ಸೋಮವಾರ, ಆಗಸ್ಟ್ 2, 2021
26 °C
ಈ ಇಂಧನದ ಮಾಲಿನ್ಯ ತಡೆ ಹೇಗೆ ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಬೇಕಿದೆ

ಕಲ್ಲಿದ್ದಲು ಉರಿಸಲು ಆತುರವೇಕೆ?

ಟಿ.ಆರ್.ಅನಂತರಾಮು Updated:

ಅಕ್ಷರ ಗಾತ್ರ : | |

ಆರ್ಥಿಕತೆಯ ಪುನಶ್ಚೇತನಕ್ಕಾಗಿ ಕೇಂದ್ರ ಸರ್ಕಾರವು ₹ 20 ಲಕ್ಷ ಕೋಟಿ ಮೊತ್ತದ ವಿಶೇಷ ಆರ್ಥಿಕ ಪ್ಯಾಕೇಜ್‌ ಘೋಷಿಸಿದೆ. ಹಲವು ಉಪಕ್ರಮಗಳನ್ನು ಪ್ರಕಟಿಸಿದೆ. ಇದರಲ್ಲಿ, ಕಲ್ಲಿದ್ದಲು ಗಣಿಗಾರಿಕೆಯ ಖಾಸಗೀಕರಣವೂ ಸೇರಿದೆ. 1975ರಲ್ಲಿ ಅಸ್ತಿತ್ವಕ್ಕೆ ಬಂದು ಭಾರತದ ಸುಮಾರು ಶೇ 92ರಷ್ಟು ಕಲ್ಲಿದ್ದಲು ಉತ್ಪಾದನೆ ಮಾಡುತ್ತಿದ್ದ ಕೋಲ್ ಇಂಡಿಯಾ ಕಂಪನಿ, ಸಿಂಗರೇಣಿ ಕಂಪನಿಗೆ ಇದ್ದ ಏಕಸ್ವಾಮ್ಯವು ಇದರಿಂದ ಕಳಚಿ ಬೀಳಲಿದೆ.

ಈಗ ಖಾಸಗಿ ಗಣಿಗಾರಿಕೆ ಸಂಸ್ಥೆಗಳೂ ಕಲ್ಲಿದ್ದಲು ಬ್ಲಾಕ್‍ನ ಹರಾಜಿನಲ್ಲಿ ಪಾಲ್ಗೊಳ್ಳಬಹುದು, ಉತ್ಪಾದನೆಯಲ್ಲೂ ತೊಡಗಬಹುದು, ವಿದೇಶಕ್ಕೂ ಮಾರಾಟ ಮಾಡಬಹುದು, ಹಾಗೆಯೇ ವಿದೇಶಿ ಕಂಪನಿ ಗಳಿಗೂ ಇದೇ ಹಕ್ಕು ದೊರೆತಿದೆ- ನೇರ ಹಣ ಹೂಡಿಕೆಗೆ ಅವಕಾಶವಿದೆ.

ಹಿಂದೆ ಒಂದು ಟನ್ ಕಲ್ಲಿದ್ದಲು ಉತ್ಪಾದನೆಗೆ ಸರ್ಕಾರಕ್ಕೆ ಇಂತಿಷ್ಟು ರಾಜಧನ ಕೊಡಬೇಕು ಎಂಬ ನಿಯಮವಿತ್ತು. ಈಗ ಗಣಿಗಾರಿಕೆಯ ನಿಯಮಗಳಿಗೆ ತಿದ್ದುಪಡಿ ತಂದು ಸರ್ಕಾರ ಉದಾರ ನೀತಿ ತೋರಿಸಿದೆ. ಯಾವುದೇ ಕಲ್ಲಿದ್ದಲು ಬ್ಲಾಕಿನಲ್ಲಿ ಗಣಿ ಮಾಡಿ ತೆಗೆದ ಕಲ್ಲಿದ್ದಲಿಗೆ ಆದಾಯದ ಲೆಕ್ಕದಲ್ಲಿ ಸರ್ಕಾರಕ್ಕೆ ಪಾಲು ನೀಡಬೇಕಾಗುತ್ತದೆ. ಇದು ಕನಿಷ್ಠ ಶೇ 4ರಷ್ಟು ಎಂದು ಮಿತಿಯನ್ನು ನಿಗದಿಪಡಿಸಿದೆ. ಈ ಲೆಕ್ಕಾಚಾರ ಅನುಸರಿಸಿದರೆ ಸರ್ಕಾರಕ್ಕೆ ದೊಡ್ಡ ಆದಾಯ ಬರುತ್ತದೆ ಎಂಬುದು ಎಣಿಕೆ.

ಸದ್ಯದಲ್ಲಿ 71 ಕಲ್ಲಿದ್ದಲು ಬ್ಲಾಕುಗಳಿವೆ. ಈ ಪೈಕಿ ಐವತ್ತನ್ನು ಮಾತ್ರ ಹರಾಜು ಮಾಡಲಿದೆ. ಉಳಿದವು ಗಣಿ ಮಾಡುವ ಹಂತಕ್ಕೆ ತಲುಪಿಲ್ಲ. ಕೋಲ್ ಇಂಡಿಯಾ ಕಂಪನಿಯು ದಿನವಹಿ 25 ಲಕ್ಷ ಟನ್‌ ಕಲ್ಲಿದ್ದಲನ್ನು ಅದರ ಸ್ವಾಮ್ಯವಿರುವ 82 ಗಣಿಗಳಿಂದ ಉತ್ಪಾದಿಸುತ್ತಿದೆ. ವಿಶೇಷವೆಂದರೆ, ಇದರ ಶೇ 70ರಷ್ಟು ಭಾಗವು ದೇಶದ 116 ಉಷ್ಣಸ್ಥಾವರಗಳಿಗೆ ವಿದ್ಯುತ್ ಉತ್ಪಾದನೆ ಮಾಡಲು ಇಂಧನವಾಗಿ ಬಳಕೆಯಾಗುತ್ತಿದೆ.

ಖಾಸಗೀಕರಣ ಇನ್ನೊಂದು ದೃಷ್ಟಿಯಿಂದಲೂ ಅತಿಮುಖ್ಯ ಎನ್ನುತ್ತಿದೆ ಸರ್ಕಾರ. ಉತ್ಕೃಷ್ಟ ದರ್ಜೆಯ ಕಲ್ಲಿದ್ದಲು ಆಮದಿಗಾಗಿ ಖರ್ಚು ಮಾಡುತ್ತಿದ್ದ ವಿದೇಶಿ ವಿನಿಮಯ ಉಳಿಯುತ್ತದೆ. ಜೊತೆಗೆ ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸುತ್ತದೆ ಎಂಬುದು ಅದರ ನಿಲುವು.

ಜಾಗತಿಕ ಮಟ್ಟದಲ್ಲಿ ಅತಿ ಹೆಚ್ಚು ಕಲ್ಲಿದ್ದಲು ಸಂಪನ್ಮೂಲ ಹೊಂದಿರುವ ದೇಶಗಳಲ್ಲಿ ಭಾರತ ಐದನೆಯ ಸ್ಥಾನದಲ್ಲಿದೆ. ಇಷ್ಟಿದ್ದರೂ ಉಕ್ಕು, ಕಬ್ಬಿಣದ ಉದ್ಯಮಕ್ಕೆ ಬೇಕಾದ ಲೋಹ ಕರಗಿಸುವ ಸ್ಥಾವರಗಳಲ್ಲಿ ಬಳಸುವ ಕಲ್ಲಿದ್ದಲಿಗಾಗಿ ದೇಶದ ಸರ್ಕಾರಿ ಮತ್ತು ಖಾಸಗಿ ಲೋಹ ಉದ್ಯಮಗಳು ವಿದೇಶದತ್ತ ಮುಖ ಮಾಡಬೇಕಾಗಿತ್ತು. ₹ 1.70 ಲಕ್ಷ ಕೋಟಿ ಮೌಲ್ಯದ 2,350 ಲಕ್ಷ ಟನ್‌ ಕಲ್ಲಿದ್ದಲನ್ನು ಸದ್ಯ ಆಮದು ಮಾಡಿಕೊಳ್ಳುತ್ತಿದೆ.


ಟಿ.ಆರ್‌.ಅನಂತರಾಮು

ಉತ್ಕೃಷ್ಟ ದರ್ಜೆಯ ಕಲ್ಲಿದ್ದಲು ಜಾರ್ಖಂಡ್ ರಾಜ್ಯದಲ್ಲೇ ಲಭ್ಯವಿದೆ. ಈಗಿನ ನೀತಿಯಂತೆ ಕಲ್ಲಿದ್ದಲು ಕ್ಷೇತ್ರಕ್ಕೆ ಖಾಸಗಿ ಕಂಪನಿಗಳಿಗೆ ಸರ್ಕಾರ ಎಷ್ಟು ಬೆಂಬಲ ಕೊಡುತ್ತಿದೆಯೆಂದರೆ, ಈಗ ಹರಾಜು ಮಾಡಲಿರುವ 50 ಕಲ್ಲಿದ್ದಲು ಬ್ಲಾಕ್‍ಗಳಲ್ಲಿ ಖಾಸಗಿ ಕಂಪನಿಗಳು ತ್ವರಿತವಾಗಿ ಉತ್ಪಾದನೆಯಲ್ಲಿ ತೊಡಗಿದರೆ, ಅಂಥ ಕಂಪನಿಗಳಿಗೆ ಸರ್ಕಾರಕ್ಕೆ ಬರಬೇಕಾದ ಆದಾಯದಲ್ಲೇ ಶೇ 50ರಷ್ಟು ಬಿಟ್ಟುಕೊಡುವುದಾಗಿ ಘೋಷಿಸಿದೆ.

ಈ ಎಲ್ಲ ಬ್ಲಾಕುಗಳೂ ತಮಿಳುನಾಡು, ತೆಲಂಗಾಣ, ಒಡಿಶಾ, ಪಶ್ಚಿಮ ಬಂಗಾಳ, ಮಧ್ಯಪ್ರದೇಶ, ಮಹಾರಾಷ್ಟ್ರದಲ್ಲಿ ಹಂಚಿಹೋಗಿವೆ. ಕಲ್ಲಿದ್ದಲು ದಹನದಿಂದ ಉಂಟಾಗುವ ಮಾಲಿನ್ಯವು ವಾತಾವರಣ ಸೇರುವುದನ್ನು ನಿಯಂತ್ರಿಸುವ ತಂತ್ರಜ್ಞಾನಕ್ಕೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ₹ 50,000 ಕೋಟಿ ಮೀಸಲಿಟ್ಟಿರುವುದಾಗಿ ಘೋಷಿಸಿದ್ದಾರೆ. ಜೊತೆಗೆ ‘ಕಲ್ಲಿದ್ದಲು ಪರಿಸರಸ್ನೇಹಿ ಅಲ್ಲ ಎಂಬುದು ಸರ್ಕಾರಕ್ಕೂ ಗೊತ್ತು. ಈ ಕಾರಣಕ್ಕಾಗಿಯೇ ಮಾಲಿನ್ಯವನ್ನು ಮೂಲದಲ್ಲೇ ತೊಡೆದುಹಾಕುವ ತಂತ್ರದತ್ತ ನಾವು ಗಮನ ಹರಿಸುತ್ತಿದ್ದೇವೆ’ ಎಂದಿದ್ದಾರೆ.

ತೊಡೆದುಹಾಕುವುದು ಎಂದರೆ ಏನು? ವಿಶೇಷವಾಗಿ ಉಷ್ಣಸ್ಥಾವರಗಳು ಹೊರಸೂಸುವ ಕಾರ್ಬನ್ ಡೈ ಆಕ್ಸೈಡನ್ನು ಸಂಗ್ರಹಿಸಿ, ವಿದೇಶದಲ್ಲಿ ಮಾಡುತ್ತಿರುವಂತೆ ತೈಲ ಬಾವಿಗಳಿಗೆ ಬಿಟ್ಟು ಉತ್ಪನ್ನ ಹೆಚ್ಚಿಸಿಕೊಳ್ಳುವುದೇ ಅಥವಾ ಅಂತರ್ಜಲವನ್ನು ಬಾಧಿಸದಂತೆ ನೆಲದಲ್ಲಿ ಇದೆಲ್ಲವನ್ನೂ ಹೂಳುವುದೇ? ಸರ್ಕಾರ ಸ್ಪಷ್ಟಪಡಿಸ
ಬೇಕಾಗಿದೆ.

ಈ ಹಿನ್ನೆಲೆಯಲ್ಲಿ ನೋಡಿದರೆ, ತ್ವರಿತವಾಗಿ ಗಣಿಗಾರಿಕೆ ಮಾಡಿದರೆ ಖಾಸಗಿ ಕಂಪನಿಗಳಿಗೆ ಲಾಭ ಹೆಚ್ಚು ಎನ್ನುವುದು ಮನವರಿಕೆಯಾಗಿದೆ. ಈ ವರ್ಷ ಸರ್ಕಾರ 150 ಕೋಟಿ ಟನ್‌ ಕಲ್ಲಿದ್ದಲು ಉತ್ಪಾದನೆ ಗುರಿ ಹೊಂದಿದೆ. ಇನ್ನೊಂದೆಡೆ, ಕೋಲ್ ಇಂಡಿಯಾ ಒಂದರಲ್ಲೇ ಐದು ಲಕ್ಷ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಇಲ್ಲಿ ಉದ್ಯೋಗ ಕಳೆದುಕೊಳ್ಳುವ ಭೀತಿಯೂ ಕಾರ್ಮಿಕರಿಗಿದೆ.

ಕಲ್ಲಿದ್ದಲು ದಹನದಿಂದ ಈಗಾಗಲೇ ಹದಗೆಟ್ಟಿರುವ ವಾಯುಗೋಳದ ಪರಿಸ್ಥಿತಿ ಏನಾಗಬಹುದು ಎಂಬುದನ್ನು ಯೋಚಿಸಿದರೆ ತಳಮಳವಾಗುತ್ತದೆ. ಏಕೆಂದರೆ ಈಗಾಗಲೇ ಭಾರತವು ಕಾರ್ಬನ್ ಡೈ ಆಕ್ಸೈಡ್ ಉತ್ಸರ್ಜನೆಯಲ್ಲಿ ಜಾಗತಿಕ ಮಟ್ಟದಲ್ಲಿ ಮೂರನೆಯ ಸ್ಥಾನದಲ್ಲಿದೆ. ವಾರ್ಷಿಕ 250 ಕೋಟಿ ಟನ್‌ ಕಾರ್ಬನ್ ಡೈ ಆಕ್ಸೈಡನ್ನು ನಮ್ಮ ದೇಶವೇ ಹೊರಬಿಡುತ್ತಿದೆ. ಅಂದರೆ ನಮ್ಮಲ್ಲಿ ತಲಾವಾರು ಹೆಚ್ಚುಕಡಿಮೆ ಎರಡು ಟನ್‌ ಉತ್ಪಾದನೆ ಎಂದಾಯಿತು.

ಭಾರತವು ಪ್ಯಾರಿಸ್ ಒಪ್ಪಂದಕ್ಕೆ ಬದ್ಧವಾಗಿ ಕಾರ್ಬನ್ ಡೈಆಕ್ಸೈಡ್ ಉತ್ಸರ್ಜನೆಯನ್ನು 2030ರ ಹೊತ್ತಿಗೆ ಈಗಿನ ಉತ್ಪಾದನೆಗಿಂತ ಶೇ 35ರಷ್ಟು ಪಾಲು ಕಡಿತಗೊಳಿಸು ವುದಾಗಿ ಘೋಷಿಸಿದೆ. ನವೀಕರಿಸಬಹುದಾದ ಶಕ್ತಿ ಮೂಲಗಳ ಬಳಕೆಯ ಬಗ್ಗೆ ಭಾರತವೂ ಶ್ರಮಿಸುತ್ತಿದೆ. ಆದರೆ, ಇದೇ ಸಮಯದಲ್ಲಿ ಉಷ್ಣ ಸ್ಥಾವರಗಳ ಸಂಖ್ಯೆ ಯನ್ನು ಹೆಚ್ಚಿಸುತ್ತಿರುವುದರ ಹಿಂದಿನ ತರ್ಕವನ್ನು ಒಪ್ಪುವುದು ಹೇಗೆ?

ಬಹುತೇಕ ಯುರೋಪ್ ರಾಷ್ಟ್ರಗಳು ಭೂಉಷ್ಣತೆಯನ್ನು ತಗ್ಗಿಸಲು ಬೇರೆ ಬೇರೆ ಉಪಕ್ರಮಗಳನ್ನು ಕೈಗೊಂಡಿವೆ. ಶಕ್ತಿಯ ಬೇಡಿಕೆಗಾಗಿ ಅಮೆರಿಕ ತನ್ನಲ್ಲಿರುವ ಶೇ 60ರಷ್ಟು ಉಷ್ಣ ಸ್ಥಾವರಗಳನ್ನು ಮುಚ್ಚಿದೆ. ಅದೇ ಸಂದರ್ಭದಲ್ಲಿ ಬೇಡಿಕೆಯನ್ನು ಪೂರೈಸಿಕೊಳ್ಳಲು ಅನಿಲದ ಬಳಕೆಯ ಕಡೆ ಕೈಚಾಚಿದೆ. ಯುರೋಪಿಯನ್ ಒಕ್ಕೂಟ, ದಕ್ಷಿಣ ಕೊರಿಯಾ, ಜಪಾನ್ ಮುಂತಾದ ದೇಶಗಳು ಉಷ್ಣಸ್ಥಾವರಗಳನ್ನು ಹಂತಹಂತವಾಗಿ ಕಡಿತಗೊಳಿಸಿ, ನವೀಕರಿಸಬಹುದಾದ ಇಂಧನವನ್ನು ಬೆಂಬಲಿಸುತ್ತಿವೆ. ಐರ್ಲೆಂಡ್, ಫ್ರಾನ್ಸ್, ಯುನೈಟೆಡ್ ಕಿಂಗ್ಡಂ ಮುಂತಾದವು ಶಕ್ತಿಯ ಉತ್ಪಾದನೆಗಾಗಿ ಉಷ್ಣಸ್ಥಾವರಗಳನ್ನು ಅವಲಂಬಿ ಸಿರುವುದು ಶೇ 2ರಷ್ಟು ಮಾತ್ರ. ಆದರೆ ಭಾರತದಲ್ಲಿ ಉಷ್ಣಸ್ಥಾವರದ ಮೇಲಿನ ಅವಲಂಬನೆ ಶೇ 60ರಷ್ಟು ಇದೆ. ವಾಯುಗೋಳ ಮಾಲಿನ್ಯಕ್ಕೆ ನಮ್ಮ ಕಾಣಿಕೆ ಶೇ 7.5ರಷ್ಟು ಎಂಬುದನ್ನು ಮರೆಯಬಾರದು.

ಕೇಂದ್ರ ಸರ್ಕಾರವು ಕಲ್ಲಿದ್ದಲು ಕ್ಷೇತ್ರದಲ್ಲಿ ತೋರಿರುವ ಉದಾರೀಕರಣದ ಇದೇ ಸಂದರ್ಭದಲ್ಲಿ ಇನ್ನೂ ಒಂದು ದೊಡ್ಡ ನೀಲನಕ್ಷೆಯನ್ನು ಮುಂದಿಟ್ಟಿದೆ. ಅದು ಮೀಥೇನ್ ಉತ್ಪಾದನೆ ಕುರಿತು. ಮೀಥೇನ್‍ಗೆ ವಾಯುಗೋಳದ ಮಹಾಶತ್ರು ಎಂಬ ಕುಖ್ಯಾತಿಯೂ ಇದೆ. ಏಕೆಂದರೆ ಕಾರ್ಬನ್ ಡೈ ಆಕ್ಸೈಡ್‍ಗಿಂತ ಇದು ಎಂಟು ಪಟ್ಟು ಹೆಚ್ಚು ಉಷ್ಣತೆಯನ್ನು ಭೂಮಿಗೆ ಮರಳಿಸುವ ಸಾಮರ್ಥ್ಯ ಹೊಂದಿದೆ. ಸರ್ಕಾರ ಈಗಿರುವ ನೈಸರ್ಗಿಕ ಅನಿಲಗಳ ಸಂಪನ್ಮೂಲದ ಜೊತೆಗೆ ಕಲ್ಲಿದ್ದಲು ಸ್ತರಗಳಲ್ಲಿ ಬಂಧಿತ ವಾಗಿರುವ ಮೀಥೇನನ್ನು ಹೊರತೆಗೆದು ಅದನ್ನು ಅಡುಗೆ ಅನಿಲವಾಗಿ ಬಳಸಬಹುದೆಂದು ಯೋಚಿಸುತ್ತಿದೆ. ಅಂಥ ಸಂಪನ್ಮೂಲವನ್ನು ಹರಾಜು ಹಾಕುವ ಪ್ರಕ್ರಿಯೆಗೆ ಇತ್ತೀಚೆಗೆ ಖಾಸಗಿ ಕಂಪನಿಗಳು ಆಸಕ್ತಿ ತೋರಲಿಲ್ಲ. ಬದಲು ನವೀಕರಿಸಬಹುದಾದ ಇಂಧನಗಳ ಮೇಲೆ ಹಣ ಹೂಡಲು ಸಿದ್ಧವಾಗಿವೆ.

ಒಂದು ವೇಳೆ ಮೀಥೇನನ್ನು ಹೊರತೆಗೆದು ಬಳಕೆಗೆ ಬಿಡುವುದೇ ಆದರೆ ಇದು ಸೃಷ್ಟಿಸುವ ಆತಂಕ ಊಹೆಗೂ ಮೀರಿದ್ದು. ಈಗಾಗಲೇ ಉಷ್ಣವರ್ಧಕ ಅನಿಲಗಳಿಂದ ಆಗುತ್ತಿರುವ ವಾಯುಗೋಳದ ವೈಪರೀತ್ಯ ಎಂಥೆಂಥ ದುರಂತಗಳನ್ನು ತರಬಹುದು ಎಂಬುದು ತಜ್ಞರಿಗಷ್ಟೇ ಅಲ್ಲ ಜನಸಾಮಾನ್ಯರಿಗೂ ಗೊತ್ತಿದೆ. ಅತಿವೃಷ್ಟಿ, ಅನಾವೃಷ್ಟಿ, ಚಂಡಮಾರುತ, ಮುಂತಾದ ನೈಸರ್ಗಿಕ ವಿಕೋಪಗಳು ಹೇಗೆ ಕಾಡುತ್ತಿವೆ ಎಂಬುದಕ್ಕೆ ಪ್ರತೀ ವರ್ಷದಲ್ಲೂ ನಿದರ್ಶನ ಕೊಡಬಹುದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು