ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನುಡಿ ಬೆಳಗು: ಗೌರವ ಗುಣಕ್ಕೇ ಹೊರತು ಚರ್ಮದ ಬಣ್ಣಕ್ಕಲ್ಲ

Published 7 ಡಿಸೆಂಬರ್ 2023, 23:54 IST
Last Updated 7 ಡಿಸೆಂಬರ್ 2023, 23:54 IST
ಅಕ್ಷರ ಗಾತ್ರ

ಇದೊಂದು ಕುತೂಹಲಕರ ಮೊಕದ್ದಮೆ. ಇದು ನಡೆದದ್ದು 2013ರಲ್ಲಿ. ವಿಷಯ ಏನಪ್ಪಾ ಅಂದರೆ, ಚಿರಾಯು ಜೈನ್ ಎಂಬ ಹುಡುಗ - ಆಗಿನ್ನೂ ಆತ ನಮ್ಮ‌ ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್‌ನ ಮೊದಲನೆಯ ವರ್ಷದ ಕಾನೂನು ವಿದ್ಯಾರ್ಥಿ- ಕರ್ನಾಟಕ ರಾಜ್ಯ ಬಳಕೆದಾರರ ಆಯೋಗದ ಮುಂದೆ ಒಂದು ಮೊಕದ್ದಮೆ ಹೂಡಿದ. ಏನು ವ್ಯಾಜ್ಯ? ಅಲ್ಲೇ ಇರೋದು ವಿಶೇಷ. ಕೇಳಿ.

ಮಕ್ಕಳು ಬಳಸುವ ಬಣ್ಣದ ಪೆನ್ಸಿಲ್ (Crayons) ಒಂದೊಂದರ ಮೇಲೂ ಆ ಪೆನ್ಸಿಲ್ ನಲ್ಲಿರುವ ಬಣ್ಣದ ಹೆಸರು ಬರೆದಿರುತ್ತಾರಷ್ಟೆ? - ರೆಡ್, ಯೆಲ್ಲೋ, ಬ್ಲೂ, ಪಿಂಕ್....ಹೀಗೆ, ಅದರಲ್ಲಿ ಒಂದು‌ ಪೆನ್ಸಿಲ್ ನ ಬಣ್ಣವನ್ನು ‘ಸ್ಕಿನ್’ ( ಚರ್ಮ) ಅಂತ ಬರೆದಿತ್ತು. ಅದು ಬಿಳಿಯ ತೊಗಲಿನ ಬಣ್ಣಕ್ಕೆ ಸಮೀಪದ ಬಣ್ಣ. ಇಂಗ್ಲಿಷ್ ನಲ್ಲಿ ಆ ಬಣ್ಣವನ್ನು ‘ಪೀಚ್’ ಎಂದು ಕರೆಯಲಾಗುತ್ತದೆ. ಇದನ್ನು ನೋಡಿ ಚಿರಾಯು ಜೈನ್‌ಗೆ ಒಂಥರಾ ಕಸಿವಿಸಿ ಆಯಿತು. ಆ ಕಸಿವಿಸಿಗೆ ಕಾರಣ, ಆ ಪೀಚ್ ಬಣ್ಣವನ್ನು ಆ ಕಂಪೆನಿಯು ಚರ್ಮದ ಬಣ್ಣ ಎಂದು ಕರೆಯುವುದಾದರೆ ಅದನ್ನು ಓದಿದ ಮಕ್ಕಳ ಗ್ರಹಿಕೆ ಏನಾಗುತ್ತದೆ? ಅದು ಮಾತ್ರವೇ ಚರ್ಮದ ಬಣ್ಣ, ಬೇರೆ ಕಂದು, ಕಪ್ಪು ಬಣ್ಣವೆಲ್ಲಾ ಚರ್ಮದ ಬಣ್ಣವಲ್ಲ ಎಂದು ತಾನೆ? ಹಾಗಾದರೆ ಭಾರತದಲ್ಲಿ ಬಹುಪಾಲು ಕಂದು, ಕಪ್ಪು ಬಣ್ಣದ ಚರ್ಮದವರೇ ಇರುವಾಗ ಆ ಬಣ್ಣದ ಚರ್ಮ ಇರುವವರಿಗೆ ಒಂದು ಬಗೆಯ ಕೀಳರಿಮೆ ಬರುವುದಿಲ್ಲವೆ? ಇಂಥ ವರ್ಣಭೇದವನ್ನು ಎಳೆಯ ಮನಸ್ಸುಗಳಿಗೆ ತುಂಬುವುದು ತಪ್ಪಲ್ಲವೆ? ಅದು ದೊಡ್ಡ ಮಾರುಕಟ್ಟೆ ಇರುವ ಪ್ರಖ್ಯಾತ ಕಂಪೆನಿಯೊಂದು ಉತ್ಪಾದಿಸುವ ಪೆನ್ಸಿಲ್ ಬೇರೆ. ಹಾಗೆಂದು ಹೇಳಿ ಚಿರಾಯು ಕರ್ನಾಟಕ ರಾಜ್ಯ ಬಳಕೆದಾರರ ಕೋರ್ಟ್ ಮುಂದೆ ಮೊಕದ್ದಮೆ ಹೂಡಿದ.

ತನ್ನ ಚರ್ಮ ಕಂದು ಬಣ್ಣದ್ದಾಗಿರುವುದರಿಂದ ತನ್ನ ಭಾವನೆಗಳಿಗೆ ಘಾಸಿಯುಂಟು ಮಾಡಿದ ಆ ಪೆನ್ಸಿಲ್ ಕಂಪೆನಿಯು ಒಂದು ಲಕ್ಷ ರೂಪಾಯಿಗಳ ಪರಿಹಾರ ನೀಡಬೇಕು ಮತ್ತು ಕಂಪೆನಿಯು ಆ ಪೆನ್ಸಿಲ್ ನ ಮೇಲೆ ‘ಸ್ಕಿನ್’ ಎಂದು ಬರೆದಿರುವುದನ್ನು ಅಳಿಸಿಹಾಕಿ ‘ಪೀಚ್’ ಎಂದು ಬರೆಯುವಂತೆ ಆದೇಶಿಸಬೇಕು ಎಂದು ನ್ಯಾಯಾಲಯವನ್ನು ಪ್ರಾರ್ಥಿಸಿದ.

ಆ ಯುವಕನ‌ ವಾದವನ್ನು ನ್ಯಾಯಾಲಯ ಮಾನ್ಯ ಮಾಡಿತು. ಕಂಪೆನಿಯು ಪೆನ್ಸಿಲ್ ಮೇಲೆ ಬಣ್ಣದ ಹೆಸರನ್ನು ಸ್ಕಿನ್ ಎಂದು ಬರೆಯದಿರಲು ಒಪ್ಪಿಕೊಂಡಿತು.

ಇದನ್ನು ಇಲ್ಲಿ ಯಾಕೆ ಹೇಳಿದೆನೆಂದರೆ, ತೊಗಲಿನ ಬಣ್ಣದ ಮೇಲೆ ಮೇಲು, ಕೀಳು ಅಥವಾ ಸೌಂದರ್ಯ, ಕುರೂಪ ಎಂದು ನಿರ್ಧರಿಸುವ ಸಮಾಜ ಪ್ರಬುದ್ಧವಾದುದಲ್ಲ. ಮಕ್ಕಳ ಮನಸ್ಸಿನಲ್ಲಿ ತೊಗಲಿನ ಬಣ್ಣದ ಕಾರಣವಾಗಿ ಹೆಮ್ಮೆ ಅಥವಾ ಕೀಳರಿಮೆ ಉಂಟಾಗದಂತೆ ನೋಡಿಕೊಳ್ಳುವುದು ಒಂದು‌ ಒಳ್ಳೆಯ ಸಮಾಜದ ಲಕ್ಷಣ. ಒಬ್ಬ ವ್ಯಕ್ತಿಯ ಸಾಮಾಜಿಕ ಗೌರವ ಮಾನ್ಯತೆಗಳು ಆತನ ಜ್ಞಾನ ಮತ್ತು ಮಾನವೀಯ ಗುಣಗಳಿಂದ ನಿರ್ಧಾರವಾಗಬೇಕೇ ಹೊರತು ಚರ್ಮದ ಬಣ್ಣದಿಂದಲ್ಲ (ಜಾತಿ ಮತ ಪಂಥಗಳಿಂದಲೂ ಅಲ್ಲ) ಎಂದು ನ್ಯಾಯಾಲಯದ ಮತ್ತು ಸಮಾಜದ ಗಮನ ಸೆಳೆದ ಚಿರಾಯು ಜೈನ್ ಅಭಿನಂದನೆಗೆ ಅರ್ಹ‌.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT