ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನುಡಿ ಬೆಳಗು: ಬೇಟೆಗಾರನೇ ಬೇಟೆಯಾದಾಗ..

ನುಡಿ ಬೆಳಗು
Published 26 ಜೂನ್ 2024, 18:40 IST
Last Updated 26 ಜೂನ್ 2024, 18:40 IST
ಅಕ್ಷರ ಗಾತ್ರ

ಅಮೆರಿಕದ ಖ್ಯಾತ ಲೇಖಕ ಡಾನ್ ಮಾರ್ಕ್ವಿಸ್‌ನ ಒಂದು ಕವನದಲ್ಲಿ ಹಸಿದ ರಾಬಿನ್‌ ಹಕ್ಕಿಯೊಂದು ಪುಟ್ಟ ಹುಳುವೊಂದನ್ನು ತಿನ್ನುವಾಗ  ಹೇಳುತ್ತದೆ, ‘ನಿನ್ನನ್ನು ತಿನ್ನುತ್ತಿರುವುದಕ್ಕಾಗಿ ಕ್ಷಮಿಸು. ಆದರೆ ಹಕ್ಕಿಯೂ ಬದುಕಬೇಕಲ್ಲ’. ದಡ್ಡ ಹುಳು ಉತ್ತರ ಕೊಡುವುದರೊಳಗೆ ಅದು ಹಕ್ಕಿಯ ಹೊಟ್ಟೆ ಸೇರಿರುತ್ತದೆ.  ಹೊಟ್ಟೆ ತುಂಬಿದ ಹಕ್ಕಿ, ‘ನಿನ್ನೆ  ಮಳೆ ಬಂದಾಗ ದೇವರ ಇರುವಿಕೆಯ ಬಗ್ಗೆ ಸಂದೇಹ ಪಟ್ಟಿದ್ದೆ. ಇವತ್ತು ನನಗೆ ಹೊಟ್ಟೆ ತುಂಬಿದೆ. ಜಗತ್ತಿನಲ್ಲಿ ಎಲ್ಲವೂ ಸುಂದರವಾಗಿದೆ’ ಎಂದು ಹಾಡಲಾರಂಭಿಸುತ್ತದೆ.  ತಾನು ಹಾಡುವ ಭರದಲ್ಲಿ ರಾಬಿನ್ ಹಕ್ಕಿ, ಮೆಹಿಟಬೆಲ್ ಎನ್ನುವ ಬೆಕ್ಕು ತನ್ನ ಹತ್ತಿರ ಬರುತ್ತಿರುವುದನ್ನು ಗಮನಿಸುವುದೇ ಇಲ್ಲ. ಕುತ್ತಿಗೆ ಎತ್ತಿ ಹಾಡನ್ನು ತೀವ್ರಗತಿಯಲ್ಲಿ ಹಾಡುತ್ತಿದ್ದಂತೆಯೇ ಬೆಕ್ಕು ಹಕ್ಕಿಯನ್ನು  ತಿಂದುಬಿಡುತ್ತದೆ. ಹಕ್ಕಿ ಹೊಟ್ಟೆಗೆ ಹೋದ ನಂತರ  ಕೊನೆಯ ಗರಿಯನ್ನು ತನ್ನ ಮೀಸೆಯಿಂದ ನೆಕ್ಕುತ್ತಾ ಆಹಾ ಎನ್ನುತ್ತಿದ್ದ ಬೆಕ್ಕಿಗೆ ಹಕ್ಕಿ ಹಾಡುತ್ತಿದ್ದ ಹಾಡು  ಚೆನ್ನಾಗಿತ್ತಲ್ಲವೇ ಎಂದೆನಿಸುತ್ತದೆ.  ಆದರೂ ಅದಕ್ಕೇನೂ ಬೇಸರವಿಲ್ಲ. ತಾನು ತಿಂದ ಹಕ್ಕಿಯ ಹಾಡು ತನ್ನ ಹೊಟ್ಟೆಯೆಂಬ ಜಂಗಲ್ಲಿನಲ್ಲಿ ಪ್ರತಿಧ್ವನಿಗೊಳ್ಳುತ್ತಿದೆ ಎನ್ನುತ್ತದೆ ಅದು.

ಜಗತ್ತಿನಲ್ಲಿರುವುದೆಲ್ಲವೂ ತನಗಾಗಿ ಎಂದುಕೊಂಡೇ ಬದುಕುತ್ತಿರುವವರಿಗೆ ತಾವೂ ಮತ್ತೊಂದಕ್ಕಾಗಿ ಎಂಬುದು ಅರಿವಾಗುವ ಹೊತ್ತಿಗೆ ಕಾಲ ಮಿಂಚಿರುತ್ತದೆ. ಮನುಷ್ಯ ತನ್ನನ್ನು ತಾನು ಜಗತ್ತಿನ ಕೇಂದ್ರವೆಂದೂ ನಿಸರ್ಗವಿರುವುದು ತನ್ನ ಸುಖಕ್ಕಾಗಿ ಎಂದು ಬಹಳ ಹಿಂದಿನಿಂದಲೂ ತಿಳಿದುಕೊಂಡಿದ್ದಾನೆ. ತನ್ನ ಐಷಾರಾಮಕ್ಕಾಗಿ ಪ್ರಕೃತಿಯನ್ನು ಅಗೆದು ಬಗೆದು ನಾಶ ಮಾಡುತ್ತ‌ ವಿವಿಧ ಪ್ರಯೋಗಗಳನ್ನು ಮಾಡುತ್ತಿರುತ್ತಾನೆ. ಆದರೆ ನೈಸರ್ಗಿಕ ವಿಕೋಪಗಳಾದಾಗ ಪ್ರಕೃತಿಯನ್ನೇ ದೂರುತ್ತಾನೆ. ನಾವು ನಮ್ಮ ಮನುಷ್ಯಕೇಂದ್ರಿತ ದೃಷ್ಟಿಕೋನವನ್ನು ಪ್ರಕೃತಿ ಕೇಂದ್ರಿತವಾಗಿ ಬದಲಾಯಿಸುವವರೆಗೂ ಇದು ನಡೆಯುತ್ತಲೇ ಇರುತ್ತದೆ. 

ಅಷ್ಟೇ ಅಲ್ಲ, ಮೇಲಿನ ಪದ್ಯದ ಹಕ್ಕಿಯಂತೆ ನಮ್ಮೆಲ್ಲರಿಗೂ ನಾವು ಸಂತೋಷದಿಂದಿದ್ದರೆ, ನಮಗೆ ಕಷ್ಟಗಳು ಇಲ್ಲದಿದ್ದರೆ ಜಗತ್ತೇ ಅತ್ಯಂತ ಸುಂದರವಾಗಿದೆ ಎನಿಸುತ್ತದೆ. ಆದರೆ ನಾವು ನೋವಿನಲ್ಲಿದ್ದರೆ ಜಗತ್ತಿನಲ್ಲಿ ಬರೀ ಸಂಕಷ್ಟವೇ ತುಂಬಿದೆ ಎನಿಸುತ್ತಿರುತ್ತದೆ. ಆದರೆ ವಾಸ್ತವ ಹೀಗಿರುವುದಿಲ್ಲ. ಜಗತ್ತು ಅದರದ್ದೇ ಆದ ಗತಿಯಲ್ಲಿ, ಅದರದ್ದೇ  ಆದ ರೀತಿಯಲ್ಲಿ ಮುನ್ನಡೆಯುತ್ತಿರುತ್ತದೆ.  ನಾವು ಸುಖವಾಗಿದ್ದಾಗ ಜಗತ್ತಿನಲ್ಲಿ ಎಲ್ಲವೂ ಸರಿಯಿದೆ ಎಂದುಕೊಂಡು ಅಹಂಕಾರ ಪಡುವುದು ಎಷ್ಟು ತಪ್ಪೋ ಅಷ್ಟೇ ತಪ್ಪು ಸಂಕಟ ಬಂದಾಗ ಜಗತ್ತಿನ ಮೇಲೆ ಭರವಸೆ ಕಳೆದುಕೊಳ್ಳುವುದು... ಬದುಕಿನ ಕಾಲಚಕ್ರದಲ್ಲಿ ಪ್ರತಿಯೊಬ್ಬರ ಸ್ಥಾನವೂ ಬದಲಾಗುತ್ತಿರುತ್ತದೆ. 

ಹೀಗಾಗಿ ಅನಿವಾರ್ಯವಾಗಿರುವುದು ಬದಲಾವಣೆಯೊಂದೇ ಎನ್ನುವುದನ್ನು ಅರ್ಥ ಮಾಡಿಕೊಂಡು ಕೊಂಚ ಸಹಾನುಭೂತಿ, ಒಂದಿಷ್ಟು ಹೊಂದಾಣಿಕೆಯನ್ನು ಬೆಳೆಸಿಕೊಂಡರೆ ಈ ನಿಸರ್ಗದ ಪಾತ್ರಪರಿವರ್ತನೆಯ ಅನಿವಾರ್ಯತೆಯನ್ನು ಗೌರವಯುತವಾಗಿ ಸ್ವೀಕರಿಸಲು ಸಾಧ್ಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT