–ಕಲೀಮ್ ಉಲ್ಲಾ, ಕನ್ನಡ ಉಪನ್ಯಾಸಕ
ತೀರಾ ಕಡಿಮೆ ಮಾತನಾಡುತ್ತಾ ಮುಗುಮ್ಮಾಗಿ ಇರುವವರು ಪಾಪದ ಜನ, ತುಂಬಾ ಸಭ್ಯರು, ಏನೂ ಅರಿಯದ ಮುಗ್ಧರು ಎಂಬುದು ಬಹಳ ಜನರ ನಂಬಿಕೆ. ಹೆಚ್ಚು ತುಟಿಬಿಚ್ಚದ ಈ ಜನರ ಬಗ್ಗೆ ಮೃದು ಅನುಮಾನಗಳು ಕೂಡ ಇರುವುದಿಲ್ಲ. ಆದರೆ ಅಂತರಂಗದಲ್ಲಿ ಇವರು ಯಾರೂ ಮೌನಿಗಳಲ್ಲವಂತೆ. ಎಲ್ಲರಿಗಿಂತ ಹೆಚ್ಚು ಬಾಷೆಯನ್ನು ಬಳಸುವ ಇವರ ಮನಸ್ಸಿಗೆ ಸ್ಪೀಕರ್ ಇಲ್ಲದ ಕಾರಣ ಏನೂ ಕೇಳಿಸುವುದಿಲ್ಲ.
ಮೌನದ ಮಂದಿ ಅನ್ಯರ ಮಾತಿನ ಬಗ್ಗೆ ಯಾವ ನಿಲುವು ತಳೆದಿದ್ದಾರೆ ಎಂದು ಅರ್ಥ ಮಾಡಿಕೊಳ್ಳುವುದು ಬಲು ಕಷ್ಟದ ಕೆಲಸ. ಯಾಕೆಂದರೆ ಅವರು ತಮ್ಮೊಳಗಿನ ಅಭಿಪ್ರಾಯವನ್ನೇ ವ್ಯಕ್ತಪಡಿಸುವುದಿಲ್ಲ. ಪಟಪಟ ಎಂದು ಮಾತಾಡುವ ಮಂದಿ ಹೆಚ್ಚು ಮುಚ್ಚಿಟ್ಟುಕೊಳ್ಳುವ ಗೋಜಿಲ್ಲದವರು. ಇವರು ಬಾಯಿ ಬಿಡುವ ಮೊದಲೇ ಏನು ಹೇಳಬಲ್ಲರೆಂದು ಅಂದಾಜಿಸಬಹುದು. ನುಡಿಚಾಳಿಯ ವ್ಯಕ್ತಿಗಳ ಮನಸ್ಸಿಗೂ ಮಾತಿಗೂ ಯಾವುದೇ ತಡೆಗೋಡೆಗಳು ಇರುವುದಿಲ್ಲ. ಒಂದಾದರೂ ಅನಾಹುತ ಸೃಷ್ಟಿಯಾಗುವ ತನಕವೂ ಇವರ ಶಬ್ದಪಾತ ನಿಲ್ಲುವುದಿಲ್ಲ. ಇಂತಹವರ ನಡುವೆ ಮಹಾಮೌನಿಗಳು ದೈವ ಸ್ವರೂಪಿಗಳಾಗಿ ಕಾಣುವುದು ಸಹಜವೇ.
ಮಹಾಮೌನಿಗಳು ಅಪರೂಪಕ್ಕೆ ಒಂದೇ ಒಂದು ವಾಕ್ಯ ತೆಗೆದು ಎಸೆದರೂ ಅದು ಸ್ಫೋಟಕದಷ್ಟು ಬಲಶಾಲಿ. ಎಲ್ಲರನ್ನೂ ಕ್ಷಣಮಾತ್ರದಲ್ಲಿ ಗಪ್ ಚಿಪ್ ಮಾಡಬಲ್ಲ ವಾಕ್ದಂಡ. ಅರಗಿಸಿಕೊಳ್ಳಲಾಗದ ಬಿಗಿ ಹೊಡೆತ. ದೀರ್ಘಮೌನ ಮಾತಾದರೆ ಜೀರ್ಣಿಸಿಕೊಳ್ಳುವುದು ಕಷ್ಟ. ಹೀಗಾಗಿಯೇ ‘ಅವರು ಮಾತಾಡಲ್ಲ. ಮಾತಾಡಿದ್ರೆ, ಮನೆಯೇ ಉಳಿಯಲ್ಲ’ ಎಂದು ಹಿರಿಯರು ಗಾದೆ ಹೇಳಿದ್ದು.
ಈ ಪಾಟಿ ಜನ ಸುತ್ತಮುತ್ತ ವಟವಟ ಎನ್ನುವುದೇ ತಾಳಿಕೊಳ್ಳಲು ಆಗದಿರುವಾಗ ಈ ತುಟಿ ಅರಳಿಸದ ಕೆಲವೇ ಜನರ ಬಗ್ಗೆ ನಾವೇಕೆ ಹೆಚ್ಚು ತಲೆಕೆಡಿಸಿಕೊಳ್ಳಬೇಕು? ಅಚ್ಚರಿ ಎಂದರೆ ಈ ಮೌನದ ಮಂದಿ ಮನಸ್ಸಿನಲ್ಲಿ ನಮಗಿಂತ ಹೆಚ್ಚು ಮಾತಾಡುತ್ತಾರಂತೆ. ಸದ್ಯ ಅದು ನಮಗೆ ಕೇಳಿಸುವುದಿಲ್ಲ ಅಷ್ಟೆ. ಇವರು ಅಪರೂಪಕ್ಕೆ ಬಳಸುವ ಭಾಷೆಗೆ ತೀಕ್ಷತೆ ಮತ್ತು ತೀವ್ರತೆ ಹೆಚ್ಚು. ನುಡಿಗಳನ್ನು ಮನಸ್ಸಿನೊಳಗೇ ತಿರುತಿರುವಿ ಹದಗೊಳಿಸಿ ಸೂಕ್ತ ಸಮಯದಲ್ಲಿ ಅವರು ಬಾಂಬಿನಂತೆ ಒಗೆಯಬಲ್ಲರು.
ಬಿಡುವು ಕೊಡದೆ ಒದರಾಡುವ ಜನರೂ ಒಮ್ಮೊಮ್ಮೆ ಮೌನರಾಗುವುದುಂಟು. ಆಗ ಇವರು ಸಿಟ್ಟಾಗಿದ್ದಾರೆ ಇಲ್ಲವೇ ಮುನಿಸಿಕೊಂಡು ಮುಖವೂದಿಸಿಕೊಂಡಿದ್ದಾರೆ ಎಂದು ಅರ್ಥೈಸಿಕೊಳ್ಳಬಹುದು. ಆದರೆ ಮೌನವನ್ನೇ ತಮ್ಮ ಆಭರಣವೆಂದು ಸ್ವೀಕರಿಸಿದ ಜನರ ಒಳನುಡಿಗಳ ಅರಿವುದಾದರೂ ಹೇಗೆ? ಒಗಟಾಗುವ, ಪ್ರಶ್ನೆಯಾಗುವ ಕೊನೆಗೆ ಚಿದಂಬರ ರಹಸ್ಯವೇ ಆಗುವ ಈ ಜನರ ಹೃದಯವ ಸೀಳಿ ನೋಡಲಾದೀತೇ?
ಕೆಲವೊಮ್ಮೆ ಮೌನ ನಮ್ಮ ಬದುಕಿನ ಅನೇಕ ಪ್ರಶ್ನೆಗಳಿಗೆ ಉತ್ತರ ಹುಡುಕುವ ತಾಣವಾಗಿಯೂ ಕೆಲಸ ಮಾಡಬಲ್ಲದು. ಎಷ್ಟೋ ಸಲ ಏಕಾಂತದಲ್ಲಿ ಸುಮ್ಮನೆ ಕೂತ ನಾವು ಅದೆಷ್ಟೋ ಗೋಜಲು ಗೊಂದಲಗಳಿಗೆ ಪರಿಹಾರ ಹುಡುಕಿಕೊಂಡಿಲ್ಲ! ನಮ್ಮೊಳಗೇ ನಾವು ಮಾತಾಡಿಕೊಂಡು ಹಗುರಾಗುತ್ತೇವೆ...
ಮಾತು ಅವಶ್ಯವಿದ್ದಲ್ಲಿ ಮೌನವಾಗುವುದು ಅಪಾಯ. ಮಾತಿಗೆ ಅರ್ಥವಿಲ್ಲದಾಗ ಮೌನವಾಗಿರುವುದು ಶ್ರೇಯಸ್ಕರ. ಕೆಲ ಸಲ ನಮ್ಮ ಮೌನವೇ ಕೆಲವರ ಪ್ರಶ್ನೆಗಳಿಗೆ ಉತ್ತರ. ಅಪ್ಪ ಮನೆಯಲ್ಲಿ ಮೌನವಾಗಿದ್ದರೆ ಅದು ಹೊಡೆತ ಬೀಳುವ ಮುನ್ಸೂಚನೆ. ಹೆಂಡತಿಯ ಮೌನಕ್ಕೆ ಆಗಸದ ಅಗಲದಷ್ಟು ಅರ್ಥಗಳು. ಸಂಬಂಧಗಳು ಉಳಿದು ಭದ್ರವಾಗುವಲ್ಲಿಯೂ ಸಿಡಿದು ಹೋಳಾಗುವುದರಲ್ಲಿಯೂ ಮೌನದ ಪಾತ್ರ ದೊಡ್ಡದು. ಮಾತನ್ನು ಸಹಿಸುವುದು ಕಷ್ಟವಾದರೆ ಮೌನವನ್ನು ತಡೆದುಕೊಳ್ಳುವುದು ಇನ್ನಷ್ಟು ಕಷ್ಟ. ಮೌನಗಳೆಲ್ಲಾ ಮಾತಾಗಬೇಕು. ಕೆಲವರ ಮಾತು ನಿಶ್ಯಬ್ದವಾಗಬೇಕು. ಮನುಷ್ಯನ ಬದುಕಲ್ಲಿ ನೋವಿನ ಅನುಭವ ಹೆಚ್ಚಾದಂತೆ ಮಾತು ಮೌನದತ್ತ ಜಾರುತ್ತದೆ. ಮೌನದ ಪ್ರತಿ ಉಸಿರಲ್ಲೂ ಬೆಚ್ಚಗಿನ ಸಾವಿರ ಭಾವನೆಗಳಿರುತ್ತವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.