ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನುಡಿ ಬೆಳಗು | ಗೊಂದಲ 

Published 1 ಜುಲೈ 2024, 19:30 IST
Last Updated 1 ಜುಲೈ 2024, 19:30 IST
ಅಕ್ಷರ ಗಾತ್ರ

ಸುಖದಲ್ಲಿ ತೇಲಾಡಿ ಬೇಸರಗೊಂಡ ಶ್ರೀಮಂತನೊಬ್ಬ ಊರ ಹೊರಗಿನ ಪಾಳುಮಂಟಪದಲ್ಲಿದ್ದ ಸಂತನ ಬಳಿಗೆ ಬಂದು, ‘ನನ್ನ ಬಳಿ ಎಲ್ಲವೂ ಇದೆ ಆದರೆ ನೆಮ್ಮದಿ ಇಲ್ಲ. ಯಾಕೆ ಈ ಗೊಂದಲ’ ಎಂದು ಕೇಳಿದ. ಸಂತ, ‘ನಿನ್ನ ಬಳಿ ಏನೇನಿವೆಯೋ ಎಲ್ಲವನ್ನೂ ತಂದು ನನ್ನ ಕೈಗಿಡು. ನಿನಗೆ ನೆಮ್ಮದಿಯನ್ನು ನಾನು ಕೊಡುತ್ತೇನೆ’ ಎಂದ. ಒಪ್ಪಿದ ಶ್ರೀಮಂತ ತನ್ನ ಬಳಿಯಿರುವ ಧನಕನಕ ವಜ್ರ ವೈಡೂರ್ಯಗಳನ್ನು ಮೂಟೆಕಟ್ಟಿ ಕುದುರೆಗಾಡಿಯಲ್ಲಿ ಹೇರಿ, ಸಂತನ ಬಳಿಗೆ ಬಂದು, ‘ಈಗ ನನಗೆ ಆನಂದದ ದಾರಿಯನ್ನು ತೋರಿಸು’ ಎಂದ.

ಸಂತ ಗಾಡಿಯನ್ನು ಸುತ್ತಿ ಬಂದ. ಶ್ರೀಮಂತ ಅವನನ್ನೇ ನೋಡುತ್ತಾ ನಿಂತಿದ್ದ. ಇದ್ದಕ್ಕಿದ್ದ ಹಾಗೆ ಗಾಡಿಯನ್ನು ಏರಿದ ಸಂತ ಜೋರಾಗಿ ಚಾವಟಿಯಿಂದ ಕುದುರೆಗೆ ಒಂದು ಏಟನ್ನು ಕೊಟ್ಟ. ಕುದುರೆ ಬೆದರಿ ಓಡತೊಡಗಿತು. ಇವ್ಯಾವುದನ್ನೂ ಆ ಶ್ರೀಮಂತ ಊಹಿಸಿಯೂ ಇರಲಿಲ್ಲ. ಎಲ್ಲವೂ ನಿಮಿಷಾರ್ಧದಲ್ಲಿ ನಡೆದು ಹೋಯಿತು. ಶ್ರೀಮಂತನಿಗೆ ಈತ ತನಗೆ ಮೋಸ ಮಾಡಿದ ಅನ್ನಿಸಿದ್ದೇ ತಡ, ಅವನ ಹಿಂದೆ ‘ಈ ಕೆಟ್ಟ ಮನುಷ್ಯ ನನ್ನ ಗಳಿಕೆಯನ್ನೆಲ್ಲಾ ಕಳವು ಮಾಡಿಕೊಂಡು ಹೋಗುತ್ತಿದ್ದಾನೆ’ ಎಂದು ಕೂಗುತ್ತಾ ತಾನೂ ಹಿಂದೆ ಓಡತೊಡಗಿದ. ಅವನ ಜೊತೆ ಸುತ್ತ ಮುತ್ತ ಇದ್ದವರೆಲ್ಲಾ ಓಡತೊಡಗಿದರು. ಕುದುರೆ ಮತ್ತು ಗಾಡಿ ಎರಡೂ ಮರೆಯಾಯಿತು. ಶ್ರೀಮಂತ ಎದೆ ಹೊಡೆದುಕೊಳ್ಳುತ್ತಾ ಕಷ್ಟಪಟ್ಟ ತನ್ನ ಸ್ವತ್ತು ಹೀಗೆ ನಾಶವಾಯಿತಲ್ಲಾ ಎಂದು ಗೋಳಾಡುತ್ತಾನೆ. ಸುತ್ತಲಿದ್ದ ಊರಿನವರು, ಆತ ಇಲ್ಲೇ ಸುಮಾರು ವರ್ಷಗಳಿಂದ ಇದ್ದಾನೆ, ಆದರೆ ಎಂದೂ ಹೀಗೆ ಮಾಡಿರಲಿಲ್ಲವೆಂದು ಕೆಲವರು ಹೇಳಿದರೆ, ದುಡ್ಡಿನ ದುರಾಸೆ ಯಾರನ್ನೂ ಬಿಡಲಿಲ್ಲ ಎನ್ನುತ್ತಾ ಇನ್ನು ಕೆಲವರು ಪ್ರತಿಕ್ರಿಯಿಸುತ್ತಾರೆ.

ಇದೆಲ್ಲಾ ನಡೆದು ಸ್ವಲ್ಪ ಹೊತ್ತಿಗೆ ಸಂತ ಕುದುರೆ ಗಾಡಿಯೊಂದಿಗೆ ತಾನು ಹೊರಟ ಜಾಗಕ್ಕೆ ಬಂದು ನಿಲ್ಲುತ್ತಾನೆ. ಜನರೆಲ್ಲಾ ಅವನ ಕಡೆಗೆ ಓಡಿಬರುತ್ತಾರೆ. ಶ್ರೀಮಂತ ಕೂಡಾ ಓಡಿಬಂದು, ತಾನು ತಂದಿದ್ದ ಎಲ್ಲವೂ ಗಾಡಿಯಲ್ಲೇ ಇವೆಯೇ ಎಂದು ಪರೀಕ್ಷಿಸಿ, ‘ಭಗವಂತಾ ನನ್ನ ದುಡಿಮೆಯನ್ನು ನನಗೇ ವಾಪಾಸು ಮಾಡಿಬಿಟ್ಟೆಯಲ್ಲಾ... ನೀನೆಂಥಾ ಕರುಣಾಳು’ ಎಂದು ಭಗವಂತನನ್ನು ಸ್ಮರಿಸುತ್ತಾನೆ. ನಂತರ ಸಂತನನ್ನು ನೋಡಿ, ‘ಅಲ್ಲಯ್ಯಾ ನೀನು ನನಗೆ ಆನಂದವನ್ನು ತಂದುಕೊಡು ಎಂದರೆ ಗಳಿಸಿದ್ದನ್ನೆಲ್ಲಾ ಎತ್ತಿಕೊಂಡುಹೋಗಿ ದುಃಖವನ್ನು ತಂದುಕೊಟ್ಟೆಯಲ್ಲಾ. ಹೀಗೆ ಯಾಕೆ ಮಾಡಿದೆ?’ ಎನ್ನುತ್ತಾ ಬೈಯ್ಯಲು ಶುರುಮಾಡುತ್ತಾನೆ.

ಆಗ ಸಂತ, ‘ನಿನ್ನ ಹತ್ತಿರ ಇದ್ದದ್ದೇ ಸಂತೋಷ. ಇದಕ್ಕಾಗಿ ನೀನು ಜೀವಮಾನ ಪೂರ್ತಿ ದುಡಿದಿದ್ದೀಯ. ಅದನ್ನು ಬಿಟ್ಟು ನನ್ನ ಬಳಿ ಎಲ್ಲ ಇದೆ, ಆನಂದವಿಲ್ಲವೆಂದು ಕೊರಗುತ್ತಿದ್ದೀಯ... ಜೀವಮಾನಪೂರ್ತಿ ಗಳಿಸಿದ್ದರಲ್ಲಿ ಅಲ್ಲದೆ ಬೇರೆ ಯಾವುದರಲ್ಲಿ ನಿನಗೆ ಆನಂದ ಸಿಗುತ್ತದೆ’ ಎಂದು ಕೇಳುತ್ತಾನೆ. ಶ್ರೀಮಂತ ಅಚ್ಚರಿಯಲ್ಲಿ, ‘ಅದು ನನ್ನ ಹತ್ತಿರ ಇದ್ದಿದ್ದರೆ ಅದರ ಬಯಕೆ ಮತ್ತೆ ಯಾಕೆ ಬರುತ್ತಿತ್ತು’ ಎನ್ನುತ್ತಾನೆ. ‘ಸುಖದ ಅನುಭವ ಆಗಬೇಕೆಂದರೆ ನಿನಗೆ ದುಃಖದ ಅನುಭವ ಆಗಬೇಕಾಗುತ್ತದೆ. ಯಾವುದನ್ನಾದರೂ ಸರಿ ಪಡೆದುಕೊಳ್ಳಲು ಮೊದಲು ಕಳೆದುಕೊಳ್ಳಬೇಕಾಗುತ್ತದೆ, ಬೆಳಕಿನ ಅನುಭವ ಆಗಬೇಕಾದರೆ ಕತ್ತಲೆಯ ಅನುಭವ ಬೇಕಾಗುತ್ತದೆಯೋ ಹಾಗೆ. ನಿನ್ನೊಳಗೇ ಇರುವ ಆನಂದವನ್ನು ಹೊರಗೆ ಹುಡುಕ ಹೊರಟರೆ ಗೊಂದಲವಾಗುತ್ತದೆ. ಒಳಗೆ ಹುಡುಕು ಗೊಂದಲವೇ ಇರುವುದಿಲ್ಲ’ ಎನ್ನುತ್ತಾನೆ.

ಬದುಕೇ ಹಾಗೆ ಇದ್ದಾಗ ಯಾವುದರ ಬೆಲೆಯೂ ಗೊತ್ತಾಗುವುದಿಲ್ಲ ಕಳೆದುಕೊಂಡಾಗಲೇ ಅದರ ದುಪ್ಪಟ್ಟು ಬೆಲೆ ಗೊತ್ತಾಗುವುದು. ಆದ್ದರಿಂದ ಇದ್ದಾಗ ಅದನ್ನು ಅನುಭವಿಸುವುದನ್ನು ಸಾಧ್ಯಮಾಡಿಕೊಳ್ಳಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT