ಗುರುವಾರ, 22 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನುಡಿ ಬೆಳಗು | ರಾಜ ಮತ್ತು ಸಂತ

Published 13 ಫೆಬ್ರುವರಿ 2024, 0:08 IST
Last Updated 13 ಫೆಬ್ರುವರಿ 2024, 0:08 IST
ಅಕ್ಷರ ಗಾತ್ರ

ರಾಜನೊಬ್ಬನಿಗೆ ಧರ್ಮದ ಬಗ್ಗೆ ಹೆಚ್ಚು ತಿಳಿದರೆ ತನ್ನ ರಾಜ್ಯಭಾರ ಇನ್ನಷ್ಟು ಧಾರ್ಮಿಕತೆಯಿಂದ ತುಂಬಿ ಜನರಿಗೆ ಹೆಚ್ಚು ಉಪಯೋಗವಾಗುತ್ತದೆ ಎನ್ನಿಸುತ್ತದೆ. ಅದಕ್ಕಾಗಿ ಅವನು ಸರಿಯಾದ ಧಾರ್ಮಿಕ ವ್ಯಕ್ತಿಯನ್ನು ಹುಡುಕತೊಡಗುತ್ತಾನೆ. ಅವನಿಗೆ ಒಂದು ದಿನ ಸಂದೇಶವೊಂದು ಬರುತ್ತದೆ. ಒಬ್ಬ ಸಂತನು ಊರ ಹೊರಗಿನ ಅರಳಿ ಕಟ್ಟೆಯ ಮೇಲೆ ಕುಳಿತಿದ್ದಾನೆ. ಅವನ ಮುಖದ ಪ್ರಜ್ವಲತೆಯನ್ನು ನೋಡಿದಾಗ ಅವನಿಗೆ ಅನೇಕ ಸಂಗತಿಗಳು ಗೊತ್ತಿವೆ ಎನ್ನುವುದು ಅರ್ಥವಾಗುತ್ತದೆ ಎಂದು. ರಾಜ ಅತ್ಯಂತ ಕುತೂಹಲದಿಂದ ಅವನನ್ನು ನೋಡಲು ಆತುರಾತುರವಾಗಿ ಹೊರಡುತ್ತಾನೆ.

ರಾಜ ಸಂತನನ್ನು ಕಾಣುತ್ತಾನೆ. ಅವನ ಮುಖದ ತೇಜಸ್ಸು ಹೇಳುತ್ತದೆ ಈತನಿಗೆ ದೇವರ ಬಗೆಗೆ ಅರಿವಿದೆ ಎಂದು. ಇಬ್ಬರೂ ಉಭಯ ಕುಶಲೋಪರಿ ಮಾತನಾಡುತ್ತಾರೆ. ರಾಜ ‘ನಾನು ಧರ್ಮದ ಬಗ್ಗೆ ಒಂದಿಷ್ಟು ಸಂಗತಿಗಳನ್ನು ತಿಳಿಯಲು ನಿಮ್ಮ ಬಳಿ ಬಂದಿದ್ದೇನೆ ಇದರಿಂದ ನನ್ನ ರಾಜ್ಯದ ಜನರಿಗೆ ಉಪಯೋಗವಾಗುತ್ತದೆ’ ಎಂದ. ಅತ್ಯಂತ ಮೃದುಭಾಷಿಯಾಗಿದ್ದ ಆ ಸಂತ ರಾಜ್ಯದ ಬಗ್ಗೆ, ಪ್ರಜೆಗಳ ಬಗ್ಗೆ, ಆರ್ಥಿಕತೆಯ ಬಗ್ಗೆ ಕೇಳಿದ. ರಾಜನೂ ಅಷ್ಟೇ ವಿನಮ್ರತೆಯಿಂದ ಎಲ್ಲಕ್ಕೂ ಉತ್ತರ ಕೊಟ್ಟ.

ಸುಮಾರು ಒಂದು ವಾರ ಕಳೆಯಿತು. ರಾಜ ದೇವರ ಬಗ್ಗೆ ಮಾತಾಡಲು ಬಂದರೆ ಸಂತ ರಾಜ್ಯದ ಬಗ್ಗೆ ಮಾತಾಡುತ್ತಿದ್ದ. ರಾಜನಿಗೆ ತಾನು ಮಾತಾಡಬೇಕೆಂದಿದ್ದ ಸಂಗತಿಯನ್ನು ಮಾತಾಡಲಾಗದೆ ಹೋಗುತ್ತಿತ್ತು. ಕಡೆಗೆ ಒಂದು ದಿನ ರಾಜ ಅತ್ಯಂತ ಬೇಸರದಿಂದ, ‘ನಾನು ನಿಮ್ಮ ಬಳಿಗೆ ಬರುತ್ತಿರುವುದು ದೇವರು, ಧರ್ಮದ ಬಗ್ಗೆ ಮಾತನಾಡಲು. ಆದರೆ ನೀವು ರಾಜಕೀಯ ಮಾತಾಡುತ್ತಿದ್ದೀರಿ. ಸಂನ್ಯಾಸಿಗೆ ಯಾಕೆ ರಾಜ್ಯದ ಚಿಂತೆ? ನನಗ್ಯಾಕೋ ನೀವು ನನ್ನ ಹಾಗೆ ಲೋಕವ್ಯಕ್ತಿಯೇ ಹೊರತು ಸಂತನಲ್ಲ ಅನ್ನಿಸುತ್ತಿದೆ’ ಎನ್ನುತ್ತಾನೆ. ಆಗ ಸಂತ ನಗುತ್ತಾ, ‘ರಾಜ ಇದರಲ್ಲಿ ಅನುಮಾನ ಪಡಲಿಕ್ಕೆ ಯಾವ ವಿಷಯವಿದೆ? ನನಗೆ ತಿಳಿಯದ ವಿಷಯದ ಬಗ್ಗೆ ಕೇಳಬೇಕಲ್ಲವೇ?’ ಎನ್ನುತ್ತಾನೆ. ಆಗ ರಾಜ, ‘ರಾಜ್ಯದ ಬಗ್ಗೆ ತಿಳಿದು ನೀವು ಏನು ಮಾಡುವುದಿದೆ? ದೇವರನ್ನು ಬಿಟ್ಟು ಉಳಿದೆಲ್ಲವೂ ಕನಿಷ್ಠವಾದುದ್ದಲ್ಲವೆ?’ ಎನ್ನುತ್ತಾನೆ. ಆಗ ಸಂತ, ‘ರಾಜ ನೀನು ನನ್ನ ಬಳಿ ಬಂದಿರುವುದು ಧರ್ಮದಿಂದಾಗಿ ಜನರಿಗೆ ಪ್ರಯೋಜನವಾಗಬೇಕೆಂದು. ರಾಜ್ಯ, ಪಾಲನೆ, ಹಣ, ತೆರಿಗೆ, ಜನ ಯಾವುದೂ ನಾನು ತಿಳಿಯದ ವಿಷಯ. ನನ್ನ ಜ್ಞಾನವನ್ನು ನಿನ್ನ ಜ್ಞಾನದ ಜೊತೆಗೆ ಬೆರೆಸಿ, ಹೊಸದಾಗಿ ಏನನ್ನಾದರೂ ಕಂಡುಕೊಂಡು ಜನರಿಗೆ ಕೊಡಬೇಕೆಂದರೆ ನಿನ್ನ ಕೆಲಸವೂ ನನಗರ್ಥವಾಗಬೇಕು. ಇಲ್ಲದಿದ್ದರೆ ಎಲ್ಲವೂ ಒಣ ಉಪದೇಶ. ಅದರ ಬಗ್ಗೆ ಎಷ್ಟೇ ಚರ್ಚೆ ಮಾಡಿದರೂ, ಅದು ಯಾರಿಗೂ ಪ್ರಯೋಜನವಾಗಲಾರದು. ಇದರಿಂದ ನಮ್ಮಿಬ್ಬರ ಶ್ರಮ ವ್ಯರ್ಥವಾಗುತ್ತದೆ’ ಎನ್ನುತ್ತಾನೆ. ಸಂತನ ಈ ಮಾತುಗಳು ರಾಜನಿಗೆ ಧರ್ಮ ಮತ್ತು ರಾಜಕೀಯವನ್ನು ಬೆರೆಸಿ ಪ್ರಜಾಹಿತವನ್ನು ಕಾಪಾಡಲು ಅನೇಕ ದಾರಿಗಳನ್ನು ತೆರೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT