ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್‌... ಅವಿತಿರಿ, ಕೊರೊನಾ ಹಿಮ್ಮೆಟ್ಟಿಸುವ ಶಸ್ತ್ರಾಸ್ತ್ರ ಸಜ್ಜಾಗಿಲ್ಲ!

ಕೊರೊನಾವನ್ನು ಹಿಮ್ಮೆಟ್ಟಿಸಬಲ್ಲ ಲಸಿಕೆ ಬಂದನಂತರವೇ ಅಸಲೀ ಯುದ್ಧ
Last Updated 9 ಏಪ್ರಿಲ್ 2020, 3:01 IST
ಅಕ್ಷರ ಗಾತ್ರ
ADVERTISEMENT
""

ಹಠಾತ್ತಾಗಿ ವೈರಾಣುಸೈನ್ಯ ಹೀಗೆ ದಾಳಿ ಮಾಡಿದಾಗ ಪರದಾಟ ಒಂದೆರಡೆ? ‘ಪರಸ್ಪರ ದೂರ ಇರಿ’ ಎಂದು ಪ್ರಜೆಗಳನ್ನು ಚದುರಿಸಬೇಕು. ದಿಕ್ಕೆಟ್ಟು ದೂರದೂರಿಗೆ ಧಾವಿಸುತ್ತಿದ್ದವರನ್ನು ಅಲ್ಲಲ್ಲೇ ಹಿಡಿದು ಕೂರಿಸಿ ಅನ್ನನೀರು ಒದಗಿಸಬೇಕು. ಪಟ್ಟು ಹಿಡಿದು ಗುಂಪಾಗಿ ಪೂಜೆ-ಪ್ರಾರ್ಥನೆಗೆ ಕೂತವರನ್ನು ಅಟ್ಟಾಡಿಸಿ ಕಟ್ಟಿ ಕೂರಿಸಬೇಕು. ಅದೇವೇಳೆ ಆಸ್ಪತ್ರೆಗಳನ್ನು ಸಜ್ಜುಗೊಳಿಸಿ, ವೈದ್ಯವೃಂದಕ್ಕೆ ಕೈಗವಸು, ಮುಖಗವಸು, ಕಾಲ್ಗವಸು, ಕಣ್ಗವಸು, ಮೈಗವಸು ಒದಗಿಸಬೇಕು. ಚಿಕಿತ್ಸಾ ಸರಂಜಾಮು ಹುಡುಕಿ ತಂದು ದೇಶಕ್ಕೆಲ್ಲ ವಿತರಿಸಬೇಕು. ಕಾಯಿಲೆ ಬಿದ್ದವರ ದೇಹಕ್ಕೆ ವೈರಾಣು ಹೊಕ್ಕಿದೆಯೇ ಎಂದು ಪರೀಕ್ಷಿಸಬೇಕು; ತೀರ ಉಲ್ಬಣಿಸಿದ ರೋಗಿಗಳಿಗೆಂದು ಕೃತಕ ಉಸಿರಾಟದ ‘ವೆಂಟಿಲೇಟರ್‌’ ಯಂತ್ರವನ್ನು ಊರೂರಿಗೆ ಹಂಚಬೇಕು.

ಈ ಸಮರದಲ್ಲಿ ಎದ್ದುಕಾಣುವ ಯೋಧರೆಂದರೆ ವೈದ್ಯರು ಮತ್ತು ಪೊಲೀಸರು. ಆದರೆ ವೈದ್ಯರ ಶಸ್ತ್ರದಲ್ಲಿ ದಮ್‌ ಇಲ್ಲ. ಅದು ರೋಗಾಣುವನ್ನು ಕೊಲ್ಲಲಾರದು. ಪೊಲೀಸರ ಕೈಯಲ್ಲಿನ ಶಸ್ತ್ರಕ್ಕೂ ವೈರಿಗೂ ಸಂಬಂಧವೇ ಇಲ್ಲ. ಇನ್ನು ಮಾಧ್ಯಮಗಳ ತಮಟೆ, ಗಂಟೆ, ದೀಪ, ಜಾಗಟೆಗಳಂತೂ ಬರೀ ಗಲಾಟೆ. ವೈರಿಗೆ ಕಿವಿಯೇ ಇಲ್ಲ.

ಇದು ವಿಲಕ್ಷಣ ಸಮರ. ಇಷ್ಟು ವರ್ಷ ದೇಶವೇ ಒಂದು ದೇಹ ಎಂದು ಪರಿಗಣಿಸಿ ಯುದ್ಧಾಸ್ತ್ರಗಳನ್ನು ಪೇರಿಸಿಕೊಂಡು ಕೂತಿದ್ದೆವು. ಈಗಿನದು ಉಲ್ಟಾ ಪ್ರಸಂಗ. ಇಲ್ಲಿ ದೇಹವೇ ದೇಶ. ಇದರೊಳಗೆ ನುಗ್ಗಿದ ವೈರಿಯನ್ನು ಹಿಮ್ಮೆಟ್ಟಿಸುವ ಅಸ್ತ್ರ ನಮ್ಮಲ್ಲಿಲ್ಲ. ‘ಮುಖ ಮುಚ್ಚಿಕೊಳ್ಳಿ, ಮನೆಯಲ್ಲಿ ಅವಿತುಕೊಳ್ಳಿ’ ಎಂಬುದೇ ಸಮರದುಂದುಭಿ.

ಅಸಲೀ ವೈರಿ ನಮ್ಮ ಉಸಿರಿನಲ್ಲಿದ್ದೀತು. ಅಸಲೀ ರಣಾಂಗಣ ನಮ್ಮ ಶ್ವಾಸನಾಳದಲ್ಲಿದೆ. ಕೊರೊನಾ ವೈರಾಣು ಬಂದು ನಮ್ಮ ಮೂಗು, ಗಂಟಲಿನ ಒದ್ದೆಗೋಡೆಯ ಜೀವಕೋಶಕ್ಕೆ ಅಂಟಿಕೊಳ್ಳುತ್ತದೆ. ಈ ವೈರಾಣುವಿಗೆ ಸ್ವಂತದ ಸಂತಾನಶಕ್ತಿ ಇಲ್ಲ. ಅದು ತನ್ನ ಸಂತಾನವೃದ್ಧಿಗೆಂದು (ತುಸುಮಟ್ಟಿಗೆ ಕೋಗಿಲೆಯ ಹಾಗೆ) ಬೇರೊಂದು ಜೀವಕೋಶದೊಳಕ್ಕೆ ನುಗ್ಗಬೇಕು. ನಮ್ಮ ಮೂಗು- ಗಂಟಲಿನ ಜೀವಕೋಶಕ್ಕೆ ಅದು ಮೂತಿಯನ್ನು ಒತ್ತಿ ತನ್ನೊಳಗಿನ ತಂತುಕಣವನ್ನು (ಆರ್‌ಎನ್‌ಎ) ಒಳಕ್ಕೆ ಕಕ್ಕುತ್ತದೆ. ಆ ತಂತು ನಮ್ಮ ಜೀವಕೋಶದಲ್ಲಿರುವ ಕಿಣ್ವಗಳನ್ನು ನುಂಗುತ್ತ ಅಲ್ಲೇ ಮರಿಹಾಕುತ್ತದೆ. ಹಾಗೆ ಹುಟ್ಟಿದ ತದ್ರೂಪುಗಳು ಅದೇ ಜೀವಕೋಶವನ್ನು ಒಡೆದು ಅಕ್ಕಪಕ್ಕದ ಜೀವಕೋಶಗಳಿಗೆ ನುಗ್ಗುತ್ತವೆ. ನಮ್ಮ ಸೈನಸ್ಸಿನ ಸಾಲುಸಾಲು ಜೀವಕೋಶಗಳು ಚಿಂದಿಯಾಗಿ ಸೋರತೊಡಗಿದಾಗ ನಮಗೆ ನೆಗಡಿಯಾಗುತ್ತದೆ. ಸೀನಿದರೆ ವೈರಾಣುಗಳ ಸಿಂಚನವಾಗುತ್ತದೆ. ಒಳಗುಳಿದ ವೈರಾಣುಗಳು ಗಂಟಲಿನ ಭಿತ್ತಿಯಲ್ಲಿಳಿದು ಜೀವಕೋಶಗಳನ್ನು ಧ್ವಂಸ ಮಾಡುತ್ತಿರುವಾಗ ನಮಗೆ ಗಂಟಲು ಕೆರೆತ ಶುರುವಾಗುತ್ತದೆ. ವೈರಾಣುಸೈನ್ಯ ಶ್ವಾಸಕೋಶಕ್ಕಿಳಿದು ರಕ್ತಕ್ಕೂ ಸೇರುತ್ತದೆ.

ನಮ್ಮ ಶರೀರದ ರಕ್ಷಣಾವ್ಯವಸ್ಥೆ ಆಗ ಎಚ್ಚೆತ್ತುಕೊಂಡು ಶಾಖವರ್ಧಕ ರಸಗಳನ್ನು ಬಿಡುಗಡೆ ಮಾಡುತ್ತದೆ. ನಮಗೆ ಜ್ವರ ಬರುತ್ತದೆ. ಶಾಖದಿಂದಾಗಿ ವೈರಾಣುವಿನ ಸಂತಾನಸೃಷ್ಟಿ ಕ್ರಿಯೆ ನಿಧಾನವಾಗುತ್ತದೆ. ಅದೇ ವೇಳೆಗೆ ವೈರಾಣುವನ್ನು ಸದೆಬಡಿಯಬಲ್ಲ ರೋಗನಿರೋಧಕ ಶಕ್ತಿಕಣಗಳು (ರೋ.ಶ.) ನಮ್ಮ ದೇಹದಲ್ಲಿ ಉತ್ಪತ್ತಿಯಾಗುತ್ತವೆ. ಅವಕ್ಕೆ ಪ್ರತಿಕಾಯಗಳು (ಆ್ಯಂಟಿಬಾಡೀಸ್) ಎನ್ನುತ್ತಾರೆ. ಜಾಸ್ತಿ ಪ್ರಮಾಣದಲ್ಲಿ ರೋ.ಶ. ಉಕ್ಕತೊಡಗಿದರೆ ಮತ್ತು/ಅಥವಾ ವೈರಾಣು ಅಷ್ಟೇನೂ ಜಾಸ್ತಿ ವೇಗದಲ್ಲಿ ವೃದ್ಧಿಯಾಗದಿದ್ದರೆ ನಾವು ಚೇತರಿಸಿಕೊಳ್ಳುತ್ತೇವೆ. ಕೆಲವರಲ್ಲಿ ರೋ.ಶ. ಅನಿಯಂತ್ರಿತವಾಗಿ ಉಕ್ಕುತ್ತಿದ್ದರೆ ಅವು ದ್ರವವಾಗಿ ಶ್ವಾಸಕೋಶದಲ್ಲಿ ತುಂಬಿಕೊಳ್ಳುತ್ತವೆ. ಉಸಿರಾಟ ಕಷ್ಟವಾಗುತ್ತದೆ. ವೆಂಟಿಲೇಟರ್‌ ಬೇಕಾಗುತ್ತದೆ. ಜೀವ ಉಳಿಸಲೆಂದು ಡಾಕ್ಟರ್‌ಗಳು ಬೇರೆ ರೋಗಕ್ಕೆಂದು ತಯಾರಿಸಿದ್ದ ಔಷಧವನ್ನು, ಉದಾ: ಮಲೇರಿಯಾಕ್ಕೆಂದು ಸೃಷ್ಟಿಯಾಗಿದ್ದ ಹೈಡ್ರಾಕ್ಸಿಕ್ಲೋರೋಕ್ವಿನನ್ನು ಪ್ರಯೋಗಿಸಬಹುದು (ಚೆರ್ನೊಬಿಲ್‌ ಸ್ಫೋಟದ ಜ್ವಾಲೆಯನ್ನು ಆರಿಸಲೆಂದು ಆಕಾಶದಿಂದ ಮರಳು, ಮಣ್ಣು, ಉಪ್ಪು, ಸಿಮೆಂಟನ್ನೂ ಸುರಿದ ಹಾಗೆ). ಇಂಥ ಬದಲೀ ಔಷಧಗಳ ಅಡ್ಡಪರಿಣಾಮ ತೀವ್ರವಿದ್ದರೂ ಕೆಲವೊಮ್ಮೆ ರೋಗಿ ಬದುಕಬಹುದು.

ಕೊರೊನಾಕ್ಕೆಂದೇ ಲಸಿಕೆಯನ್ನು ಸೃಷ್ಟಿ ಮಾಡಲು ಬಹಳಷ್ಟು ದೇಶಗಳಲ್ಲಿ ತೀವ್ರ ಪೈಪೋಟಿ ನಡೆದಿದೆ. ಲಸಿಕೆ ಎಂದರೆ ಮತ್ತೇನಲ್ಲ; ಲ್ಯಾಬಿನಲ್ಲಿ ವೈರಾಣುಗಳ ಕೈಕಾಲು ಕತ್ತರಿಸಿ- ಅಂದರೆ ದುರ್ಬಲಗೊಳಿಸಿ, ಆರೋಗ್ಯವಂತ ವ್ಯಕ್ತಿಯ ದೇಹಕ್ಕೆ ತೂರಿಸುವುದು. ಆಗ ಕೊರೊನಾಕ್ಕೆ ಸರಿಹೊಂದುವ ಪ್ರತಿಕಾಯಗಳು ಆ ದೇಹದಲ್ಲಿ ಸೃಷ್ಟಿಯಾಗುತ್ತವೆ. ಆಮೇಲೆ ಅದೇ ದೇಹಕ್ಕೆ ನಿಜವಾದ, ಸಶಕ್ತ ಕೊರೊನಾ ಸೈನ್ಯವನ್ನು ತೂರಿಸಬೇಕು. ಅದನ್ನು ಬಡಿಯಬಲ್ಲ ಶಸ್ತ್ರ ಮೊದಲೇ ಸಿದ್ಧ ಇರುವುದರಿಂದ ಕೊರೊನಾ ಜಾಸ್ತಿ ವ್ಯಾಪಿಸುವ ಮೊದಲೇ ಜಯ ನಮ್ಮದು.

ಲಸಿಕೆಯನ್ನು ಸೃಷ್ಟಿಸುವುದು ತೀರಾ ಸುಲಭ ನಿಜ. ಆದರೆ ಭಾರೀ ವೆಚ್ಚದ ರಿಸ್ಕೀ ಕೆಲಸ.ದುರ್ಬಲಗೊಳಿಸಿದ ವ್ಯಾಕ್ಸಿನನ್ನು ವಿವಿಧ ವಯಸ್ಸಿನ, ವಿವಿಧ ಜನಾಂಗದ ಜನಕ್ಕೆ ಚುಚ್ಚಿ ನೋಡಬೇಕು. ಕೆಲವರ ಶರೀರದಲ್ಲಿ ಅಂಥ ದುರ್ಬಲ ಲಸಿಕೆಯೇ ಪ್ರಬಲಗೊಂಡು ಕೋವಿಡ್‌-19 ಉಲ್ಬಣವಾದರೆ ಪ್ರಯೋಗ ವಿಫಲ (ಮೊದಮೊದಲು ಸಿದ್ಧವಾದ ಪೋಲಿಯೊ ಲಸಿಕೆಯಿಂದಾಗಿಯೇ ಆಜನ್ಮ ಹೆಳವರಾದವರ ಉದಾಹರಣೆ ನಮ್ಮಲ್ಲಿದೆ). ಲಸಿಕೆ ಯಶಸ್ವಿಯಾದರೆ, ಅದನ್ನು ಹಾಕಿಸಿಕೊಂಡವರಿಗೆ ಹೆಚ್ಚು ಹಣ ಕೊಟ್ಟು, ಕಾನೂನುರೀತ್ಯ ಅನುಮತಿ ಪಡೆದು, ನಿಜವಾದ ವೈರಸ್ಸನ್ನು ಅವರ ಮೂಗು–ಬಾಯಿಗೆ ಅಂಟಿಸಬೇಕು. ಅವರಲ್ಲಿ ಒಂದಿಬ್ಬರಿಗೆ ಕೋವಿಡ್‌ ಕಾಯಿಲೆ ಬಂದರೂ ಲಸಿಕೆ ವಿಫಲ. ಎಲ್ಲರಲ್ಲೂ ಲಸಿಕೆ ಸರಿಯಾಗಿ ಕೆಲಸ ಮಾಡುತ್ತಿದೆ ಎಂದಾಗ ಇನ್ನೂ ಸಾವಿರಾರು ಜನರ ಮೇಲೆ ಪ್ರಯೋಗಿಸಿ ಯಶಸ್ವಿಯೆಂದು ತಜ್ಞರ ಸಮಿತಿ ಘೋಷಿಸಿದ ನಂತರವೇ ಅದರ ಫ್ಯಾಕ್ಟರಿ ಮಾದರಿಯ ಉತ್ಪಾದನೆಗೆ ಅನುಮತಿ. ಲಸಿಕೆ ಪರೀಕ್ಷೆ ಎಂದರೆ ಭಾರೀ ಕಟ್ಟುನಿಟ್ಟಿನ ಮೇಲ್ವಿಚಾರಣೆಯಲ್ಲಿ, ನೈತಿಕತೆಯ ಗಡಿ ಮೀರದಂತೆ, ಅಮಾಯಕರನ್ನು ಬಲಿ ಹಾಕದಂತೆ ನಡೆಯಬೇಕಾದ ಕೆಲಸ. ಹಾಗಾಗಿ ಸುಧಾರಿತ ದೇಶಗಳಲ್ಲಿ ಇಂಥ ಹೊಸ ಲಸಿಕೆಗೆ ಒಂದೂವರೆ ಎರಡು ವರ್ಷಗಳೇ ಬೇಕು. ಫ್ಯಾಕ್ಟರಿ ಆರಂಭವಾದರೆ ಕರೆನ್ಸಿ ನೋಟನ್ನು ಮುದ್ರಿಸುವಷ್ಟು ಭಾರೀ ಭದ್ರಕೋಟೆಯಲ್ಲಿ, ಶತ್ರುಸೈನಿಕರ ಕೈಕಾಲು ಕತ್ತರಿಸಿ, ದಿನವೂ ಲಕ್ಷಾಂತರ ಸೀಸೆಗಳಲ್ಲಿ ಬಂಧಿಸಿ ಆ ಹೊಸ ಲಸಿಕೆಯನ್ನು ದೇಶಕ್ಕೆಲ್ಲ ವಿತರಿಸಬೇಕು. ಸೀಸೆಯಲ್ಲಿನ ವಿಕಲಾಂಗ ವೈರಿಗಳು ಸಾಗಾಟದಲ್ಲಿ ಎಲ್ಲೂ ಸಾಯದಂತೆ ಅಥವಾ ಸಶಕ್ತವೈರಿಗಳಾಗಿ ಬೆಳೆಯದಂತೆ ನೋಡಿಕೊಳ್ಳಬೇಕು.

ನೈತಿಕತೆ, ಸಾಮಾಜಿಕ ಹೊಣೆಗಾರಿಕೆ ಮತ್ತು ಕಾನೂನಿನ ಬಂಧಗಳೆಲ್ಲ ಸಡಿಲವಿರುವ ದೇಶಗಳಲ್ಲಿ ಕೊರೊನಾ ಲಸಿಕೆ ಶೀಘ್ರವೇ ತಯಾರಾಗಬಹುದು. ನಮ್ಮಲ್ಲಂತೂ ಆಗಲೇ ತಯಾರಾಗಿದೆಯಂತೆ. ಆ ಲಸಿಕೆಗೆ ಮಾನ್ಯತೆ ಸಿಕ್ಕಿದ್ದೇ ಆದರೆ ಕೊರೊನಾ ವಿರುದ್ಧ ಭೂಗತ ಸಮರ ಶುರುವಾಗುತ್ತದೆ. ಪೇಟೆಂಟ್‌ ಪಡೆಯಲು, ಲಸಿಕೆಯ ಉತ್ಪಾದನೆಯ ಲೈಸನ್ಸ್‌ ಪಡೆಯಲು ಪ್ರಬಲ ಕಂಪನಿಗಳು ಹೋರಾಟ ನಡೆಸುತ್ತವೆ. ಲಸಿಕೆಯನ್ನು ಮೊದಲು ಪಡೆಯಲು ಶಕ್ತರು ಸಂಚು ಮಾಡುತ್ತಾರೆ. ಪದೇಪದೇ ವಿದೇಶಕ್ಕೆ ಹೋಗುವ ತನ್ನ ಉದ್ಯೋಗಿಗಳಿಗೇ ಮೊದಲು ಸಿಗಬೇಕೆಂದು ಪ್ರಭಾವೀ ಕಂಪನಿಗಳು ಹುನ್ನಾರ ನಡೆಸುತ್ತವೆ. ವಿದೇಶಗಳಲ್ಲಿರುವ ನಮ್ಮದೇ ರಾಜತಾಂತ್ರಿಕ ಸಿಬ್ಬಂದಿಗೆ ಲಸಿಕೆ ತಕ್ಷಣ ಬೇಕೆಂದು ಒತ್ತಡ ಬರುತ್ತದೆ. ತನ್ನ ಕುಟುಂಬಕ್ಕೆ, ತನ್ನ ಮತಕ್ಷೇತ್ರಕ್ಕೇ ಅದು ಮೊದಲು ಬರಬೇಕೆಂದು ರಾಜಕಾರಣಿಗಳು ಮಸಲತ್ತು ಮಾಡುತ್ತಾರೆ. ತಮಗೇ ಭಾರೀ ಪ್ರಮಾಣದ ಲಸಿಕೆ ಬೇಕೆಂದು ಶಕ್ತದೇಶಗಳು ಧಮಕಿ ಹಾಕುತ್ತವೆ.

ಅಂಥ ಲಸಿಕೆಯನ್ನು ಸೇವಿಸಿದ ನಂತರವೂ ನಮ್ಮ ದೇಹ ಭದ್ರಕೋಟೆಯಾಗುತ್ತದೆ ಎಂದು ಖಾತರಿ ಹೇಳುವಂತಿಲ್ಲ. ಆ ವೇಳೆಗೆ ಕೊರೊನಾ ಹೊಸ ರೂಪದಲ್ಲಿ ಬರಬಹುದು. ವುಹಾನ್‌ನಲ್ಲಿ ಹೀಗಾಗಿದೆಯೆಂಬ ವರದಿಗಳು ಬರುತ್ತಿವೆ.

ಸದ್ಯಕ್ಕೆ ಪೌಷ್ಟಿಕ ಆಹಾರ ಸೇವಿಸುತ್ತ, ವ್ಯಾಯಾಮ ಮಾಡುತ್ತ ಇನ್ನಷ್ಟು ಕಾಲ ಅವಿತಿರೋಣ. ಈ ‘ದೇಶ’ದ ಗಡಿ ಕಾಯೋಣ. ಸಮರವಿನ್ನೂ ಸನ್ನಿಹಿತವಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT