ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನುಡಿ ಬೆಳಗು ‌| ಇದು ಸಣ್ಣ ಸಂಗತಿ ಅಂತೀರಾ?

Published 30 ಮೇ 2024, 23:26 IST
Last Updated 30 ಮೇ 2024, 23:26 IST
ಅಕ್ಷರ ಗಾತ್ರ

ಕೆ. ಎಸ್. ನರಸಿಂಹಸ್ವಾಮಿ ಅವರು ಬರೆದಿರುವ ಒಂದು ಸಣ್ಣ ಪದ್ಯವಿದೆ. ಸಣ್ಣ ಸಂಗತಿ ಅಂತ ಆ ಪದ್ಯದ ಹೆಸರು. ಹಾಗೆ ನೋಡಿದರೆ ಪದ್ಯದಲ್ಲಿ ಕವಿ ಹೇಳುತ್ತಿರುವುದೂ ಒಂದು ಸಣ್ಣ ಸಂಗತಿಯನ್ನಷ್ಟೆ. ಇದೆಷ್ಟು ಸಣ್ಣ ಸಂಗತಿ ಅಂದರೆ ನಾವು ನೀವು ಇದನ್ನು ನೋಡಿರುತ್ತೇವೆ. ಆದರೆ ಗಮನ ಹರಿಸಿರುವುದಿಲ್ಲ. ಅಷ್ಟು ಸಣ್ಣ ಸಂಗತಿ ಇದು.

ಏನದು?

ಕವಿ ಒಂದು ಚಿತ್ರ ಕೊಡುತ್ತಾರೆ.

ಅದೊಂದು ರಾತ್ರಿ. ಕಪ್ಪು ಹೆಪ್ಪಿಟ್ಟ ಹಾಗೆ ಕತ್ತಲಿದೆ. ಜೊತೆಗೆ ಸಣ್ಣಗೆ ಸೋನೆ ಬೇರೆ ಹಿಡಿದಿದೆ. ಊರಿನ ಸದ್ದಡಗಿ ಹೋಗಿದೆ. ಅಂಥಾ ರಾತ್ರಿಯಲ್ಲಿ ಅಲ್ಲೊಂದು ಸಾಧಾರಣ ಮನೆ. ಮನೆಯ ಎಲ್ಲರೂ ಅಲ್ಲಲ್ಲಿ ಬಿದ್ದುಕೊಂಡಿದ್ದಾರೆ. ಅಲ್ಲೇ ಒಂದು ಚಾಪೆಯ ಮೇಲೆ ಒಂದು ತಾಯಿ ತನ್ನ ಮಗುವನ್ನು ಮಗ್ಗುಲಿಗೆ ಹಾಕಿಕೊಂಡು ಮಲಗಿದ್ದಾಳೆ. ಮೂಲೆಯಲ್ಲಿ ಹಚ್ಚಿಟ್ಟಿರುವ ಒಂದು ದೀಪ ಸಣ್ಣಗೆ ಉರಿಯುತ್ತಿದೆ.
ಇದಿಷ್ಟೇ ಚಿತ್ರ. ಆದರೆ ಅಲ್ಲೊಂದು ಸಣ್ಣ ಸಂಗತಿ ನಡೆಯುತ್ತಿದೆ. ಅದನ್ನು ಯಾರೂ ಗಮನಿಸುವುದಿಲ್ಲ. ಆದರೂ ಅದು ನಡೆಯುತ್ತಿದೆ.
ಏನದು?

ಮಗು, ನಿದ್ದೆಗಣ್ಣಲ್ಲಿ ತನ್ನ ಮೇಲೆ ಹೊದಿಸಿರುವ ಬಟ್ಟೆಯನ್ನು ಒದ್ದು ಬಿಡುತ್ತದೆ. ಮಗು ಬಟ್ಟೆಯನ್ನು ಒದ್ದ ಕೂಡಲೇ ನಿದ್ದೆಗಣ್ಣಲ್ಲೇ ಅದು ತಾಯಿಗೆ ಅರಿವಾಗಿ ಬಿಡುತ್ತದೆ. ಅದೇ ನಿದ್ದೆಗಣ್ಣಲ್ಲಿ ಮಗು ಒದ್ದ ಬಟ್ಟೆಯನ್ನು ಮರಳಿ ಮಗುವಿನ ಮೇಲೆ ಹೊದಿಸುತ್ತಾಳೆ. ಕೆಲಹೊತ್ತಿನ ಬಳಿಕ ಮತ್ತೆ ಮಗುವಿನ ಕಾಲು, ಯಾವ ಗ್ಯಾನದಲ್ಲೋ ಹೊದ್ದ ಬಟ್ಟೆಯನ್ನು ಮತ್ತೆ ಒದೆಯುತ್ತದೆ. ಆದರೆ ತಾಯಿಯ ಕೈ ಮತ್ತೆ ಆ ಹೊದಿಕೆಯನ್ನು ಮಗುವಿನ ಮೈ ಮೇಲೆ ಹೊದಿಸುತ್ತದೆ. ಮತ್ತೆ ಮತ್ತೆ ಮಗುವಿನ ಕಾಲು ಆ ಹೊದಿಕೆಯನ್ನು ಒದೆಯುವುದು, ತಾಯಿಯ ಕೈ ಆ ಹೊದಿಕೆಯನ್ನು ಹೊದಿಸುವುದು... ಇದು ರಾತ್ರಿಯಿಡೀ ನಡೆಯುತ್ತದೆ. ಇಷ್ಟನ್ನು ಚಿತ್ರಿಸಿದ ಕವಿ ಈಗೊಂದು ಸಾಲು ಬರೆಯುತ್ತಾರೆ.

ಹಗಲಿರುಳೂ ಪೊರೆವ ಕೈ ದುಡಿಯುತಿದೆ

ಇದೊಂದು ಸಾಲು ಈ ಸಣ್ಣ ಸಂಗತಿಗೆ ಒಂದು ದೊಡ್ಡ ಅರ್ಥವನ್ನು ಧ್ವನಿಸಿಬಿಡುತ್ತದೆ.

ಒಂದು ಕಡೆ ಮನುಷ್ಯ ಈ ಹೊದಿಕೆಯನ್ನು ಒದೆಯುವ ಕೆಲಸ ಮಾಡುತ್ತಾನೆ. ಮತ್ತೊಂದು ಕಡೆ ಯಾವುದೋ ಪೊರೆವ ಕೈ ಆ ಹೊದಿಕೆಯನ್ನು‌ ಮರಳಿ ಹೊದಿಸುತ್ತದೆ. ಮನುಷ್ಯ ಮಾಡುತ್ತಿರುವ ಅಡಾವುಡಿ, ಹಂಡಬಂಡ ಏನು ಕಡಿಮೆಯೇ? ನಮ್ಮ ರಾಜ್ಯದಲ್ಲಿ, ನಮ್ಮ ದೇಶದಲ್ಲಿ ನಡೆಯುತ್ತಿರುವ ಎಷ್ಟೋ ಅಸಹ್ಯ ಅನಾಚಾರಗಳನ್ನು ನೋಡಿದಾಗಲೆಲ್ಲಾ ಇನ್ನು ನಾವು ಉದ್ಧಾರ ಆಗುವುದೇ ಇಲ್ಲ ಅನಿಸುತ್ತದೆ ಒಮ್ಮೊಮ್ಮೆ. ಆದರೂ ಈ ಜಗತ್ತು ನಡೆಯುತ್ತಲೇ ಇರುವುದನ್ನು ನೋಡಿ ಅಚ್ಚರಿಯಾಗುತ್ತದೆ. ಅಂತೂ ಈ ಭೂಮಿ, ಬದುಕು, ಮನುಷ್ಯ ಎಲ್ಲಾ ಇನ್ನೂ ಉಳಿದಿವೆಯೆಂದರೆ ಯಾವುದೋ ಪೊರೆವ ಕೈ ನಮ್ಮನ್ನು ನಿರಂತರ ಪೊರೆಯುತ್ತಿದೆ ಅಂತಲೇ ಅರ್ಥ.

ಇದು ಸಣ್ಣ ಸಂಗತಿ ಅಂತೀರಾ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT