ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನುಡಿ–ಬೆಳಗು | ಸಹಾಯದ ಸರಪಳಿ!

Published 29 ನವೆಂಬರ್ 2023, 22:05 IST
Last Updated 29 ನವೆಂಬರ್ 2023, 22:05 IST
ಅಕ್ಷರ ಗಾತ್ರ

ಇದು ಈ ವರ್ಷವೇ ಅಮೆರಿಕದ ಕನ್ಸಾಸ್‌ನಲ್ಲಿ ನಡೆದ ಘಟನೆ. ಬಿಲ್ಲಿ ರೇ ಹ್ಯಾರಿಸ್‌ ಎಂಬ ಮನೆಯಿಲ್ಲದ ಬಡ ವ್ಯಕ್ತಿ ರಸ್ತೆಯಲ್ಲಿ ಜನರ ಹತ್ತಿರ ಸಹಾಯ ಕೇಳುತ್ತಿದ್ದ. ಸಾರಾ ಡಾರ್ಲಿಂಗ್‌ ಎಂಬ ಮಹಿಳೆ ಆತನ ಪಾತ್ರೆಗೆ ಹಣ ಹಾಕುವಾಗ ಅಚಾನಕ್ಕಾಗಿ ಆಕೆಯ ನಿಶ್ಚಿತಾರ್ಥದ ವಜ್ರದುಂಗುರ ಜಾರಿ ಆ ಪಾತ್ರೆಗೆ ಬಿದ್ದುಬಿಟ್ಟಿತ್ತು. ಕೆಲ ಸಮಯದ ನಂತರ ಬಿಲ್ಲಿ ಉಂಗುರವನ್ನು ನೋಡಿದ. ಎಷ್ಟೆಂದರೂ ಮನುಷ್ಯ, ಚಿಕ್ಕಾಸೂ ಬೇರೆ ಕೈಲಿಲ್ಲ. ಸಹಜವಾಗಿ ಆತನಲ್ಲಿ ಆಸೆ ಮೊಳೆಯಿತು. ಬಂಗಾರದಂಗಡಿಗೆ ಹೋದ. ನಾಲ್ಕು ಸಾವಿರ ಡಾಲರ್‌ ಕೊಡುವುದಾಗಿ ಹೇಳಿದರು.

ಆದರೆ ಮನೆಯಿಲ್ಲದೇ ಭಿಕ್ಷೆ ಬೇಡುತ್ತಿದ್ದರೂ ಬಿಲ್ಲಿಗೆ ಯಾಕೋ ಆ ಉಂಗುರವನ್ನು ಮಾರಲು ಮನಸ್ಸು ಬರಲಿಲ್ಲ. ಮಾರನೇ ದಿನ ಬಂದ ಸಾರಾಗೆ ಉಂಗುರ ವಾಪಾಸು ಮಾಡಿದ. ಖುಶಿಯಾದ ಸಾರಾ ಮತ್ತಾಕೆಯನ್ನು ಮದುವೆಯಾಗಲಿರುವ ಹುಡುಗ ಇಬ್ಬರೂ ಕ್ರೌಡ್‌ ಫಂಡಿಂಗ್‌ ಮಾಡಿ ಒಂದು ಸಾವಿರ ಡಾಲರ್‌ ಒಟ್ಟುಗೂಡಿಸಿ ಬಿಲ್ಲಿಗೆ ಕೊಡಲು ನಿರ್ಧರಿಸಿದರು. ಆದರೆ ಬಿಲ್ಲಿಯ ಪ್ರಾಮಾಣಿಕತೆ ಜನರಿಗೆ ಅದೆಷ್ಟು ಇಷ್ಟವಾಯಿತು ಎಂದರೆ ಮೂರೇ ತಿಂಗಳಲ್ಲಿ ಬರೋಬ್ಬರಿ ಹತ್ತಿರ ಹತ್ತಿರ ಎರಡು ಲಕ್ಷ ಡಾಲರ್‌ ಸಂಗ್ರಹವಾಗಿಬಿಟ್ಟಿತು! ಏನೂ ಇಲ್ಲದೇ ಬೀದಿಗೆ ಬಿದ್ದಿದ್ದ ಬಿಲ್ಲಿಯ ಹತ್ತಿರ ಈಗ ಮನೆಯಿದೆ, ಕಾರಿದೆ. ಅಷ್ಟೇ ಅಲ್ಲ, ಮಾಧ್ಯಮಗಳಲ್ಲಿ ಈ ಸುದ್ದಿ ಪ್ರಚಾರವಾಗಿ ಹದಿನಾರು ವರ್ಷಗಳಿಂದ ಅವನು ನೋಡದೇ ಇದ್ದ ಕುಟುಂಬದವರೂ ಸಿಕ್ಕಿದ್ದಾರೆ! ‘ಮೊದಲು ನನಗೆ ಉಂಗುರ ಮಾರುವ ಯೋಚನೆ ಬಂದಿದ್ದು ನಿಜ, ಆದರೆ ಮಾರಲಿಲ್ಲ. ಕಾರಣ ನಾನು ಸಂತನಲ್ಲದಿರಬಹುದು, ಆದರೆ ದೆವ್ವವೂ ಅಲ್ಲ!’ ಎನ್ನುತ್ತಾನಾತ.

ಹಸಿದವರಿಗೆ ಊಟ ನೀಡುವಾಗ ತಾಯಂದಿರು ಮುಂದೆ ತಮ್ಮ ಮಕ್ಕಳಿಗೂ ಯಾರೋ ಸಹಾಯ ಮಾಡುತ್ತಾರೆಂದು ಹೇಳುವುದನ್ನು ಕೇಳಿದ್ದೇವೆ. ಇದು ಶತಶತಮಾನಗಳಿಂದ ಉಳಿದುಕೊಂಡಿರುವ ನಂಬಿಕೆ. ಇಂದು ನಾವು ಯಾರಿಗೋ ಸಹಾಯ ಮಾಡಿದರೆ ನಾಳೆ ನಮಗೋ ನಮ್ಮವರಿಗೋ ಇನ್ಯಾರೋ ಒಳಿತನ್ನು ಮಾಡುವರೆಂಬ ಈ ಪರಿಕಲ್ಪನೆಯೇ ಅದ್ಭುತವಾದದ್ದು. ಈ ಸಹಾಯದ ಸರಪಳಿಯ ಹಿಂದಿರುವ ಆಶಾವಾದ ಪ್ರಬಲವಾದದ್ದು. ಇಂತಹ ಘಟನೆಗಳು ಮನುಷ್ಯತ್ವದ ಮೇಲಿನ ನಂಬಿಕೆಯನ್ನು ಮತ್ತಷ್ಟು ಗಟ್ಟಿಗೊಳಿಸುತ್ತವೆ. ಸ್ವಾರ್ಥದ ಚಿಪ್ಪಿನಿಂದ ಹೊರಬಂದು ಇತರರಿಗೆ ಸಹಾಯ ಮಾಡಲು ಸ್ಫೂರ್ತಿ ನೀಡುತ್ತವೆ. ಒಳ್ಳೆಯ ಸಂಗತಿಗಳು ಜಗತ್ತಿನ ಎಲ್ಲ ಕಡೆಯಿಂದ ಬರಲಿ ಎಂಬ ಮಾತಿದೆ. ಇಂತಹ ಘಟನೆಗಳೂ ಜಗತ್ತಿನೆಲ್ಲೆಡೆ ನಡೆಯಲಿ. ಸ್ವಾರ್ಥವನ್ನು, ಲೋಭವನ್ನು ಕೊಂಚ ಬದಿಗಿಟ್ಟು ಒಬ್ಬರಿಗೊಬ್ಬರು ಸಹಾಯಹಸ್ತ ಚಾಚುವ ಮನುಷ್ಯರ ಸಂಖ್ಯೆ ಹೆಚ್ಚಾಗುತ್ತಲೇ ಇರಲಿ. ಒಳ್ಳೆಯತನ ಸಾಂಕ್ರಾಮಿಕವಾಗಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT