ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನುಡಿ ಬೆಳಗು | ಕಾರ್ಯತತ್ಪರತೆಯ ಮಹತ್ವ

Published 24 ಜನವರಿ 2024, 18:49 IST
Last Updated 24 ಜನವರಿ 2024, 18:49 IST
ಅಕ್ಷರ ಗಾತ್ರ

ಒಂದಾನೊಂದು ಕಾಲದಲ್ಲಿ ಒಂದು ರಾಜ್ಯವಿತ್ತು. ಆ ರಾಜ್ಯದ ವಿಶೇಷ ಏನೆಂದರೆ ಪ್ರಜೆಗಳೆಲ್ಲ ಸೇರಿ ಯೋಗ್ಯ ವ್ಯಕ್ತಿಯೊಬ್ಬನನ್ನು ರಾಜನಾಗಿ ಆಯ್ಕೆ ಮಾಡುತ್ತಿದ್ದರು. ಆದರೆ ರಾಜನ ಆಳ್ವಿಕೆ ಕೇವಲ ಐದು ವರ್ಷ ಮಾತ್ರ! ಐದು ವರ್ಷದ ನಂತರ ಅವನನ್ನು ಬಹುದೂರದ ಒಂದು ಘೋರ ಅರಣ್ಯದಲ್ಲಿ ಬಿಟ್ಟು ಬರಲಾಗುತ್ತಿತ್ತು. ಅಲ್ಲಿಂದ ಯಾರೂ ವಾಪಾಸು ಬರುವ ಪ್ರಶ್ನೆಯೇ ಇರಲಿಲ್ಲ. ಅದೆಷ್ಟೋ ವರ್ಷಗಳಿಂದ ಈ ಸಂಪ್ರದಾಯ ಕಡ್ಡಾಯವಾಗಿ ನಡೆದುಕೊಂಡು ಬರುತ್ತಿತ್ತು.

ಹೀಗೆ ಆಯ್ಕೆಯಾದ ಹೊಸ ರಾಜನೊಬ್ಬನಿಗೆ ಐದು ವರ್ಷದ ನಂತರದ ಸಮಸ್ಯೆ ಯೋಚಿಸಿ ಭಯ ಶುರುವಾಗುತ್ತದೆ. ಆದರೆ ಬುದ್ಧಿವಂತನಾದ ಆತ ಅದರ ಬಗ್ಗೆ ಆರಂಭದಲ್ಲಿಯೇ ಗಮನ ಹರಿಸುತ್ತಾನೆ. ಇತರರಂತೆ ಮೋಜು ಮಸ್ತಿಯಲ್ಲಿ ಕಾಲಹರಣ ಮಾಡುವ ಬದಲು ಈ ಸಮಸ್ಯೆಯಿಂದ ಹೇಗೆ ಪಾರಾಗಬಹುದೆಂದು ಯೋಚಿಸತೊಡಗುತ್ತಾನೆ. ತನ್ನ ನಂಬುಗೆಯ ಸೈನಿಕರನ್ನು ಆ ಕಾಡಿಗೆ ಕಳುಹಿಸುತ್ತಾನೆ. ಆ ಅಭೇದ್ಯ ಕಾಡನ್ನು ನಿಧಾನವಾಗಿ ಪರಿವರ್ತಿಸತೊಡಗುತ್ತಾನೆ. ಹಂತಹಂತವಾಗಿ ಕಾಡಿನ ನಟ್ಟನಡುವಿನ ಮರಗಿಡಗಳನ್ನು ಕಡಿಸಿ, ತೊರೆಗಳನ್ನು ಶುಚಿಗೊಳಿಸುತ್ತಾನೆ. ರಾಜ್ಯದ ಕಡುಬಡವರನ್ನು ಹುಡುಕಿಸಿ ಅವರನ್ನು ಅಲ್ಲಿ ವಾಸಿಸಲು ಕಳುಹಿಸುತ್ತಾನೆ. ಹೊರಗಿನಿಂದ ಗೊಂಡಾರಣ್ಯವಾಗಿ ಕಾಣುವ ಕಾಡನ್ನು ನಟ್ಟನಡುವೆ ಸುಂದರವಾದ ಎಲ್ಲ ಸೌಕರ್ಯಗಳಿರುವ ಊರನ್ನಾಗಿ ಮಾರ್ಪಡಿಸುತ್ತಾನೆ. ಐದು ವರ್ಷದ ನಂತರ ಎಲ್ಲ ರಾಜರೂ ಅಳುತ್ತ ಗಾಬರಿಯಿಂದ ಜೀವಭಯದಿಂದ ಹೊರಟರೆ ಈತ ಮುಗುಳ್ನಗುತ್ತ ಜನರಿಂದ ಬೀಳ್ಕೊಳ್ಳುತ್ತಾನೆ. ಮುಂದಾಲೋಚನೆಯಿಂದ ತಾನು ಐದು ವರ್ಷಗಳ ಕಾಲ ಶ್ರಮಪಟ್ಟು ನಿರ್ಮಿಸಿದ್ದ ಕಾಡೊಳಗಿನ ನಾಡಿಗೆ ಹೋದಾಗ ಅಲ್ಲಿದ್ದವರು ಅವನನ್ನು ಆತ್ಮೀಯತೆಯಿಂದ ಸ್ವಾಗತಿಸುತ್ತಾರೆ. ಅಲ್ಲಿಯೂ ತಾನೇ ಕಟ್ಟಿದ ರಾಜ್ಯದ ಪ್ರಜೆಗಳ ಪ್ರೀತಿಯ ರಾಜನಾಗಿ ಬದುಕುತ್ತಾನೆ.

ಹಾಗಾದರೆ ಹಿಂದಿನ ರಾಜರಿಗ್ಯಾರಿಗೂ ಈ ಉಪಾಯ ಹೊಳೆಯಲಿಲ್ಲವೇ? ಇಷ್ಟು ಸರಳ ಸಂಗತಿ ಗೊತ್ತಿಲ್ಲದವರೇನಲ್ಲ ಯಾರೂ. ಆರಾಮಾಗಿ ರಾಜನಾಗಿ ಕಾಲ ಕಳೆಯೋಣ ಮತ್ತೆ ನೋಡಿಕೊಂಡರಾಯಿತೆಂದು ಆಯ್ಕೆಯಾದವರೂ ಯೋಚಿಸುತ್ತಿದ್ದರು. ಆದರೆ ಕಾರ್ಯತತ್ಪರರಾಗುವಷ್ಟರಲ್ಲಿ ಸಮಯ ಉರುಳಿಹೋಗುತ್ತಿತ್ತು! ನಾವೂ ಹಾಗೆಯೇ ಅಲ್ಲವೇ? ನಮಗೂ ಎಲ್ಲ ಗೊತ್ತಿದೆ! ದಿನವೂ ಹೊಟ್ಟೆ ಬಿರಿಯುವಷ್ಟು ತಿಂದರೆ, ದೈಹಿಕ ಚಟುವಟಿಕೆ ಮಾಡದಿದ್ದರೆ ಮುಂದೆ ಅನಾರೋಗ್ಯಕ್ಕೀಡಾಗುತ್ತೇವೆಂದು, ಕಷ್ಟವಾದರೂ ಸರಿ ಉಳಿತಾಯ ಮಾಡದಿದ್ದರೆ ಸಮಸ್ಯೆಯಾಗುತ್ತದೆಂದು, ಓದದಿದ್ದರೆ ಒಳ್ಳೆಯ ಅಂಕ ಬರುವುದಿಲ್ಲವೆಂದು ಯಾರಿಗೆ ತಾನೇ ಗೊತ್ತಿಲ್ಲ? ಬಾಯಿ ಮೊಸರಾಗಲು ಕೈ ಕೆಸರು ಮಾಡಿಕೊಳ್ಳುವುದು ಬಹುಮುಖ್ಯವೆಂಬ ಅರಿವು ಯಾರಿಗಿಲ್ಲ? ನಾಳೆ ಎನ್ನುವವರ ನಾಳೆಗಳು ಇಂದಿನಂತೆಯೇ ಕಳೆದುಹೋಗುತ್ತವೆ. ಮುನ್ನೆಚ್ಚರಿಕೆಯಿಂದ, ಶ್ರಮ ವಹಿಸಿ ಕಾರ್ಯತತ್ಪರರಾಗುವವರು ಮಾತ್ರ ಅಂದುಕೊಂಡಿದ್ದನ್ನು ಸಾಧಿಸುತ್ತಾರೆ, ಅಷ್ಟೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT