆಚರಣೆ

ಕೃಷ್ಣ ಪ್ರಸಾದ್ Updated:

ಅಕ್ಷರ ಗಾತ್ರ : | |

Prajavani

ಹೊರದೇಶಗಳ ಅಥವಾ ಬೇರೆ ರಾಜ್ಯಗಳ ಜನರ ಜೊತೆ ತಮ್ಮ ಭಾಷೆಯ ಬಗ್ಗೆ ಬೆಳಕು ಚೆಲ್ಲುವ ಅವಕಾಶ ಸಿಕ್ಕಿದಾಗ ಪ್ರತಿಯೊಬ್ಬರ ಧ್ವನಿಯೂ ಥಟ್ಟನೆ ಬದಲಾಗುತ್ತದೆ, ಹೆಮ್ಮೆ ಮೂಡುತ್ತದೆ. ಒಂದು ರೀತಿಯಲ್ಲಿ ಇದು ಸಹಜ, ಇನ್ನೊಂದು ರೀತಿಯಲ್ಲಿ ವಿಚಿತ್ರ. ಆದರೆ, ಈ ವಿಚಾರದಲ್ಲಿ ಕನ್ನಡಿಗರದು ಇನ್ನೂ ಒಂದು ಹಂತ ಮೇಲೆ. ಹಾಗೋ ಹೀಗೋ ಕನ್ನಡದ ಹಿರಿಮೆಯನ್ನು ನಾವು ಇಂಗ್ಲಿಷ್- ಹಿಂದಿ ಬಿಡಿ; ತಮಿಳು, ತೆಲುಗು, ಮಲಯಾಳಂಗಿಂತಲೂ ಎತ್ತರವಾಗಿ ಇರುವಂತೆ ಬಿಂಬಿಸುತ್ತೇವೆ. ನಮ್ಮ ಭಾಷೆಯ ದೀರ್ಘ ಇತಿಹಾಸ, ಶಾಸ್ತ್ರೀಯ ಸಂಗೀತದಲ್ಲಿ ಅದರ ಸ್ಥಾನ, ನಮ್ಮ ಕವಿಗಳು, ಬರಹಗಾರರ ಅದ್ಭುತ ಕೃತಿಗಳು, ಅವರಿಗೆ ದಕ್ಕಿರುವ ಡಜನ್‌ಗಟ್ಟಲೆ ಪ್ರಶಸ್ತಿಗಳ ಬಗ್ಗೆ ಕೊಚ್ಚಿಕೊಳ್ಳುತ್ತೇವೆ. ಆದರೆ, ಪ್ರಸ್ತುತ ಕರ್ನಾಟಕದಲ್ಲಿ ಚಾಲ್ತಿಯಲ್ಲಿರುವ ಭಾಷೆಯನ್ನು ಕೇಳಿದಾಗ, ಇದು ಅದೇ ಭವ್ಯ ಕನ್ನಡದ ಪರಂಪರೆ ಇರುವ ಭಾಷೆ ಎಂದು ಎಷ್ಟು ಜನರಿಗೆ ಅನಿಸುತ್ತದೆ?


ಕೃಷ್ಣಪ್ರಸಾದ್

ಕನ್ನಡಾಂಬೆಯ ಆಶೀರ್ವಾದವೋ ಅಥವಾ ಅವಳ ಅದೃಷ್ಟವೋ, ಈ ನೆಲದ ಜನಸಾಮಾನ್ಯರ ನಾಲಿಗೆಯ ಮೇಲೆ ಕನ್ನಡ ಅಚ್ಚುಕಟ್ಟಾಗಿ ಕೂತಿದೆ. ಲಕ್ಷಣವಾಗಿಯೂ ಇದೆ. ಜಯಂತ್ ಕಾಯ್ಕಿಣಿ ಅವರ ಪ್ರಕಾರ, ರಾಜಧಾನಿ ಬೆಂಗಳೂರನ್ನು ಬಿಟ್ಟು ಹೊರಗೆ ಹೋದಾಗ, ಕರ್ನಾಟಕ ದಲ್ಲಿ ಕನ್ನಡ ಎಷ್ಟು ಸದೃಢವಾಗಿದೆ ಎಂಬುದು ಸ್ಪಷ್ಟವಾಗುತ್ತದೆ. ಇರಲಿ, ಕನ್ನಡದ ಅಳಿವು-ಉಳಿವು ಇಲ್ಲಿನ ಪ್ರಶ್ನೆ ಅಲ್ಲ. ಅದು ಹಳೆ ಕಥೆ. ನಾವು ಈಗ ಚಿಂತಿಸಬೇಕಿರುವುದು ನಮ್ಮ ಸಾರ್ವಜನಿಕ ವಲಯದಲ್ಲಿ– ಯುರ್ಗೆನ್ ಹಬೆರ್ಮಾಸ್ ಮಂಡಿಸಿದ ‘ಪಬ್ಲಿಕ್ sphere’ದಲ್ಲಿ– ಕೇಳಿಬರುತ್ತಿರುವ ವಿಕೃತ ಭಾಷೆ ಮತ್ತು ಅದರಿಂದ ನಮ್ಮ ಮಾತಿನ ಮೇಲೆ, ಮನಸ್ಸಿನ ಮೇಲೆ, ಮಕ್ಕಳ ಮೇಲೆ, ಸಮಾಜದ ಮೇಲೆ, ಪ್ರಜಾಪ್ರಭುತ್ವದ ಮೇಲೆ, ರಾಜ್ಯದ ಪ್ರತಿಷ್ಠೆ ಮೇಲೆ ಆಗುತ್ತಿರುವ ಪರಿಣಾಮ ಕುರಿತು.

ನಮ್ಮ ದೋಸೆಯಲ್ಲಿ ಎಷ್ಟೇ ತೂತುಗಳು ಕಾಣಿಸಿದರೂ ಹೊರಗಿನ ಪ್ರಪಂಚಕ್ಕೆ ಕನ್ನಡಿಗರ ಬಗ್ಗೆ ಅಸಾಧಾರಣವಾದ ಗೌರವ ಇದೆ. ಕನ್ನಡಿಗರು ಸಭ್ಯರು, ನಾಗರಿಕರು, ಸುಸಂಸ್ಕೃತರು, ಸೂಕ್ಷ್ಮ ಜನ, ಯಾರನ್ನೂ ವಿನಾಕಾರಣ ಎದುರುಹಾಕಿಕೊಳ್ಳದೆ ಎಲ್ಲರ ಜೊತೆ ಹೊಂದಿಕೊಂಡು ಹೋಗುವ ಮೃದು ಸ್ವಭಾವದವರು ಎಂಬೆಲ್ಲ ಭಾವನೆಗಳಿವೆ. ‘ಡೀಸೆಂಟ್’ ಎಂಬ ವಿಶೇಷಣವೂ ಕೇಳಿಬರುತ್ತದೆ. ಈ ಹಣೆಪಟ್ಟಿ ಎಲ್ಲಾ ಕನ್ನಡಿಗರಿಗೆ ಅನ್ವಯವಾಗದಿದ್ದರೂ ಇದು ನಮಗೆ ಧರಿಸಿರುವ ಕಿರೀಟ. ಇದರಿಂದ ಯಾವುದೇ ದೊಡ್ಡ ಅನುಕೂಲ ಆಗದಿದ್ದರೂ ಅನಾಹುತವಂತೂ ಆಗಿಲ್ಲ. ಆದರೆ, ಇತ್ತೀಚೆಗೆ ನಮ್ಮ ನಾಡಿನ ಪ್ರಭಾವಶಾಲಿ ವ್ಯಕ್ತಿಗಳು ಬಳಕೆ ಮಾಡುತ್ತಿರುವ ಕೀಳು ಮಟ್ಟದ ಪ್ರಚೋದನಾತ್ಮಕ ಭಾಷೆಯು ಕನ್ನಡಿಗರ ಖ್ಯಾತಿಯನ್ನು ನುಚ್ಚುನೂರು ಮಾಡಿ, ರಾಷ್ಟ್ರದಾದ್ಯಂತ ಹರಾಜು ಹಾಕುತ್ತಿದೆ. ಶಬ್ದವನ್ನು ಚಾಲೂ ಮಾಡದೆ ಟಿ.ವಿ. ನೋಡುವುದರಲ್ಲಿ ಮಾನಸಿಕ ಆರೋಗ್ಯಕ್ಕೆ ಲಾಭ ನಿಶ್ಚಿತ.

‘ವಿಶ್ವಮಾನವ’ ಸಂದೇಶ ಕೊಟ್ಟ ಕುವೆಂಪು- ಕಾರಂತರ ನಾಡನ್ನು ಸ್ವತಃ ರಾಜ್ಯೋತ್ಸವ ಆಚರಿಸುವವರೇ ಹೇಗೆ ಹಾಡಹಗಲೇ ‘ಪಂಚರ್’ ಮಾಡಿ ಮೆರೆಯುತ್ತಿದ್ದಾರೆ ಮತ್ತು ಅವರ ಮನಃಸ್ಥಿತಿ ಎಂತಹುದು ಎಂಬುದು, ಇತ್ತೀಚಿನ ಕೆಲವು ಪುರಾವೆಗಳನ್ನು ಮುಂದಿಟ್ಟು ಕನ್ನಡದ ಈ ದುಷ್ಪ್ರಯೋಗವನ್ನು ಮನೋವೈದ್ಯರ ವಿಶ್ಲೇಷಣೆಗೆ ಒಳಪಡಿಸಿದರೆ ಮನವರಿಕೆಯಾದೀತು.

* ಕನ್ನಡ, ಸಂಸ್ಕೃತಿ ಮತ್ತು ಕಾನೂನು ಮೂರನ್ನೂ ಬಿಟ್ಟವರು ‘ಸಂವಿಧಾನಕ್ಕೆ ಟೈಂ ಬಾಂಬ್ ಫಿಕ್ಸ್’ ಮಾಡಿದ್ದೇವೆ ಎಂದು ಗಡ್ಡ-ಮೀಸೆ ಸವರಿಕೊಳ್ಳುವುದು.

* ವಯಸ್ಸಿಗಾಗಲೀ ಮನಸ್ಸಿಗಾಗಲೀ ಮರ್ಯಾದೆ ಕೊಡದೆ, ಶತಾಯುಷಿ ಮೇಷ್ಟ್ರನ್ನು ‘ನಕಲಿ ಸ್ವಾತಂತ್ರ್ಯ ಹೋರಾಟಗಾರ’ ಎಂದು ಮಾನಹಾನಿ ಮಾಡುವುದು.

* ಕೋಮುಗಲಭೆಯಲ್ಲಿ ಸಿಲುಕಿ ನರಳುತ್ತಿರುವ ಬಡವರಿಗೆ ಸಾಂತ್ವನ ಹೇಳುವುದು ಬಿಟ್ಟು ‘ಈಗ ನಿಮಗೆ ಪಾಠ ಶುರು’ ಎಂದು ಧಮಕಿ ಹಾಕುವುದು.

* ಹೆಂಗಸರ ಎದುರೇ ವಿರೋಧಿಗಳನ್ನು ಬೊ* ಮಕ್ಕಳು, ಸೂ* ಮಕ್ಕಳು, ಮು* ಮಕ್ಕಳು, ಅಪ್ಪ-ಅಮ್ಮ ಗೊತ್ತಿಲದ ಲದ್ದಿಜೀವಿಗಳು ಎಂದು ಕರೆಯುವುದು.

* ವೇದ- ಪುರಾಣದಲ್ಲಿ ಶ್ವಾನಕ್ಕೆ ನೀಡಲಾಗಿರುವ ಮಹತ್ವವನ್ನು ನಿರ್ಲಕ್ಷಿಸಿ, ಇವರಿಗೆ ಹುಟ್ಟಿದ ನಾಯಿ, ಅವರಿಗೆ ಹುಟ್ಟಿದ ನಾಯಿ, ಕಂತ್ರಿನಾಯಿ, ಹುಚ್ಚುನಾಯಿ ಎಂದೆಲ್ಲ ಬೊಗಳುವುದು.

* ‘ಇಷ್ಟು ದಿವಸ ಇವಳು ಎಲ್ಲಿ ಮಲಕ್ಕೊಂಡಿದ್ಲು’ ಎಂದು ಒಬ್ಬ ಮಹಿಳೆಯನ್ನು ಕೇಳುವುದು, ಇನ್ನೊಬ್ಬರನ್ನು ‘ಸ್ಲೀಪಿಂಗ್ ಪಾರ್ಟ್‌ನರ್‌’ ಎಂದು ಕರೆಯುವುದು.

ಇಂಥ ಅವಹೇಳನಕಾರಿ ಪದಪ್ರಯೋಗಗಳು ಬರೀ ಒಂದು ಪಕ್ಷ ಅಥವಾ ಸಿದ್ಧಾಂತಕ್ಕಾಗಲೀ ಅನನುಭವಿಗಳಿಗಾಗಲೀ ಸೀಮಿತವಲ್ಲ. ಜನರ ಸೇವೆಯೇ ಜನಾರ್ದನನ ಸೇವೆ ಎನ್ನುವ ದೇವಸ್ಥಾನದ ಮಾಜಿ ಪೂಜಾರಿಯೊಬ್ಬರಿಗೆ ಭಾಷಾ ವೈರಸ್ ಆಗಾಗ ತಟ್ಟುತ್ತಿರುತ್ತದೆ. ಇನ್ನೊಬ್ಬರು ಮಾಜಿ ಮುಖ್ಯಮಂತ್ರಿ. ಮಹಾರಾಜನಾಗಲೀ ಯಮರಾಜನಾಗಲೀ ಎಲ್ಲರನ್ನೂ ಸದನದಲ್ಲಿ ಏಕವಚನದಲ್ಲಿ ಸಂಬೋಧಿಸುವುದೇ ಪ್ರಜಾಪ್ರಭುತ್ವದ ದೊಡ್ಡ ಪ್ಲಸ್ ಪಾಯಿಂಟ್ ಎನ್ನುವ ರೀತಿಯಲ್ಲಿ ಅವರು ಮಾತನಾಡುತ್ತಾರೆ. ಇನ್ನು ಕೆಲವು ಮಾಧ್ಯಮದವರು ಪ್ರತಿ ರಾತ್ರಿ ಪೇಸ್ಟು-ಪುಡಿ ಬಿಟ್ಟು ಚರಂಡಿ ನೀರಲ್ಲಿ ಬಾಯಿ ತೊಳೆದವರ ಲಕ್ಷಣ ತೋರಿಸುತ್ತಿದ್ದಾರೆ. ಇವೆಲ್ಲ ಹೇಗೆ ಆಲ್‌ರೈಟ್‌?

ಇದರಲ್ಲಿ ಹೊಸದೇನಿದೆ ಎಂದು ಅನಿಸಬಹುದು. ಈ ಹಿಂದೆ ಕನ್ನಡವನ್ನು ತಿರುಚಿ, ತಮ್ಮ ಕೀರ್ತಿಯನ್ನು ಹೆಚ್ಚಿಸಿಕೊಂಡವರ ಬಗ್ಗೆ ಬೇಕಾದಷ್ಟು ಉದಾಹರಣೆಗಳನ್ನು ನೀಡಬಹುದು ಎಂದು ವಾದಿಸಬಹುದು. ನಿಜ, ಸಾರ್ವಜನಿಕ ವಲಯದಲ್ಲಿ ಒರಟು ಭಾಷೆಯು ಕೇವಲ ನಮ್ಮ ರಾಜ್ಯದಲ್ಲಿ ಅಥವಾ ನಮ್ಮ ದೇಶದಲ್ಲಷ್ಟೇ ಕೇಳಿಬರುತ್ತಿಲ್ಲ. ಇದೊಂದು ಅಂತರರಾಷ್ಟ್ರೀಯ ವಿದ್ಯಮಾನ. ಅಮೆರಿಕ, ಫಿಲಿಪ್ಪೀನ್ಸ್‌, ಬ್ರೆಜಿಲ್, ಟರ್ಕಿ ಸೇರಿದಂತೆ ಪ್ರಪಂಚದಾದ್ಯಂತ ಎಲ್ಲೆಲ್ಲಿ ಬಲಪಂಥೀಯ ಪಕ್ಷಗಳ ಪ್ರಭಾವ ಹೆಚ್ಚಾಗಿದೆಯೋ ಅಲ್ಲಿನ ರಾಜಕೀಯ ಶಬ್ದಕೋಶಗಳಲ್ಲಿ ಸಮಾನಾಂತರವಾಗಿ ದೊಡ್ಡ ಪರಿವರ್ತನೆ ಆಗಿದೆ, ಆಗುತ್ತಿದೆ. ಇದಕ್ಕೆ ಕೋಪ, ದ್ವೇಷ, ಆಕ್ರೋಶ ಮತ್ತು ಹಿಂಸೆಯ ತುಪ್ಪವನ್ನು ಸಾಮಾಜಿಕ ಜಾಲತಾಣ ಸುರಿಯುತ್ತಿದೆ.

ವ್ಯತ್ಯಾಸವೆಂದರೆ, ನಮ್ಮಲ್ಲಿ ಭಾಷೆಯ ಸುತ್ತ ನಮ್ಮ ರಾಜ್ಯದ ಸಂಸ್ಕೃತಿ ಒಗ್ಗೂಡಿರುವುದು. ಯಾವುದು ಒಂದು ಕಾಲದಲ್ಲಿ ಅಪವಾದವಾಗಿತ್ತೋ ಇಂದು ಅದು ಕೃಷ್ಣಾ- ಕಾವೇರಿ ಪುತ್ರರ ಬಾಯಲ್ಲಿ ಮಾಮೂಲಿ. ತಲೆಗೆ ಬಂದಿದ್ದನ್ನು ಉಡಾಫೆಯಿಂದ ಮಾತನಾಡುವುದು ಇಂದಿನ ರಾಜಕಾರಣಿಯ ಪ್ರಮುಖ ವೈಶಿಷ್ಟ್ಯ. ಇಂತಹ ಮನೋವಿಕಾರದ ಬಗ್ಗೆ ಯಾರು ಹಿಂದೆ ನಾಚಿಕೆ, ಮುಜುಗರ ಪಟ್ಟುಕೊಳ್ಳುತ್ತಿದ್ದರೋ ಅವರು ಇಂದು ಅಂತಹುದೇ ವಿಷಯಗಳನ್ನು ಹೆಮ್ಮೆಯಿಂದ ನಿರಾಳವಾಗಿ ಟ್ವೀಟ್‌ ಮೂಲಕ ಹಂಚುತ್ತಿದ್ದಾರೆ. ಕರ್ನಾಟಕದಿಂದ ಹರಡುತ್ತಿರುವ ಇಂತಹ ‘ಹೊಗೆ’ ಇಲ್ಲಿನ ಪರಿಸರ ಮಾಲಿನ್ಯದ ಸಂಕೇತವಾಗಿದೆ. ಇದರ ಪರಿಣಾಮದಿಂದ ಗಾಬರಿ ಆಗದಿದ್ದರೆ ಅದೇ ನಾಡಿನ ದೌರ್ಭಾಗ್ಯ.

1946ರಲ್ಲಿ ಜಾರ್ಜ್ ಆರ್ವೆಲ್, ರಾಜಕೀಯ ಮತ್ತು ಭಾಷೆಯ ಸಂಬಂಧದ ಮೇಲೆ ಮಹತ್ವವಾದ ಪ್ರಬಂಧ ಬರೆದರು. ಅದರ ಸಾರಾಂಶ: ಕೆಟ್ಟ ಭಾಷೆಯಿಂದ ಕಳಪೆ ವಿಚಾರ ಹುಟ್ಟುತ್ತದೆ; ಕೆಟ್ಟ ವಿಚಾರದಿಂದ ಭಾಷೆ ಕಳಪೆಯಾಗುತ್ತದೆ. ಇಂದಿನ ಕಟು ಕನ್ನಡವು ನಮ್ಮ ಸಮಾಜದಲ್ಲಿರುವ ಧ್ರುವೀಕರಣ ಮತ್ತು ಒಡಕನ್ನು ಎತ್ತಿ ಹಿಡಿಯುತ್ತಿದೆ. ಇದನ್ನು ಮೌನವಾಗಿ ಕೇಳಿ, ಪ್ರಶ್ನಿಸದೆ, ಚಪ್ಪಾಳೆ ತಟ್ಟಿ ಫಾರ್ವರ್ಡ್ ಮಾಡುವವರು ನಾಡಿಗೆ ದ್ರೋಹ ಬಗೆಯುತ್ತಿದ್ದಾರೆ. ಸಾರ್ವಜನಿಕ ವಲಯದಲ್ಲಿ ಸಭ್ಯತೆ ಮತ್ತು ಸೂಕ್ಷ್ಮತೆ ಕುಸಿಯಲು ನಾವೇ ಕೈ ಜೋಡಿಸಿದರೆ ನಮ್ಮ ಸಂಸ್ಕೃತಿಗೆ ಏನು ಭವಿಷ್ಯವಿರುತ್ತದೆ?

ಬಾಯಿ ತೆಗೆದು, ಪದ ಜೋಡಿಸಿ ಮಾತನಾಡಿದಾಗ, ಮುಖದ ಕಿಟಕಿಯನ್ನು ತೆರೆದು ನಮ್ಮ ಮನಸ್ಸಿನೊಳಗೆ ಬೇರೆಯವರನ್ನು ಬರಮಾಡಿಕೊಂಡ ಹಾಗೆ. ಕರ್ನಾಟಕ ದಿಂದ ಕೇಳಿಬರುತ್ತಿರುವ ವಾಕ್ಯಗಳು ಕನ್ನಡಿಗರ ಮನಃ ಸ್ಥಿತಿಯ ಬಗ್ಗೆ ಹೊರಗಿನವರಿಗೆ ಏನನ್ನು ಸೂಚಿಸುತ್ತಿರಬಹುದು? ಕೇವಲ 35 ವರ್ಷಗಳ ಹಿಂದೆ, ನಮ್ಮ ರಾಜ್ಯವು ‘ಮೌಲ್ಯಾಧಾರಿತ ರಾಜಕೀಯ’ ಎಂಬ ಹೊಸ ಪರಿಕಲ್ಪನೆ ಯನ್ನು ದೇಶಕ್ಕೆ ನೀಡಿತ್ತು. ಆ ಎತ್ತರದಿಂದ ಹೇಗೆ ಈ ಪಾತಾಳಕ್ಕೆ ಜಾರಿ ಬಿದ್ದೆವು ಎಂದು ಅರ್ಥಮಾಡಿಕೊಳ್ಳಲು ಇಂದು ಕೇಳಿಬರುತ್ತಿರುವ ಅಸಹ್ಯಕರ ಭಾಷೆಯೇ ಸಾಕು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು