ಬುಧವಾರ, ಫೆಬ್ರವರಿ 19, 2020
17 °C

ಮಹಾರಾಷ್ಟ್ರ ಪ್ರಹಸನ | ಬಿಜೆಪಿ, ಮೋದಿಗೆ 5 ರೀತಿಯ ಹಿನ್ನಡೆ: ಸುಧೀಂದ್ರ ಕುಲಕರ್ಣಿ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ರಾಜ್ಯಪಾಲರು ಮತ್ತು ರಾಷ್ಟ್ರಪತಿ ಕಚೇರಿಗಳನ್ನು ಬಳಸಿಕೊಂಡು ಅಧಿಕಾರ ಹಿಡಿಯಲು ಬಿಜೆಪಿ ಮಹಾರಾಷ್ಟ್ರದಲ್ಲಿ ನಡೆಸಿದ ವಿಫಲ ಕಾರ್ಯಾಚರಣೆಯು ಪ್ರಧಾನಿ ನರೇಂದ್ರ ಮೋದಿ ಮತ್ತು ದೇಶದಾದ್ಯಂತ ಬಿಜೆಪಿಯನ್ನು ಬಹುಕಾಲ ಬಾಧಿಸಲಿದೆ ಎಂಬ ಅಭಿಪ್ರಾಯವನ್ನು ಹಲವು ರಾಜಕೀಯ ವಿಶ್ಲೇಷಕರು ಈಗಾಗಲೇ ವ್ಯಕ್ತಪಡಿಸಿದ್ದಾರೆ.

ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟವಾದ ನಂತರ ಯಡಿಯೂರಪ್ಪ ತರಾತುರಿಯಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದು, ಸುಪ್ರೀಂಕೋರ್ಟ್ ಮಧ್ಯಪ್ರವೇಶ, ವಿಶ್ವಾಸಮತ ಯಾಚಿಸದೇ ರಾಜೀನಾಮೆ ಸಲ್ಲಿಸಿದ ಕಾಲಘಟ್ಟವನ್ನು ಮಹಾರಾಷ್ಟ್ರದ ಈಚೆಗಿನ ಬೆಳವಣಿಗೆಗಳು ಹಲವರಿಗೆ ನೆನಪಿಸಿದೆ. ಕರ್ನಾಟಕದ ಬಹುತೇಕ ಜನರಿಗೆ ಇದೇ ಕಾರಣಕ್ಕೆ ನೆರೆ ರಾಜ್ಯ ಮಹಾರಾಷ್ಟ್ರದ ರಾಜಕೀಯ ಬೆಳವಣಿಗೆಗಳು ಆಸಕ್ತಿ ಮೂಡಿಸಿವೆ.

ಮಹಾರಾಷ್ಟ್ರದಲ್ಲಿ ಬಿಜೆಪಿ ನಾಯಕರು ಇಟ್ಟ ತಪ್ಪುಹೆಜ್ಜೆಯ ಪರಿಣಾಮಗಳು ಬಿಜೆಪಿ ಮತ್ತು ಅದರ ಪರಮೋಚ್ಛ ನಾಯಕರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಬಹುಕಾಲ ಬಾಧಿಸಲಿದೆ ಎನ್ನುವುದು ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರ ಸಹಾಯಕರಾಗಿದ್ದ ಸುಧೀಂದ್ರ ಕುಲಕರ್ಣಿ ಅವರ ವಿಶ್ಲೇಷಣೆ. ‘ಎನ್‌ಡಿಟಿವಿ’ ಜಾಲತಾಣದಲ್ಲಿ ಪ್ರಕಟವಾಗಿರುವ ಅವರ ಲೇಖನದ ಮುಖ್ಯ ಅಂಶಗಳ ಕನ್ನಡ ಅನುವಾದ ಇಲ್ಲಿದೆ.

1) ವಿಶ್ವಾಸದ ಪ್ರಶ್ನೆ

2014ರಲ್ಲಿ ಮೋದಿ ಪ್ರಧಾನಿಯಾದ ನಂತರ ಅನುಭವಿಸಿದ ದೊಡ್ಡ ಹಿನ್ನಡೆ ಇದು. ‘ಮೋದಿ ಇದ್ದರೆ ಭರವಸೆ ಇದೆ’ ಎನ್ನುವುದು ಎಲ್ಲ ನಾಯಕರು ಮತ್ತು ಕಾರ್ಯಕರ್ತರ ಆತ್ವವಿಶ್ವಾಸವಾಗಿತ್ತು. ಅಸಾಧ್ಯ ಸಂಗತಿಗಳನ್ನು ಅವರು ಸಾಧಿಸಬಲ್ಲರು ಎನ್ನುವ ಕಾರ್ಯಕರ್ತರ ವಿಶ್ವಾಸಕ್ಕೆ ಈಗ ಪೆಟ್ಟು ಬಿದ್ದಿದೆ. ಇದರ ಜೊತೆಗೆ ರಾಷ್ಟ್ರಪತಿ ಮತ್ತು ರಾಜ್ಯಪಾಲರ ಕಚೇರಿಗಳನ್ನು ನೇರವಾಗಿ ರಾಜಕೀಯಕ್ಕೆ ಬಳಸಿಕೊಂಡಿದ್ದು ಕಳೆದ ಐದೂವರೆ ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ನಿಚ್ಚಳವಾಗಿ ಸಾಬೀತಾಯಿತು.

2) ಭ್ರಷ್ಟರ ಜೊತೆಗೆ ಕೈಜೋಡಿಸಿದ ಕಳಂಕ

ನರೇಂದ್ರ ಮೋದಿ ವೈಯಕ್ತಿಕವಾಗಿ ಪ್ರಾಮಾಣಿಕರು. ಅವರೆಂದಿಗೂ ಭ್ರಷ್ಟರ ಜೊತೆಗೆ ಕೈಜೋಡಿಸುವುದಿಲ್ಲ ಎಂದು ಈ ದೇಶದ ಜನರು ವಿಶ್ವಾಸವಿಟ್ಟು ಮೋದಿ ಪ್ರಧಾನಿಯಾಗಲಿ ಎಂಬ ಕಾರಣಕ್ಕೆ ಬಿಜೆಪಿಗೆ ಮತ ಹಾಕಿದ್ದರು. ದೊಡ್ಡದೊಡ್ಡ ಹಗರಣಗಳ ಕಳಂಕ ಹೊತ್ತ ಅಜಿತ್‌ ಪವಾರ್‌ರಂಥವರ ಜೊತೆಗೆ ಪಕ್ಷದ ಮಹಾರಾಷ್ಟ್ರ ಘಟಕ ಕೈಜೋಡಿಸಲು ಅನುವು ಮಾಡಿಕೊಟ್ಟ ಪರಿಣಾಮ ಸ್ವಚ್ಛ ವ್ಯಕ್ತಿತ್ವದ ಮೋದಿ ಇಮೇಜ್‌ಗೂ ಘಾಸಿಯಾಯಿತು. ಅಧಿಕಾರಕ್ಕಾಗಿ ಮೋದಿ ಏನು ಬೇಕಾದರೂ ಮಾಡಬಲ್ಲರು, ಯಾರ ಜೊತೆಗೆ ಬೇಕಾದರೂ ಕೈಜೋಡಿಸಬಲ್ಲರು ಎನ್ನುವ ಸಂದೇಶ ದೇಶಕ್ಕೆ ರವಾನೆಯಾಯಿತು.

3) ವಿರೋಧ ಪಕ್ಷಗಳ ಮೈತ್ರಿ ಸಾಧ್ಯತೆ

ವಿರೋಧ ಪಕ್ಷಗಳು ಒಂದಾದರೆ ಬಿಜೆಪಿಯನ್ನು ಮಣಿಸುವುದು ಅಸಾಧ್ಯವಲ್ಲ ಎನ್ನುವ ಸಂದೇಶವನ್ನೂ ಮಹಾರಾಷ್ಟ್ರ ಪ್ರಹಸನ ದೇಶಕ್ಕೆ ನೀಡಿತು. ಚುನಾವಣಾ ಪೂರ್ವ ಮೈತ್ರಿಯೊಂದಿಗೆ ಮತಯಾಚಿಸಿದ್ದ ಶಿವಸೇನಾ ಇದೀಗ ಬಿಜೆಪಿಯಿಂದ ಸಿಡಿದು ಅಧಿಕಾರದ ಗಾದಿ ಹಿಡಿದಿರುವುದು ಹಲವು ರಾಜ್ಯಗಳಲ್ಲಿ ಹೊಸ ಮೈತ್ರಿ ಲೆಕ್ಕಾಚಾರಗಳಿಗೆ ಕಾರಣವಾಗಬಹುದು. ಹಿಂದುತ್ವ ಪ್ರತಿಪಾದಿಸುವ ಪಕ್ಷವೊಂದು ಎನ್‌ಸಿಪಿ, ಕಾಂಗ್ರೆಸ್‌ನಂಥ ಜಾತ್ಯತೀತ ಸಿದ್ಧಾಂತದ ಪಕ್ಷಗಳೊಂದಿಗೆ ಕೈಜೋಡಿಸಿರುವ ಬೆಳವಣಿಗೆಯೂ ಇತರ ರಾಜ್ಯಗಳಲ್ಲಿ ಹೊಸ ಸಾಧ್ಯತೆಗಳನ್ನು ಹುಟ್ಟುಹಾಕಬಹುದು.

4) ಕಾಂಗ್ರೆಸ್‌ಗೆ ಗುಟುಕು ಜೀವ

ಉತ್ಸಾಹಹೀನ ಸ್ಥಿತಿಯಲ್ಲಿರುವ ಕಾಂಗ್ರೆಸ್‌ ಪಕ್ಷಕ್ಕೆ ಮಹಾರಾಷ್ಟ್ರದ ಬೆಳವಣಿಗೆಯು ತುಸು ಚೈತನ್ಯ ನೀಡಬಹುದು. ಇಂದಲ್ಲದಿದ್ದರೆ ನಾಳೆ, ಮುಂದಿನ ಲೋಕಸಭೆ ಚುನಾವಣೆಯ ಒಳಗೆ ಬಿಜೆಪಿಯೇತರ ಪಕ್ಷಗಳು ಕಾಂಗ್ರೆಸ್‌ ನಾಯಕತ್ವದಲ್ಲಿ ಒಗ್ಗೂಡುವ ಸಾಧ್ಯತೆ ಇದ್ದೇ ಇದೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಹೇಳಿಕೊಳ್ಳುವಂಥ ಸಾಧನೆ ಮಾಡಲಿಲ್ಲ. ಆದರೆ ಮಧ್ಯಪ್ರದೇಶ, ಛತ್ತೀಸಗಡ, ರಾಜಸ್ಥಾನ ಮತ್ತು ಪಂಜಾಬ್‌ಗಳಲ್ಲಿ ಜಯಗಳಿಸಿದ್ದು ಕಡಿಮೆ ಸಾಧನೆಯಲ್ಲ. ಮಹಾರಾಷ್ಟ್ರದಲ್ಲಿ ಮೈತ್ರಿ ಸರ್ಕಾರದಲ್ಲಿ ಕಾಂಗ್ರೆಸ್‌ಗೆ ಅಸ್ತಿತ್ವ ಸಿಕ್ಕಿರುವುದು ಖಂಡಿತ ಪಕ್ಷದ ಪುನರುಜ್ಜೀವನಕ್ಕೆ ನೆರವಾಗುತ್ತದೆ.

5) ಪವಾರ್–ಸೋನಿಯಾ ಮುನಿಸಿಗೆ ಮುಲಾಮು

ರಾಷ್ಟ್ರ ರಾಜಕಾರಣದಲ್ಲಿ ಮಹತ್ವದ ಪಾತ್ರ ನಿರ್ವಹಿಸಬಲ್ಲ ಮತ್ತು ವಿವಿಧ ರಾಜ್ಯಗಳ ವಿವಿಧ ಪಕ್ಷಗಳಲ್ಲಿ ಸಾಕಷ್ಟು ಗೆಳೆಯರನ್ನು ಹೊಂದಿರುವ ಶರದ್‌ ಪವಾರ್‌ರಂಥ 79 ವರ್ಷದ ಮಾಗಿದ ರಾಜಕಾರಿಣಿ ಮತ್ತೆ ಮುಖ್ಯಭೂಮಿಕೆಯಲ್ಲಿ ಮುಖ್ಯ ಪಾತ್ರ ನಿರ್ವಹಿಸುವುದು ಹಲವು ಸಮೀಕರಣಗಳನ್ನು ಏರುಪೇರು ಮಾಡಬಹುದು. ಶರದ್‌ ಪವಾರ್‌ ತೆರೆಮರೆಯಲ್ಲಿ ನಿಂತು ಮಾಡಿದ ಮಾರ್ಗದರ್ಶನ ಮತ್ತು ತಂತ್ರಗಳಿಂದಲೇ ಮಹಾರಾಷ್ಟ್ರದಲ್ಲಿ ಕಾಂಗ್ರೆಸ್, ಎನ್‌ಸಿಪಿ ಮತ್ತು ಶಿವಸೇನಾ ಮೈತ್ರಿ ಸರ್ಕಾರ ರಚನೆ ಸಾಧ್ಯವಾಗಿದ್ದು ಎಂಬುದು ನಿರ್ವಿವಾದ. ಕಾಂಗ್ರೆಸ್‌ ಉನ್ನತ ನಾಯಕತ್ವ ಮುಖ್ಯವಾಗಿ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಜೊತೆಗಿರುವ ಬಹುಕಾಲದ ಮುನಿಸು ಮತ್ತು ಅಪನಂಬಿಕೆಗೂ ಈ ಮೈತ್ರಿ ಮುಲಾಮು ಹಚ್ಚಿದೆ. ಛಿದ್ರವಾಗಿರುವ ಕಾಂಗ್ರೆಸ್ ಪರಿವಾರವನ್ನು ಒಗ್ಗೂಡಿಸಲು ಪವಾರ್‌ ಮುಂದಾದರೆ ಸಾಕಷ್ಟು ಪಕ್ಷಗಳು ಮತ್ತು ಮುನಿಸಿಕೊಂಡು ದೂರಾಗಿರುವ ಹಲವು ನಾಯಕರು ಮತ್ತೆ ಕಾಂಗ್ರೆಸ್ ತೆಕ್ಕೆಗೆ ಮರಳುವ ಸಾಧ್ಯತೆಗಳನ್ನೂ ತಳ್ಳಿಹಾಕುವಂತಿಲ್ಲ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು