ಶನಿವಾರ, ಮೇ 15, 2021
25 °C
ಪ್ರತಿರೋಧವನ್ನು ಪ್ರಜಾತಂತ್ರದ ತಿರುಳು ಎಂದು ಭಾವಿಸಿದ್ದವರು ಇವರು

ವಿಶ್ಲೇಷಣೆ | ಲೋಹಿಯಾ ಭಾವಿಸಿದ ಪ್ರಜಾತಂತ್ರ

ರಾಜಾರಾಮ ತೋಳ್ಪಾಡಿ/ ನಿತ್ಯಾನಂದ ಬಿ. ಶೆಟ್ಟಿ Updated:

ಅಕ್ಷರ ಗಾತ್ರ : | |

ಆಧುನಿಕ ಭಾರತದ ರಾಜಕಾರಣದಲ್ಲಿ ವಿಶಿಷ್ಟವಾದ ಚಿಂತನಶೀಲತೆ ಮತ್ತು ಕ್ರಿಯಾಶೀಲತೆಗಳನ್ನು ಅಪರೂಪದ ಹದದಲ್ಲಿ ತಮ್ಮ ವ್ಯಕ್ತಿತ್ವದೊಳಗೆ ರೂಢಿಸಿಕೊಂಡ ಕೆಲವೇ ಕೆಲವು ಮುತ್ಸದ್ದಿ ನಾಯಕರಲ್ಲಿ ರಾಮಮನೋಹರ ಲೋಹಿಯಾ ಅವರೂ ಒಬ್ಬರು. ತಮ್ಮ ಚಿಂತನಶೀಲತೆಯ ಮುಖ್ಯ ಭಾಗವಾಗಿ ಲೋಹಿಯಾ, ಸಮಾಜವಾದದ ತಾತ್ವಿಕತೆಯನ್ನು ಅದರ ಐರೋಪ್ಯ ಕೇಂದ್ರೀಯತೆಯಿಂದ ಬೇರ್ಪಡಿಸಿ, ವಸಾಹತು ಸಮಾಜಗಳ ಸ್ವಾತಂತ್ರ್ಯದ ಅಭಿವ್ಯಕ್ತಿಯ ಭಾಗವಾಗಿಸಲು ಪ್ರಯತ್ನ ನಡೆಸಿದರು. ಈ ಪ್ರಕ್ರಿಯೆಯನ್ನು ಅಧ್ಯಯನ ಮಾಡಿದ ಚಿಂತಕರು ಲೋಹಿಯಾರನ್ನು ಭಾರತೀಯ ಸಮಾಜವಾದದ ಪ್ರಮುಖ ಪ್ರತಿಪಾದಕರೆಂದು ಪರಿಗಣಿಸುತ್ತಾರೆ.

ಲೋಹಿಯಾರ ರಾಜಕೀಯ ತತ್ವಜ್ಞಾನದಲ್ಲಿ ಸಮಾಜವಾದದ ಆಶಯವು ಅತ್ಯಂತ ನಡುವಿನದ್ದಾದರೂ ಪ್ರಖರವಾದ ಪ್ರಜಾತಂತ್ರದ ಕಲ್ಪನೆಯೂ ಅವರ ರಾಜಕೀಯ ಚಿಂತನೆಯ ಅವಿಭಾಜ್ಯ ಭಾಗವಾಗಿದೆ. ಈ ಮಾತಿನ ಅರ್ಥ, ಲೋಹಿಯಾರ ಸಮಾಜವಾದ ಮತ್ತು ಅವರ ಪ್ರಜಾತಂತ್ರವು ಪ್ರತ್ಯೇಕವಾದ ಕಲ್ಪನೆಗಳೆಂದು ಅಲ್ಲ. ಲೋಹಿಯಾರ ಸಮಾಜವಾದದ ಚಿಂತನೆಯು ಆಳವಾದ ಪ್ರಜಾತಾಂತ್ರಿಕ ಆಕಾಂಕ್ಷೆಗಳನ್ನು ಪ್ರತಿನಿಧಿಸಿದರೆ, ಅವರ ಪ್ರಜಾತಂತ್ರದ ಆಲೋಚನೆಯು ಮೂಲತಃ ಸಮಾನತೆಯ ಕಾಳಜಿಗಳನ್ನು ಪ್ರತಿಬಿಂಬಿಸುತ್ತದೆ.

ಇಂದು (ಮಾರ್ಚ್ 23) ಲೋಹಿಯಾರ ಜನ್ಮದಿನ. ಇಂದಿಗೆ ಅವರು ಹುಟ್ಟಿ 110 ವರ್ಷ
ಗಳಾಗುತ್ತವೆ. ಈ ಕಾಲವು ಅವರನ್ನು ನೆನಪಿಸಿಕೊಳ್ಳು ವುದಕ್ಕೆ ಅತ್ಯಂತ ಪ್ರಶಸ್ತವಾದುದು. ಯಾವ ಪ್ರಜಾತಂತ್ರದ ಕುರಿತು ಲೋಹಿಯಾ ಅತ್ಯಂತ ಕಕ್ಕುಲಾತಿಯಿಂದ ಚಿಂತನೆ ನಡೆಸಿದರೋ ಅಂತಹ ಪ್ರಜಾತಂತ್ರ ಇಂದು ನಮ್ಮ ದೇಶದಲ್ಲಿ ಮಾತ್ರವಲ್ಲ, ಇಡೀ ಜಗತ್ತಿನಲ್ಲಿ ಅತ್ಯಂತ ಕಷ್ಟದ ದಿನಗಳನ್ನು ಎದುರಿಸುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರಜಾತಂತ್ರದ ಕುರಿತ ಲೋಹಿಯಾರ ಚಿಂತನೆಯ ಕೆಲವು ಮುಖ್ಯಾಂಶಗಳನ್ನು ಇಲ್ಲಿ ಮುಂದಿಡುತ್ತಿದ್ದೇವೆ.

ಭಾರತದ ರಾಷ್ಟ್ರೀಯ ನಾಯಕತ್ವವು ಪ್ರಜಾತಂತ್ರದ ತಾತ್ವಿಕ ಆಯಾಮಗಳ ಕುರಿತು ದೊಡ್ಡಮಟ್ಟದ ಸಂವೇದನಾಶೀಲತೆಯನ್ನು ತೋರಿಸದೇ ಇದ್ದ ಕಾಲಘಟ್ಟದಲ್ಲಿ, ಲೋಹಿಯಾ ಅವರು ಪ್ರಜಾತಂತ್ರದ ಎಲ್ಲಾ ತಾತ್ವಿಕ ಹಾಗೂ ಪ್ರಾಯೋಗಿಕ ಮಗ್ಗುಲುಗಳ ಕುರಿತು ವಿಶಿಷ್ಟವಾದ ಸಂಕೀರ್ಣತೆಯಲ್ಲಿ ಚಿಂತಿಸಿದರು. ಭಾರತದ ಸ್ವಾತಂತ್ರ್ಯ ಹೋರಾಟದ ಸಂದಿಗ್ಧದ ನಡುವೆ ಅವರು ಬರೆದ ಅನೇಕ ಲೇಖನಗಳು ಪ್ರಜಾತಂತ್ರದ ಬಗೆಗಿನ ಅವರ ತಾತ್ವಿಕಪ್ರಖರತೆಯನ್ನು ಪ್ರತಿಬಿಂಬಿಸುತ್ತವೆ.

ಲೋಹಿಯಾ ಅವರ ಪ್ರಜಾತಂತ್ರದ ಅಧ್ಯಯನ ಮತ್ತು ಚಿಂತನೆಯ ಪ್ರವಾಸ ಆರಂಭಗೊಂಡದ್ದು ಜರ್ಮನಿಯಲ್ಲಿ. ಅದಕ್ಕಿಂತಲೂ ಮೊದಲು ಒಂದು ಉತ್ಕಟವಾದ ಸ್ವಾತಂತ್ರ್ಯದ ಹಂಬಲ ಅವರ ಚಿಂತನೆಯಲ್ಲಿ ಜಿನುಗುತ್ತಿದ್ದರೂ ಅದು ತಾತ್ವಿಕವಾಗಿ ಪ್ರಜಾತಂತ್ರವಾಗಿ ಸಾಕ್ಷಾತ್ಕಾರಗೊಂಡದ್ದು ಜರ್ಮನಿಯಲ್ಲಿ ಅವರು ನಡೆಸಿದ ಶೈಕ್ಷಣಿಕ ಪರಿಶ್ರಮದಿಂದಾಗಿಯೇ ಎನ್ನಬಹುದು.

1929ರಿಂದ 1934ರ ತನಕ ಜರ್ಮನಿಯಲ್ಲಿ ನೆಲೆಸಿದ್ದ ಲೋಹಿಯಾ, ಅಲ್ಲಿ ಉತ್ಕರ್ಷಗೊಳ್ಳುತ್ತಿದ್ದ ಫ್ಯಾಸೀವಾದದ ಸಮಕ್ಷಮದಲ್ಲಿ ಅದಕ್ಕೆದುರಾಗಿ ನಿಂತ ಸಾಮಾಜಿಕ ಪ್ರಜಾತಂತ್ರದ ವಿಚಾರಗಳಿಂದಪ್ರಭಾವಿತರಾದರು. ಸಾಮಾಜಿಕ ಪ್ರಜಾತಂತ್ರವಾದಿ
ಗಳನ್ನು ತಮ್ಮ ರಕ್ತಸಂಬಂಧಿಗಳೆಂದು ಕರೆದ ಲೋಹಿಯಾ, ಅವರಿಂದ ನಾಗರಿಕ ಹಕ್ಕುಗಳ ಮತ್ತು ಕ್ರಿಯಾಶೀಲ ಪೌರತ್ವದ ಕಲ್ಪನೆಗಳನ್ನು ಪಡೆದುಕೊಂಡರು.

ಮುಂದೆ ಈ ಕಲ್ಪನೆಗಳೇ ಲೋಹಿಯಾ ಅವರ ಪ್ರಜಾತಂತ್ರದ ತಾತ್ವಿಕ ನೆಲೆಗಟ್ಟುಗಳಾದವು. ಪ್ರಜಾತಂತ್ರದ ಕುರಿತಾದ ಲೋಹಿಯಾರ ವಿಚಾರಗಳು ತಮ್ಮ ಪ್ರಾಯೋಗಿಕ ಮೈಕಟ್ಟನ್ನು ಪಡೆದುಕೊಂಡಿದ್ದು ಸ್ವಾತಂತ್ರ್ಯೋತ್ತರ ಭಾರತದ ಪ್ರಜಾತಾಂತ್ರಿಕ ರಾಜಕಾರಣದ ಸನ್ನಿವೇಶದಲ್ಲಿಯೇ. ಲೋಹಿಯಾ ಸ್ವತಂತ್ರ ಭಾರತದ ಪ್ರಜಾತಾಂತ್ರಿಕ ರಾಜಕಾರಣವನ್ನು ಆಳವಾದ ಜಿಜ್ಞಾಸೆಗೊಳಪಡಿಸಲು ಸತತ ಪ್ರಯತ್ನ ನಡೆಸಿದರು. ಸಮಾನತೆಯ ನೆಲೆಯ ಅವರ ಪ್ರಜಾತಾಂತ್ರಿಕ ರಾಜಕಾರಣದ ಕಾಳಜಿಗಳನ್ನು ಅವರು ನಿರಂತರವಾಗಿ ನಡೆಸಿದ ಹೋರಾಟಗಳಲ್ಲಿ ಕಂಡುಕೊಳ್ಳಬಹುದು. ಜಾತಿ, ಲಿಂಗ, ವರ್ಣ ಮತ್ತು ವರ್ಗಗಳ ನಡುವಿನ ಅಸಮಾನತೆಯ ವಿರುದ್ಧದ ಅವರ ಹೋರಾಟ, ಗ್ರಾಮಭಾರತ ಮತ್ತು ನಗರಭಾರತಗಳ ನಡುವಿನ ಅಸಮಾನ ಸಂಬಂಧಗಳ ವಿರುದ್ಧ ಅವರು ನಡೆಸಿದ ಸಂಘರ್ಷ ಹಾಗೂ ಇಂಗ್ಲಿಷ್ ಯಾಜಮಾನಿಕೆಯ ಎದುರು ಭಾರತೀಯ ಭಾಷೆಗಳ ಪುನರುಜ್ಜೀವನಕ್ಕಾಗಿ ಅವರು ನಡೆಸಿದ ಪ್ರಯತ್ನ, ಇವೆಲ್ಲವೂ ಸಮಾನತೆಯ ನೆಲೆಗಟ್ಟಿನಲ್ಲಿ ಪ್ರಜಾತಾಂತ್ರಿಕ ಆಶೋತ್ತರಗಳನ್ನು ಬಿಂಬಿಸುವಂತಹ ಹೋರಾಟಗಳೇ ಆಗಿವೆ.

ಪ್ರಜಾತಂತ್ರವು ಚುನಾವಣಾ ರಾಜಕಾರಣವಷ್ಟೇ ಅಲ್ಲ ಮತ್ತು ಸಂಸದೀಯ ಕಾರ್ಯಕಲಾಪಗಳಿಗೆ ಸೀಮಿತವಾದುದೂ ಅಲ್ಲ ಎಂಬುದರ ಕುರಿತು ಲೋಹಿಯಾ ನಿರಂತರವಾಗಿ ವಿಮರ್ಶೆ ನಡೆಸಿದರು. ಅಷ್ಟು ಮಾತ್ರವಲ್ಲದೆ, ತಮ್ಮ ಪಕ್ಷವೂ ಸೇರಿದಂತೆ ರಾಜಕೀಯ ಪಕ್ಷಗಳು ಆಂತರಿಕ ಪ್ರಜಾತಂತ್ರವನ್ನು ಹಿಸುಕಿ ಹಾಕುತ್ತಿರುವುದರ ಕುರಿತು ಅವರು ಬೇಸರಗೊಂಡಿದ್ದರು. ಭಾರತದ ರಾಜಕಾರಣವು ಪರಿವರ್ತನೆಯ ರಾಜಕಾರಣವಾಗಿ ರೂಪಾಂತರಗೊಳ್ಳುವ ನಿಟ್ಟಿನಲ್ಲಿ ನಿರಂತರವಾಗಿ ಶ್ರಮಿಸಿದರು. ಅವರ ಈ ಸಮಾನತಾವಾದಿ ಪ್ರಜಾತಂತ್ರವು ಒಂದು ನೆಲೆಯಲ್ಲಿ ಸಾಮಾಜಿಕ, ರಾಜಕೀಯ, ಆರ್ಥಿಕ ವಿಕೇಂದ್ರೀಕರಣವನ್ನು ಪ್ರತಿನಿಧಿಸಿದರೆ, ಇನ್ನೊಂದು ನೆಲೆಯಲ್ಲಿ ನಾಗರಿಕ ಹಕ್ಕುಗಳ ತಳಪಾಯದಲ್ಲಿ ಕಲ್ಪಿಸಲಾದ ಸಕ್ರಿಯ ಪೌರತ್ವದ ಆಶಯಗಳನ್ನು ಬಿಂಬಿಸುತ್ತದೆ. ಅಧಿಕಾರದ ವಿಕೇಂದ್ರೀಕರಣವು ಲೋಹಿಯಾ ಪ್ರತಿಪಾದಿಸಿದ ಪ್ರಜಾತಂತ್ರದ ಸಾಂಸ್ಥಿಕ ರೂಪವಾದರೆ, ಕ್ರಿಯಾಶೀಲ ಸಾರ್ವಜನಿಕ ವಲಯವು ಅವರ ಪ್ರಜಾತಂತ್ರದ ರಾಜಕೀಯ ರೂಪ ಎನ್ನಬಹುದು.

ಭಾರತದಲ್ಲಿ ಅಧಿಕಾರ ವಿಕೇಂದ್ರೀಕರಣದ ಕಲ್ಪನೆಯನ್ನು ತಾತ್ವಿಕವಾದ ಸ್ಪಷ್ಟತೆಯಲ್ಲಿ ಗ್ರಹಿಸಿದವರಲ್ಲಿ ಲೋಹಿಯಾ ಪ್ರಮುಖರೆನ್ನಬೇಕು. ಬಹುಮಟ್ಟಿಗೆ ಗಾಂಧಿಯವರ ಪ್ರೇರಣೆಯಿಂದ, ಅಧಿಕಾರ ವಿಕೇಂದ್ರೀಕರಣದ ಪರಿಕಲ್ಪನೆಯನ್ನು ಸಮಗ್ರವಾದ ಸಾಮಾಜಿಕಾಭ್ಯುದಯದ ಹಿನ್ನೆಲೆಯಲ್ಲಿ ಲೋಹಿಯಾ ಗ್ರಹಿಸುತ್ತಾರೆ. ಅವರ ಪ್ರಕಾರ, ಆರ್ಥಿಕ ಮತ್ತು ರಾಜಕೀಯ ವಿಕೇಂದ್ರೀಕರಣಗಳು ಅವಿಚ್ಛಿನ್ನವಾದ ವಿದ್ಯಮಾನಗಳು. ಇಂದು ಆರ್ಥಿಕ ಕ್ಷೇತ್ರದಲ್ಲಿ ಕಂಡುಬರುವ ಬೃಹತ್ ಗಾತ್ರದ ಯಂತ್ರಗಳು ಮತ್ತು ರಾಜಕೀಯ ಕ್ಷೇತ್ರದಲ್ಲಿ ನಮ್ಮನ್ನು ಆಳುವ ದೈತ್ಯ ಸ್ವರೂಪದ ಪ್ರಭುತ್ವವು ‘ಕೇಂದ್ರೀಕರಣ’ ಎನ್ನುವ ವಿದ್ಯಮಾನದ ಎರಡು ಮುಖಗಳು ಎಂದು ಲೋಹಿಯಾ ತಿಳಿಯುತ್ತಾರೆ.

ಆದ್ದರಿಂದಲೇ ಅವರು ಪ್ರತಿಪಾದಿಸುವ ಪ್ರಜಾತಂತ್ರದಲ್ಲಿ ಆರ್ಥಿಕ ವಿಕೇಂದ್ರೀಕರಣವನ್ನು ಪ್ರತಿನಿಧಿಸುವ ಸಣ್ಣಘಟಕ ಯಂತ್ರವೂ (ಸ್ಮಾಲ್ ಯುನಿಟ್ ಮೆಷಿನ್) ಮತ್ತು ರಾಜಕೀಯ ವಿಕೇಂದ್ರೀಕರಣವನ್ನು ಪ್ರತಿನಿಧಿಸುವ ಚತುಸ್ತಂಭೀಯ ರಾಜ್ಯವೂ (ಕೇಂದ್ರ, ರಾಜ್ಯ, ಜಿಲ್ಲೆ ಮತ್ತು ಗ್ರಾಮ) ಒಂದು ಇನ್ನೊಂದರ ಪ್ರತಿಫಲನವಾಗಿ ಕಾಣಿಸಿಕೊಳ್ಳುತ್ತವೆ. ಲೋಹಿಯಾ ಮುಂದಿಡುವ ಈ ಪ್ರಜಾತಾಂತ್ರಿಕ ವಿಕೇಂದ್ರೀಕರಣ ಅಥವಾ ವಿಕೇಂದ್ರೀಕೃತ ಪ್ರಜಾತಂತ್ರ ವಾಸ್ತವಗೊಳ್ಳುವುದು ಅಹಿಂಸಾತ್ಮಕವಾದ ನಾಗರಿಕ ಅಸಹಕಾರದ ಕಲ್ಪನೆಯಲ್ಲಿ. ಸ್ವಾತಂತ್ರ್ಯೋತ್ತರ ಭಾರತದಲ್ಲಿಯೂ ಜನಸಮುದಾಯಗಳಿಗೆ ಮತ್ತು ಪ್ರತಿಯೊಬ್ಬ ನಾಗರಿಕನಿಗೆ ಅಹಿಂಸಾತ್ಮಕ ರೀತಿಯಲ್ಲಿ ಸರ್ಕಾರದ ಅದ್ಯಾದೇಶಗಳನ್ನು ವಿರೋಧಿಸುವ ಅಧಿಕಾರ ಇದೆ ಎಂದು ಪ್ರತಿಪಾದಿಸಿದ ಲೋಹಿಯಾ, ಪ್ರತಿರೋಧವನ್ನು ಪ್ರಜಾತಂತ್ರದ ತಿರುಳು ಎಂದು ಭಾವಿಸುತ್ತಾರೆ.

ಬಹುಶಃ ಇಂದಿನ ನಮ್ಮ ಭಾರತ ಮತ್ತು ವಿಶ್ವ ಎದುರಿಸುತ್ತಿರುವ ಪ್ರಜಾತಾಂತ್ರಿಕ ಸಂಕಟದ ಸನ್ನಿವೇಶದಲ್ಲಿ ಲೋಹಿಯಾ ಪ್ರತಿಪಾದಿಸಿದ ಪ್ರಜಾತಂತ್ರದ ಕಲ್ಪನೆಯು ಅತ್ಯಂತ ಜರೂರಿನದ್ದಾಗಿ ಕಂಡುಬರುತ್ತದೆ. ರಾಷ್ಟ್ರೀಯತೆಯ ಸಂಮೋಹನ ಶಕ್ತಿಯಿಂದ ನಮ್ಮ ಮೇಲೆ ಎರಗುವ ದೈತ್ಯರಾಜ್ಯದ (ಸ್ಟೇಟ್) ಆಕ್ರಮಣಶೀಲತೆ ಹಾಗೂ ಮರುಳುಗೊಳಿಸುವ ಆರ್ಥಿಕ ಸೂತ್ರಗಳಿಂದ ನಮ್ಮನ್ನು ಹಿಸುಕುತ್ತಿರುವ ವಿಶ್ವ ಬಂಡವಾಳಶಾಹಿಯ ಕಪಿಮುಷ್ಟಿ, ಇವುಗಳಿಂದ ವಿಮೋಚನೆ ಹೊಂದಬೇಕಾದರೆ ಲೋಹಿಯಾರಂತಹ ಮೂಲಜಿಜ್ಞಾಸಿಕ (ರ‍್ಯಾಡಿಕಲ್) ಪ್ರಜಾತಂತ್ರವಾದಿಗಳ ಚಿಂತನೆಯ ಬೆಳಕು ನಮಗೆ ದಾರಿದೀಪವಾಗಬೇಕು.

ಅಸ್ಪಷ್ಟ ಮತ್ತು ಅದೃಶ್ಯ ರೂಪದ ಸಾಮುದಾಯಿ ಕತೆಯ ಹಟಮಾರಿ ಹೇರಿಕೆಗಳು; ಮಾನವನ ಆಧ್ಯಾತ್ಮಿಕ ವ್ಯಕ್ತಿತ್ವವನ್ನು ಮತ್ತು ಸ್ವಾತಂತ್ರ್ಯವನ್ನು ಕುಗ್ಗಿಸುತ್ತಿರುವ ಈ ಕಾಲದಲ್ಲಿ, ಗಾಂಧೀ ಮೂಲದಿಂದ ಹೊರಹೊಮ್ಮಿದ ಮತ್ತು ಲೋಹಿಯಾ ಪ್ರತಿಪಾದನೆಯಲ್ಲಿ ಅರಳಿದ ನಾಗರಿಕ ಅಸಹಕಾರದ ಅಹಿಂಸಾತ್ಮಕ ತಾತ್ವಿಕ ಪ್ರತಿರೋಧವೇ ಮೂಲ ಉಸಿರಾಗಿರುವ ಪ್ರಜಾತಂತ್ರವನ್ನು ನಾವು ಗಟ್ಟಿಯಾಗಿ ಆಧರಿಸಿ ನಿಲ್ಲಬೇಕಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು