ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಂಗಭೂಮಿ ಮತ್ತು ಬದುಕಿನ ಮೌಲ್ಯ

ಅಹಿಂಸೆ, ನೈತಿಕತೆಯ ಬಾಪೂ ಹಾಗೂ ಬಹುತ್ವದ ಕುವೆಂಪು ಇಬ್ಬರೂ ಚಾರಿತ್ರಿಕ ರೂಪಕಗಳು
Last Updated 26 ಫೆಬ್ರುವರಿ 2020, 20:00 IST
ಅಕ್ಷರ ಗಾತ್ರ

ಸಾಮಾಜಿಕ ಮತ್ತು ರಾಜಕೀಯ ನಿರ್ವಾತದಲ್ಲಿ ನುಡಿಯೊಡೆಯದೇ ನಿಂತ ಹೆಪ್ಪುಗಟ್ಟಿದ ಕಾಲದಲ್ಲಿ, ಎಲ್ಲೆಲ್ಲೂ ನೀರವತೆಯ ಭಾವ ಭಾಸವಾಗುತ್ತಿರುವಾಗ, ರಂಗಭೂಮಿ ಅತ್ಯಂತ ಕ್ರಿಯಾಶೀಲವಾಗಿದೆ ಮತ್ತು ಆಗಿರುತ್ತದೆ. ಅದಕ್ಕೆ ಮಾತ್ರ ಆ ನುಡಿಯ ಬಂಧವನ್ನು ಒಡೆಯಲು ಸಾಧ್ಯವಿದೆ. ಅದು ಪ್ರಭುತ್ವ ವಿರೋಧಿ ಮತ್ತು ಜನಾಶಯದ ಪರವಾಗಿ ನಿಂತಿರುತ್ತದೆ. ಹಾಗೆಯೇ ಬದುಕಿನ ಸತ್ವ ಮತ್ತು ಮೌಲ್ಯಗಳನ್ನು ಎತ್ತಿ ಹಿಡಿದಿರುತ್ತದೆ.

ಇಂದು, ಗಾಂಧೀಜಿ ಕುರಿತು ಬಂದ ನಾಟಕಗಳು ಮತ್ತು ಕುವೆಂಪು ಅವರ ನಾಟಕಗಳ ರಂಗಮೌಲ್ಯಗಳು ಮಹತ್ವದ್ದು ಎನಿಸಿವೆ. ರಾಜಕೀಯ ದಾಳದ ಭಾಗವಾಗಿ ಪದೇ ಪದೇ ಅವಹೇಳನಕ್ಕೆ ಗುರಿಯಾಗುವ ಗಾಂಧೀಜಿ ಮತ್ತು ಸಾಮಾಜಿಕ ಜಾಲತಾಣವನ್ನು ಈಚೆಗೆ ಕುವೆಂಪು ಅವರ ತೇಜೋವಧೆಗೆ ಬಳಸಿದ್ದು ಹೇಗಿದೆಯೆಂದರೆ, ಸೂರ್ಯನಿಗೆ ಉಗುಳಲು ಹೋಗಿ ತನ್ನ ಮುಖಕ್ಕೆ ಚೆಲ್ಲಿಕೊಂಡಂತಿದೆ. ಈ ಸತ್ಯದ ಅರಿವು ಇಲ್ಲದ ಮನೋವಿಕೃತಿಗಳ ಮಧ್ಯೆ ನಾವಿರುವುದು ಸಹ ವಾಸ್ತವ.

‘ಮಹಾತ್ಮ’ ನಾಟಕವು ಇಂದಿನ ವರ್ತಮಾನದ ರಾಜಕೀಯ ಮೇಲಾಟಗಳಿಗೆ ಚಿಕಿತ್ಸಾತ್ಮಕ ಪ್ರಯೋಗದಂತಿದೆ. ಅದರಂತೆಯೇ ಕುವೆಂಪು ಅವರ ಅಹೋರಾತ್ರಿ ಪ್ರಯೋಗ ‘ಮಲೆಗಳಲ್ಲಿ ಮದುಮಗಳು’. ವಿಚಿತ್ರ ಸನ್ನಿವೇಶದ ಸಾಮಾಜಿಕ ಮತ್ತು ರಾಜಕೀಯ ದುರಿತಕಾಲದಲ್ಲಿ ಮಹಾತ್ಮ ನಾಟಕದ ವಸ್ತು ಸಹ ಬಹು ಸಾಂದರ್ಭಿಕ ಸತ್ಯವನ್ನು ಹೇಳುತ್ತದೆ. ಇವೆರಡೂ ರಂಗಾಭಿ
ವ್ಯಕ್ತಿಗಳು ಪ್ರಸ್ತುತ ಸಾಮಾಜಿಕ ಮತ್ತು ರಾಜಕೀಯ ಕಾಲಘಟ್ಟದಲ್ಲಿ ಸ್ವೀಕರಣೆಯ ಸಂಗತಿಗಳು. ಗಾಂಧೀಜಿ ಬಗೆಗೆ ಬಂದಈ ಬಗೆಯ ಉಳಿದ ರಂಗಕೃತಿಗಳು ಕೂಡ ಚರ್ಚಾರ್ಹವೇ ಸರಿ. ಆದಕಾರಣ ‘ಗಾಂಧಿ ಮತ್ತು ಕುವೆಂಪು’ ಅವರ ಚಿಂತನೆಗಳು ಬದುಕಿನ ಮೌಲ್ಯಗಳು. ಆ ಮೌಲ್ಯಗಳು ವರ್ತಮಾನದಲ್ಲೂ ಹೆಚ್ಚು ಪ್ರಸ್ತುತವಾದವು.

‘ಮಹಾತ್ಮ’ ನಾಟಕದಲ್ಲಿ ಸಮಕಾಲೀನ ಸಂದರ್ಭಗಳ ಹೊಳಹುಗಳಿವೆ. ಭಾರತಕ್ಕೆ ಸ್ವಾತಂತ್ರ್ಯ ಬಂದ ಸಂದರ್ಭ. ಅತ್ತ ನೌಖಾಲಿಯು ಕೋಮುಗಲಭೆಯಿಂದ ತತ್ತರಿಸಿದೆ. ಅಲ್ಲಿ ಬಾಪೂ ಪ್ರತೀ ಹಳ್ಳಿಗೆ ಹೋಗಿ ಹಿಂಸೆಯನ್ನು ತಡೆಯುತ್ತಿದ್ದಾರೆ. ದೇಶದ ಬಹುತ್ವಕ್ಕೆ ಧಕ್ಕೆ ಬರಬಾರದೆಂಬ ಉದ್ದೇಶದಿಂದ ಸತ್ಯಾಗ್ರಹ, ಪ್ರಾರ್ಥನೆಗಳ ಮೂಲಕ ಶಾಂತಿ ನೆಲೆಸಲೆಂದು ಶ್ರಮಿಸುತ್ತಿದ್ದಾರೆ. ಆಗ ಇತ್ತ ದೆಹಲಿಯಲ್ಲಿ ಪಂಡಿತ್‌ ಜವಾಹರಲಾಲ್‌ ನೆಹರೂ ಅವರ ನೇತೃತ್ವದಲ್ಲಿ ಸರ್ಕಾರ ರಚನೆಯ ಕಾರ್ಯಚಟುವಟಿಕೆಗಳು ಬಿರುಸುಗೊಂಡಿದ್ದವು. ನೆಹರೂ ಮತ್ತು ಅಂದಿನ ಇತರ ನಾಯಕರಿಗೆ ಬಾಪೂಜಿಯವರು ಸರ್ಕಾರ ರಚನೆಯ ಐತಿಹಾಸಿಕ ಪ್ರಸಂಗಕ್ಕೆ ಸಾಕ್ಷಿಯಾಗಬೇಕೆನ್ನುವ ಯೋಚನೆಯೂ ಸ್ವಾಭಾವಿಕವಾಗಿತ್ತು. ಆದರೆ ನೌಖಾಲಿ ಮತ್ತು ಬಿಹಾರದ ಪರಿಸರದಲ್ಲಿ ಹಿಂಸೆ ಹರಡುತ್ತಿದ್ದುದನ್ನು ತಡೆಯಲು ತಮ್ಮ ಅಹಿಂಸಾತ್ಮಕ ಚಳವಳಿಯನ್ನು ಬಾಪೂ ಹುರಿಗೊಳಿಸುತ್ತಿದ್ದರು. ಅಧಿಕಾರಗ್ರಹಣ ಸಮಾರಂಭವು ಅವರಿಗೆ ನಗಣ್ಯವಾಗಿತ್ತು. ‘ಹಿಂಸೆ ಎಲ್ಲ ಕಡೆ ಪಸರಿಸಿರುವಾಗ, ಅಧಿಕಾರ ಗ್ರಹಣವನ್ನು ಸಂಭ್ರಮಿಸಬೇಕೆ?’ ಎಂದು ಬಾಪೂ ನಿಟ್ಟುಸಿರುಬಿಟ್ಟು ನಿರಾಕರಿಸುತ್ತಾರೆ. ಇಂದು ಇವು ಆಡಂಬರವಾಗಿರುವಾಗ ಬಾಪೂಜಿಯವರ ಈ ನಡೆ ಎಂಥ ಅನುಕರಣೀಯ ಹೆಜ್ಜೆ ಅನಿಸುತ್ತದೆ.

ಹಿಂಸೆ ಭುಗಿಲೆದ್ದಿದ್ದಾಗ ದೆಹಲಿಯ ಆಮಂತ್ರಣವನ್ನು ನಿರಾಕರಿಸುವುದು, ಬಾಪೂಜಿ ಅವರ ವ್ಯಕ್ತಿತ್ವದಲ್ಲಿನ ಶ್ರೇಷ್ಠ ಮಾನವೀಯ ಗುಣವನ್ನು ಬಿಂಬಿಸುತ್ತದೆ. ಹೀಗೆ ಸತ್ಯ, ಅಹಿಂಸೆ ಮತ್ತು ನೈತಿಕತೆಯ ಬಹುದೊಡ್ಡ ಸಾರ್ವಕಾಲಿಕ ಚಿಂತನೆಗಳನ್ನು ತಮ್ಮ ಬದುಕಿನುದ್ದಕ್ಕೂ ಪ್ರಯೋಗಿಸಿದವರು ಬಾಪೂಜಿ. ಇವರ ಕುರಿತು ಬಂದ ಕಸ್ತೂರಬಾ ಮತ್ತು ಇತರ ರಂಗಕೃತಿಗಳು ಗಾಂಧಿಯವರ ಬದುಕು ಒಂದು ಪ್ರಯೋಗ ಶಾಲೆಯಾಗಿತ್ತು ಎನ್ನುವುದನ್ನು ಪ್ರತಿಪಾದಿಸುತ್ತವೆ. ಸತ್ಯ ಮತ್ತು ನೈತಿಕತೆಯು ಇಂದು ನಮ್ಮಲ್ಲಿ ಪಾತಾಳಕ್ಕೆ ಕುಸಿದಿರುವಾಗ ಈ ಪ್ರಸಂಗಗಳು ಮಹತ್ವದ್ದಾಗಿವೆ.

ಆ ನಿಟ್ಟಿನಲ್ಲಿ ಅವರ ಆಶ್ರಮ ಪರಿಕಲ್ಪನೆಯ ಸಹಬಾಳ್ವೆಯ ಜೀವನಕ್ರಮ ಒಂದು ಮಾದರಿ. ಅವರು ಅದನ್ನು ಆಫ್ರಿಕಾದಲ್ಲಿದ್ದಾಗಲೇ ಪ್ರಯೋಗಿಸಿ ಯಶಸ್ಸು ಕಂಡವರು. ನುಡಿದಂತೆ ನಡೆವ, ತಪ್ಪಿದ್ದಲ್ಲಿ ತಮ್ಮನ್ನು ತಾವೇ ಉಪವಾಸದ ಶಿಕ್ಷೆಗೆ ಗುರಿಪಡಿಸಿಕೊಳ್ಳುವ ಸತ್ಯಶೋಧಕ ಬಾಪೂ. ಸಾರ್ವಜನಿಕ ಬದುಕಲ್ಲಿ ಇರುವವರು ಪ್ರತಿಫಲ ಸ್ವೀಕರಿಸಬಾರದೆಂಬ ದೃಢ ಸಂಕಲ್ಪದ ನಿಲುವು ಹೊಂದಿದ
ವರು. ಅದು ಸಾರ್ವಜನಿಕ ಸೇವೆಯಲ್ಲಿದ್ದವರಿಗೆ ಬಹುದೊಡ್ಡ ಅನುಕರಣೀಯ ಮೌಲ್ಯ. ಆದರೆ ಸಾರ್ವಜನಿ
ಕರು, ಜನಪ್ರತಿನಿಧಿಗಳು ಅದನ್ನು ಎಷ್ಟರಮಟ್ಟಿಗೆ ಪಾಲಿಸುತ್ತಾರೆ ಎನ್ನುವುದು ನಮ್ಮನ್ನು ಕಾಡುವ ಪ್ರಶ್ನೆ.

ಕುವೆಂಪು ಅವರ ‘ಮಲೆಗಳಲ್ಲಿ ಮದುಮಗಳು’ ಕನ್ನಡ ನೆಲದ ಜನಸಂಸ್ಕೃತಿಯ ಮಗಳು. ಮದುಮಗಳು ತೊಟ್ಟ ಸೀರೆ, ಬಳೆ, ಕುಂಕುಮ ಮತ್ತು ಸಿಂಗಾರದ ಆಭರಣಗಳು ಎಂದರೆ ಕುವೆಂಪು ಚಿಂತನೆಯ ಬಹುತ್ವದ ರೂಪಕಗಳೇ ಸರಿ. ಜೀವನದಲ್ಲಿ ಮುಖ್ಯವಾಗಿ ಅನುಭವಕ್ಕೆ ಬರುವ ಪ್ರೀತಿ, ಪ್ರೇಮ, ಕಾಮ, ಕರುಣೆ, ಮೋಸ, ದ್ರೋಹ, ಜಾತಿ- ಹೀಗೆ ಎಲ್ಲವೂ ಅಲ್ಲಿವೆ. ಮಲೆನಾಡಿನ ಕಾಡು ಸಂಸ್ಕೃತಿ ಇದೆ. ಜೀವಸಂಕುಲಗಳಿವೆ. ಪಾಳೇಗಾರಿಕೆಯ ಭೂಮಾಲೀಕರು ಮತ್ತು ಅವರ ಅಡಿಯಲ್ಲಿ ದುಡಿಯುವ ವರ್ಗಗಳ ಮಧ್ಯದ ಸಾವಯವ ಸಂಬಂಧವು ಪ್ರಮುಖ ಧಾರೆಯಾಗಿದೆ. ಅದು ಜಾತಿ, ವರ್ಗ, ಲಿಂಗ ತರತಮವನ್ನು ಮೀರಿದ್ದಾಗಿದೆ. ವೈಜ್ಞಾನಿಕತೆಯ ಗಟ್ಟಿ ಬುನಾದಿಯಿದೆ. ಹೀಗಾಗಿ ಅವರ ನಡುವಿರುವ ಸಾಮರಸ್ಯವೇ ಜೀವಾಳ ಹಾಗೂ ನಾಟಕದ ಸೌಂದರ್ಯವೂ ಆಗಿದೆ.

ಇಡೀ ಕಾಡಿನ ಜೀವಜಗತ್ತು ಮತ್ತು ಮನುಷ್ಯರ ನಡುವಿನ ಅಂತಃಸಂಬಂಧವು ಒಂದು ಸತ್ವವಾಗಿದೆ. ಅದು ಒಂದು ಬಹುದೊಡ್ಡ ಪಯಣವೇ ಸರಿ. ಕುವೆಂಪು ಅವರ ‘ಬೆರಳ್ಗೆ ಕೊರಳ್’ ಮತ್ತು ‘ಶೂದ್ರ ತಪಸ್ವಿ’ ನಾಟಕಗಳು ಬಹುಜನ ಸಮುದಾಯದ ಜನಸಂಸ್ಕೃತಿಯನ್ನು ಎತ್ತಿ ಹಿಡಿಯುವ ನವ್ಯ ಪ್ರಯೋಗಗಳು. ಈಚಿನ ‘ಶ್ರೀ ರಾಮಾಯಣ ದರ್ಶನಂ’ ಐದು ಗಂಟೆಗಳ ರಂಗ ಪ್ರಯೋಗವು ರಾವಣನ ವ್ಯಕ್ತಿತ್ವವನ್ನು ರಾಮನೆದುರು ಮುಖಾಮುಖಿಯಾಗಿಸಿ ದ್ರಾವಿಡ ಪದ್ಧತಿಯನ್ನು ಎತ್ತರಿಸಿದೆ.

ದೇಶದ ಕೆಲವೆಡೆ ಪೌರತ್ವ ತಿದ್ದುಪಡಿ ಕಾಯ್ದೆಯ ಪ್ರತಿರೋಧವು ಹಿಂಸೆಯ ರೂಪ ತಳೆದಿದೆ. ಇಂತಹ ವಿಚಾರಗಳ ಬಗ್ಗೆ ಜನರಲ್ಲಿ ಅನುಮಾನ, ಗೊಂದಲ ಮನೆಮಾಡಿವೆ. ದೆಹಲಿಯಲ್ಲಿ ಈ ಬಗೆಯ ಹಿಂಸೆಯು ಕೆಲವರ ಜೀವಕ್ಕೇ ಎರವಾಗಿದೆ. ಇಂತಹ ಸಂಘರ್ಷಗಳು ಹೀಗೆ ಭುಗಿಲೆದ್ದಿರುವಾಗ, ಇಲ್ಲಿಯ ಸೂಫಿ-ಶರಣರ ದಟ್ಟ ಪರಂಪರೆಯು ಹಿಂಸೆಯನ್ನು ತಡೆದು ನಿಲ್ಲಿಸುವ ಶಕ್ತಿ ಹೊಂದಿದೆ. ದಕ್ಷಿಣ ಭಾರತದಲ್ಲಿ ಕನ್ನಡ ರಂಗಭೂಮಿ ಮಾತ್ರ ದೇಶಕ್ಕೆ ವಿಶಿಷ್ಟ ಮಾದರಿಯ ಮಾನವೀಯತೆಯ ಸ್ಪರ್ಶ ಹಾಗೂ ವೈಚಾರಿಕತ
ನವನ್ನು ಕೊಟ್ಟು ಮೆರೆದಿದೆ. ಉತ್ತರದ ಸತ್ಯದ ನಿಗಿನಿಗಿ ಕೆಂಡವನ್ನು ಉಡಿಯಲ್ಲಿ ಕಟ್ಟಿಕೊಂಡು ಕನ್ನಡ ನೆಲಕ್ಕೆ ಬಂದ ಬಾಪೂ ಮತ್ತು ಕನ್ನಡ ನೆಲದ ಕುವೆಂಪು ಅವರ ಪ್ರಖರ ಚಿಂತನೆಯನ್ನು ಕನ್ನಡ ರಂಗಭೂಮಿಯಲ್ಲಿ ಕಾಣುವುದು ಒಂದು ವಿಶೇಷ! ಅದೊಂದು ಜೀವನ
ಮೌಲ್ಯವಾಗಿ ಪರಿವರ್ತನೆಗೊಂಡಿದೆ. ಉತ್ತರ- ದಕ್ಷಿಣಗಳ ಮಿಲನದ ಗಾಂಧಿ, ಕುವೆಂಪು ಅವರು ರಂಗಸಂಸ್ಕೃತಿಯ ಸಾಕ್ಷಿಪ್ರಜ್ಞೆಯಲ್ಲಿ ಸಮರ್ಥವಾಗಿ ಬೆರೆತು ಹೋಗಿದ್ದಾರೆ. ಇದು ವರ್ತಮಾನದಲ್ಲಿ ಕನ್ನಡದಲ್ಲಿನಡೆಯುತ್ತಿರುವುದು ಒಂದು ವಿಸ್ಮಯ! ಇಂಥ ಮಾದರಿಯ ರಂಗಸಂಸ್ಕೃತಿಯ ಸಂಚಲನವು ದೇಶದ ಇನ್ನೊಂದು ರಾಜ್ಯದಲ್ಲಿ ನೋಡಲು ಸಿಗುತ್ತದೆಯೇ?

ಆಳುವ ಕುರ್ಚಿಯಲ್ಲಿ ವ್ಯಕ್ತಿ ಯಾರಾದರೂ ಇರಲಿ, ಸರ್ಕಾರದ ನೇತೃತ್ವವನ್ನು ಯಾವುದಾದರೂ ಪಕ್ಷ ವಹಿಸಲಿ; ಸಾಮಾಜಿಕ, ಧಾರ್ಮಿಕ ಸಾಮರಸ್ಯ, ಬಹುತ್ವದ ವಿಚಾರಕ್ರಮವು ಈ ಮಣ್ಣಲ್ಲೇ ಅಡಗಿದೆ ಎಂಬುದನ್ನು ಮರೆಯಬಾರದು. ಅದನ್ನು ಕದಡುವ ಕೆಲಸವನ್ನು ಯಾರೊಬ್ಬರೂ ಮಾಡಬಾರದು.

ಲೇಖಕ: ಪ್ರಾಧ್ಯಾಪಕ, ಭಾವುರಾವಕಾಕತಕರ ಕಾಲೇಜು, ಬೆಳಗಾವಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT